ಭಗವಾನ್ ರವರ ನಿಧನಕ್ಕೆ ಬಸವರಾಜ ಕಳಸ ತೀರ್ವ ಸಂತಾಪ


ಭಗವಾನ್ ರವರ ನಿಧನಕ್ಕೆ ಬಸವರಾಜ ಕಳಸ ತೀರ್ವ ಸಂತಾಪ
   
                                              ರಾಯಚೂರು,ಫೆ.20- ಕನ್ನಡ ಚಲನಚಿತ್ರರಂಗದ ಖ್ಯಾತ ನಿರ್ದೇಶಕರಾದ ಶ್ರೀ ಭಗವಾನ್ ರವರು ನಿಧನರಾಗಿದ್ದು ಇಡೀ ಕನ್ನಡ ಚಲನಚಿತ್ರ ರಂಗಕ್ಕೆ ಮತ್ತು ದಕ್ಷಿಣ ಭಾರತದ ಚಲನ ಚಿತ್ರರಂಗಕ್ಕೆ ಅಘಾತವನ್ನುಂಟು ಮಾಡಿದೆ. ಅವರ ಅಭಿಮಾನಿಗಳಿಗೆ ಚಿತ್ರ ಪ್ರೇಮಿಗಳಿಗೆ ಅತೀವ ದುಃಖವನ್ನುಂಟು ಮಾಡಿದೆ. ಹಿರಿಯ ನಿರ್ದೇಶಕ ದಿವಂಗತ ಶ್ರೀ ದೊರೆ ಅವರೊಂದಿಗೆ ಶ್ರೀ ಭಗವಾನ್ ರವರು  ದೊರೆ ಭಗವಾನ್ ಎಂದೇ ಖ್ಯಾತರಾಗಿದ್ದು, ನಿರ್ದೇಶನ ಮಾಡಿದ ಕಸ್ತೂರಿ ನಿವಾಸ, ರಾಘವೇಂದ್ರ ಸ್ವಾಮಿ ಮಹಾತ್ಮೆ, ಎರಡು ಕನಸು, ಗಿರಿಕನ್ಯೆ, ಆಪರೇಷನ್ ಡೈಮಂಡ್ ರಾಕೆಟ್, ಬಯಲುದಾರಿ ಮುಂತಾದ ಅಮರ ಚಲನಚಿತ್ರಗಳು ಚಿತ್ರ ರಸಿಕರ ಹೃದಯದಲ್ಲಿ ಶಾಶ್ವತವಾಗಿ ನೆಲೆಗೊಂಡಿವೆ.  ಇಂಗ್ಲೀಷ್ ಬಾಂಡ್ ಚಲನಚಿತ್ರಗಳ ನಂತರ ಮೊಟ್ಟಮೊದಲ ಬಾರಿಗೆ ಇಡೀ ದಕ್ಷಿಣ ಭಾರತದಲ್ಲಿಯೇ ಕನ್ನಡ ಚಲನಚಿತ್ರ ರಂಗದಲ್ಲಿ ಡಾ. ರಾಜಕುಮಾರ್ ರವರ ನಟನೆಯಲ್ಲಿ ಮೊಟ್ಟಮೊದಲ ಬಾಂಡ್ ಚಿತ್ರಗಳನ್ನು ನಿರ್ದೇಶನ ಮಾಡಿದ ಖ್ಯಾತಿ ಇವರಗಿದೆ .

