ಜಿಲ್ಲಾ ಕ್ರೀಡಾಂಗಣದಲ್ಲಿ ಜನತಾ ದರ್ಶನ ಕಾರ್ಯಕ್ರಮ ಉದ್ಘಾಟನೆ: ಸಮಸ್ಯೆ ಪರಿಹರಿಸಲು ಜನರ ಬಳಿಗೆ ಸರ್ಕಾರವೆ ಆಗಮಿಸಿದೆ- ಡಾ.ಶರಣ ಪ್ರಕಾಶ್ ಪಾಟೀಲ್.
ಜಿಲ್ಲಾ ಕ್ರೀಡಾಂಗಣದಲ್ಲಿ ಜನತಾ ದರ್ಶನ ಕಾರ್ಯಕ್ರಮ ಉದ್ಘಾಟನೆ: ಸಮಸ್ಯೆ ಪರಿಹರಿಸಲು ಜನರ ಬಳಿಗೆ ಸರ್ಕಾರವೆ ಆಗಮಿಸಿದೆ- ಡಾ.ಶರಣ ಪ್ರಕಾಶ್ ಪಾಟೀಲ್. ರಾಯಚೂರು,ಸೆ.25- ನಿಮ್ಮ ಸಮಸ್ಯೆ ಪರಿಹರಿಸಲು ಜನತಾ ದರ್ಶನ ಮೂಲಕ ಸರ್ಕಾರವೆ ಜನರ ಬಳಿಗೆ ಆಗಮಿಸಿದೆ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ಹೇಳಿದರು. ಅವರಿಂದು ನಗರದ ಮಹಾತ್ಮ ಗಾಂಧಿಜೀ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದಿಂದ ಆಯೋಜಿಸಿದ್ದ ಜನತಾ ದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜನರು ತಮ್ಮ ಅಹವಾಲು ಸಲ್ಲಿಸಲು ಸರ್ಕಾರಿ ಕಛೇರಿಗೆ ಅಲಿಯುವುದನ್ನು ತಪ್ಪಿಸಲು ಹಾಗೂ ಅವರ ಸಮಸ್ಯೆಗೆ ಪರಿಹಾರ ಕಲ್ಪಿಸುವ ಉದ್ದೇಶದಿಂದ ಜನತಾ ದರ್ಶನ ಕಾರ್ಯಕ್ರಮ ಆಯೋಜಿಸಲಾಗಿದ್ದು ಜನರು ಇದರ ಸದುಪಯೋಗ ಪಡೆಯಬೇಕೆಂದ ಅವರು ವೈಯಕ್ತಿಕ ಸಮಸ್ಯೆ ಮತ್ತು ಸಂಘ ಸಂಸ್ಥೆಗಳು ನೀಡುವ ಅರ್ಜಿಗಳನ್ನು ಪ್ರತ್ಯೇಕವಾಗಿ ಸಲ್ಲಿಸಲು ಕೋರಿದರು.
