ಶೀಘ್ರವೇ ರೈಲ್ವೇ ನಿಲ್ದಾಣ ಮೇಲ್ದರ್ಜೆಗೆ: ನಗರದ ರೈಲ್ವೆ ನಿಲ್ದಾಣದಲ್ಲಿ ಲಿಫ್ಟ್ ಉದ್ಘಾಟನೆ
ಶೀಘ್ರವೇ ರೈಲ್ವೇ ನಿಲ್ದಾಣ ಮೇಲ್ದರ್ಜೆಗೆ: ನಗರದ ರೈಲ್ವೇ ನಿಲ್ದಾಣದಲ್ಲಿ ಲಿಫ್ಟ್ ಉದ್ಘಾಟನೆ
ರಾಯಚೂರು,ನ.30- ನಗರದ ರೈಲ್ವೆ ನಿಲ್ದಾಣವನ್ನು ಮೇಲ್ದರ್ಜೆಗೇರಿಸುವ ಪ್ರಕ್ರಿಯೆ ನಡೆದಿದ್ದು ಸದ್ಯ ಲಿಫ್ಟ್ ಸೌಲಭ್ಯ ಕಲ್ಪಿಸಲಾಗುತ್ತಿದೆ ಎಂದು ಸಂಸದರಾದ ರಾಜಾ ಅಮರೇಶ್ವರ ನಾಯಕ ಹೇಳಿದರು. ಅವರಿಂದು ನಗರದ ರೇಲ್ವೆ ನಿಲ್ದಾಣದಲ್ಲಿ ನೂತನ ಲಿಫ್ಟ್ ಉದ್ಘಾಟನೆ ನೆರವೇರಿಸಿ ಮಾತನಾಡಿ, ನಗರದ ರೇಲ್ವೆ ನಿಲ್ದಾಣದಲ್ಲಿ ಮೂಲಭೂತ ಸೌಕರ್ಯ ಒದಗಿಸಲು ಈಗಾಗಲೇ ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ ಲಿಫ್ಟ್ ಈ ಮುಂಚೆಯೇ ಉದ್ಘಾಟನೆಗೊಳ್ಳಬೇಕಿತ್ತು ಕರೋನಾ ಸೇರಿದಂತೆ ನಾನಾ ಕಾರಣಗಳಿಂದ ಮುಂದೂಡುತ್ತ ಬರಲಾಗಿತ್ತು ಈಗ ಬಹುದಿನಗಳ ಬೇಡಿಕೆ ಈಡೇರಿದಂತಾಗಿದ್ದು, ವಿಕಲಚೇತನರು, ಅಶಕ್ತರು, ವೃದ್ಧರಿಗೆ ಇದರಿಂದ ಅನುಕೂಲವಾಗಲಿದೆ ಎಂದ ಅವರು ಈ ಹಿಂದೆ ವೃದ್ಧರಿಗೆ ಪ್ಲಾಟ್ ಫಾರಂ ನಲ್ಲಿ ಸಂಚರಿಸಲು ಬ್ಯಾಟರಿ ಚಾಲಿತ ಬಹು ಆಸನಗಳ ಲಘವಾಹನ ವ್ಯವಸ್ಥೆ ಮಾಡಲಾಗಿದ್ದು ಎಲ್ಲರ ಗಮನ ಸೆಳೆದಿದ್ದು ಮಾತ್ರವಲ್ಲದೆ ಅನೇಕರಿಂದ ಪ್ರಶಂಸೆಯ ಮಾತುಗಳು ಕೇಳಿ ಬಂದಿವೆ ಎಂದರು.
