ಜಿಲ್ಲೆಯಲ್ಲಿ ಅಕ್ರಮ ಮರಳು ಸಾಗಾಣಿಕೆ ತಡೆಗೆ ವಿಶೇಷ ನಿಗಾ ವಹಿಸಿ- ಸಚಿವ ಹಾಲಪ್ಪಆಚಾರ್
ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಗೆ ಖಡಕ್ ಸೂಚನೆ:
ಜಿಲ್ಲೆಯಲ್ಲಿ ಅಕ್ರಮ ಮರಳು ಸಾಗಾಣಿಕೆ ತಡೆಗೆ ವಿಶೇಷ ನಿಗಾ ವಹಿಸಿ- ಸಚಿವ ಹಾಲಪ್ಪಆಚಾರ್
ರಾಯಚೂರು ಏ.28:- ಜಿಲ್ಲೆಯಲ್ಲಿ ಅಕ್ರಮ ಮರಳು ಸಾಗಾಣಿಕೆ ತಡೆಗಟ್ಟಲು ಚೆಕ್ ಪೋಸ್ಟ್ಗಳನ್ನು ಬಿಗಿಗೊಳಿಸುವುದರ ಜೊತೆಗೆ ವಿಶೇಷ ನಿಗಾವಹಿಸುವಂತೆ ಗಣಿ ಮತ್ತು ಭೂವಿಜ್ಞಾನ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನ ಹಾಗೂ ಹಿರಿಯ ನಾಗರಿಕ ಸಬಲೀಕರಣ ಸಚಿವ ಹಾಲಪ್ಪ ಬಸ್ಸಪ್ಪ ಆಚಾರ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅವರು ಗುರುವಾರ ದಂದು ನಗರದ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಗಣಿ ಮತ್ತು ಭೂ ವಿಜ್ಞಾನ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಹಾಗೂ ವಿಕಲಚೇತನ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಈಗಾಗಲೇ ವಿವಿಧ ಕಡೆಗಳಲ್ಲಿ ಚೆಕ್ ಪೋಸ್ಟ್ಗಳನ್ನು ನಿರ್ಮಾಣ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಯಾವುದೇ ರೀತಿಯ ಅಕ್ರಮ ಮರಳು ಗಣಿಗಾರಿಕೆ ಮತ್ತು ಸಾಗಾಣಿಕೆ ತಡೆಯಲು ಈ ಬಗ್ಗೆ ತೀವ್ರ ನಿಗಾವಹಿಸಿ ಟಾಸ್ಕ್ ಫೋರ್ಸ್ ಸಮಿತಿ ಇನ್ನಷ್ಟು ಚುರುಕಾಗಿ ಕಾರ್ಯನಿರ್ವಹಿಸುವಂತೆ ಅವರು ಸೂಚಿಸಿದರು.
ಮರಳು ನಿಯಮ ಬಾಹಿರ ಸಾಗಾಟ ನಡೆಯಬಾರದು. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಸಲ್ಲಿಸಬೇಕಾದ ರಾಜಧನ ಹಾಗೂ ಮತ್ತಿತರ ತೆರಿಗೆ ಹಣ ಸಮರ್ಪಕವಾಗಿ ಪಾವತಿ ಆಗುತ್ತಿಲ್ಲ. ಎಲ್ಲ ಅಧಿಕಾರಿಗಳು ಕೈ ಜೋಡಿಸಿದಾಗ ಮಾತ್ರ ಸರ್ಕಾರದ ಬೊಕ್ಕಸಕ್ಕೆ ರಾಜಧನ ಸಂದಾಯವಾಗುತ್ತದೆ ಎಂದರು.
ಜಿಲ್ಲೆಯಲ್ಲಿ ಟಾಸ್ಕ್ ಫೋರ್ಸ್ ಸಮಿತಿ ಸಭೆಗಳನ್ನು ನಿಗದಿತ ಸಮಯದಲ್ಲಿ ನಡೆಸುವಂತಾಗಬೇಕು. ಕಂದಾಯ, ಪೊಲೀಸ್, ಅರಣ್ಯ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಿ ಅನಧಿಕೃತ ಗಣಿಗಾರಿಕೆ, ಸಾಗಾಣಿಕೆ, ದಾಸ್ತಾನು ಬಗ್ಗೆ ಕ್ರಮ ಕೈಗೊಳ್ಳಬೇಕು. ಅದರಂತೆ ಅನುಮತಿಗಾಗಿ ಬರುವ ಅರ್ಜಿಗಳನ್ನು ಕಾರಣವಿಲ್ಲದೆ ತಿರಸ್ಕೃತಗೊಳಿಸದಂತೆ ಅವರು ಸೂಚನೆ ನೀಡಿದರು.