ಗ್ರಾಮೀಣ ಶಾಸಕ ದದ್ದಲ್ ಬಸನಗೌಡ ಮಾತನಾಡಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದು ನಾಲ್ಕು ತಿಂಗಳಾಗುತ್ತಿದ್ದು ಈಗಾಗಲೆ ಸರ್ಕಾರ ಐದು ಗ್ಯಾರಂಟಿಗಳಲ್ಲಿ ನಾಲ್ಕು ಈಡೇರಿಸಿದ್ದು ಐದನೆ ಗ್ಯಾರಂಟಿಯು ಸಹ ಈಡೇರುತ್ತದೆ ಎಂದರು. ಇಂದು ಜನತಾ ದರ್ಶನದಲ್ಲಿ 36 ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಇಲ್ಲಿ ಸೇರಿದ್ದು ಅವರು ಜನರ ಅರ್ಜಿ ಸ್ವೀಕರಿಸಿ ನಿರ್ಧಿಷ್ಟ ಗಡುವಿನೊಳಗೆ ಸಮಸ್ಯೆಗೆ ಪರಿಹಾರ ಕಲ್ಪಿಸುತ್ತಾರೆ ಎಂದರು. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಜನರ ಬಳಿ ಹೋಗುತ್ತದೆ ಜನರು ಕಷ್ಟ ಆಲಿಸುತ್ತದೆ ಜಿಲ್ಲೆಯ ಬಹುತೇಕ ಪ್ರದೇಶವನ್ನು ಬರಗಾಲಪೀಡಿತ ಪ್ರದೇಶವೆಂದು ಸರ್ಕಾರ ಘೋಷಿಸಿದೆ ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಕಾರ್ಯಪ್ರವೃತ್ತವಾಗಲಿದೆ ಎಂದರು. ನಮ್ಮ ಸರ್ಕಾರ ಐದು ವರ್ಷಗಳ ಕಾಲ ಪಕ್ಷಾತೀತವಾಗಿ, ಜಾತ್ಯಾತೀತ ವಾಗಿ ಆಡಳಿತ ನಡೆಸಲಿದ್ದು ಬಹು ದಿನಗಳಿಂದ ನಡೆಯುತ್ತಿರುವ ಏಮ್ಸ್ ಹೋರಾಟಕ್ಕೆ ರಾಜ್ಯ ಸರ್ಕಾರ ಸ್ಪಂದಿಸಿ ಕೇಂದ್ರಕ್ಕೆ ಏಕೈಕ ಹೆಸರು ಶಿಫಾರಸ್ಸು ಮಾಡಿದ್ದು ಕೇಂದ್ರ ಸರ್ಕಾರ ಕೂಡಲೆ ಜಿಲ್ಲೆಗೆ ಏಮ್ಸ್ ಮಂಜೂರು ಮಾಡಬೇಕೆಂದರು. ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿ ಮಾತನಾಡಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ರಾಜ್ಯ ಸರ್ಕಾರ ಜನ ಪರ ಕಾರ್ಯ ಮಾಡುತ್ತಿದೆ ಐದು ಗ್ಯಾರಂಟಿ ಘೋಷಿಸಿ ನಾಲ್ಕು ಈಡೇರಿಸಿ ನುಡಿದಂತೆ ನಡೆದ ಸರ್ಕಾರವಾಗಿದೆ ಎಂದರು.
