ಭಾರಿ ಗಾತ್ರದ ಎತ್ತುಗಳಿಂದ ಭಾರವಾದ ಕಲ್ಲು ಎಳೆಯುವ ಸ್ಪರ್ದೆ: ಜೂನ್ 3 ರಿಂದ ಮೂರು ದಿನ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬ- ಎ.ಪಾಪಾರೆಡ್ಡಿ
ಭಾರಿ ಗಾತ್ರದ ಎತ್ತುಗಳಿಂದ ಭಾರವಾದ ಕಲ್ಲು ಎಳೆಯುವ ಸ್ಪರ್ದೆ: ಜೂನ್ 3ರಿಂದ ಮೂರು ದಿನ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬ- ಎ.ಪಾಪಾರೆಡ್ಡಿ
ರಾಯಚೂರು, ಮೇ.27-ಕಾರಹುಣ್ಣಿಮೆಯ ಅಂಗವಾಗಿ ಪ್ರತಿ ವರ್ಷದಂತೆ ಈ ಬಾರಿಯೂ ಮುನ್ನೂರುಕಾಪು ಸಮಾಜದಿಂದ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬ ಜೂ.3 ರಿಂದ 5ರ ವರೆಗೆ ಆಯೋಜಿಸಲಾಗಿದೆ ಎಂದು ಮಾಜಿ ಶಾಸಕ ಹಾಗೂ ಮುನ್ನೂರುಕಾಪು ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎ.ಪಾಪಾರೆಡ್ಡಿ ತಿಳಿಸಿದರು.
ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗ್ರಾಮೀಣ ಕಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಪ್ರತಿ ವರ್ಷ ಮುಂಗಾರು ಸಾಂಸ್ಕೃತಿಕ ಹಬ್ಬ ನಡೆಸಲಾಗುತ್ತಿದೆ. ಜೂನ್ 3ರಂದು ಬೆಳಿಗ್ಗೆ 8ಕ್ಕೆ ಎತ್ತುಗಳಿಂದ 1. 1/2 ಟನ್ ಭಾರವಾದ ಕಲ್ಲು ಎಳೆಯುವ ಸ್ಪರ್ಧೆಗೆ ನೂತನ ಪ್ರವಾಸೋದ್ಯಮ ಸಚಿವ ಎನ್.ಎಸ್. ಬೋಸರಾಜು ಉದ್ಘಾಟನೆ ಮಾಡಲಿದ್ದಾರೆ. ಜೂನ್ 4 ರಂದು 2 ಟನ್ ಭಾರವಾದ ಕಲ್ಲು ಎಳೆಯುವ ಅಖಿಲ ಭಾರತ ಮುಕ್ತ ಅವಕಾಶ ಇರಲಿದೆ ಇದಕ್ಕೆ ನಗರ ಶಾಸಕ ಡಾ.ಶಿವರಾಜ ಪಾಟೀಲ ಚಾಲನೆ ನೀಡುವರು ಎಂದರು. ಜೂನ್ 5ರಂದು ನಡೆಯುವ 2.5 ಟನ್ ಭಾರವಾದ ಕಲ್ಲು ಎಳೆಯುವ ಸ್ಫರ್ಧೆಗೆ ಸಂಸದ ರಾಜಾ ಅಮರೇಶ್ವರ ನಾಯಕ ಅವರು ಚಾಲನೆ ನೀಡಲಿದ್ದಾರೆ.
ಜೂನ್ 4 ರಂದು ಎತ್ತುಗಳ ಬೃಹತ್ ಮೆರವಣಿಗೆ, ಗ್ರಾಮೀಣ ಶೈಲಿಯ ಕಲಾರೂಪಕ ವೀರಗಾಸೆ, ಕತ್ತಿವರಸೆ,ಡೊಳ್ಳು ಕುಣಿತ, ಗಾಲಿಹಲಗೆ, ಕರಡಿ ಮಜಲು, ಕಂಸಾಲೆ ಹಾಗೂ ವಿವಿಧ ಕಲಾವಿದರೊಂದಿಗೆ ಮೆರವಣಿಗೆ ನಡೆಯಲಿದೆ ಎಂದು ತಿಳಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮ: ಜೂನ್ 3ರಂದು ಸಂಜೆ 6ಕ್ಕೆ ನಗರದ ಡ್ಯಾಡಿ ಕಾಲೋನಿಯ ಈಶ್ವರ ದೇವಸ್ಥಾನದ ಬಳಿ, 4ರಂದು ವೀರಾಂಜನೇಯ ಮುನ್ನೂರುಕಾಪು ಕಲ್ಯಾಣ ಮಂಟಪ ಹಾಗೂ 5ರಂದು ಸಂಜೆ 6ಕ್ಕೆ ಗಂಜ್ ಕಲ್ಯಾಣ ಮಂಟಪದಲ್ಲಿ ನೃತ್ಯ ರೂಪಕ ನಡೆಯಲಿದೆ.
