ಟೆಂಡರ್ ಅವಧಿ ಮುಗಿದ ಹಿನ್ನೆಲೆಯಲ್ಲಿ ನಗರಸಭೆ ಮಳಿಗೆಗಳಿಗೆ ಬೀಗ ಜಡಿದ ಸಿಬ್ಬಂದಿ: ನಗರಸಭೆ ಸಿಬ್ಬಂದಿ ಮತ್ತು ಬಾಡಿಗೆದಾರರು ನಡುವೆ ವಾಗ್ವಾದ
ಟೆಂಡರ್ ಅವಧಿ ಮುಗಿದ ಹಿನ್ನೆಲೆಯಲ್ಲಿ ನಗರಸಭೆ ಮಳಿಗೆಗಳಿಗೆ ಬೀಗ ಜಡಿದ ಸಿಬ್ಬಂದಿ: ನಗರಸಭೆ ಸಿಬ್ಬಂದಿ ಮತ್ತು ಬಾಡಿಗೆದಾರರು ನಡುವೆ ವಾಗ್ವಾದ
ರಾಯಚೂರು,ಫೆ.23- ನಗರಸಭೆ ಮಳಿಗೆಗಳ ಟೆಂಡರ್ ಅವಧಿ ಮುಗಿದ ಹಿನ್ನೆಲೆಯಲ್ಲಿ ನಗರಸಭೆ ವಶಕ್ಕೆ ಪಡೆಯಲು ಮುಂದಾದಾಗ ನಗರಸಭೆಯ ಸಿಬ್ಬಂದಿಗೆ ಬಾಡಿಗೆದಾರರು ಅಡ್ಡಿಪಡಿಸಿದ ಘಟನೆ ಬೆಳಿಗ್ಗೆ ನಡೆದಿದೆ.
ನಗರದ ಮಹಿಳಾ ಸಮಾಜದ ಬಳಿಯ ನಗರಸಭೆ ವ್ಯಾಪ್ತಿಯ ಮಳಿಗೆಗಳ ಟೆಂಡರ್ ಗಳು ಅವಧಿ ಕಳೆದ ಸೆಪ್ಟಂಬರ್ ತಿಂಗಳಲ್ಲಿ ಮುಕ್ತಾಯವಾಗಿದ್ದು, ಬಾಕಿ ಇರುವ ಬಾಡಿಗೆ ಪಾವತಿಸಿ ಮಳಿಗೆ ಖಾಲಿ ಮಾಡಬೇಕು ಆನಂತರ ನಗರಸಭೆಯಿಂದ ನಡೆಯುವ ಬಹಿರಂಗ ಹರಾಜಿನಲ್ಲಿ ಷರತ್ತಿಗೆ ಅನುಗುಣವಾಗಿ ಭಾಗವಹಿಸಬಹುದು ಎಂದು ನಗರಸಭೆ ಅಧಿಕಾರಿಗಳು ತಮ್ಮ ಸಿಬ್ಬಂದಿ ಸಮೇತ ಆಗಮಿಸಿ ತಿಳಿಸಿದ್ದಾರೆ. ಆದರೆ ಇಲ್ಲಿನ ಕೆಲ ಬಾಡಿಗೆದಾರರು ಮಳಿಗೆ ಖಾಲಿ ಮಾಡಲು ನಿರಾಕರಿಸಿ ಅಧಿಕಾರಿಗಳ ಜೊತೆ ವಾಗ್ವಾದಕ್ಕೆ ಇಳಿದಿದ್ದಾರೆ. ಈಗಾಗಲೇ ಬಾಕಿ ಇರುವ ಬಾಡಿಗೆ ಪಾವತಿಸಿ ಮಳಿಗೆ ಖಾಲಿ ಮಾಡುವಂತೆ ನೋಟೀಸ್ ನೀಡಿದರೂ ಖಾಲಿ ಮಾಡುತ್ತಿಲ್ಲ ಎಂದು ಆರೋಪಿಸಿ ನಗರಸಭೆ ಸಿಬ್ಬಂದಿ ಮಳಿಗೆಗಳಿಗೆ ಬೀಗ ಹಾಕಲು ಮುಂದಾದಾಗ ಇದಕ್ಕೆ ಅಡ್ಡಿಪಡಿಸಿದ ಎಳನೀರು ಅಂಗಡಿ ಬಾಡಿಗೆದಾರ ಎಳೆನೀರು ಕತ್ತರಿಸುವ ಮಚ್ಚು ಕೈಯಲ್ಲಿ ಹಿಡಿದುಕೊಂಡು ಜಗಳಕ್ಕೆ ಇಳಿದಿದ್ದಾನೆ ಎನ್ನಲಾಗಿದೆ.
ನಗರಸಭೆ ತಮಗೆ ಒಂದು ಬಾರಿ ನೋಟೀಸ್ ನೀಡಿದ್ದು ನಿಜ, ಬಾಡಿಗೆ ಪಾವತಿಗೆ ಮತ್ತಷ್ಟು ಕಾಲಾವಕಾಶ ನೀಡಬೇಕು ಎಂದು ಬಾಡಿಗೆದಾರರು ಮನವಿ ಮಾಡಿದರು ಇದಕ್ಕೆ ಒಪ್ಪದ ನಗರಸಭೆ ಅಧಿಕಾರಿಗಳು ಪೊಲೀಸರ ಬೆಂಬಲದೊಂದಿಗೆ ಮಳಿಗೆಗಳಿಗೆ ಬೀಗ ಹಾಕಿದ ಪ್ರಸಂಗ ನಡೆದಿದೆ.
Comments
Post a Comment