ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವ ಹಿನ್ನಲೆ ಗೃಹ ಸಚಿವ ಅರಗಜ್ಞಾನೇಂದ್ರ ರವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು- ಎ.ವಸಂತ ಕುಮಾರ್
ರಾಯಚೂರು,ಏ.26- ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವ ಹಿನ್ನಲೆ ಗೃಹ ಸಚಿವ ಅರಗಜ್ಞಾನೇಂದ್ರ ರವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎ.ವಸಂತ ಕುಮಾರ್ ಒತ್ತಾಯಿಸಿದರು. ಅವರಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಪಿಎಸ್ಐ ಅಕ್ರಮ ಕುರಿತು ಕೆಲ ಮಾಹಿತಿ ಮತ್ತು ಆರೋಪಿಗಳ ಸಂಭಾಷಣೆಯ ಆಡಿಯೋ ತುಣಕನ್ನು ಮಾಧ್ಯಮ ಮೂಲಕ ಬಹಿರಂಗಪಡಿಸಿದ ಶಾಸಕ ಪ್ರಿಯಾಂಕ ಖರ್ಗೆಯವರನ್ನೆ ಸಿಐಡಿ ನೋಟೀಸ್ ನೀಡಿ ವಿಚಾರಣೆ ಹಾಜರಾಗುವಂತೆ ಹೇಳಿದ್ದರ ಹಿನ್ನಲೆ ಏನು? ವಿರೋಧ ಪಕ್ಷಗಳ ಶಾಸಕರು ಸರ್ಕಾರದ ಬಗ್ಗೆ ಧ್ವನಿ ಎತ್ತಬಾರದೆಂಬ ಬೆದರಿಕೆ ತಂತ್ರವೆ ಎಂದು ಪ್ರಶ್ನಿಸಿದ ಅವರು ಕಾಂಗ್ರೆಸ್ ಪಕ್ಷ ವಿರೋಧ ಪಕ್ಷವಾಗಿ ಸಮರ್ಥ ರೀತಿಯಲ್ಲಿ ಕಾರ್ಯ ನಿರ್ವಹಿಸಲಿದ್ದು ಸರ್ಕಾರದ ಬೆದರಿಕೆ ತಂತ್ರಕ್ಕೆ ಮಣಿಯುವುದಿಲ್ಲವೆಂದರು. ಪರೀಕ್ಷಾ ಕೇಂದ್ರದ ಬಗ್ಗೆ ಅಲ್ಲಿನ ಡಿಡಿಪಿಐ ನಕಾರಾತ್ಮಕವಾಗಿದ್ದರು ಸಂಸದ ಉಮೇಶ ಜಾಧವ್ ಪರೀಕ್ಷಾ ಕೇಂದ್ರದ ಬಗ್ಗೆ ಒಲವು ವ್ಯಕ್ತಪಡಿಸಿ ಶಿಫಾರಸ್ಸು ಮಾಡಿದ್ದೇಕೆ, ಈ ಬಗ್ಗೆ ಅವರಿಗೂ ವಿಚಾರಣೆಗೊಳಪಡಿಸಬೇಕೆಂದರು. ಬಿಜೆಪಿ ಸಕ್ರಿಯ ಕಾರ್ಯಕರ್ತೆ ದಿವ್ಯ ಹಾಗರಗಿ ಮನೆಗೆ ಗೃಹ ಸಚಿವರು ಭೇಟಿ ನೀಡಿದ್ದು ಯಾವ ಉದ್ದೇಶಕ್ಕಾಗಿ ಇದರಲ್ಲಿ ಗೃಹ ಸಚಿವರು ಪಾಲ್ಗೊಂಡಿರುವ ಬಗ್ಗೆ ಅನುಮಾನವಿರುವ ಕಾರಣಕ್ಕೆ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದರು. ಪ್ರಿಯಾಂಕ ಖರ್ಗೆ ಹಗರಣದಲ್ಲಿಲ್ಲದಿದ್ದರು ಅವರನ್ನು ವಿಚಾರಣೆಗೆ ಕರೆದದ್ದು ಯಾವ ಕಾರಣಕ್ಕೆಂದು ಪ್ರಶ್ನಿಸಿದ ಅವರು ಪ್ರಿಯಾಂಕ ಖರ್ಗೆ ಸಿಐಡಿ ನೋಟೀಸ್ ಗೆ ಹೆದರಿ ವಿಚಾರಣೆ ಹಾಜರಾಗುವುದಿಲ್ಲ ಬೇಕಿದ್ದರೆ ಸಿಐಡಿ ಮಾಹಿತಿ ಕಲೆಹಾಕಲು ತಾವೆ ಬರಲಿ ಎಂದರು. ಈ ಸಂದರ್ಭದಲ್ಲಿ ಜಿ.ಬಸವರಾಜರೆಡ್ಡಿ, ಎಂ.ಕೆ. ಬಾಬರ್ ,ಸುಧಾಮ, ಹೈಫಿರೋಜ್ ಇದ್ದರು.
Comments
Post a Comment