ಜಿಲ್ಲಾ ಕ್ರೀಡಾಂಗಣದಲ್ಲಿ ಕೋಟಿ ಕಂಠ ಗಾಯನಕ್ಕೆ ಗಣ್ಯರಿಂದ ಚಾಲನೆ : ಭಾಷೆ ಉಳಿಸಿ, ಬೆಳೆಸುವುದು ನಮ್ಮೆಲ್ಲರ ಕರ್ತವ್ಯ- ಸಂಸದ ರಾಜಾ ಅಮರೇಶ್ವರ ನಾಯಕ
ಜಿಲ್ಲಾ ಕ್ರೀಡಾಂಗಣದಲ್ಲಿ ಕೋಟಿ ಕಂಠ ಗಾಯನಕ್ಕೆ ಗಣ್ಯರಿಂದ ಚಾಲನೆ
ಭಾಷೆ ಉಳಿಸಿ, ಬೆಳೆಸುವುದು ನಮ್ಮೆಲ್ಲರ ಕರ್ತವ್ಯ: ಸಂಸದ ರಾಜಾ ಅಮರೇಶ್ವರ ನಾಯಕ
ರಾಯಚೂರು ಅ.28:- ಕೋಟಿ ಕಂಠ ಗಾಯನ ನಾಡಿನಾದ್ಯಂತ ಏಕಕಾಲದಲ್ಲಿ ಹಾಡಿದ್ದು, ಕನ್ನಡ ನಾಡು, ನುಡಿ ಕಟ್ಟಿ ಬೆಳೆಸಿದ ಪ್ರತಿಯೊಬ್ಬರನ್ನು ನೆನೆಯಬೇಕಾಗಿದೆ. ಅಲ್ಲದೆ ನಮ್ಮ ಭಾಷೆ ನಮ್ಮತನವನ್ನು ಉಳಿಸಿಕೊಂಡು ಹೋಗಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಸಂಸದ ರಾಜಾ ಅಮರೇಶ್ವರ ನಾಯಕ ಅವರು ಹೇಳಿದರು.
ಅವರು ಇಂದು ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ನನ್ನ ನಾಡು ನನ್ನ ಹಾಡು ಕೋಟಿ ಕಂಠ ಗಾಯನಕ್ಕೆ ಚಾಲನೆ ನೀಡಿ, ಮಾತನಾಡಿದರು.
ಮಾತೃಭೂಮಿ ಎಂಬುವುದು ತಾಯಿಗಿಂತ ಮಿಗಿಲಾದದ್ದು, ಅಂತಹ ಕನ್ನಡ ನಾಡಿನ ಸೊಬಗನ್ನು ಹಾಗೂ ನಾಡಿನ ಹಿರಿಮೆಯನ್ನು ಎತ್ತಿ ಹಿಡಿಯುವ ಗೀತೆಗಳನ್ನು ನಾಡಿನಾದ್ಯಂತ ಕೋಟಿ ಕಂಠಗಳಲ್ಲಿ ಹಾಡುವ ಮೂಲಕ ಶಾಲೆಯ ಮಕ್ಕಳು, ಅಧಿಕಾರಿಗಳು, ಸಾರ್ವಜನಿಕರು ಹಾಡಿ ಯಶಸ್ವಿಗೊಳಿಸಿರುವುದು ಅತ್ಯಂತ ಹೆಮ್ಮೆಯ ವಿಚಾರವಾಗಿದೆ ಎಂದರು.
ಹೆಮ್ಮೆಯ ಕನ್ನಡ ನಾಡಿನಲ್ಲಿ ಜನಿಸಿರುವುದು ಎಲ್ಲರ ಪುಣ್ಯವಾಗಿದ್ದು, ಮಾತೃ ದೇಶವೆಂಬುವುದು ಹೆತ್ತ ತಾಯಿಗಿಂತಲೂ ಮಿಗಿಲಾದದ್ದು, ನಾಡಿನಾದ್ಯಂತ ನಡೆಯುತ್ತಿರುವ ಕೋಟಿ ಕಂಠ ಗಾಯನ ಯಶಸ್ವಿಯಾಗಲಿ ಎಂದರು.
