ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟನೆ: ಮುದ್ರಣ ಮಾಧ್ಯಮ ವಿಶ್ವಾಸಾರ್ಹತೆಗೆ ಪಾತ್ರವಾಗಿದೆ - ರವೀಂದ್ರ ಭಟ್.


ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟನೆ:   
ಮುದ್ರಣ ಮಾಧ್ಯಮ ವಿಶ್ವಾಸಾರ್ಹತೆಗೆ ಪಾತ್ರವಾಗಿದೆ- ರವೀಂದ್ರ ಭಟ್     
       ರಾಯಚೂರು,ನ.26- ದೃಶ್ಯ ಮಾಧ್ಯಮ ಭರಾಟೆಯಲ್ಲಿಯೂ ಮುದ್ರಣ ಮಾಧ್ಯಮ ಓದುಗರ  ವಿಶ್ವಾಸಾರ್ಹತೆಗೆ ಪಾತ್ರವಾಗಿದೆ ಎಂದು ಪ್ರಜಾವಾಣಿ ಕಾರ್ಯನಿರ್ವಾಹಕ ಸಂಪಾದಕರಾದ ರವೀಂದ್ರ ಭಟ್ ಹೇಳಿದರು. ಅವರಿಂದು ನಗರದ ಪತ್ರಿಕಾ ಭವನ ಸಭಾಂಗಣದಲ್ಲಿ ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ 1966 ರಲ್ಲಿ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ಸ್ಥಾಪನೆ ದಿನವನ್ನು ರಾಷ್ಟ್ರೀಯ ಪತ್ರಿಕಾ ದಿನವನ್ನಾಗಿ ಆಚರಿಸಲಾಗುತ್ತಿದೆ ಇಂದು ಪತ್ರಿಕಾ ಕ್ಷೇತ್ರ ಸಂಕೀರ್ಣ ಕಾಲಘಟ್ಟದಲ್ಲಿದೆ ಎಂದ ಅವರು ನಾವು ಸಣ್ಣವರಿದ್ದಾಗ  ಹಠ ಮಾಡಿದಾಗ ತಂದೆ ತಾಯಿಗಳು ಓದಲು ಪೇಪರ್ ನೀಡುತ್ತಿದ್ದರು ಈಗಿನ ಹುಡುಗರು ಹಠ ಮಾಡಿದಾಗ ತಂದೆ ತಾಯಿಗಳು ಮೋಬೈಲ್ ನೀಡುತ್ತಾರೆ ಈಗ ಮೋಬೈಲ್ ಇದ್ದವರು ಎಲ್ಲರು ಪತ್ರಕರ್ತರೆ ಎಂದು ಮಾರ್ಮಿಕವಾಗಿ ನುಡಿದರು.

ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ಭಾರತೀಯ ಮಾಧ್ಯಮ ಕಳವಳಕಾರಿ ಹಂತದಲ್ಲಿದೆ ಅದನ್ನು ನಾವೆಲ್ಲರು ಮೇಲಕ್ಕೆತ್ತಬೇಕು ಎಂದರು. ವಿದ್ವಾಂಸರು ಎಲ್ಲರು ಪತ್ರಕರ್ತರೆ ಆದರೆ ಪತ್ರಕರ್ತರು ಎಲ್ಲರು ವಿದ್ವಾಂಸರು ಎಂಬ ಭ್ರಮೆ ಬೇಡವೆಂದರು. ಉತ್ತಮ ಪತ್ರಕರ್ತನಿಗೆ ಯಾರ ಬಳಿ ಏನು ಕೇಳಿದರೆ ನಿಖರ ಮಾಹಿತಿ ದೊರೆಯುತ್ತದೆ ಎಂಬ ಮಾಹಿತಿಯಿರಬೇಕೆಂದರು. ಡಿಜಿಟಲ್, ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಸುದ್ದಿ ತಿದ್ದಿಕೊಂಡು ಮರು ಪ್ರಸಾರ ಮಾಡಬಹುದು ಆದರೆ ಮುದ್ರಣ ಮಾಧ್ಯಮದಲ್ಲಿ ಅದು ಸಾಧ್ಯವಿಲ್ಲ ತಿದ್ದುಪಡಿ ಮಾತ್ರ ಹಾಕಬಹುದು. ದೃಶ್ಯ ಮಾಧ್ಯಮದವರು ಕರೋನಾ ಸಂದರ್ಭದಲ್ಲಿ ಹೊಸ ಹೊಸ ಶಬ್ದದಿಂದ ಜನರನ್ನು ಆತಂಕಕ್ಕೀಡು ಮಾಡಿದರು ಎಂದ ಅವರು ಮುದ್ರಣ ಮಾಧ್ಯಮವನ್ನು ಜನರು ಹೆಚ್ಚು ನಂಬಲು ನಾವು ನೈಜತೆಗೆ ಪ್ರಾಧಾನ್ಯತೆ ನೀಡುತ್ತೇವೆ ಇದು ದೂಷಣೆಯಲ್ಲ ಎಂದರು.

