ಮಂತ್ರಾಲದಲ್ಲಿ ನಾಳೆ ಇತಿಹಾಸ ಸಂಶೋಧನ ಸಮಾವೇಶ
ಮಂತ್ರಾಲದಲ್ಲಿ ನಾಳೆ ಇತಿಹಾಸ ಸಂಶೋಧನ ಸಮಾವೇಶ ರಾಯಚೂರು,ಆ.27- ಮಂತ್ರಾಲಯದಲ್ಲಿ ಆ. 28 ಭಾನುವಾರದಂದು ಇತಿಹಾಸ ಸಂಶೋಧನಾ ಸಮಾವೇಶವು ನಡೆಯಲಿದೆ. ಶ್ರೀಮನ್ಮಧ್ವಾಚಾರ್ಯ ಮೂಲಮಹಾಸಂಸ್ಥಾನ ಮಂತ್ರಾಲಯ ಶ್ರೀರಾಘವೇಂದ್ರಸ್ವಾಮಿಗಳವರ ಮಠದ ಪೀಠಾಧಿಪತಿಗಳಾದ ಪೂಜ್ಯ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರ ಜನ್ಮ ಸುವರ್ಣ ಮಹೋತ್ಸವ ಹಾಗೂ ಹತ್ತನೇ ಚಾತುರ್ಮಾಸ್ಯದ ಅಂಗವಾಗಿ ಲಿಪಿ ಶಾಸನ ಹಸ್ತಪ್ರತಿ ಗ್ರಂಥಸಂಪಾದನೆ ಇತಿಹಾಸ ಹಾಗೂ ಪ್ರತಿಮಾ ಲಕ್ಷಣ ತಜ್ಞರ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಹಮ್ಮಿಕೊಳ್ಳಲಾಗಿದೆ.
ಶಾಸನಗಳ ಅಧ್ಯಯನದ ಸವಾಲುಗಳು, ಅಪ್ರಕಟಿತ ಕೀರ್ತನೆಗಳ ಹಸ್ತಪ್ರತಿ ಮತ್ತು ಲಿಪಿ, ಕೆಲವು ಕೀರ್ತನೆಗಳ ವಿಶ್ವಾಸಾರ್ಹತೆಯ ಪ್ರಶ್ನೆಗಳು, ಕಾಲನಿರ್ಣಯ ಮತ್ತು ಇತಿಹಾಸ, ಶಿಲ್ಪಗಳು ಮತ್ತು ಇತಿಹಾಸ ಎಂಬ ಐದು ಪತ್ರಿಕೆಗಳನ್ನು ವಿದ್ವಾಂಸರು ಮಂಡಿಸಲಿದ್ದಾರೆ. ಪರಮಪೂಜ್ಯ ಶ್ರೀಶ್ರೀಸುಬುಧೇಂದ್ರ ತೀರ್ಥಶ್ರೀಪಾದಂಗಳವರು ಈ ವಿಚಾರ ಸಂಕಿರಣವನ್ನು ಉದ್ಘಾಟಿಸುತ್ತಾರೆ. ರಾಷ್ಟ್ರಪತಿ ಪ್ರಶಸ್ತಿ ಪುರಸ್ಕೃತ ಮಹಾಮಹೋಪಾಧ್ಯಾಯ ವಿದ್ವಾನ್ ಡಾ.ಗಿರಿಯಾಚಾರ್ಯರು ಸಮಾರೋಪ ಭಾಷಣ ಮಾಡಲಿದ್ದಾರೆ. ಕರ್ನಾಟಕ ಇತಿಹಾಸ ಅಕಾಡಮಿಯ ಅಧ್ಯಕ್ಷರಾದ ಡಾ ದೇವರ ಕೊಂಡಾರೆಡ್ಡಿ, ನಿಕಟಪೂರ್ವ ಉಪಾಧ್ಯಕ್ಷರಾದ ಡಾ.ಬಿ ರಾಜಶೇಖರಪ್ಪ, ಡಾ.ಗೋಪಾಲಕೃಷ್ಣ ರಾವ್ ಪ್ರೊಎ.ವಿ ನಾವಡ, ಡಾ.