ಸರ್ಕಾರದಿಂದ ಯಾವುದೇ ಅನುದಾನ ನಿರೀಕ್ಷಿಸಿಲ್ಲ: ಜೂನ್ 21 ರಿಂದ 23ರವರೆಗೆ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬ- ಪಾಪಾರೆಡ್ಡಿ.
ಸರ್ಕಾರದಿಂದ ಯಾವುದೇ ಅನುದಾನ ನಿರೀಕ್ಷಿಸಿಲ್ಲ: ಜೂನ್ 21 ರಿಂದ 23 ರವರೆಗೆ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬ- ಪಾಪಾರೆಡ್ಡಿ. ರಾಯಚೂರು,ಮೇ.27- ಪ್ರತಿ ವರ್ಷದಂತೆ ಈ ವರ್ಷವು ಜೂ.21 ರಿಂದ 23 ರವರೆಗೆ ಮುಂಗಾರು ಸಾಂಸ್ಕ್ರತಿಕ ರಾಯಚೂರು ಹಬ್ಬ ಆಯೋಜಿಸಲಾಗಿದೆ ಎಂದು ಮಾಜಿ ಶಾಸಕರು ಹಾಗೂ ಮುಂಗಾರು ಸಾಂಸ್ಕ್ರತಿಕ ರಾಯಚೂರು ಹಬ್ಬದ ಅಧ್ಯಕ್ಷರಾದ ಎ.ಪಾಪಾರೆಡ್ಡಿ ಹೇಳಿದರು. ಅವರಿಂದು ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ 24 ವರ್ಷಗಳಿಂದ ಈ ಕಾರ್ಯಕ್ರಮ ಆಯೋಜನೆ ಮಾಡುತ್ತಾ ಬರಲಾಗಿದೆ ಎಂದ ಅವರು ನಗರದ ರಾಜೇಂದ್ರ ಗಂಜ್ ಆವರಣದಲ್ಲಿ ಜೂ.21 ರಂದು ಬೆಳಿಗ್ಗೆ 8 ಗಂಟೆಗೆ ಕರ್ನಾಟಕ ರಾಜ್ಯದ ಎತ್ತುಗಳಿಂದ 1.5 ಟನ್ ಭಾರವಾದ ಕಲ್ಲು ಎಳೆಯುವ ಸ್ಪರ್ದೆ ನಡೆಯಲಿದ್ದು ಈ ಬಾರಿಯ ವಿಶೇಷವೆಂದರೆ ಏಳನೇ ಬಹುಮಾನ ನೀಡಲಾಗುತ್ತಿದೆ ಎಂದರು. ಜೂ.22 ರಂದು ಅಖಿಲ ಭಾರತ ಮುಕ್ತ ಸ್ಪರ್ದೆ ನಡೆಯಲಿದ್ದು ದೇಶದ ಯಾವುದೆ ರಾಜ್ಯಗಳಿಂದ ಎತ್ತುಗಳು ಭಾಗವಹಿಸಬಹುದಾಗಿದ್ದು 2 ಟನ್ ಭಾರವಾದ ಕಲ್ಲು ಎಳೆಯುವ ಸ್ಪರ್ದೆ ನಡೆಯಲಿದೆ ಎಂದ ಅವರು ಸಂಜೆ ನಗರದ ಪ್ರಮುಖ ರಸ್ತೆಗಳಲ್ಲಿ ವಿವಿಧ ಕಲಾ ತಂಡಗಳಿಂದ ಎತ್ತುಗಳ ಮೆರವಣಿಗೆ ನಡೆಯಲಿದೆ ಎಂದರು.