ಮಾಧ್ಯಮವನ್ನು ಪ್ರಜಾಪ್ರಭುತ್ವದ ಕಾವಲು ನಾಯಿ ಎನ್ನುತ್ತಾರೆ ಆದರೆ ಅದು ಪರಿಚಿತರಿಗೆ ಕಚ್ಚುವುದಿಲ್ಲ ಮತ್ತು ಬೊಗಳುವುದಿಲ್ಲವೆಂದು ಮುಗುಳ್ನಕ್ಕರು. ಇಪ್ಪತ್ತು ನಾಲ್ಕು ಗಂಟೆ ಸುದ್ದಿ ನೀಡಲು ಸಾಧ್ಯವಿಲ್ಲ ಎಬಿಸಿ ಎಡಿಟ್ ಬ್ಯೂರೋ ಆಫ್ ಸರ್ಕ್ಯುಲೇಷನ್ ಬದಲು ಆಸ್ಟ್ರೋಲಜಿ, ಬಾಲಿವುಡ್, ಕ್ರಿಕೆಟ್ ಗೆ ಪ್ರಾಧಾನ್ಯತೆ ಹೆಚ್ಚಾಗಿದೆ ಎಂದರು.ಅಪರ ಜಿಲ್ಲಾಧಿಕಾರಿ ದುರ್ಗೇಶ ಮಾತನಾಡಿ ಪತ್ರಿಕಾ, ದೃಶ್ಯ ಮಾಧ್ಯಮದಿಂದ ಸರ್ಕಾರಕ್ಕೆ ಸಮಸ್ಯೆಗಳ ಬಗ್ಗೆ ತಿಳುವಳಿಕೆ ಮಾಹಿತಿ ಸಿಗುತ್ತದೆ ಜಿಲ್ಲೆಯ ಪತ್ರಕರ್ತರು ಅದನ್ನು ನಿಭಾಯಿಸುತ್ತಿದ್ದಾರೆ ಎಂದರು.

ಹೆಚ್ಚುವರಿ ಎಸ್ಪಿ ಶಿವಕುಮಾರ್ ಮಾತನಾಡಿ ಗನ್ ನಿಂದ ಸಮಾಜವನ್ನು ಸುಧಾರಿಸಬಹುದು ಆದರೆ ಪೆನ್ ನಿಂದ ಮಾತ್ರ ಬದಲಾವಣೆ ಸಾಧ್ಯವೆಂದ ಅವರು ಪತ್ರಿಕಾ ಪ್ರತಿನಿಧಿಗಳ ಶ್ರಮದಲ್ಲಿ ಅವರ ಕುಟುಂಬದ ಪಾಲು ಇದೆ ಅವರೆಲ್ಲರು ಆರೋಗ್ಯವಂತರಾಗಿರಲಿ  ಎಂದರು.

