ದುಬೈ ಗೆ ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸಲು ಕೃಷಿ ವಿವಿ ವಿಜ್ಞಾನಿಗಳು ತೆರಳಿದ್ದಾರೆ: ಫೆ.29 ರಂದು ಕೃಷಿ ವಿವಿ 13ನೇ ಘಟಿಕೋತ್ಸವ- ಡಾ.ಎಂ.ಹನುಮಂತಪ್ಪ
ದುಬೈ ಗೆ ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸಲು ಕೃಷಿ ವಿವಿ ವಿಜ್ಞಾನಿಗಳು ತೆರಳಿದ್ದಾರೆ: ಫೆ.29 ರಂದು ಕೃಷಿ ವಿವಿ 13ನೇ ಘಟಿಕೋತ್ಸವ- ಡಾ.ಎಂ.ಹನುಮಂತಪ್ಪ ರಾಯಚೂರು,ಫೆ.27- ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ 13ನೇ ಘಟಿಕೋತ್ಸವ ಫೆ.29 ರಂದು ನಡೆಯಲಿದೆ ಎಂದು ಕೃಷಿ ವಿವಿ ಕುಲಪತಿ ಡಾ.ಎಂ.ಹನುಮಂತಪ್ಪ ಹೇಳಿದರು. ಅವರಿಂದು ಕೃಷಿ ವಿವಿ ಅಂತರಾಷ್ಟ್ರೀಯ ಅತಿಥಿ ಗೃಹದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಫೆ.29 ರಂದು ಬೆಳಿಗ್ಗೆ 11ಕ್ಕೆ ನಗರದ ಕೃಷಿ ವಿವಿ ಪ್ರೇಕ್ಷಾಗೃಹದಲ್ಲಿ ನಡೆಯುವ ಘಟಿಕೋತ್ಸವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜ್ಯಪಾಲರು ಮತ್ತು ಕೃಷಿ ವಿವಿ ಕುಲಾಧಿಪತಿಗಳಾದ ಥಾವರ ಚಂದ್ ಗೆಹ್ಲೋಟ್ ವಹಿಸಲಿದ್ದು , ಮುಖ್ಯ ಅತಿಥಿಗಳಾಗಿ ನವದೆಹಲಿ ಐಸಿಎಆರ್ ಉಪ ಮಹಾನಿರ್ದೇಶಕ ಡಾ.ಎಸ್.ಎನ್.ಝಾ ಆಗಮಿಸಲಿದ್ದು, ಕೃಷಿ ಸಚಿವ ಎನ್.ಚೆಲುವರಾಯಸ್ವಾಮಿ ಉಪಸ್ಥಿತರಿರಲಿದ್ದಾರೆ ಎಂದರು. ಈ ಬಾರಿಯ ಘಟಿಕೋತ್ಸವದಲ್ಲಿ 363 ವಿದ್ಯಾರ್ಥಿಗಳಿಗೆ ಸ್ನಾತಕ ಪದವಿಗಳನ್ನು, 127 ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಹಾಗೂ 26 ವಿದ್ಯಾರ್ಥಿಗಳಿಗೆ ಡಾಕ್ಟರೇಟ್ ಪದವಿಗಳನ್ನು ಪ್ರಧಾನ ಮಾಡಲಾಗುತ್ತಿದೆ ಎಂದರು. ಸ್ನಾತಕ ಪದವಿಯಲ್ಲಿ 23 ಚಿನ್ನದ ಪದಕ, ಇಬ್ಬರಿಗೆ ನಗದು ಬಹುಮಾನ, ಸ್ನಾತಕೋತ್ತರ ಪದವಿಯಲ್ಲಿ 16 ಚಿನ್ನದ ಪದಕ ಹಾಗೂ 13 ಚಿನ್ನದ ಪದಕಗಳನ್ನು ಡಾಕ್ಟರೇಟ್ ಪದವಿ ವಿದ್ಯಾರ್ಥಿಗಳಿಗೆ ರಾಜ್ಯಪಾಲರು ಪ್ರಧಾನ ಮಾಡಲಿದ್ದಾರೆ ಎಂದರು. ಅನೇಕ ಸಂಶೋಧನೆಗಳನ್ನು ವಿವಿ ವಿಜ್ಞಾನಿಗಳು ಕೈಗೊಂಡಿದ್ದು ಸತತ ಬರಗಾಲ ಹಿನ್ನೆಲೆ ಬರ ಕ್ಷಮತೆ ಎದುರಿಸುವ ಬೀಜ ತಳಿಗಳ ಸಂಶೋಧನೆ ಕೈಗೊಳ್ಳಲಾಗುತ್ತದೆ ಎಂದು ಅವರು ದೇವದುರ್ಗದಲ್ಲಿ ಮೆಣಸಿನಕಾಯಿ ಸಂಶೋಧನಾ ಕೇಂದ್ರ ಸ್ಥಾಪನೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು. ಕೆಕೆಆರ್ ಡಿಬಿಗೆ ಅನುದಾನಕ್ಕೆ ಅನೇಕ ಪ್ರಸ್ತಾವನೆಗಳನ್ನು ಸಲ್ಲಿಸಲಾಗಿದ್ದು ಸುಮಾರು 5 ಕೋಟಿ ರೂ. ಸಂಶೋಧನಾ ಅನುದಾನ ದೊರೆತಿದೆ ಎಂದರು.ಅದೆ ರೀತಿ ವಿವಿಯಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ ಇನ್ನಿತರ ಸುರಕ್ಷಾ ಕ್ರಮಗಳು, ಯೋಜನೆಗಳಿಗೆ ಸುಮಾರು 13 ಕೋಟಿ ರೂ ಅನುದಾನ ಸಿಕ್ಕಿದೆ ಎಂದರು. ವಿವಿ ಹಣದಲ್ಲಿ ಕುಟುಂಬ ಸಮೇತ ದುಬೈ ಪ್ರವಾಸಕ್ಕೆ ಕೃಷಿ ವಿವಿ ಪ್ರಾಧ್ಯಾಪಕರು ತೆರಳಿದ್ದಾರೆ ಎಂಬ ಆರೋಪವನ್ನು ತಳ್ಳಿ ಹಾಕಿದ ಅವರು ಕೃಷಿ ವಿವಿ ವಿಜ್ಞಾನಿಗಳು ಅಂತರಾಷ್ಟ್ರೀಯ ಸಮ್ಮೇಳನಕ್ಕೆ ಕೃಷಿ ಸಂಶೋಧನಾ ವಿಷಯ ಮಂಡನೆಗಾಗಿ ತೆರಳಿದ್ದಾರೆ ಇದರಲ್ಲಿ ಅಪಾರ್ಥ ಕಲ್ಪಿಸುವುದು ಬೇಡವೆಂದರು.
ಕೃಷಿ ವಿವಿ ಸಿಬ್ಬಂದಿ ನೇಮಕ ಮತ್ತು ವರ್ಗಾವಣೆಯಲ್ಲಿ ಯಾವುದೆ ಅಕ್ರಮ ನಡೆದಿಲ್ಲವೆಂದ ಅವರು ಶೇ.48 ರಷ್ಟು ಸಿಬ್ಬಂದಿ ಕೊರತೆಯಿದ್ದು ಶೀಘ್ರ ನೇಮಕಾತಿಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು. ಕೃಷಿ ವಿವಿಯಲ್ಲಿ ರೈತರಿಗೆ ಅನುಕೂಲ ಕಲ್ಪಿಸುವ ಅನೇಕ ಸಂಶೋಧನೆಗಳು, ಪ್ರಬಂಧಗಳು, ಪ್ರಕಾಶನ ನಡೆಯುತ್ತಿವೆ ಎಂದ ಅವರು ಸಿರಿಧಾನ್ಯಗಳ ಉತ್ತೇಜನಕ್ಕೆ ಅನೇಕ ಕಾರ್ಯ ಚಟುವಟಿಕೆ ಹಾಗೂ ರೂಪು ರೇಷ ಮಾಡಿಕೊಂಡಿದ್ದೇವೆಂದ ಅವರು ದೇಶದಲ್ಲೆ ಉತ್ತಮ ವಿವಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ವಿವಿ ಬಗ್ಗೆ ಊಹಾಪೋಹಗಳಿಗೆ ಕಿವಿ ಕೊಡಬೇಡಿ ಎಂದು ಹೇಳಿದರು. ಈ ಸಂದರ್ಭದಲ್ಲಿ ಎಂ.ವೀರನಗೌಡ, ಬಿ.ಕೆ.ದೇಸಾಯಿ, ಶಿವಶರಣಪ್ಪ ಗೌಡಪ್ಪ, ಡಾ.ಜಾಗೃತಿ ದೇಶಮಾನೆ ಇದ್ದರು.
Comments
Post a Comment