ರೇಲ್ವೆ ನಿಲ್ದಾಣದ ಮುಖ್ಯದ್ವಾರವನ್ನು 8 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದ್ದು. ರೈಲ್ವೆ ನಿಲ್ದಾಣ ಹಳೆಯದಾಗಿದ್ದು ಇದನ್ನು ಮೇಲ್ದರ್ಜೆಗೇರಿಸುವ ಪ್ರಸ್ತಾವನೆ ಕೇಂದ್ರ ರೈಲ್ವೆ ಸಚಿವರಿಗೆ ಸಲ್ಲಿಸಲಿದ್ದೇವೆ ಎಂದು ಹೇಳಿದರು.ರೈಲ್ವೆ ಸಚಿವರು ನಾವು ಪ್ರಸ್ತಾಪಿಸಿದ ಬಹುತೇಕ ಕಾಮಗಾರಿಗಳಿಗೆ ಅನುಮೋದನೆ ನೀಡಿ ಸಹಕರಿಸಿರುವುದರಿಂದ ರೈಲ್ವೆ ನಿಲ್ದಾಣದಲ್ಲಿ ಬಹುತೇಕ ಕಾಮಗಾರಿಗಳು ನೆರವೇರುವಂತಾಗಿವೆ ಎಂದ ಅವರು ಅದು ಮಾತ್ರವಲ್ಲ ಕೇಂದ್ರ ಸರಕಾರದಿಂದ ಸಾಕಷ್ಟು ಅನುದಾನ ಹರಿದು ಬಂದಿದೆ. ಇಂದು ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಚಾಲನೆ ನೀಡಲಿದ್ದೇವೆ ಎಂದು ಹೇಳಿದರು.
ಶಾಸಕ ಡಾ.ಎಸ್.ಶಿವರಾಜ ಪಾಟೀಲ್ ಮಾತಾನಾಡುತ್ತ ಸಂಸದರ ಕಾರ್ಯವೈಖರಿಯನ್ನು ಮುಕ್ತಕಂಠದಿಂದ ಪ್ರಶಂಸಿದರಲ್ಲದೆ ಕೇಂದ್ರದಿಂದ ನಗರಕ್ಕೆ 6 ರಿಂದ 7 ಸಾವಿರ ಕೋಟಿ ರೂ. ಅನುದಾನ ಬಂದಿದೆ ಎಂದ ಅವರು ಸಂಸದರು ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ ಎಂದರು . ಕಾಕಿನಾಡ ಎಕ್ಸ್ಪ್ರೆಸ್ ರೈಲನ್ನು ಮೊದಲಿನಂತೆ ಓಡಿಸಬೇಕು. ಕೋವಿಡ್ ಗಿಂತ ಮೊದಲಿದ್ದ ವೇಳೆಯಂತೆಯೆ ಎಲ್ಲ ರೈಲುಗಳು ನಿಗದಿತ ಸಮಯಕ್ಕೆ ಓಡಾಡುವಂತಾಗಲಿ ಎಂದು ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕೊಪ್ಪಳ ಸಂಸದರಾದ ಸಂಗಣ್ಣ ಕರಡಿ,ಮಾಜಿ ಶಾಸಕ ಗಂಗಾಧರ ನಾಯಕ, ರೈಲ್ವೆ ಬೋರ್ಡ ಸದಸ್ಯರಾದ ಬಾಬುರಾವ್, ನಗರಸಭೆ ಅಧ್ಯಕ್ಷೆ ಲಲಿತಾ ಕಡಗೋಲು ಆಂಜನೇಯ , ಆರ್.ಡಿ.ಎ.ಅಧ್ಯಕ್ಷರಾದ ತಿಮ್ಮಪ್ಪ ನಾಡಗೌಡ, ಬಿಜೆಪಿ ಅಧ್ಯಕ್ಷ ರಮಾನಂದ ಯಾದವ, ಜಿಲ್ಲಾ ವಕ್ಫ ಬೋರ್ಡ್ ಅಧ್ಯಕ್ಷರು ಸಯ್ಯದ್ ಮುಕ್ತಿಯರ್, ಬಿಜೆಪಿ ನಗರ ಅಧ್ಯಕ್ಷರು ಬಿ.ಗೋವಿಂದ, ಬಿಜೆಪಿ ಎಸ್ ಸಿ ಮೋರ್ಚಾದ ಅಧ್ಯಕ್ಷ ಮಂಚಲ್ ಭೀಮಣ್ಣ ನಗರಸಭೆ ಹಿರಿಯ ಸದಸ್ಯರಾದ ಜಯಣ್ಣ, ಈ. ಶಶಿ ರಾಜ್ ಸೇರಿದಂತೆ ರೈಲ್ವೆ ಇಲಾಖೆ ಅಧಿಕಾರಿಗಳು ಇತರರು ಉಪಸ್ಥಿತರಿದ್ದರು.
Comments
Post a Comment