ಕಲೆ ದೈವ ದತ್ತವಾದದ್ದು- ಡಾ. ಧರಣೀ ದೇವಿ ಮಾಲಗತ್ತಿ



ಕಲೆ ದೈವ ದತ್ತವಾದದ್ದು- ಡಾ. ಧರಣೀ ದೇವಿ ಮಾಲಗತ್ತಿ

ರಾಯಚೂರು,ಜ.28-ಕಲೆಯ ಎಲ್ಲಾ ಪ್ರಕಾರಗಳು ದೈವಿಕವಾದದ್ದು ಪ್ರತಿಭೆ ಮತ್ತು ಪರಿಶ್ರಮ ಎರಡೂ ಇದ್ದಾಗ ಮಾತ್ರ ಆ ಕಲೆ ಒಲಿಯುವುದು  ಪ್ರಯತ್ನ ಪಟ್ಟರೂ ಪ್ರತಿಭೆಯ ಮೂಲ ವ್ಯಕ್ತಿಯಲ್ಲಿಲ್ಲದಿದ್ದರೆ, ಸಾಧ್ಯವಾಗದೇ ಹೋಗಬಹುದು. ಆದರೆ ಪರಿಶ್ರಮದಿಂದ ವಿದ್ಯೆಯನ್ನು ಒಲಿಸಿಕೊಂಡವರು ತುಂಬಾ ಜನರಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ಡಾ. ಧರಣೀ ದೇವಿ ಮಾಲಗತ್ತಿಯವರು ಹೇಳಿದರು.                      ಭಾರತ ಸಾಂಸ್ಕೃತಿಕ ಕಲಾ ಕೇಂದ್ರವು ತನ್ನ ಆವರಣದಲ್ಲಿ ಡಾ. ಪಂಡಿತ್ ನರಸಿಂಹಲು ವಡವಾಟಿಯವರ ಜನುಮ ದಿನದ ಅಂಗವಾಗಿ ಏರ್ಪಡಿಸಿದ್ದ ಕಲಾವಿದರ ದಿನ ಹಾಗೂ ಸುಗ್ಗಿಯ ಸೊಬಗಲ್ಲಿ ಸಂಗೀತ ಸಂಜೆ ಕಾರ್ಯಕ್ರಮವನ್ನು ಜ್ಯೋತಿ ಬೆಳಗುವುದರೊಂದಿಗೆ ಉದ್ಘಾಟಿಸಿ ಮಾತನಾಡಿದರು.

ಕಲೆ ನಮ್ಮನ್ನು ಸಂಸ್ಕರಿಸುತ್ತದೆ. ಹಾಗೆಯೇ ವ್ಯಕ್ತಿತ್ವವನ್ನು ಮೇಲಕ್ಕೇರಿಸಬೇಕು. ಆ ಕೆಲಸವನ್ನ ಸದಭಿರುಚಿಯ ಸಂಗೀತ, ಸಾಹಿತ್ಯ ಹಾಗೂ ಎಲ್ಲಾ ಪ್ರಕಾರದ ಕಲೆಗಳು ನಮ್ಮ ವ್ಯಕ್ತಿತ್ವವನ್ನು ಎತ್ತರಿಸುತ್ತವೆ. ಈ ಕಲೆಗಳು ಕೇವಲ ತಮ್ಮ ಆತ್ಮಾನಂದಕ್ಕಾಗಿ ಅಲ್ಲ, ಅದರಿಂದ ಇತರರು ಆನಂದವನ್ನು ಪಡೆಯುತ್ತಾರೆ. ಹಾಗೆಯೇ ಅವರನ್ನು ತಲೆ ಮೇಲಕೆತ್ತರಿಸುತ್ತದೆ. ಕಾರಯತ್ರಿ ಪ್ರತಿಭೆ, ಭಾವಯತ್ರೀ ಪ್ರತಿಭೆ ಎಂಬ ಎರಡು ಪ್ರತಿಭೆಗಳಿವೆ. ಕಾರಯತ್ರಿ ಪ್ರತಿಭೆ ಪ್ರದರ್ಶನ ನೀಡುವವರದಾದರೆ, ಭಾವಯತ್ರಿ ಪ್ರತಿಭೆ ನೋಡುಗರು ಹಾಗೂ ಕೇಳುಗರಿಗೆ ಸಂಬಂಧಿಸಿದ್ದು. ಕೇಳುಗರಿಗೂ ಪ್ರತಿಭೆ ಮುಖ್ಯ. ಪ್ರೇಕ್ಷಕರಲ್ಲಿ ಭಾವಯತ್ರಿ ಪ್ರತಿಭೆ ಇಲ್ಲದಿದ್ದರೆ ನೋಡಲು ಕೇಳಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಹಾಗಾಗಿ ಅವರಲ್ಲಿ ಕಾರ್ಯಕ್ರಮದಿಂದ ಎದ್ದು ಹೋಗುವುದು,  ಆಕಳಿಸುವಂತಹ ವರ್ತನೆಗಳನ್ನು, ಕಾಣುತ್ತೇವೆ ಎಂದು ಅಭಿಪ್ರಾಯಪಟ್ಟರು.