ಜೀವಮಾನದ ಸಾಧನೆ ಪ್ರಶಸ್ತಿ ಪಡೆದ  ಹಿರಿಯ ಪತ್ರಕರ್ತ ಬಿ.ವೆಂಕಟಸಿಂಗ್ ಮಾತನಾಡಿ 1988 ರಲ್ಲಿ ನಾನು ಮೊದಲು ಬಾರಿಗೆ ಪತ್ರಿಕಾ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದೆ ಸುದ್ದಿಮೂಲ ನನ್ನನ್ನು ಈ ಮಟ್ಟಕ್ಕೆ ಬರಲು ಕಾರಣವಾಗಿದೆ ಎಲ್ಲಾ ಪತ್ರಕರ್ತರು ನನಗೆ ಸಹಕಾರ ನೀಡಿದ್ದಾರೆ ಓದುಗರ ವೇದಿಕೆಗೆ ಬಸ್ ನಿಲ್ದಾಣ ಸಮಸ್ಯೆ ಬಗ್ಗೆ ಬರೆದಿದ್ದು ನನ್ನ ಪತ್ರಿಕಾ ಕ್ಷೇತ್ರಕ್ಕೆ ಬರಲು ಮುನ್ನುಡಿಯಾಯಿತು ಎಂದರು.ಪ್ರಾಸ್ತಾವಿಕವಾಗಿ ರಾಯಚೂರು ರಿಪೋರ್ಟರ್ಸ್ ಗಿಲ್ಡ್ ಅಧ್ಯಕ್ಷ ಚೆನ್ನಬಸವಣ್ಣ ಮಾತನಾಡಿ ಪ್ರತಿ ವರ್ಷ ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಮಾಡುತ್ತಿದ್ದೇವೆ ಗಿಲ್ಡ್ ಸ್ಥಾಪನೆಗೆ ವೆಂಕಟಸಿಂಗ್ ,ಡಿ.ಕೆ.ಕಿಶನ್ ರಾವ್ ಜೋಡೆತ್ತು ಗಳಾಗಿ ಶ್ರಮಿಸಿದರು ಇನ್ನು ಅನೇಕರು ಅದಕ್ಕೆ ಸಹಕರಿಸಿದರು ಇಂದು ಈ ಮಟ್ಟಕ್ಕೆ ಬೆಳೆದಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಆರ್.ಗುರುನಾಥ ಮಾತನಾಡಿ ಪತ್ರಕರ್ತರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದು ಸರ್ಕಾರ ಅದಕ್ಕೆ ಸ್ಪಂದಿಸಬೇಕು ಎಂದು ಅವರು ಮಾಧ್ಯಮ ಉದ್ಯಮಿಗಳ ಕಪಿ ಮುಷ್ಟಿಯಲ್ಲಿ ಇದೆ ಎಂದರು. ವೇದಿಕೆ ಮೇಲೆ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ಶಿವಮೂರ್ತಿ ಹಿರೇಮಠ ,ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಪಾಷಾ ಹಟ್ಟಿ 
ರಾಯಚೂರು ರಿಪೋರ್ಟರ್ಸ್ ಗಿಲ್ಡ್ ಪ್ರಧಾನ ಕಾರ್ಯದರ್ಶಿ ವಿಜಯ ಜಾಗಟಗಲ್ ಇದ್ದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು .

ಪ್ರಾರಂಭದಲ್ಲಿ ಸಂವಿಧಾನ ಅಂಗಿಕಾರ ದಿನಾಚರಣೆ ಅಂಗವಾಗಿ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಸಂವಿಧಾನ ಪೀಠಿಕೆ ಪಠಣ ಮಾಡಲಾಯಿತು. ಅಯ್ಯಪ್ಪ ಪಿಕಲಿಹಾಳ ಪ್ರಾರ್ಥಿಸಿದರು, ರಾಮಕೃಷ್ಣ ದಾಸರಿ ಸ್ವಾಗತಿಸಿದರು. ಸಣ್ಣ ಈರಣ್ಣ ನಿರೂಪಿಸಿದರು.ಜಗನ್ನಾಥ ಪೂಜಾರಿ ವಂದಿಸಿದರು. ಸಿದ್ದಯ್ಯ ಸ್ವಾಮಿ ಕುಕನೂರು ಬಹುಮಾನ ವಿತರಣೆ ನಿರ್ವಹಿಸಿದರು.ಗಣ್ಯರು, ಹಿರಿಯ ,ಕಿರಿಯ ಪತ್ರಕರ್ತರಿದ್ದರು.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಪ್ರಕಾಶ್ ದೇಸಾಯಿ ಚನ್ನಪ್ಪನಹಳ್ಳಿ ನಿಧನ.

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್