ಈ ವೇಳೆ ನಗರ ಶಾಸಕ ಡಾ.ಶಿವರಾಜ ಪಾಟೀಲ್ ಅವರು ಮಾತನಾಡಿ, ನಾಡಿನ ಭಾಷಾಭಿಮಾನದ ಕುರಿತು ಇಂತಹ ಕಾರ್ಯಕ್ರಮಗಳು ನಡೆದಾಗ ನಮ್ಮಲ್ಲಿ ನಮ್ಮ ನಾಡು ಭಾಷಾಭಿಮಾನ ಮತ್ತಷ್ಟು ಹೆಚ್ಚಾಗುತ್ತದೆ. ಈ ಕಾರ್ಯಕ್ರಮ ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಾಗದೇ ಪ್ರತಿದಿನವೂ ಕನ್ನಡ ಭಾಷೆಯ ಉಳಿವಿಗಾಗಿ ಎಲ್ಲರು ಶ್ರಮಿಸಬೇಕೆಂದರು.
ಕಾರ್ಯಕ್ರಮಕ್ಕೂ ಮೊದಲು ಪ್ರಾಸ್ತಾವಿಕವಾಗಿ ಅಪರ ಜಿಲ್ಲಾಧಿಕಾರಿ ಡಾ.ಕೆ.ಆರ್.ದುರುಗೇಶ ಅವರು ಮಾತನಾಡಿ, ಜಿಲ್ಲಾಡಳಿತದ ವತಿಯಿಂದ ಇಂದು ಕನ್ನಡ ಗೀತೆಗಳ ಗಾಯನ ಕಾರ್ಯಕ್ರಮ ಜರುಗುತ್ತಿದ್ದು, ಆರು ಕನ್ನಡದ ನಾಡಭಕ್ತಿ ಗೀತೆಗಳನ್ನು ಅತ್ಯಂತ ಉತ್ಸಾಹದಿಂದ ಹಾಡಲು ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ ಎಂದರು.
ಆರು ಗಾಯನ: ಈ ಕಾರ್ಯಕ್ರಮದಲ್ಲಿ ರಾಷ್ಟ್ರಕವಿ ಕುವೆಂಪು ವಿರಚಿತ ನಾಡಗೀತೆ “ಜಯ ಭಾರತ ಜನನಿಯ ತನುಜಾತೆ”, ಹುಯಿಲಗೊಳ ನಾರಾಯಣರಾವ್ ವಿರಚಿತ ಉದಯವಾಗಲಿ ನಮ್ಮ ಚಲುವ ಕನ್ನಡನಾಡು, ಡಾ.ಚನ್ನವೀರ ಕಣವಿ ಅವರ “ವಿಶ್ವ ವಿನೂತನ ವಿದ್ಯಾ ಚೇತನ ಸರ್ವ ಹೃದಯ ಸಂಸ್ಕಾರಿ’, ಕುವೆಂಪು ಅವರ “ಬಾರಿಸು ಕನ್ನಡ ಡಿಂಡಿಮವಾ’, ಡಾ.ಡಿ.ಎಸ್.ಕರ್ಕಿಯವರ “ಹಚ್ಚೇವು ಕನ್ನಡದ ದೀಪ’ ಹಾಗೂ ಡಾ. ಹಂಸಲೇಖ ಅವರ “ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಎಂಬ ಆರು ಗೀತೆಗಳನ್ನು ಕೋಟಿ ಕಂಠಗಳಲ್ಲಿ ಹಾಡಲಾಯಿತು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಲಲಿತಾ ಕಡಗೋಲ, ಜಿಲ್ಲಾಧಿಕಾರಿ ಎಲ್.ಚಂದ್ರಶೇಖರ ನಾಯಕ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶರಿಧರ ಕುರೇರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್.ಬಿ, ನಗರಾಭಿವೃದ್ಧಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಆಶಪ್ಪ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ.ಸುರೇಂದ್ರ ಬಾಬು, ನಗರಸಭೆಯ ಪೌರಾಯುಕ್ತ ಗುರುಲಿಂಗಪ್ಪ ಸ್ವಾಮಿ, ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ವೃಷಬೇಂದ್ರಯ್ಯ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ರಾಜಶೇಖರ ಪಟ್ಟಣಶೆಟ್ಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಮಂಗಳ ವಿ.ನಾಯಕ, ಯುವಜನ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ವಿರೇಶ್ ನಾಯಕ, ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ ಅಧ್ಯಕ್ಷೆ ಸ್ಮಿತಾ ಅಕ್ಕ ,ಗಾಯಕಿ ಮಹಾಲಕ್ಷ್ಮಿ ಹಾಗೂ ಸಂಗಡಿಗರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
Comments
Post a Comment