ಅತಿಥಿಗಳಾಗಿ ಭಾಗವಹಿಸಿದ್ದ ಜಾನಪದ ಕಲಾವಿದರಾದ ಡಾ. ವೇಮಗಲ್ ನಾರಾಯಣಸ್ವಾಮಿ ಅವರು ಮಾತನಾಡಿ ನಾವಿಬ್ಬರು ಪೊಲೀಸ್ ಅಧಿಕಾರಿಗಳಾದರೂ ಸಾಹಿತ್ಯ, ಸಂಗೀತದ ಒಡನಾಟ ಇಟ್ಟುಕೊಂಡಿರುವುದರಿಂದ ಇಂತಹ ಕಲಾವಿದರನ್ನು ಸಮಾಜ ಗುರುತಿಸುತ್ತದೆನ್ನುವುದಕ್ಕೆ ಈ ಸಮಾರಂಭ ಸಾಕ್ಷಿಯಾಗಿದೆ ಎಂದರು.             ವಿಶ್ವಮಟ್ಟದಲ್ಲಿ ಕ್ಲಾರಿಯೋನೆಟ್ ಮೂಲಕ ಹೆಸರು ಮಾಡಿರುವ ಡಾ. ನರಸಿಂಹಲು ವಡವಾಟಿಯವರ ಜನುಮ ದಿನವನ್ನು ಕಲಾವಿದರ ದಿನವಾಗಿ ಆಚರಿಸುತ್ತಿರುವುದು ತುಂಬಾ ಅರ್ಥಪೂರ್ಣವಾಗಿದೆ.

 ಅಧ್ಯಕ್ಷತೆ ವಹಿಸಿ ಮಾತನಾಡಿದ ಖ್ಯಾತ ಗಾಯಕಿ ಭಾರತ್ ಸಾಂಸ್ಕೃತಿಕ ಕಲಾ ಕೇಂದ್ರದ ಅಧ್ಯಕ್ಷರಾದ ವಡವಾಟಿ ಶಾರದಾ ಭರತ್ ಮಾತನಾಡಿ, ವಡವಾಟಿಯವರಂತೆ ಜೀವನವನ್ನು ಕಲೆಗೆ ಮುಡುಪಾಗಿಟ್ಟಿರುವ ಕಲಾವಿದರನ್ನು ಸ್ಮರಿಸುವ ಸಲುವಾಗಿ, ಸಾಂಕೇತಿಕವಾಗಿ ಅವರ ಜನ್ಮದಿನವನ್ನು ಕಲಾವಿದರ ದಿನವಾಗಿ ಆಚರಿಸುತ್ತಿರುವುದಾಗಿ ತಿಳಿಸಿದರು.

  ಇದೇ ಸಂದರ್ಭದಲ್ಲಿ ಕಲಾವಿದರಿಗೆ ಸನ್ಮಾನಿಸಲಾಯಿತು. ವೇದಿಕೆಯ ಮೇಲೆ ಕಾರ್ಯದರ್ಶಿ ಕೆ. ಯೋಗ ರವೀಶ್ ಭಾರತ್ ಉಪಸ್ಥಿತರಿದ್ದರು.

 ನಂತರದಲ್ಲಿ ಮೈಸೂರಿನ ಸರ್ವಮಂಗಳ ಸಿತಾರ್, ಶಿರಸಿಯ ಅಮಿತ್ ಭಟ್ ,ತಬಲ ಸೋಲೋ, ವಡವಾಟಿ ತೇಜಶ್ರೀ ಭರತ್, ವಡವಾಟಿ ಶ್ರೇಯಾಂಕಿತ ಭರತ್, ಹಾಗೂ ಭಾರತ್ ಸಾಂಸ್ಕೃತಿಕ ಕಲಾವಿದ ಕೇಂದ್ರದ ವಿದ್ಯಾರ್ಥಿಗಳು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಪ್ರಕಾಶ್ ದೇಸಾಯಿ ಚನ್ನಪ್ಪನಹಳ್ಳಿ ನಿಧನ.

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್