ನಗರದಲ್ಲಿ ಭಕ್ತ ಕನಕದಾಸರ ಪುತ್ಥಳಿ ಅನಾವರಣ: ಕನಕ ಭವನಕ್ಕೆ ಹೆಚ್ಚುವರಿ ಜಮೀನು ಮಂಜೂರಿಗೆ ಕ್ರಮ- ಸಚಿವ ಬಿ.ಎ.ಬಸವರಾಜ

 


ನಗರದಲ್ಲಿ ಭಕ್ತ ಕನಕದಾಸರ ಪುತ್ಥಳಿ ಅನಾವರಣ:

ಕನಕ ಭವನಕ್ಕೆ ಹೆಚ್ಚುವರಿ ಜಮೀನು ಮಂಜೂರಿಗೆ ಕ್ರಮ- ಸಚಿವ ಬಿ.ಎ.ಬಸವರಾಜ

ರಾಯಚೂರು ಅ.೨೯:- ನಗರದ ಹೊರ ವಲಯದಲ್ಲಿ ನಿರ್ಮಾಣವಾಗುತ್ತಿರುವ ಕನಕದಾಸರ ಭವನ ನಿರ್ಮಾಣಕ್ಕೆ ವೈಯಕ್ತಿಕವಾಗಿ ೨೫ಲಕ್ಷ ನೀಡುವುದರ ಜೊತೆಗೆ ಒಂದು ಎಕರೆ ಹೆಚ್ಚುವರಿ ಜಮೀನನ್ನು ಸರ್ಕಾರದಿಂದ ಮಂಜೂರು ಮಾಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ನಗರಾಭಿವೃದ್ಧಿ ಸಚಿವರಾದ ಬಿ.ಎ.ಬಸವರಾಜ ಅವರು ಹೇಳಿದರು.    


ಅವರು ಅ.೨೯ರ ಶನಿವಾರ ದಂದು ನಗರದ ಗಂಜ್ ಸರ್ಕಲ್ ಹತ್ತಿರವಿರುವ ನೂತನ ಕನಕದಾಸರ ಪುತ್ಥಳಿ ಅನಾವರಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾತನಾಡಿದರು.


ರಾಜ್ಯದಲ್ಲಿ ಕನಕ ಭವನಗಳ ನಿರ್ಮಾಣಕ್ಕೆ ಅನುದಾನ ಮೀಸಲಿಟ್ಟಿದ್ದು, ಕನಕ ಭವನ ನಿರ್ಮಾಣಕ್ಕೆ ಬಳಕೆ ಮಾಡಲಾಗುತ್ತದೆ. ಕನಕ ಭವನವು ಸಮಾಜದ ಜನರಿಗೆ ಹಾಗೂ ಇತರೆ ಸಮುದಾಯಗಳಿಗೆ ಉಪಯೋಗವಾಗಲಿ, ರಾಯಚೂರು ನಗರಸಭೆಯನ್ನು ಮಹಾನಗರ ಪಾಲಿಕೆ ಮಾಡಲು ಪ್ರಸ್ತಾವನೆ ಬಂದಿದೆ ಅದನ್ನು ಸರ್ಕಾರ ಮಟ್ಟದಲ್ಲಿ ಚರ್ಚೆ ಮಾಡಿ ಶೀಘ್ರವೇ ಕ್ರಮ ಕೈಗೊಳ್ಳಲಾಗುತ್ತದೆ. 


ಕನಕದಾಸರ ವಿಚಾರಧಾರೆಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು. ಕನಕ ಭವನ ನಿರ್ಮಾಣಕ್ಕೆ ವೈಯಕ್ತಿಕವಾಗಿ ೨೫ ಲಕ್ಷ ನೀಡಲಾಗುತ್ತದೆ ಎಂದು ಇದೇ ಸಂದರ್ಭದಲ್ಲಿ ಹೇಳಿದರು.   


ಈ ವೇಳೆ ಪೌರಾಡಳಿತ ಮತ್ತು ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಸಚಿವರಾದ ಎನ್.ನಾಗರಾಜು ಅವರು ಮಾತನಾಡಿ, ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ನೀಡಿರುವ ಸಂದೇಶಗಳು ಇಡೀ ಮನುಕುಲಕ್ಕೆ ಸರ್ವಕಾಲಕ್ಕೂ ಮಾರ್ಗದರ್ಶಕವಾಗಿವೆ. ಕನಕದಾಸರು ಕವಿ, ದಾರ್ಶನಿಕ ಸಂತರಾಗಿದ್ದು, ಅವರು ತಮ್ಮ ಕೀರ್ತನೆಗಳ ಮೂಲಕ ಜಾತಿ ಮತ ಭೇಧವಿಲ್ಲದೇ ಮನುಜ ಕುಲವೆಲ್ಲಾ ಒಂದೇ ಎಂಬ ಸಂದೇಶ ನೀಡಿದ್ದಾರೆ ಎಂದರು.


