ಅಗ್ನಿಪಥ ಯೋಜನೆ ಹಿಂಪಡೆಯಲು ಮುಜೀಬುದ್ದೀನ್ ಆಗ್ರಹ
ರಾಯಚೂರು,ಜೂ.29- ಸರ್ಕಾರ ಅಗ್ನಿಪಥ ಯೋಜನೆ ಜಾರಿಗೆ ತಂದಿದ್ದು ಇದು ದೇಶದ ಭದ್ರತೆ ಮತ್ತು ಯುವ ಸಮುದಾಯಕ್ಕೆ ಹಾನಿ ಉಂಟು ಮಾಡಲಿದ್ದು ಕೂಡಲೆ ಹಿಂಪಡೆಯಬೇಕೆಂದು ಕಾಂಗ್ರೆಸ್ ಮುಖಂಡ ಮುಜೀಬುದ್ದೀನ್ ಆಗ್ರಹಿಸಿದ್ದಾರೆ. ಪತ್ರಿಕಾ ಹೇಳಿಕೆ ನೀಡಿರುವ ಅವರು, ಅಗ್ನಿಪಥ ಯೋಜನೆಯಿಂದಾಗಿ ದೇಶದ ಯುವಕರ ಬಾಳು ಸಂದಿಗ್ಧ ಸ್ಥಿತಿಯಲ್ಲಿ ಸಿಲುಕಿದಂತಾಗಿದೆ. ಈ ಯೋಜನೆಯಿಂದ ನಿರುದ್ಯೋಗ ಸಮಸ್ಯೆ ನಿವಾರಣೆಯಾಗುವುದಿಲ್ಲ. ದೇಶಕ್ಕೆ ಮಾರಕವಾಗಿರುವ ಈ ಯೋಜನೆಯನ್ನು ಹಿಂಪಡೆದು ಸೈನ್ಯ ಸೇರುವ ಯುವಕರಿಗೆ ಭದ್ರತೆ ನೀಡಬೇಕೆಂದು ಮನವಿ ಮಾಡಿದ್ದಾರೆ. ಲಾಲ್‍ಬಹದ್ದೂರ್ ಶಾಸ್ತ್ರಿಯವರು ಹೇಳಿದ ‘ಜೈ ಜವಾನ್ ಜೈ ಕಿಸಾನ್’ ಎಂಬ ಘೋಷವಾಕ್ಯದೊಂದಿಗೆ ದೇಶದ ರೈತರು ಮತ್ತು ದೇಶವನ್ನು ಕಾಯುವ ಸೈನಿಕರು ನಮ್ಮ ಎರಡು ಕಣ್ಣುಗಳಿದ್ದಂತೆ ಎಂದು ನಂಬಿದವರು ನಾವು. ಆದರೆ ಮೋದಿ ನೇತೃತ್ವದ ಸರ್ಕಾರ ವೀರ ಯೋಧರ ತ್ಯಾಗ ಬಲಿದಾನಕ್ಕೆ ಬೆಲೆ ಕೊಡುತ್ತಿಲ್ಲ ಎಂದು ಕಿಡಿಕಾರಿದರು. ಅಗ್ನಿಪಥ ಯೋಜನೆಯನ್ನು ಹಿಂಪಡೆದು ಮೊದಲು ಜಾರಿಯಲ್ಲಿದ್ದ ಸೇನಾ ನೇಮಕಾತಿ ಪ್ರಕ್ರಿಯೆಯನ್ನು ಮುಂದುವರೆಸಬೇಕು . ರಕ್ಷಣಾ ಪಡೆಗಳಲ್ಲಿ ಕಾಯಂ ಉದ್ಯೋಗಕ್ಕೆ ನೇಮಕಗೊಳ್ಳಲು ಜನರ ಕೊರತೆ ಇಲ್ಲದ ಭಾರತದಂತಹ ದೇಶಕ್ಕೆ ಇಂತಹ ನೀತಿ ಅಗತ್ಯವೇ ಎಂದು ಪ್ರಶ್ನಿಸಿರುವ ಅವರು ಅಲ್ಪಾವಧಿ ಕರ್ತವ್ಯದ ಬಳಿಕ ಕೆಲಸ ಕಳೆದುಕೊಳ್ಳುವ ಮುಕ್ಕಾಲು ಪಾಲು ಯುವಜನರು ನಿರಾಶೆ ಮತ್ತು ಹತಾಶೆಗೆ ಒಳಗಾಗುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
Comments
Post a Comment