ನೀರಿನ ಪ್ರಮಾಣ ಕಾಯ್ದುಕೊಳ್ಳುವಂತೆ ಆಗ್ರಹಿಸಿ ಸಿರವಾರದಲ್ಲಿ ರೈತರೊಂದಿಗೆ ಡಿ.30 ರಂದು ಹೋರಾಟ- ಎನ್.ಎಸ್ ಬೋಸರಾಜು
ನೀರಿನ ಪ್ರಮಾಣ ಕಾಯ್ದುಕೊಳ್ಳುವಂತೆ ಆಗ್ರಹಿಸಿ ಸಿರವಾರದಲ್ಲಿ ರೈತರೊಂದಿಗೆ ಡಿ.30 ರಂದು ಹೋರಾಟ- ಎನ್.ಎಸ್ ಬೋಸರಾಜು
ರಾಯಚೂರು,ಡಿ.29- ತುಂಗಭದ್ರ ಎಡದಂಡೆ ಕಾಲುವೆಯ ಮೈಲ್ 69 ರಿಂದ ನೀರಿನ ಪ್ರಮಾಣ ಕಡಿಮೆಯಾಗಿದ್ದರಿಂದ ಮಾನ್ವಿ, ಸಿರವಾರ ಹಾಗೂ ರಾಯಚೂರು ತಾಲ್ಲೂಕಿನ ಕೆಳಭಾಗದ ರೈತರಿಗೆ ಸಾಕಷ್ಟು ತೊಂದರೆಯಾಗುತ್ತಿದೆ, ಸರಿಯಾದ ಪ್ರಮಾಣದಲ್ಲಿ ನೀರು ಬಿಡದಿರುವುದರಿಂದ ರೈತರು ಕಂಗಾಲಾಗಿದ್ದಾರೆ. ಸಮರ್ಪಕ ನೀರು ಸರಬರಾಜುಗಾಗಿ ದಿ.30 ಶುಕ್ರವಾರದಂದು ಸಿರವಾರ ಪಟ್ಟಣದಲ್ಲಿ ರೈತರೊಂದಿಗೆ ಹೋರಾಟ ಮಾಡಲಾಗುವುದೆಂದು ಎಐಸಿಸಿ ಕಾರ್ಯದರ್ಶಿ ಎನ್.ಎಸ್ ಬೋಸರಾಜು, ಮಾಜಿ ಶಾಸಕ ಹಂಪಯ್ಯ ನಾಯಕ ಹಾಗೂ ಬಸನಗೌಡ ಬ್ಯಾಗವಾಟ್ ಸೇರಿದಂತೆ ಮುಖಂಡರ ನಿಯೋಗ ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿ ತಿಳಿಸಿದರು.
ಮುಖಂಡರ ನಿಯೋಗ ಜಿಲ್ಲಾಧಿಕಾರಿ ಚಂದ್ರಶೇಖರ್ ನಾಯಕ್ ಅವರೊಂದಿಗೆ ಮಾತನಾಡಿ, ಮೈಲ್ 47ರ ಕೆಳಭಾಗ 69 ರಲ್ಲಿ ನೀರು ಸರಬರಾಜು ಆದಾಗ ಮಾತ್ರ ಬೆಳೆಗಳಿಗೆ ಪೂರ್ಣ ಪ್ರಮಾಣದ ನೀರು ಸಿಗಲಿದೆ. ಮೇಲ್ಬಾಗದಲ್ಲಿ ನೀರಿನ ಪ್ರಮಾಣ ಕಾಯ್ದಿರಿಸದಿರುವುದರಿಂದ ಕೆಳಭಾಗದ ರೈತರಿಗೆ ನೀರು ಬರುತ್ತಿಲ್ಲ ಎಂದು ತಿಳಿಸಿದರು.
ಈ ಕುರಿತು ಎರಡುಬಾರಿ ರೈತರು ಪ್ರತಿಭಟನೆ ಮಾಡಿದರು ಅಧಿಕಾರಿಗಳು ಯಾವುದೇ ರೀತಿ ಸ್ಪಂದಿಸಿಲ್ಲ. ಅಲ್ಲದೆ 144 ನಿಷೇದಾಜ್ಞೆ ಜಾರಿ ಮಾಡಿದರು ಪ್ರಯೋಜನವಾಗಿಲ್ಲ. ಸರ್ಕಾರ ದೇಶದ ಬೆನ್ನೆಲುಬಾದ ರೈತರನ್ನು ಸಂಪೂರ್ಣ ಕಡೆಗಣಿಸಿರುವುದರಿಂದ ನಾಳೆಬಹೋರಾಟ ಮಾಡಲಾಗುವುದೆಂದು ತಿಳಿಸಿದರು.
ಜಿಲ್ಲಾಧಿಕಾರಿ ಮಾತನಾಡಿ, ಈ ಬಗ್ಗೆ ನನ್ನ ಗಮನಕ್ಕೆ ಬಂದಿದೆ ಕೊಪ್ಪಳ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿ ಶೀಘ್ರ ರೈತರ ಜಮೀನುಗಳಿಗೆ ಅನುಗುಣವಾಗಿ ನೀರಿನ ಪ್ರಮಾಣ ಕಾಯ್ದಿರಿಸಲು ಮಾತನಾಡಲಾಗುವದೆಂದು ನಿಯೋಗ ಮುಖಂಡರಿಗೆ ತಿಳಿಸಿದರು.
ನಿಯೋಗದ ಮುಖಂಡರು ಮನವಿ ಮಾಡಿ, ಸಿರವಾರ ದಲ್ಲಿ ನೀರಿಗಾಗಿ ಶುಕ್ರವಾರ ನಡೆಯುವ ಹೋರಾಟಕ್ಕೆ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಗಂಗಾಧರ ನಾಯಕ್, ಶರಣಪ್ಪಗೌಡ ಜಾಡಲದಿನ್ನಿ, ಗಿರಿಜಾ ಶಂಕರ್ ಪಾಟೀಲ್, ಶಂಕರಗೌಡ ಹರವಿ, ಅಮರೇಶ ಬಲ್ಲಟಗಿ, ಶಿವರಾಜಪ್ಪ ಗೌಡ ಸೇರಿದಂತೆ ಇತರರಿದ್ದರು.
Comments
Post a Comment