ರಾಜ್ಯ ಮಟ್ಟದ ಮೂರನೇ ವೈಜ್ಞಾನಿಕ ಸಮ್ಮೇಳನ ಉದ್ಘಾಟನೆ: ಮೂಡನಂಬಿಕೆ ತೊಲಗಿಸಲು ಪ್ರತಿಯೊಬ್ಬರು ಪ್ರಯತ್ನಿಸಬೇಕು- ಎನ್.ಎಸ್ ಬೋಸರಾಜು
ರಾಜ್ಯ ಮಟ್ಟದ ಮೂರನೇ ವೈಜ್ಞಾನಿಕ ಸಮ್ಮೇಳನ ಉದ್ಘಾಟನೆ:
ಮೂಡನಂಬಿಕೆ ತೊಲಗಿಸಲು ಪ್ರತಿಯೊಬ್ಬರು ಪ್ರಯತ್ನಿಸಬೇಕು- ಎನ್.ಎಸ್ ಬೋಸರಾಜು
ರಾಯಚೂರು,ಡಿ.29- ಸಮಾಜದಲ್ಲಿರುವ ಮೌಡ್ಯತೆಯನ್ನು ತೊಲಗಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಪ್ರಯತ್ನಿಸಬೇಕು. ಮತ್ತು ಮೌಡ್ಯತೆಯಿಂದ ಜನರೊಗಾಗುವ ತೊಂದರೆಗಳನ್ನು ಪರಿಹರಿಸುವ ಕಾರ್ಯವಾಗಬೇಕು ಅಂದಾಗ ಮಾತ್ರ ಸದೃಢ ರಾಷ್ಟ್ರ ನಿರ್ಮಾಣ ಸಾಧ್ಯ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್ ಬೋಸರಾಜು ಅವರು ಹೇಳಿದರು.
ಅವರು ಇಂದು ಲಿಂಗಸುಗೂರು ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ವತಿಯಿಂದ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಮೂರನೇ ವೈಜ್ಞಾನಿಕ ಸಮ್ಮೇಳನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಮಾಜದಲ್ಲಿ ವಿಜ್ಞಾನ ವಲಯ ಸಾಕಷ್ಟು ಮುಂದುವರೆಯುತ್ತಿದ್ದು, ಆದರೆ ಕೆಲವು ಮೂಡನಂಬಿಕೆ ನಿರಂತರವಾಗಿ ನಡೆಯುತ್ತಿದೆ. ಇದರಿಂದ ಜನರಿಗೆ ಅನೇಕ ತೊಂದರೆಗಳಾಗುತ್ತಿದ್ದು, ಮೌಡ್ಯತೆಯನ್ನು ಹೋಗಲಾಡಿಸಲು ಪ್ರತಿಯೊಬ್ಬರು ಕೈಜೋಡಿಸಿದಾಗ ಮಾತ್ರ ಸಮಾಜದಲ್ಲಿ ಜನರು ಉತ್ತಮ ಜೀವನವನ್ನು ನಡೆಸಲು ಸಾಧ್ಯವಾಗುತ್ತದೆ ಎಂದರು.
ಮುಖ್ಯವಾಗಿ ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಬಗ್ಗೆ ಹೆಚ್ಚಿನ ಅರಿವು ಮೂಡಿಸುವುದು ಅತ್ಯಂತ ಮುಖ್ಯವಾಗಿದೆ. ಇತ್ತೀಚಿನ ಯುಗಮಾನಗಳಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ವಿಜ್ಞಾನ ಹಾಗೂ ಖಗೋಳಶಾಸ್ತ್ರದ ಬಗ್ಗೆ ಅರಿವು ಮೂಡಿಸಲು ತೀರ್ಮಾನಿಸಲಾಗಿದೆ.