ಈ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಅವರು ಮಾತನಾಡಿ, ಜಿಲ್ಲೆಯಲ್ಲಿ ಅಕ್ರಮ ಮರಳು ಸಾಗಾಣಿಕೆ ವಾಹನಗಳ ತಪಾಸಣೆ ನಡೆಸಲಾಗುತ್ತಿದೆ. ಹಾಗೂ ಅನುಮತಿ ಇಲ್ಲದೆ ಸಾಗಾಣಿಕೆ ಮಾಡುತ್ತಿರುವ ಮತ್ತು ನೋಂದಣಿ ಸಂಖ್ಯೆ ಇಲ್ಲದ ವಾಹನಗಳನ್ನು ವಶಕ್ಕೆ ತಗೆದುಕೊಳ್ಳಲಾಗುತ್ತಿದೆ. ಅಕ್ರಮ ಮರಳು ಗಣಿಗಾರಿಕೆಗೆ ತಡೆಗೆ ಪೊಲೀಸ್ ಇಲಾಖೆಯಿಂದ ಸಂಪೂರ್ಣ ಸಹಕಾರ ನೀಡುವುದಾಗಿ ಸಚಿವರ ಗಮನಕ್ಕೆ ತಂದರು.
ಜಿಲ್ಲೆಯಲ್ಲಿ ಅಕ್ರಮ ಮರಳು ಸಾಗಾಣಿಕೆ ಗಂಭೀರವಾದ ವಿಷಯವಾಗಿರುವುದರಿಂದ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಚಾಣಾಕ್ಷತನದಿಂದ ತೀವ್ರ ನಿಗಾ ಇಡುವಂತೆ ಸೂಚಿಸಿದರು. ಅವರು ವಿನಾಕಾರಣ ಅರ್ಜಿಗಳ ತೀರಸ್ಕೃತ, ವಿಳಂಬ ಧೋರಣೆ ಅನುಸರಿಸದಿರಲು ಸೂಚಿಸಿದ ಅವರು ಜಿಲ್ಲೆಯ ಅಭಿವೃದ್ಧಿಗೆ ಅನುಕೂಲವಾಗುವ ಡಿ.ಎಮ್.ಎಫ್ ಅನುದಾನವನ್ನು ಸಮರ್ಪಕ ಬಳಕೆಗೆ ಸೂಚಿಸಿ ಕಲ್ಲುಗಣಿಗಾರಿಕೆ ಲೈಸೆನ್ಸ್, ಮರಳು ಗುತ್ತಿಗೆ ಸೇರಿದಂತೆ ಮರಳು ಬ್ಲಾಕ್‌ಗಳ ರಚನೆ, ಕ್ರಶರ್ ಘಟಕಗಳಿಗೆ ಅನುಮತಿ, ಬಾಕಿ ಅರ್ಜಿಗಳ ಬಗ್ಗೆಯೂ ಪರಿಶೀಲಿಸಿ ಸೂಕ್ತ ಕ್ರಮಕ್ಕೆ ಸೂಚಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ; ಜಿಲ್ಲೆಯಲ್ಲಿ 2,668 ಅಂಗನವಾಡಿ ಕೇಂದ್ರಗಳು ಮಂಜೂರಾಗಿದ್ದು, 1754 ಸ್ವಂತ ಕಟ್ಟಡ ಹಾಗೂ 914 ಇತರೆ ಕಟ್ಟಡಗಳ ವ್ಯವಸ್ಥೆ ಮಾಡಲಾಗಿದೆ. 144 ಅಂಗನವಾಡಿ ಕೇಂದ್ರಗಳಿಗೆ ನಿವೇಶನ ಲಭ್ಯವಿರುವುದಿಲ್ಲ. ಅಲ್ಲದೆ 596 ಅಂಗನವಾಡಿ ಕೇಂದ್ರಗಳಿಗೆ ನಿವೇಶನ ಬೇಕಾಗಿದೆ. ಅಲ್ಲದೆ ರಾಯಚೂರಿನಲ್ಲಿ 10, ಗಿಲ್ಲೇಸೂಗೂರಿನಲ್ಲಿ 40, ಮಾನವಿಯಲ್ಲಿ 29, ಸಿರವಾರದಲ್ಲಿ 9, ಸಿಂಧನೂರಿನಲ್ಲಿ 46, ತುರವಿಹಾಳನಲ್ಲಿ 16, ಲಿಂಗಸೂಗೂರಿನಲ್ಲಿ 61, ದೇವದುರ್ಗ 43 ಅಂಗನವಾಡಿ ಕೇಂದ್ರಗಳ ಕಟ್ಟಡಗಳು ಪ್ರಗತಿಯಲ್ಲಿವೆ ಎಂದು ಸಚಿವರ ಗಮನಕ್ಕೆ ಇಲಾಖೆಯ ಉಪನಿರ್ದೇಶಕರು ತಂದರು.
