ಶೃತಿ ಸಾಹಿತ್ಯ ಮೇಳದಿಂದ ಕುವೆಂಪು ಜನ್ಮ ದಿನಾಚರಣೆ: ಜಗತ್ತಿಗೆ ವಿಶ್ವಮಾನವತ್ವವನ್ನು ಸಾರಿದ ಮನುಜ ಮತದ ಜಗದ ಕವಿ ಕುವೆಂಪು- ಡಾ. ಜಯಲಕ್ಷ್ಮಿ ಮಂಗಳಮೂರ್ತಿ
ಶೃತಿ ಸಾಹಿತ್ಯ ಮೇಳದಿಂದ ಕುವೆಂಪು ಜನ್ಮ ದಿನಾಚರಣೆ:
ಜಗತ್ತಿಗೆ ವಿಶ್ವಮಾನವತ್ವವನ್ನು ಸಾರಿದ ಮನುಜ ಮತದ ಜಗದ ಕವಿ ಕುವೆಂಪು- ಡಾ. ಜಯಲಕ್ಷ್ಮಿ ಮಂಗಳಮೂರ್ತಿ
ರಾಯಚೂರು ,ಡಿ.29- ರಾಷ್ಟ್ರಕವಿ ಕುವೆಂಪು ಅವರು ನಾಡು ಕಂಡ ಶ್ರೇಷ್ಠ ದಾರ್ಶನಿಕರು,ರಸ ಋಷಿಗಳು, ಯುಗದ ಕವಿಗಳು, ಮಹಾ ಮಾನವತಾವಾದಿಗಳು, ವಿಶ್ವ ಮಾನವತೆಯ ಪ್ರಜ್ಞೆಯನ್ನು ಬಿತ್ತಿದ ಶ್ರೇಷ್ಠ ಧಿ:ಶಕ್ತಿಯ ಜಗದ ಕವಿಗಳು ಇಂದಿನ ಸಂಕೀರ್ಣ ಸಮಾಜದಲ್ಲಿಯೂ ಅವರ ವಿಚಾರಧಾರೆಗಳು ಪ್ರಸ್ತುತತೆ ಮೂಲಕ ಜೀವಂತವಾಗಿವೆ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಹಾಗೂ ಶ್ರುತಿ ಸಾಹಿತ್ಯ ಮೇಳದ ಗೌರವಾಧ್ಯಕ್ಷರಾದ ಡಾ. ಜಯಲಕ್ಷ್ಮಿ ಮಂಗಳಮೂರ್ತಿಯವರು ಹೇಳಿದರು.
ಅವರು ಇಂದು ಸಂಜೆ ಜವಾಹರ್ ನಗರ ಪ್ರೌಡಶಾಲೆ ಆವರಣದಲ್ಲಿ ಶೃತಿ ಸಾಹಿತ್ಯ ಮೇಳ ರಾಯಚೂರು ವತಿಯಿಂದ ಹಮ್ಮಿಕೊಂಡ ರಾಷ್ಟ್ರಕವಿ ಕುವೆಂಪು ಅವರ 119ನೇ ಜನ್ಮದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕನ್ನಡವೆಂದರೆ ಕುವೆಂಪು ಕನ್ನಡ ಸಾಹಿತ್ಯವನ್ನು ಉತ್ತುಂಗಕ್ಕೆ ಏರಿಸಿದ ಮಹಚೇತನ, ಅವರ ಸಣ್ಣ ಕಥೆಗಳು ,ಕವನಗಳು, ಕಾದಂಬರಿಗಳು, ನಾಟಕಗಳು, ಮಹಾಕಾವ್ಯಗಳು, ವಿಮರ್ಶೆ ಹೀಗೆ ಹಲವಾರು ಸಾಹಿತ್ಯದ ಪ್ರಕಾರಗಳನ್ನು ರಚಿಸಿ ಕನ್ನಡ ಸಾಹಿತ್ಯವನ್ನು ಶ್ರೀಮಂತ ಗೊಳಿಸಿದ್ದಲ್ಲದೆ ಕನ್ನಡದ ಅಸ್ಮಿತತೆಗೆ ಕಾರಣ ಕರ್ತ ವಾಗಿವೆ.ಕುವೆಂಪು ಅವರು ವಿಶ್ವ ಕಂಡ ಅಪರೂಪದ ತತ್ವಜ್ಞಾನಿಗಳು ಎಂದು ಹೇಳಿದರು.