ಜೂನ್ 5ರಂದು ಮದ್ಯಾಹ್ನ 3ಕ್ಕೆ ನಗರದ ಲಕ್ಷ್ಮಮ್ಮ ದೇವಸ್ಥಾನದಲ್ಲಿ ಕಲ್ಲು ಗುಂಡು, ಉಸುಕಿನ ಚೀಲ ಎತ್ತುವ ಸ್ಪರ್ಧೆ, ಸಂಜೆ 5ಕ್ಕೆ ದೆಹಲಿ, ಪಂಜಾಬ್, ಆಂಧ್ರಪ್ರದೇಶ ಹಾಗೂ ಕರ್ನಾಟಕ ರಾಜ್ಯಗಳ ಪೈಲ್ವಾನರಿಂದ ಕುಸ್ತಿ ಬಲ ಪ್ರದರ್ಶನ ನಡೆಯಲಿದೆ.
ಬಹುಮಾನ ವಿತರಣೆ: ಜೂನ್ 3ರಂದು ನಡೆಯುವ ಕರ್ನಾಟಕ ರಾಜ್ಯದ ಎತ್ತುಗಳ 1 ವರೆ ಟನ್ ಭಾರವಾದ ಕಲ್ಲು ಎಳೆಯುವ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ವಿಜೇತ ತಂಡಕ್ಕೆ ₹65 ಸಾವಿರ, ದ್ವಿತೀಯ ಸ್ಥಾನಕ್ಕೆ ₹55 ಸಾವಿರ, ತೃತೀಯ ಸ್ಥಾನಕ್ಕೆ ₹45 ಸಾವಿರ, ನಾಲ್ಕನೇ ಸ್ಥಾನಕ್ಕೆ ₹35 ಸಾವಿರ, ಐದನೇ ಸ್ಥಾನಕ್ಕೆ ₹30 ಸಾವಿರ ಬಹುಮಾನ ನೀಡಲಾಗುತ್ತದೆ.
ಜೂನ್ 4ರಂದು ನಡೆಯುವ ಅಖಿಲ ಭಾರತದ ವಿಭಾಗದ 2 ಟನ್ ಭಾರವಾದ ಕಲ್ಲು ಎಳೆಯುವ ಸ್ಪರ್ಧೆಯ ಪ್ರಥಮ ಸ್ಥಾನ ಪಡೆದ ಎತ್ತುಗಳಿಗೆ ₹80 ಸಾವಿರ, ದ್ವಿತೀಯ ಸ್ಥಾನ್ಕಕೆ ₹65 ಸಾವಿರ, ತೃತೀಯ ಸ್ಥಾನಕ್ಕೆ ₹55 ಸಾವಿರ, ನಾಲ್ಕನೇ ಸ್ಥಾನಕ್ಕೆ ₹45 ಸಾವಿರ, 5ನೇ ಸ್ಥಾನಕ್ಕೆ ₹40 ಸಾವಿರ ಹಾಗೂ 6ನೇ ಸ್ಥಾನಕ್ಕೆ ₹30 ಸಾವಿರ ಬಹುಮಾನ ವಿದೆ.
2.1/2 ಟನ್ ಭಾರವಾದ ಕಲ್ಲು ಎಳೆಯುವ ಅಖಿಲ ಭಾರತ ಮುಕ್ತ ಸ್ಪರ್ಧೆಯಲ್ಲಿ ವಿಜೇತ ಪ್ರಥಮ ಸ್ಥಾನಕ್ಕೆ ₹90 ಸಾವಿರ, ದ್ವಿತೀಯ ಸ್ಥಾನಕ್ಕೆ ₹75 ಸಾವಿರ, ತೃತೀಯ ಸ್ಥಾನಕ್ಕೆ ₹65 ಸಾವಿರ, ನಾಲ್ಕನೇ ಸ್ಥಾನಕ್ಕೆ ₹55 ಸಾವಿರ, 5ನೇ ಸ್ಥಾನಕ್ಕೆ ₹45 ಸಾವಿರ ಹಾಗೂ 6ನೇ ಸ್ಥಾನಕ್ಕೆ ₹35 ಸಾವಿರ ಬಹುಮಾನ ನೀಡಲಾಗುವುದು ಎಂದು ಪಾಪಾರೆಡ್ಡಿ ಅವರು ಮಾಹಿತಿ ನೀಡಿದರು.
ಮುನ್ನೂರುಕಾಪು ಸಮಾಜದ ಕೋಶಾಧ್ಯಕ್ಷ ಜಿ.ಶೇಖರರೆಡ್ಡಿ, ಮುಖಂಡರಾದ ನಾಯನ್ ಶ್ರೀನಿವಾಸರೆಡ್ಡಿ, ವಿ ಕಿಷ್ಣಮೂರ್ತಿ, ರಾಜೇಂದ್ರ ರೆಡ್ಡಿ, ಜಿ. ನರಸರೆಡ್ಡಿ, ಪಿ. ರಾಜೇಂದ್ರ ರೆಡ್ಡಿ, ಜಿ. ಮಹೇಂದ್ರ ರೆಡ್ಡಿ ಇದ್ದರು.
Comments
Post a Comment