ವರುಣ ದೇವರ ಕೃಪೆಯಾಗದೆ ಜಿಲ್ಲೆಯಲ್ಲಿ ಬರಗಾಲವಿದ್ದು ಜಿಲ್ಲಾಡಳಿತ ಕುಡಿಯುವ ನೀರಿನ ತೊಂದರೆಯಾಗದಂತೆ ನಿಗಾವಹಿಸಬೇಕು ಜಾನುವಾರುಗಳಿಗೆ ಮೇವಿನ ಅಭಾವ ಆಗದಂತೆ ನೋಡಿಕೊಳ್ಳಬೇಕೆಂದ ಅವರು ರೈತರಿಗೆ ಸಮರ್ಪಕ ನೀರು ಒದಗಿಸಬೇಕೆಂದರು. ಜನತಾದರ್ಶನದಲ್ಲಿ ವಿವಿಧ ಸಮಸ್ಯೆಗಳಿಗೆ ಪರಿಹಾರ ಒದಗಿಸುವಂತೆ ಕೋರಿ ಜನರು ಅರ್ಜಿ ನೀಡಿದರು ಸಚಿವರು ಸರದಿ ಸಾಲಿನಲ್ಲಿ ಜನರ ಅಹವಾಲು ಸ್ವೀಕರಿಸಿ ಸಂಬಂಧಿಸಿದ ಅಧಿಕಾರಿಗಳಿಗೆ ಸಮಸ್ಯೆ ಪರಿಹರಿಸಲು ಸೂಚಿಸಿದರು. ಉದಾಸೀನತೆ ತೋರಿದ ಅಧಾಕಾರಿಗಳಿಗೆ ತರಾಟೆ: ಅಂಗವಿಕಲ ಮಹಿಳೆಗೆ ಜಿಲ್ಲಾ ಗ್ರಂಥಾಲಯದಲ್ಲಿ ಕೆಲಸ ಮಾಡಿದರು ಸಂಬಳ ನೀಡದೆ ಕೆಲಸದಿಂದ ತೆಗೆದು ಹಾಕಿದ್ದಕ್ಕೆ ಹಾಗು ಜನತಾ ದರ್ಶನಕ್ಕೆ ಆಗಮಿಸದೆ ವಿಳಂಬವಾಗಿ ಅಗಮಿಸಿದ್ದಕ್ಕೆ ಜಿಲ್ಲಾ ಗ್ರಂಥಾಲಯದ ಮಹಿಳಾ ಅಧಿಕಾರಿಗೆ ನಿಮಗೆ ಗಂಭೀರತೆಯಿಲ್ಲವೆ ಎಂದು ತರಾಟೆ ತೆಗೆದುಕೊಂಡರು, ಅದೆ ರೀತಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕಿಗೆ ತರಾಟೆ ತೆಗೆದುಕೊಂಡು ಇಲಾಖೆಯಿಂದ ರಂಗ ಚಿಗುರು ಸಂಸ್ಥೆಗೆ ಸರ್ಕಾರದಿಂದ ಬಂದು ಹಣ ಏಕೆ ನೀಡಿಲ್ಲವೆಂದು ಪ್ರಶ್ನಿಸಿದ ಅವರು ನಿಮ್ಮ ಮೇಲೆ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದರು. ತಮ್ಮ ಸ್ಥಳದಲ್ಲಿ ಅನಧಿಕೃತ ಕಟ್ಟಡ ಕಟ್ಟುತ್ತಿದ್ದರು ನ್ಯಾಯಾಲಯ ಆದೇಶವಿದ್ದರು ನಗರಸಭೆ ಕ್ರಮಕೈಗಳ್ಳದಿರುವುದಕ್ಕೆ ಬೇಸರ ವ್ಯಕ್ತಪಡಿಸಿ ಅರ್ಜಿದಾರರೊಬ್ಬರಿಗೆ ನ್ಯಾಯ ಒದಗಿಸುವಂತೆ ನಗರ ಸಭೆ ಪೌರಾಯುಕ್ತರಿಗೆ ಸೂಚಿಸಿದರು. ತ್ರಿಪಲ್ ಐಟಿಗೆ ಭೂಮಿ ನೀಡಿದ ನಮಗೆ ಪರಿಹಾರ ಮೊತ್ತ ನೀಡಲಾಗಿಲ್ಲವೆಂದು ಅಹವಾಲು ಹೇಳಿದ ರೈತನಿಗೆ ಈ ಕುರಿತು ಕ್ರಮಗೊಂಡು ಸಮಸ್ಯೆ ನಿವಾರಣೆಗೆ ಸೂಚಿಸಿದರು. ಪ್ರವಾಸೋದ್ಯಮ ಇಲಾಖೆಯಿಂದ ಐರಾವತ ಯೋಜನೆ ಜಾರಿಯಾಗದ ಬಗ್ಗೆ ಅಹವಾಲು ಅರ್ಜಿದಾರರೊಬ್ಬರು ಅರ್ಜಿ ಸಲ್ಲಿಸಿದರು. ವೃದ್ಧೆಯೊಬ್ಬರು ಪಿಂಚಣಿ ಸ್ಥಗಿತ ಬಗ್ಗೆ ಅಹವಾಲು ಸಲ್ಲಿಸಿದರು. ಹೀಗೆ ನೂರಾರು ಸಮಸ್ಯೆ ಹೊತ್ತು ಬಂದ ಜನರಿಗೆ ಜನತಾ ದರ್ಶನ ಕೊಂಚ ಮಟ್ಟಿಗೆ ಭರವಸೆ ಮೂಡಿಸಿತು .