ಜಿಲ್ಲೆಯ ವಿವಿಧ ಅಂಗನವಾಡಿ ಕೇಂದ್ರಗಳಲ್ಲಿ ಮೂಲಭೂತ ಸೌಕರ್ಯಗಳ ಸಮಸ್ಯೆಯನ್ನು ಪರಿಹರಿಸಿಕೊಳ್ಳಬೇಕು. ವಿಶೇಷವಾಗಿ ಗ್ರಾಮ ಪಂಚಾಯತಗಳ ಮೂಲಕ ಯಾವುದೇ ಅಂಗನವಾಡಿ ಕೇಂದ್ರಗಳಿಗೆ ನೀರಿನ ಪೂರೈಕೆಯಾಗಿಲ್ಲ. ಎಂದು ದೂರು ಬರಬಾರದು. ಮಾನವೀಯತೆ ಮತ್ತು ಮಕ್ಕಳ ಹಿತದೃಷ್ಟಿಯಿಂದ ಅಧಿಕಾರಿಗಳು ಕಾರ್ಯ ನಿರ್ವಹಿಸಬೇಕು. ಶಾಲೆಗಳು ಮತ್ತು ಅಂಗನವಾಡಿ ಕಟ್ಟಡಗಳಿಗೆ ವಿಶೇಷ ಗಮನ ನೀಡುವಂತೆ ಸೂಚಿಸಿದರು. ಅಂಗನವಾಡಿ ಕೇಂದ್ರಗಳಿಗೆ ಗುಣಮಟ್ಟದ ಮತ್ತು ಸಮರ್ಪಕ ಆಹಾರ ಪೂರೈಕೆಯಾಗಬೇಕು. ಅಪೌಷ್ಟಿಕ ಮಕ್ಕಳ ಆರೋಗ್ಯ ನಿರ್ವಹಣೆಗೆ ವಿಶೇಷ ಗಮನ ನೀಡಬೇಕು. ಅದರಂತೆ ಗರ್ಭಿಣಿ ಬಾಣಂತಿಯರ ಅಪೌಷ್ಟಿಕತೆ ನಿವಾರಣೆಗೆ ಮೇಲ್ವಿಚಾರಣೆ ನಡೆಸಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಜಿಲ್ಲೆಯಲ್ಲಿ ಬಾಲ್ಯ ವಿವಾಹ, ಪೋಸ್ಕೋ ಕಾಯಿದೆ ಹಾಗೂ ಅತ್ಯಾಚಾರ ಪ್ರಕರಣಗಳ ಸೇರಿದಂತೆ ಇತರೆ ಪ್ರಕರಣದಲ್ಲಿ ಒಟ್ಟು 39 ಪ್ರಕರಣ ದಾಖಲೆ ಮಾಡಿಕೊಳ್ಳಲಾಗಿದೆ ಎಂದು ಸಚಿವರಿಗೆ ಅಧಿಕಾರಿಗಳು ಮಾಹಿತಿ ನೀಡಿದರು.
