ಶೃಂಗೇರಿ ಶ್ರೀ ಶಂಕರ ಮಠದಲ್ಲಿ ಮಹಿಳಾ ದಿನಾಚರಣೆ: ಆಂತರಿಕ ಸಾಮರ್ಥ್ಯಗಳನ್ನು ವೃದ್ಧಿಸಿಕೊಂಡಾಗ ಮಾತ್ರ ಆತ್ಮಾನಂದವನ್ನು ಪಡೆದುಕೊಳ್ಳಬಹುದು- ಸ್ಮಿತಾ ಅಕ್ಕ
ಶೃಂಗೇರಿ ಶ್ರೀ ಶಂಕರ ಮಠದಲ್ಲಿ ಮಹಿಳಾ ದಿನಾಚರಣೆ:
ಆಂತರಿಕ ಸಾಮರ್ಥ್ಯಗಳನ್ನು ವೃದ್ಧಿಸಿಕೊಂಡಾಗ ಮಾತ್ರ ಆತ್ಮಾನಂದವನ್ನು ಪಡೆದುಕೊಳ್ಳಬಹುದು- ಸ್ಮಿತಾ ಅಕ್ಕ
ರಾಯಚೂರು,ಮಾ.13- ಲೌಕಿಕ ಜಗತ್ತಿನಲ್ಲಿರುವ ಎಲ್ಲವುಗಳೂ ಸಾಧನಗಳಾಗಬಹುದು ಆದರೆ ಸಾಧ್ಯತೆಗಳಲ್ಲ, ವ್ಯಕ್ತಿಯು ಆಂತರಿಕ ಸಾಮರ್ಥ್ಯಗಳನ್ನು ವೃದ್ಧಿಸಿಕೊಂಡಾಗ ಮಾತ್ರ ಶಾಂತತೆಯನ್ನು, ಆತ್ಮಾನಂದವನ್ನು ಪಡೆದುಕೊಳ್ಳಬಹುದು. ಹೀಗಾಗಿ ಮಹಿಳಾ ದಿನಾಚರಣೆ ಮಹಿಳೆಯರ ಜೀವನದಲ್ಲಿ ಪರಿವರ್ತನಾ ದಿನಾಚರಣೆ ಯಾಗಬೇಕು ಎಂದು ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸ್ಮಿತಾ ಅಕ್ಕನವರು ಹೇಳಿದರು.
ಅವರು ಮಹಿಳಾ ದಿನಾಚರಣೆಯ ಅಂಗವಾಗಿ ನಗರದ ಶೃಂಗೇರಿ ಶ್ರೀ ಶಂಕರ ಮಠದಲ್ಲಿ ಶಾರದಾ ಮಹಿಳಾ ಭಜನಾ ಮಂಡಳಿ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಮಹಿಳೆಯರ ಆಂತರಿಕ ಶೃಂಗಾರಕ್ಕಾಗಿ ಸಪ್ತ ಸೂತ್ರಗಳನ್ನು ತಿಳಿಸಿಕೊಟ್ಟರು. ಮಹಿಳೆಯರು ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ಮನೆ ಮಂದಿರವಾಗಿಸಬಲ್ಲರು. ಇದರಿಂದ ಸಮಾಜ, ರಾಷ್ಟ್ರ, ವಿಶ್ವವೇ ಉನ್ನತಿಯನ್ನು ಕಾಣಲು ಸಾಧ್ಯವಾಗುತ್ತದೆ ಎಂದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಡಾ. ವರ್ಷಾ ಪಾದ್ಯಾ ಅವರು ಮಹಿಳಾ ಜಾಗೃತಿ ಕುರಿತು ಉಪನ್ಯಾಸ ನೀಡುತ್ತಾ ಮಹಿಳೆಯರು ಕುಟುಂಬ ನಿರ್ವಹಣೆಯೊಂದಿಗೆ ಸಾಮಾಜ, ಪರಿಸರ, ಗ್ರಾಹಕ ಜಾಗೃತಿಗಳ ಬಗ್ಗೆ ಅರಿತು ಸಮಾಜದ ಋಣ ತೀರಿಸುವ ಕೆಲಸದಲ್ಲಿ ತೊಡಗಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಮಹಿಳೆಯರಿಗಾಗಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ವಿವಿಧ ಸಾಂಸ್ಕೃತಿಕ ಚಟುವಟಿಕೆಗಳು ನಡೆದವು. ವೇದಿಕೆಯ ಮೇಲೆ ಶಾರದಾ ಭಜನಾ ಮಂಡಳಿಯ ಅಧ್ಯಕ್ಷರಾದ ಅರುಣಾ ಕುದುರಿಮೋತಿ, ಶ್ರೀಮಠದ ವ್ಯವಸ್ಥಾಪಕರಾದ ಕೃಷ್ಣಮೂರ್ತಿ ಹೆಬಸೂರು ಉಪಸ್ಥಿತರಿದ್ದರು.
ಗಾಯತ್ರಿ ಶೆಲ್ವಾಡಿ ಸಂಗಡಿಗರು ಪ್ರಾರ್ಥಿಸಿದರು. ವಿದ್ಯಾ ಜಗನ್ನಾಥ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಸುಪ್ರಿಯಾ ಹಾಗೂ ಡಿ. ಕೋಮಲಾ ಕಾರ್ಯಕ್ರಮ ನಡೆಸಿಕೊಟ್ಟರು. ಮುಕ್ತಾ ಯರನಾಳಕರ್ ವಂದಿಸಿದರು. ಶಾರದಾ ಭಜನಾ ಮಂಡಳಿಯ ಪದಾಧಿಕಾರಿಗಳು ಹಾಗೂ ಸದಸ್ಯರು ಜೊತೆಗೆ ವಿವಿಧ ಭಜನಾ ಮಂಡಳಿಗಳು, ಸಂಘ ಸಂಸ್ಥೆಗಳಿಂದ ಆಗಮಿಸಿದ್ದ ಮಹಿಳೆಯರು, ಶ್ರೀಮಠದ ಭಕ್ತವೃಂದ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದರು.
👏🙏
ReplyDelete