ನಗರಸಭೆ ನೂತನ ಅಧ್ಯಕ್ಷರಾಗಿ ಲಲಿತಾ ಕಡಗೋಲ ಆಂಜಿನ್ಯೇಯ ಪದಗ್ರಹಣ: ಕುಡಿಯುವ ನೀರು, ನೈರ್ಮಲ್ಯಕ್ಕೆ ಮೊದಲ ಆದ್ಯತೆ.
ನಗರಸಭೆ ನೂತನ ಅಧ್ಯಕ್ಷರಾಗಿ ಲಲಿತಾ ಕಡಗೋಲ ಆಂಜಿನ್ಯೇಯ ಪದಗ್ರಹಣ: ಕುಡಿಯುವ ನೀರು, ನೈರ್ಮಲ್ಯಕ್ಕೆ ಮೊದಲ ಆದ್ಯತೆ. ರಾಯಚೂರು,ಮಾ.31-ನಗರದಲ್ಲಿ ಕುಡಿಯುವ ನೀರು ಮತ್ತು ನೈರ್ಮಲ್ಯ ಹಾಗೂ ವಿದ್ಯುತ್ ಬೀದಿ ದೀಪಕ್ಕೆ ಮೊದಲ ಆದ್ಯತೆ ನೀಡಲಾಗುತ್ತದೆ ಎಂದು ನೂತನ ನಗರಸಭೆ ಅಧ್ಯಕ್ಷೆ ಲಲಿತಾ ಕಡಗೋಲ ಆಂಜಿನ್ಯೇಯ ಹೇಳಿದರು. ಅವರಿಂದು ನಗರಸಭೆಯಲ್ಲಿ ಅಧ್ಯಕ್ಷರಾಗಿ ಪದಗ್ರಹಣ ನೆರವೇರಿಸಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಎಲ್ಲರ ಸಹಕಾರದೊಂದಿಗೆ ಉತ್ತಮ ನಗರ ಮಾಡಲು ಕಂಕಣಬದ್ಧರಾಗಿದ್ದು ಕುಡಿಯುವ ನೀರು, ನೈರ್ಮಲ್ಯ,ವಿದ್ಯುತ್ ಬೀದಿ ದೀಪ ಮುಂತಾದ ಮೂಲಭೂತ ಸೌಲಭ್ಯ ಕಲ್ಪಿಸಲು ಮೊದಲ ಆದ್ಯತೆ ನೀಡುವ ಮೂಲಕ ಉತ್ತಮ ನಗರ, ಸುಂದರ ನಗರ ಮಾಡಲು ಶ್ರಮಿಸುತ್ತೇನೆಂದರು. ಶಾಸಕ ಡಾ.ಶಿವರಾಜ ಪಾಟೀಲ ಮಾತನಾಡಿ ನಗರಸಭೆ ಆಡಳಿತ ಬಿಜೆಪಿ ತೆಕ್ಕೆಗೆ ಬರಲು ಸಹಕರಿಸಿದ ಎಲ್ಲರಿಗೂ ಅಭಿನಂದಿಸಿದ ಅವರು ಬೇಸಿಗೆ ಹಿನ್ನಲೆಯಲ್ಲಿ ನಗರದಲ್ಲಿ ಕುಡಿಯುವ ನೀರು ಅಭಾವ ಉಂಟಾಗದಂತೆ ಎಚ್ಚರ ವಹಿಸಲಾಗುತ್ತದೆ ಎಂದ ಅವರು ರಾಂಪೂರು ಜಲಾಶಯದಲ್ಲಿ ಮುಂದಿನ 12 ದಿನಗಳ ವರೆಗೆ ಆಗುವಷ್ಟು ನೀರಿನ ಸಂಗ್ರಹವಿದ್ದು ಏ.5 ರಿಂದ ಬಿ.ಆರ್ ಜಲಾಶಯ ಭರ್ತಿ ಕಾರ್ಯ ನಡೆಯಲಿದ್ದು ಯಾವುದೆ ಬಡಾವಣೆಗೂ ನೀರಿನ ಅಭಾವ ಉಂಟಾಗದಂತೆ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಜಾಕ್ವೇಲ್ ನಲ್ಲಿ ಹೆಚ್ಚುವರಿ ಪಂಪ್ ದುರಸ್ಥಿ ಶೀಘ್ರದಲ್ಲಿ ಮಾಡಿಸಿ ನೀರಿನ ಸಮಸ್ಯೆ ತಲೆದೂರದಂತೆ ನಿಗಾವಹಿಸಲಾಗುತ್ತದೆ ಎಂದರು.ಪೌರ ಕಾರ್ಮಿಕರಿಗೆ ವೇತನ ಪಾವತಿ ವಿಳಂಬವಾಗದಂತೆ ಅವರಿಗೆ ನಿಗದಿತ ಅವಧಿಯಲ್ಲಿ ವೇತನ ಪಾವತಿಸಲಾಗುತ್ತದೆ ಎಂದರು.ಈ ಸಂದರ್ಭದಲ್ಲಿ ಸಹಾಯಕ ಆಯುಕ್ತರಾದ ರಜನೀಕಾಂತ್, ಪೌರಾಯುಕ್ತ ಮುನಿಸ್ವಾಮಿ, ಮಾಜಿ ಶಾಸಕ ಎ.ಪಾಪರೆಡ್ಡಿ, ಆರ್.ಡಿ.ಎ ಅಧ್ಯಕ್ಷ ತಿಮ್ಮಪ್ಪ ನಾಡಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ರಮಾನಂದ ಯಾದವ, ಸೇರಿದಂತೆ ಬಿಜೆಪಿ ಪಕ್ಷದ ನಗರಸಭೆ ಸದಸ್ಯರು, ಪಕ್ಷದ ಮುಖಂಡರು, ಕಾರ್ಯಕರ್ತರಿದ್ದರು.
Comments
Post a Comment