ಖಾಸಗಿ ಹಾಗೂ ಸಾಮಾಜಿಕ ಸ್ತರಗಳಲ್ಲಿ ಹಿಂಸಾಚಾರ ಪೀಡಿತ ಹೆಣ್ಣು ಮಕ್ಕಳು ಹಾಗೂ ಮಹಿಳೆಯರಿಗೆ ಒಂದೇ ಸೂರಿನಡಿಯಲ್ಲಿ ಸಮಗ್ರ ರೀತಿಯ ಸಹಾಯ ಮತ್ತು ಬೆಂಬಲವನ್ನು ಒದಗಿಸುವುದು. ಯಾವುದೇ ರೀತಿಯ ಮಹಿಳೆಯರ ಮೇಲಿನ ದೌರ್ಜನ್ಯ, ಕಿರುಕುಳ ಹಿಂಸಾಚಾರಗಳು, ಸಮಸ್ಯೆಗಳಿಗೆ ಒಂದೇ ಸೂರಿನಡಿಯಲ್ಲಿ ವೈದ್ಯಕೀಯ, ಮಾನಸಿಕ, ಕಾನೂನು ಸಮಾಲೋಚನೆ ಮೊದಲಾದ ಸೇವೆಗಳನ್ನು ನೀಡುವುದು ಸಖಿ ಒನ್ ಸ್ಟಾಪ್ ಸೆಂಟರ್ ಉದ್ದೇಶವಾಗಿದ್ದು, ಜಿಲ್ಲೆಯಲ್ಲಿ ಹೆಚ್ಚಿನ ಮಟ್ಟದಲ್ಲಿ ಅನುಷ್ಠಾನಗೊಳಿಸಬೇಕೆಂದು ಸಂಬAಧಿಸಿದ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು.
ಜಿಲ್ಲೆಯ ವಿಕಲಚೇತನ ಅರ್ಹ ಫಲಾನುಭವಿಗಳಿಗೆ ಯುಡಿಐಡಿ ಕಾರ್ಡ್ ಸರಿಯಾಗಿ ತಲುಪುವಂತೆ ಮತ್ತು ಕಾರ್ಡ್ಗಳ ದುರುಪಯೋಗವಾಗದಂತೆ ನೋಡಿಕೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ಈ ವೇಳೆ ರಾಯಚೂರು ಗ್ರಾಮೀಣ ಕ್ಷೇತ್ರದ ಶಾಸಕ ಬಸನಗೌಡ ದದ್ದಲ್ ಅವರು ಮಾತನಾಡಿ, ರಾಜ್ಯದಲ್ಲಿ ಹೊಸ ಮರಳು ನೀತಿ ಜಾರಿಗೆ ಬಂದು ಹಲವು ವರ್ಷಗಳೇ ಕಳೆದಿವೆ. ಆದರೆ ಇನ್ನೂವರಿಗೂ ಜಿಲ್ಲೆಯಲ್ಲಿ ಹೊಸ ಮರಳು ನೀತಿ ಅನುಷ್ಠಾನಗೊಳಿಸಿಲ್ಲ ಈ ಬಗ್ಗೆ ಸಚಿವರು ಗಮನ ಹರಿಸುವಂತೆ ಹೇಳಿದರು.
ಈ ಸಂದರ್ಭದಲ್ಲಿ ರಾಯಚೂರು ನಗರ ಕ್ಷೇತ್ರದ ಶಾಸಕ ಡಾ.ಎಸ್.ಶಿವರಾಜ ಪಾಟೀಲ್, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಕಾರ್ಯದರ್ಶಿಗಳಾದ ಪಂಕಜ್ ಕುಮಾರ್ ಪಾಂಡೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿಗಳಾದ ಡಾ. ರೇಜು, ಮಹಿಳಾ ಆಯೋಗದ ಅಧ್ಯಕ್ಷ ಡಾ.ಜಯಲಕ್ಷ್ಮಿ, ಅಪರ ಜಿಲ್ಲಾಧಿಕಾರಿ ಡಾ.ಕೆ.ಆರ್.ದುರುಗೇಶ್, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಜಯಶ್ರೀ ಚನ್ನಾಳ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಶಶಿಕಾಂತ್ ಶಿವಪೂರೆ, ರಾಯಚೂರು ಸಹಾಯಕ ಆಯುಕ್ತ ರಜನಿಕಾಂತ್, ಲಿಂಗಸೂಗೂರು ಸಹಾಯಕ ಆಯುಕ್ತ ರಾಹುಲ್ ಸಂಕನೂರು, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ವಿಶ್ವನಾಥ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಭಾರಿ ಉಪ ನಿರ್ದೇಶಕ ವೆಂಕಟಪ್ಪ ಸೇರಿದಂತೆ ಇತರರು ಸಭೆಯಲ್ಲಿ ಇದ್ದರು.
Comments
Post a Comment