ಜಯಲಕ್ಷ್ಮೀ ಮಂಗಳಮೂರ್ತಿ, ನಾರಾಯಣ ಬಾಬಾನಗರ, ಸೀತಾರಾಮ ಜಾಗೀರದಾರ, ಬೆಂಗಳೂರು ವಿಶ್ವವಿದ್ಯಾಲಯದ ಕುಲಸಚಿವರಾದ ಪ್ರೊ ಎಂ ಕೊಟ್ರೇಶ್, ತುಮಕೂರು ವಿಶ್ವವಿದ್ಯಾಲಯದ ಶಾಸನಶಾಸ್ತ್ರದ ಅಧ್ಯಾಪಕರಾದ ಡಾ.ಡಿ.ವಿ. ಪರಮಶಿವಮೂರ್ತಿ, ಡಾ.ಬಸವರಾಜ ಕಲ್ಗುಡಿ, ಡಾ.ಅನಂತ ಪದ್ಮನಾಭ ರಾವ್, ಡಾ.ಕಬ್ಬಿನಾಲೆ ವಸಂತ ಭಾರದ್ವಾಜ, ಮೈಸೂರಿನ ಹೆಚ್ಚುವರಿ ಪ್ರಾದೇಶಿಕ ಆಯುಕ್ತರಾದ ಪಿ ಶಿವರಾಜು, ವಿದ್ವಾನ್ .ಜಿ.ವಿ.ನವಲಗುಂದ, ಪ್ರೊ. ತಾಯಲೂರು ಪದ್ಮನಾಭರಾವ್ ಮಂತ್ರಾಲಯದ ಗುರು ಸಾರ್ವಭೌಮ ದಾಸಾಹಿತ್ಯ ಪ್ರಾಜೆಕ್ಟ್ ನ ಸಂಚಾಲಕರಾದ ಶ್ರೀ ಕೆ ಅಪ್ಪಣ್ಣಾಚಾರ್ಯ, ತಿರುಮಲ ತಿರುಪತಿ ದೇವಸ್ಥಾನದ ದಾಸ ಸಾಹಿತ್ಯ ಪ್ರಾಜೆಕ್ಟ್ ನ ವಿಶೇಷಾಧಿಕಾರಿಗಳಾದ ವಿದ್ವಾನ್ ಆನಂದತೀರ್ಥಾಚಾರ್ಯ ಪಗಡಾಲ ಮೊದಲಾದ ಎಪ್ಪತ್ತೈದಕ್ಕೂ ಹೆಚ್ಚು ಕಿರಿಕಿರಿಯ ತಜ್ಞರುಗಳು ಈ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.
ಶಾಸನಗಳು, ದಾಖಲೆಗಳು, ಇತಿಹಾಸ ಗ್ರಂಥಗಳು ಮತ್ತು ಹರಿದಾಸರ ಕೀರ್ತನೆಗಳನ್ನು ಸಂರಕ್ಷಿಸುವ, ಅಧ್ಯಯನಕ್ಕೆ ಒಳಪಡಿಸುವ, ಹಿನ್ನೆಲೆಯಲ್ಲಿ ಈ ಕ್ಷೇತ್ರದಲ್ಲಿ ದುಡಿದವರನ್ನು ಗುರುತಿಸುವುದು, ಆಸಕ್ತರನ್ನು ಪ್ರೋತ್ಸಾಹಿಸಿ ಯುವಜನರಲ್ಲಿ ಆಸಕ್ತಿ ಮೂಡಿಸುವುದು, ಆಕರಗಳ ಅಧ್ಯಯನದ ಸಂದರ್ಭದಲ್ಲಿ ಎದುರಾಗುವ ಸಮಸ್ಯೆಗಳಿಗೆ ಪರಿಹಾರೋಪಾಯಗಳನ್ನು ಕಂಡುಕೊಳ್ಳುವುದು ಈ ಸಮಾವೇಶದ ಉದ್ದೇಶವಾಗಿದೆ ಎಂದು ಮಂತ್ರಾಲಯ ಶ್ರೀರಾಘವೇಂದ್ರಸ್ವಾಮಿಗಳವರ ಮಠದ ಶಿಷ್ಯಸಂಪರ್ಕಾಧಿಕಾರಿಗಳಾದ ಡಾ.ಎನ್.ವಾದಿರಾಜಾಚಾರ್ಯರು ತಿಳಿಸಿದ್ದಾರೆ.
Comments
Post a Comment