ಅಂಗವಿಕಲರು ವೇದಿಕೆಗೆ ಬರಲು ಹರಸಾಹಸ: ಜನತಾ ದರ್ಶನ ಕಾರ್ಯಕ್ರಮಕ್ಕೆ ಬಂದ ಅಂಗವಿಕಲರಿಗೆ ವೇದಿಕೆ ಮೇಲಿದ್ದ ಸಚಿವರ ಬಳಿ ಬರಲು ಹರಸಾಹಸ ಪಡಬೇಕಾಯಿತು ಗಾಲಿ ಕುರ್ಚಿ ವೇದಿಕೆ ಏರಲು ಸೂಕ್ತ ವ್ಯವಸ್ಥೆಯಿಲ್ಲದ ಕಾರಣ ಅಂಗವಿಕಲರಿಗೆ ಸಮಸ್ಯೆಯಾಯಿತು. ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಅಪರ ಜಿಲ್ಲಾಧಿಕಾರಿ ಡಾ .ಕೆ.ದುರಗೇಶ್ ಮಾತನಾಡಿ ಜನತಾ ದರ್ಶನದಲ್ಲಿ 22 ಸ್ಟಾಲ್ ಗಳಲ್ಲಿ ವಿವಿಧ ಇಲಾಖೆಗಳ ಅರ್ಜಿ ಸ್ವೀಕೃತಿ ಆಗಲಿದೆ ನಂತರ ಅದನ್ನು ಗಣಕೀಕರಣ ಮಾಡಲಾಗುತ್ತದೆ ಎಂದರು.
ವೇದಿಕೆ ಮೇಲೆ ಶಾಸಕರಾದ ಹಂಪಯ್ಯ ನಾಯಕ, ಜಿ.ಕರೆಮ್ಮ ನಾಯಕ, ವಿಧಾನ ಪರಿಷತ್ ಸದಸ್ಯ ಶರಣಗೌಡ ಬಯ್ಯಾಪುರ, ಮಾಜಿ ವಿಧಾನ ಪರಿಷತ್ ಸದಸ್ಯ ಬಸವರಾಜ ಪಾಟೀಲ ಇಟಗಿ, ಎಪಿಎಂಸಿ ಅಧ್ಯಕ್ಷ ಮಲ್ಲಿಕಾರ್ಜುನ ಗೌಡ ತಲಮಾರಿ, ಉಪಾಧ್ಯಕ್ಷ ಬಶೀರ್, ಮುಖಂಡರಾದ ಎ.ವಸಂತ ಕುಮಾರ್, ಜಿ.ಪಂ ಸಿಇಓ ಹಾಗೂ ಪ್ರಭಾರಿ ಜಿಲ್ಲಾಧಿಕಾರಿ ರಾಹುಲ್ ತುಕಾರಾಂ ಪಾಂಡ್ವೆ , ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್.ಬಿ. ಜಿ.ಪಂ ಉಪಕಾರ್ಯದರ್ಶಿ ಶಶಿಕಾಂತ ಶಿವಪುರೆ, ಎಸಿ ಮೆಹೆಬೂಬಿ ಇನ್ನಿತರರು ಇದ್ದರು. ಮುರಳೀಧರ ಕುಲಕರ್ಣಿ ನಿರೂಪಿಸಿದರು, ಮಹಾಲಕ್ಷ್ಮೀ ತಂಡದವರು ನಾಡಗೀತೆ ಪ್ರಸ್ತುತ ಪಡಿಸಿದರು. ಜನತಾ ದರ್ಶನಕ್ಕೆ ಬಂದ ಜನರಿಗೆ ಊಟದ ವ್ಯವಸ್ಥೆ ಕಲ್ಪಿಸಲಾಗಿತ್ತು.
Comments
Post a Comment