ರಾಯಚೂರಿನ ವಿಜ್ಞಾನ ಕೇಂದ್ರವನ್ನು ಮೇಲ್ದರ್ಜೆಗೇರಿಸುವ ಉದ್ದೇಶದಿಂದ ಒಟ್ಟು 2.50 ಕೋಟಿ ರೂ.ಗಳ ಅನುಮೋದನೆ ದೊರೆತಿದ್ದು, ಕೇಂದ್ರ ಸರ್ಕಾರ ಶೆ.60 ಹಾಗೂ ರಾಜ್ಯ ಸರ್ಕಾರದ ಶೇ.40ರಷ್ಟು ಅನುದಾನದೊಂದಿಗೆ ಮೇಲ್ದರ್ಜೆಗೇರಿಸುವ ತೀರ್ಮಾನವನ್ನು ಕೈಗೊಳ್ಳಲಾಗಿದೆ ಎಂದರು.
ಇದೇ ವೇಳೆ ಇಸ್ರೋ ಮಾಜಿ ಅಧ್ಯಕ್ಷ ಡಾ.ಎ.ಎಸ್ ಕಿರಣಕುಮಾರ ಅವರು ಮಾತನಾಡಿ, ಭಾರತ ದೇಶವು ಅತ್ಯಂತ ವೇಗವಾಗಿ ವಿಜ್ಞಾನ ಮತ್ತು ತಂತ್ರಜ್ಞಾನದ ಪ್ರಗತಿಯ ಹಾದಿಯಲ್ಲಿ ಮುಂದುವರೆಯುತ್ತಿದ್ದು, ಚಂದ್ರಯಾನವನ್ನು ಯಶಸ್ವಿಗೊಳಿಸುವ ಮೂಲಕ ಇಡೀ ಜಗತ್ತು ಭಾರತದತ್ತ ತಿರುಗಿ ನೋಡುವಂತದ್ದಾಗಿದೆ. ಈ ನಿಟ್ಟಿನಲ್ಲಿ ವಿಜ್ಞಾನವನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿಗೊಳಿಸಲು ಮೂಡನಂಬಿಕೆಗಳನ್ನು ತೊಲಗಿಸುವುದು ಅತ್ಯಂತ ಮುಖ್ಯವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಲೋಕೋಪಯೋಗಿ ಸಚಿವ ಸತೀಶ ಲಕ್ಷ್ಮಣರಾವ್ ಜಾರಕಿಹೊಳಿ ನಾತನಾಡಿ, ಮೌಡ್ಯತೆಯಿಂದ ಹೊರಬಂದು ದೇಶವನ್ನು ಕಟ್ಟುವ ಕಾರ್ಯಕ್ಕೆ ಪ್ರತಿಯೊಬ್ಬರು ಕೈಜೋಡಿಸಬೇಕು ಮತ್ತು ಮೂಡನಂಬಿಕೆಗಳನ್ನು ಹೋಗಲಾಡಿಸಿ ಸಮಾಜದ ಪರಿವರ್ತನೆಗೆ ಮುಂದಾಗಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಲಿಂಗಸುಗೂರು ಶಾಸಕ ಡಿ.ಮಾನಪ್ಪ ವಜ್ಜಲ್, ಮಾನವಿ ಶಾಸಕ ಹಂಪಯ್ಯ ನಾಯಕ, ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಸಂಸ್ಥಾಪನಾ ಅಧ್ಯಕ್ಷ ಡಾ.ಹುಲಿಕಲ್ ನಟರಾಜ, ಲಿಂಗಸುಗೂರು ಸಹಾಯಕ ಆಯುಕ್ತ ಅವಿನಾಶ ಶಿಂಧೆ, ಅಪರ ಜಿಲ್ಲಾಧಿಕಾರಿ ಡಾ.ಕೆ.ಆರ್ ದುರುಗೇಶ, ಡಿ.ಎಸ್ ಹೂಲಗೇರಿ, ಅಮರೇಗೌಡ ಬಯ್ಯಾಪೂರ,ಆರ್ ಮಆನಸಯ್ಯ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
Comments
Post a Comment