ಜೂ.23 ರಂದು ಹಿರಿಯರ ವಿಭಾಗದಲ್ಲಿ ಅಖಿಲ ಭಾರತ ಮುಕ್ತ ಸ್ಪರ್ದೆ 2.5 ಟನ್ ಭಾರವಾದ ಕಲ್ಲುಗಳ ಎಳೆಯುವ ಸ್ಪರ್ದೆ ನಡೆಯಲಿದೆ ಎಂದರು. ಪ್ರತಿದಿನ ಸಂಜೆ ನಗರದ ವಿವಿಧೆಡೆ ದೇಶದ ವಿವಿಧ ರಾಜ್ಯಗಳ ಸುಪ್ರಸಿದ್ಧ ಕಲಾವಿದರಿಂದ ನೃತ್ಯ ರೂಪಕ ನಡೆಯಲಿದೆ ಎಂದ ಅವರು ಅಂದು ಮಧ್ಯಾಹ್ನ 3 ಗಂಟೆಗೆ ಶ್ರೀ ಲಕ್ಷ್ಮಮ್ಮ ದೇವಸ್ಥಾನದಲ್ಲಿ ಕಲ್ಲು ಗುಂಡು , ಉಸುಕಿನ ಚೀಲ ಎತ್ತುವ ಸ್ಪರ್ಧೆ ಹಾಗೂ ಸಂಜೆ 5ಗಂಟೆಗೆ ಗಂಜ್ ಆವರಣದಲ್ಲಿ ಪೈಲ್ವಾನರಿಂದ ಕುಸ್ತಿ ಸ್ಪರ್ಧೆ ನಡೆಯಲಿದೆ ಎಂದರು. ಈ ಹಿಂದೆ ಹಟ್ಟಿ ಚಿನ್ನದ ಗಣಿಯಿಂದ ಅನುದಾನ ನೀಡಲಾಗುತ್ತಿತ್ತು ಅದು ಈಗ ಸ್ಥಗಿತವಾಗಿದ್ದು ಎಪಿಎಂಸಿ ಮತ್ತು ನಗರ ಸಭೆ ಕೊಂಚ ಅನುದಾನ ನೀಡುತ್ತವೆ ಎಂದ ಅವರು ಸುಮಾರು 50 ಲಕ್ಷ ರೂ ವೆಚ್ಚವಾಗುವ ಈ ಕಾರ್ಯಕ್ರಮಕ್ಕೆ ಸಮಾಜ ಬಂಧುಗಳು ದೇಣಿಗೆ ನೀಡುತ್ತಾರೆ ಎಂದರು. ದಕ್ಷಿಣ ಕನ್ನಡದಲ್ಲಿ ನಡೆಯುವ ಕಂಬಳಕ್ಕೆ ಸರ್ಕಾರ ಏಕೆ ಅನುದಾನ ನೀಡಬಾರದು ಎಂದು ಮುದ್ರಣ ಮಾಧ್ಯಮದಲ್ಲಿ ಪ್ರಕಟವಾಗಿರುವ ಸುದ್ದಿಯನ್ನು ಉಲ್ಲೇಖಿಸಿದ ಅವರು ಗ್ರಾಮೀಣ ಸೊಗಡಿನ ಮುಂಗಾರು ಸಾಂಸ್ಕೃತಿಕ ಹಬ್ಬಕ್ಕೆ ಸರ್ಕಾರ ಅನುದಾನ ನೀಡಿದರೆ ಉತ್ತಮವೆಂದ ಅವರು ಮುನ್ನೂರು ಕಾಪು ಸಮಾಜದವರು ಮೂಲತ: ರೈತರು ಸ್ವಾಭಿಮಾನಿಗಳು ಯಾರ ಬಳಿ ಅಂಗಲಾಚುವದಿಲ್ಲವೆಂದರು. ಕಾರ್ಯಕ್ರಮದಲ್ಲಿ ಸಚಿವರು, ಶಾಸಕರು ಭಾಗವಹಿಸಲಿದ್ದು ಸಾನಿಧ್ಯವನ್ನು ಹರಿಹರಪುರ ಶ್ರೀಗಳು ವಹಿಸಲಿದ್ದು ಎಲ್ಲರೂ ಭಾಗವಹಾಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದರು. ಈ ಸಂದರ್ಭದಲ್ಲಿ ಬೆಲ್ಲಂ ನರಸರೆಡ್ಡಿ, ಕೃಷ್ಣಮೂರ್ತಿ, ಜಿ.ಬಸವರಾಜ ರೆಡ್ಡಿ, ಗುಡ್ಸಿ ನರಸರೆಡ್ಡಿ, ಚಂದ್ರಶೇಖರ್, ಗೋವಿಂದರೆಡ್ಡಿ, ಬಂಗಿ ನರಸರೆಡ್ಡಿ, ಜಿ.ನರಸರೆಡ್ಡಿ ಇನ್ನಿತರರು ಇದ್ದರು.
Comments
Post a Comment