ಶ್ರುತಿ ಸಾಹಿತ್ಯ ಮೇಳದ ಅಧ್ಯಕ್ಷ ಮುರಳಿಧರ ಕುಲಕರ್ಣಿ ಅವರು ಮಾತನಾಡಿ ಶ್ರುತಿ ಸಾಹಿತ್ಯ ಮೇಳ ಕಳೆದ 36 ವರ್ಷಗಳಿಂದ ಸಾಹಿತ್ಯಾತ್ಮಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳುತ್ತಾ ಬಂದಿದೆ, ಈ ನಿಟ್ಟಿನಲ್ಲಿ ಡಾ. ಶಿವರಾಮ ಕಾರಂತ್, ಡಾ, ಲಕ್ಷ್ಮೀನಾರಾಯಣ ಭಟ್, ಕವಿ ಜಿ. ಎಸ್ ಶಿವರುದ್ರಪ್ಪ, ಪ್ರೊ. ನಿಸಾರ ಅಹ್ಮದ್, ಸುಮತಿಂದ್ರ ನಾಡಿಗ,ಗು.ರು ಚೆನ್ನಬಸಪ್ಪ ಖ್ಯಾತ ಸಂಗೀತಗಾರರಾದ ಸಿ. ಅಶ್ವತ್, ನಿರ್ದೇಶಕ ನಾಗಾಭರಣ ಮುಂತಾದವರನ್ನು ರಾಯಚೂರಿಗೆ ಆಹ್ವಾನಿಸಿ ಅವರಿಂದ ಒಳ್ಳೆಯ ಕಾರ್ಯಕ್ರಮಗಳನ್ನು ನೀಡಿದ ಸಂಘಟನೆಯಾಗಿದೆ ಎಂದು ಶ್ರುತಿ ಸಾಹಿತ್ಯ ಮೇಳದ ಕಾರ್ಯಕ್ರಮಗಳ ವಿವರವನ್ನು ಹೇಳಿದರು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿದ ದಾಸೋತ್ಸವ ಸಮಿತಿಯ ಅಧ್ಯಕ್ಷರಾದ ಶ್ರೀ ವೆಂಕಟರಾವ್ ಕುಲಕರ್ಣಿ ಅವರು ಮಾತನಾಡಿ ಕುವೆಂಪು ಅವರ ಪ್ರತಿಯೊಂದು ಸಾಹಿತ್ಯವು ವ್ಯಕ್ತಿತ್ವ ನಿರ್ಮಾಣಕ್ಕೆ ಸಹಕಾರಿಯಾಗುತ್ತಿದೆ. ಇವುಗಳನ್ನು ಅಧ್ಯಯನ ಮಾಡುವುದರ ಮೂಲಕ ಜೀವನದಲ್ಲಿ ಸಚ್ಚಾರಿತ್ರೆಯನು ಬೆಳೆಸಿಕೊಳ್ಳಬಹುದಾಗಿದೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಕುವೆಂಪು ಅವರ ಸಾಧನೆಯ ಕುರಿತಾಗಿ ವಸುದೇಂದ್ರ ಸಿರವಾರ ಮಾತನಾಡಿ ಕುವೆಂಪು ಆಸ್ತಿಕತೆಯುಳ್ಳವರಾಗಿದ್ದರು ಎಂದು ಅವರ ಜೀವನ ವೃತ್ತಾಂತ ವಿವರಿಸಿದರು. ಜಯಕುಮಾರ ದೇಸಾಯಿ ಕಾಡ್ಲೂರು ಮಾತನಾಡಿ ಯುಗದ ಕವಿ ಜಗದ ಕವಿ ಎಂಬ ಬಿರುದನ್ನು ವರ ಕವಿ ಬೇಂದ್ರೆಯಿಂದ ಪಡೆದ ಅವರು ನವೋದಯ ಸಾಹಿತ್ಯ ಚಳುವಳಿ ಮೂಲಕ ನಾಡಿಗೆ ಜ್ಞಾನಪೀಠ ಪ್ರಶಸ್ತಿ ದೊರಕಿಸಿಕೊಟ್ಟರು ಎಂದು ಹೇಳಿದರು. ಉಗ್ರಕವಿ ರವೀಂದ್ರ ಕುಲಕರ್ಣಿ ಅವರು ಮಾತನಾಡಿ ಕುವೆಂಪು ಕವನಗಳ ಬಗ್ಗೆ ಮಹಾವಿಮರ್ಶೆ ನಡೆಯುತ್ತಿತ್ತು ಅವರು ಸಾಹಿತ್ತಿಕ ಮೇರು ವ್ಯಕ್ತಿತ್ವ ಹೊಂದಿದ್ದರು ಎಂದರು.
ಕಾರ್ಯಕ್ರಮವು ರವೀಂದ್ರ ಇವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ಸ್ವಾಗತವನ್ನು ಕಾರ್ಯದರ್ಶಿ ರಮೇಶ್ ಕುಲಕರ್ಣಿ ಅವರು ಮಾಡಿದರು. ಕಾರ್ಯದರ್ಶಿ ಜೆ.ಎಂ ವೀರೇಶ್ ಅವರು ನಿರೂಪಿಸಿ ಕಾರ್ಯಕ್ರಮ ನಿರ್ವಹಿಸಿದರು.
ಈ ಸಂದರ್ಭದಲ್ಲಿ ನೂತನವಾಗಿ ಗಮಕ ಕಲಾ ಪರಿಷತ್ತಿನ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಶ್ರೀ ವೆಂಕಟರಾವ್ ಕುಲಕರ್ಣಿ ಅವರಿಗೆ ಸನ್ಮಾನಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಶ್ರುತಿ ಸಾಹಿತ್ಯ ಮೇಳದ ಹಿರಿಯ ಸದಸ್ಯರಾದ ಸುರೇಶ್ ಕಲ್ಲೂರ್, ರಮಾಕಾಂತ್ ಕುಲಕರ್ಣಿ, ನರಸಿಂಹಮೂರ್ತಿ, ಪ್ರಸನ್ನ ಆಲಂಪಲ್ಲಿ, ರಾಘವೇಂದ್ರ ಜಾಗೀರ್ದಾರ್, ಕೊಪ್ಪರೇಶ್ ದೇಸಾಯಿ, ಪ್ರವೀಣ್ ಜಾಗೀರ್ದಾರ್, ವಾಸು, ಪ್ರಕಾಶ್ ಮುಂತಾದವರು ಉಪಸ್ಥಿತರಿದ್ದರು.
Comments
Post a Comment