ಕನಕದಾಸರು ರಚನೆ ಮಾಡಿದ ಎಲ್ಲಾ ಕೀರ್ತನೆಗಳು ಮನುಕುಲಕ್ಕೆ ಸದಾ ಕಾಲ ಮಾರ್ಗದರ್ಶನ ನೀಡಲಿದ್ದು, ತಪ್ಪು ಹಾದಿಯಲ್ಲಿ ನಡೆಯವವರಿಗೆ ಸರಿಯಾದ ದಾರಿಯಲ್ಲಿ ನಡೆಯಲು ಪ್ರೇರೇಪಣೆ ನೀಡಲಿವೆ. ರಾಯಚೂರು ಹೊರ ವಲಯದಲ್ಲಿ ನಿರ್ಮಾಣವಾಗುತ್ತಿರುವ ಕನಕದಾಸರ ಭವನವನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕು. ಸಮುದಾಯ ಭವನ ನಿರ್ಮಾಣಕ್ಕೆ ವೈಯಕ್ತಿಕವಾಗಿ ೩೦ಲಕ್ಷ ರೂಪಾಯಿ ಹಾಗೂ ಬೆಂಗಳೂರಿನಲ್ಲಿ ಕನಕದಾಸರ ನೂತನ ಶಾಖಾ ಮಠ ನಿರ್ಮಾಣಕ್ಕೆ ಒಂದು ಕೋಟಿ ರೂಪಾಯಿಗಳನ್ನು ನೀಡಲಾಗುತ್ತದೆ ಎಂದು ಹೇಳಿದರು. 

ಕನಕದಾಸರ ಜೀವನ ಚರಿತ್ರೆಯನ್ನು ಎಲ್ಲರೂ ಅಧ್ಯಯನ ಮಾಡಬೇಕು. ಕನಕದಾಸರ ಸುಮಾರು ೩೧೬ ಕೀರ್ತನೆಗಳನ್ನು ರಚಿಸಿದ್ದಾರೆ. ಅವುಗಳನ್ನು ಪ್ರತಿಯೊಬ್ಬರೂ ಸಮಗ್ರವಾಗಿ ಅಧ್ಯಯನ ಮಾಡಬೇಕು. ದೇಶದಲ್ಲಿ ೧೨ ಕೋಟಿ ಹಾಗೂ ರಾಜ್ಯದಲ್ಲಿ ೬೦ಲಕ್ಷ ಜನಸಂಖ್ಯೆ ಹೊಂದಿರುವ ಸಮುದಾಯ ನಮ್ಮದಾಗಿದೆ ಎಂದು ಹೇಳಿದರು. 


 ರಾಯಚೂರು ನಗರ ಕ್ಷೇತ್ರದ ಶಾಸಕ ಡಾ.ಎಸ್.ಶಿವರಾಜ್ ಪಾಟೀಲ್ ಅವರು ಮಾತನಾಡಿ, ರಾಯಚೂರಿನಲ್ಲಿ ನಿರ್ಮಾಣವಾಗುತ್ತಿರುವ ಕನಕ ಭವನವು ಮಿನಿ ವಿಧಾನಸೌಧದಂತೆ ನಿರ್ಮಾಣವಾಗಲಿದೆ. ಸಮಾಜದ ಎಲ್ಲರೂ ಉತ್ತಮ ಶಿಕ್ಷಣ ಪಡೆದು ಉನ್ನತ ಸ್ಥಾನಗಳಿಗೆ ಬರಬೇಕು. ಕನಕದಾಸರ ಹೆಸರಿನಲ್ಲಿ ಹಾಸ್ಟೆಲ್ ಪ್ರಾರಂಭಿಸಿ, ಬಡ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.     




ಸಂಸದ ರಾಜಾ ಅಮರೇಶ್ವರ ನಾಯಕ, ರಾಯಚೂರು ಗ್ರಾಮೀಣ ಕ್ಷೇತ್ರದ ಶಾಸಕ ಬಸನಗೌಡ ದದ್ದಲ್, ಮಾಜಿ ಸಚಿವ ಎಚ್.ಎಮ್.ರೇವಣ್ಣ, ಮಾಜಿ ಸಂಸದ ವಿರುಪಾಕ್ಷಪ್ಪ ಅವರು ಮಾತನಾಡಿದರು. ಇದಕ್ಕೂ ಮೊದಲು ಕನಕ ಭವನಕ್ಕೆ ಸಚಿವರು ಹಾಗೂ ವಿವಿಧ ಗಣ್ಯರಿಂದ ಶಂಕು ಸ್ಥಾಪನೆ ಮಾಡಲಾಯಿತು.  


ಈ ಸಂದರ್ಭದಲ್ಲಿ ಎಪಿಎಮ್‌ಸಿ ಅಧ್ಯಕ್ಷ ಅಚ್ಯುತ್ ರೆಡ್ಡಿ, ರಾಯಚೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ತಿಮ್ಮಪ್ಪ ನಾಡಗೌಡ, ನಗರಸಭೆಯ ಅಧ್ಯಕ್ಷೆ ಲಲಿತಾ ಕಡಗೋಳ, ಜಿಲ್ಲಾಧಿಕಾರಿ ಎಲ್.ಚಂದ್ರಶೇಖರ ನಾಯಕ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ್ ಕುರೇರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ., ಅಪರ ಜಿಲ್ಲಾಧಿಕಾರಿ ಡಾ.ಕೆ.ಆರ್.ದುರುಗೇಶ್, ಸಹಾಯಕ ಆಯುಕ್ತ ರಜನಿಕಾಂತ್, ಜಿಲ್ಲಾ ನಗರಾಭಿವೃದ್ಧಿ ಪ್ರಾಧಿಕಾರದ ಯೋಜನೆ ನಿರ್ದೇಶಕ ಆಶಪ್ಪ, ರಾಯಚೂರು ನಗರಸಭೆಯ ಪೌರಾಯುಕ್ತ ಗುರುಲಿಂಗಪ್ಪ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿಗಳು, ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಸಮಾಜ ಬಾಂಧವರು ಇದ್ದರು.


Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್

ತರಕಾರಿ ಮಾರಾಟಗಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಅಂಬಾಜಿರಾವ್ ಒತ್ತಾಯ