ಇವರೊಂದಿಗೆ ಕನ್ನಡಚಲನಚಿತ್ರರಂಗದ ಶ್ರೀಮಂತಿಕೆಯ ವೈಭವದ ಸಾಮಾಜಿಕ ಸಂದೇಶಗಳನ್ನು ಸಾರುವ ಅರ್ಥಪೂರ್ಣವಾದ ಇತಿಹಾಸ ನಿರ್ಮಿಸಿದ ಚಲನಚಿತ್ರಗಳ ಒಂದು ಪರ್ವ ಅಂತ್ಯಗೊಂಡಂತಾಯಿತು . ನಾನು ಇತ್ತೀಚೆಗೆ ಅವರನ್ನು ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಭೇಟಿಯಾದ ಸಂದರ್ಭದಲ್ಲಿ ಡಾ. ರಾಜಕುಮಾರ್ ಅವರೊಂದಿಗಿನ  ಅವರ ಚಲನಚಿತ್ರ ಪಯಣ ಮತ್ತು ವಿಶೇಷವಾಗಿ ಬಹುದಿನಗಳ ಹಿಂದೆ ಬಿಡುಗಡೆ ಗೊಂಡಿದ್ದ ಡಾ. ರಾಜಕುಮಾರ್ ಅವರ ಶ್ರೀ ರಾಘವೇಂದ್ರ ಸ್ವಾಮಿ ಮಹಾತ್ಮೆ ಕಪ್ಪು ಬಿಳುಪು ಚಿತ್ರವನ್ನು ಪ್ರಸ್ತುತ ವರ್ಣದಲ್ಲಿ ಮಾಡುವ ಕೆಲಸ ಮುಂದುವರೆದಿದೆ ಎಂದು ಸಂತೋಷದಿಂದ ಹೇಳಿದ್ದರು, ಆದಷ್ಟು ಶೀಘ್ರದಲ್ಲಿಯೇ ತೆರೆಯ ಮೇಲೆ ಮತ್ತೊಮ್ಮೆ  ಚಿತ್ರವನ್ನು ಅದ್ದೂರಿಯಾಗಿ ಬಿಡುಗಡೆ ಮಾಡಲಾಗುತ್ತದೆ ಎಂದು ಹೇಳಿ ,ಆ ಚಿತ್ರದ ಕೆಲವು ವರ್ಣದ ಸ್ಟೀಲ್ ಗಳನ್ನು ನನಗೆ ತೋರಿಸಿದರು. ಪ್ರಸ್ತುತ ಕನ್ನಡ ಚಲನಚಿತ್ರಗಳ ಮಾರುಕಟ್ಟೆ ಅಗಾಧವಾಗಿ ಬೆಳೆದಿದೆ ಪ್ರಪಂಚದಾದ್ಯಂತ ಕನ್ನಡ ಚಲನಚಿತ್ರಗಳು ಬಿಡುಗಡೆ ಯಾಗುತ್ತಿದ್ದು ಅಭಿಮಾನಿಗಳು ವ್ಯಾಪಕವಾಗಿ ಇದ್ದಾರೆ ಎಂದು ಅಭಿಮಾನದಿಂದ ಹೇಳಿಕೊಂಡಿದ್ದರು. 1983ನೇ ಇಸ್ವಿಯಲ್ಲಿ ಡಾ. ರಾಜಕುಮಾರ್ ರವರ ರಸಮಂಜರಿ ಕಾರ್ಯಕ್ರಮ ರಾಯಚೂರಿನ  ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಸಂದರ್ಭದಲ್ಲಿ ಶ್ರೀ ಭಗವಾನ್ ರವರು ಸಹ ರಾಯಚೂರಿಗೆ ಆಗಮಿಸಿದ್ದರು. ಕಲರ್ ನಲ್ಲಿ ರಾಘವೇಂದ್ರ ಸ್ವಾಮಿ ಮಹಾತ್ಮೆ ಚಲನಚಿತ್ರ ಬಿಡುಗಡೆಯಾದ ಮೇಲೆ ಮಂತ್ರಾಲಯಕ್ಕೆ ಬಂದ ಸಂದರ್ಭದಲ್ಲಿ ರಾಯಚೂರಿಗೆ ಮತ್ತೆ ಬರುತ್ತೇನೆ ಎಂದು ಹೇಳಿದ್ದರು. ಇಂದು  ಅವರು ನಮ್ಮೊಂದಿಗೆ ಇಲ್ಲ. ಆದರೆ ಅವರು ನಿರ್ದೇಶನ ಮಾಡಿದ ಚಲನಚಿತ್ರಗಳ ಮೂಲಕ ನಮ್ಮೊಂದಿಗೆ ಸದಾ ಜೀವಂತವಾಗಿರುತ್ತಾರೆ. ಅವರ ನಿಧನಕ್ಕೆ ಡಾ. ರಾಜಕುಮಾರ್ ಅಭಿಮಾನಿಗಳ ಸಂಘ ಜಿಲ್ಲಾ ಘಟಕ ತೀವ್ರ ಸಂತಾಪವನ್ನು  ವ್ಯಕ್ತಪಡಿಸಿ ಶ್ರದ್ಧಾಂಜಲಿಯನ್ನು ಸಲ್ಲಿಸುತ್ತದೆ ಎಂದು ಸಂಘದ  ಗೌರವಾಧ್ಯಕ್ಷರಾದ ಡಾ.ಬಸವರಾಜ ಕಳಸ ತಿಳಿಸುತ್ತಾರೆ .




Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಪ್ರಕಾಶ್ ದೇಸಾಯಿ ಚನ್ನಪ್ಪನಹಳ್ಳಿ ನಿಧನ.

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್