ಪಂಡಿತ ತಾರಾನಾಥ ಸಾಂಸ್ಕೃತಿಕ ವೇದಿಕೆ(ರಿ) ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ ಆರ್ಗನೈಸೇಶನ್ (ಎಐಡಿಎಸ್‌ಒ) : ಮಕ್ಕಳ ಬೇಸಿಗೆ ಶಿಬಿರ ಸಮಾರೋಪ
ಪಂಡಿತ ತಾರಾನಾಥ ಸಾಂಸ್ಕೃತಿಕ ವೇದಿಕೆ(ರಿ) ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ ಆರ್ಗನೈಸೇಶನ್ (ಎಐಡಿಎಸ್‌ಒ) : ಮಕ್ಕಳ ಬೇಸಿಗೆ ಶಿಬಿರ ಸಮಾರೋಪ ರಾಯಚೂರು,ಮೇ.28- ಪಂಡಿತ ತಾರಾನಾಥ ಸಾಂಸ್ಕೃತಿಕ ವೇದಿಕೆ(ರಿ) ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ ಆರ್ಗನೈಸೇಶನ್ (ಎಐಡಿಎಸ್‌ಒ) ಸಹಕಾರದಲ್ಲಿ ತಾಲೂಕ ಆರೋಗ್ಯಾಧಿಕಾರಿಗಳ ಭದ್ರಾ ಸಭಾಂಗಣದಲ್ಲಿ ಹಮ್ಮಿಕೊಂಡ ಮೂರು ದಿನಗಳ ಮಕ್ಕಳ ಬೇಸಿಗೆ ಶಿಬಿರವು ಅತ್ಯಂತ ಯಶಸ್ವಿಯಾಗಿ ಜರುಗಿತು.
ಸಮಾರೋಪ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿದ ಶಿಕ್ಷಕರಾದ ಅರುಣಾಬಾಯಿ ಅವರು ಮಾತನಾಡಿ, ಮಕ್ಕಳು ಶಿಬಿರದಲ್ಲಿ ಅತ್ಯಂತ ಕ್ರಿಯಾಶೀಲರಾಗಿ ಭಾಗವಹಿಸಿದ್ದಾರೆ. ಅವರಲ್ಲಿ ವಿಭಿನ್ನವಾದ ಆಸಕ್ತಿ ಪ್ರತಿಭೆಗಳಿದ್ದು, ಅದನ್ನು ಗುರುತಿಸಿ ಪ್ರೋತ್ಸಾಹಿಸಿ ಬೆಂಬಲಿಸಬೇಕು ಎಂದರು.
ಅತಿಥಿಗಳಾಗಿ ಭಾಗವಹಿಸಿದ ಇನ್ನೋರ್ವ ಶಿಕ್ಷಕರಾದ ಮುರಳಿಧರ ರೆಡ್ಡಿ ಅವರು ಮಾತನಾಡಿ, ಮಕ್ಕಳು ಬಿಳಿ ಕಾಗದದ ಹಾಳೆಗಳಂತೆ. ನಾವು ಆ ಕಾಗದದ ಮೇಲೆ ಏನು ಬರೆಯುತ್ತೇವೆಯೋ ಅದರಂತೆ ಅದು ಮಕ್ಕಳ ಮನಸ್ಸಿನ ಮೇಲೆ ಮೂಡುತ್ತದೆ. ಆದ್ದರಿಂದ ನಾವು ಮಕ್ಕಳಲ್ಲಿ ಉತ್ತಮ ವಿಚಾರ, ಆದರ್ಶ, ಆಸಕ್ತಿಗಳನ್ನು ಬೆಳೆಸಬೇಕು ಎಂದರು. ಹಾಗಾದಾಗ ಮಾತ್ರ ಅವರಲ್ಲಿ ಉತ್ತಮ ವ್ಯಕ್ತಿತ್ವ ಬೆಳೆಯಲು ಸಾಧ್ಯವೆಂದು ಅಭಿಪ್ರಾಯಪಟ್ಟರು.
ಎಐಡಿಎಸೊ ಜಿಲ್ಲಾಧ್ಯಕ್ಷರಾದ ಹಯ್ಯಾಳಪ್ಪ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ಮಕ್ಕಳ ಶಿಬಿರಕ್ಕೆ ರಾಯಚೂರಿನ ಜನರು ಸಹಾಯ ಸಹಕಾರ ನೀಡಿದ್ದು, ಅವರಿಗೆ ಧನ್ಯವಾದಗಳು ಹೇಳಿದರು. ಇದೇ ರೀತಿ ಮುಂದಿನ ದಿನಗಳಲ್ಲಿ ಶಿಬಿರ ನಡೆಸಲು ಪಾಲಕರು, ಪೋಷಕರು ಹೆಚ್ಚಿನ ಸಹಕಾರ ನೀಡಬೇಕೆಂದು ಕೋರಿದರು.
ಪಂಡಿತ್ ತಾರಾನಾಥ ಸಾಂಸ್ಕೃತಿಕ ವೇದಿಕೆಯ ಕಾರ್ಯದರ್ಶಿಗಳಾದ ಶ್ರೀಮತಿ ಸರೋಜಾ ಗೋನವಾರ ಮಾತನಾಡಿ, ಮೂರು ದಿನಗಳ ಕಾಲ ೭೦ಕ್ಕೂ ಹೆಚ್ಚು ಮಕ್ಕಳು ಅತ್ಯಂತ ಕ್ರಿಯಾಶೀಲರಾಗಿ ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ. ತಮ್ಮ ಮಕ್ಕಳನ್ನು ಶಿಬಿರಕ್ಕೆ ಕಳಿಸಿದ ಪಾಲಕರಿಗೆ ಧನ್ಯವಾದಗಳು ತಿಳಿಸಿದರು. ಎಐಡಿವೈಓ ಜಿಲ್ಲಾಧ್ಯಕ್ಷರಾದ ಚನ್ನಬಸವ ಜಾನೇಕಲ್ ಉಪಸ್ಥಿತರಿದ್ದರು. ಈ ಸಮಾರೋಪ ಸಮಾರಂಭದಲ್ಲಿ ಮಕ್ಕಳು ಮೂರು ದಿನಗಳ ಕಾಲ ಕಲಿತ ಹಾಡು, ಚಿತ್ರಕಲೆ, ಕಥೆ ಹೇಳುವುದು, ಜಾನಪದನೃತ್ಯ, ಕ್ರಾಫ್ಟ್ಸ್ ತಮ್ಮ ಪಾಲಕರ ಮುಂದೆ ಪ್ರದರ್ಶಿಸಿದರು.
ಈ ಶಿಬಿರದ ಮೂರೂ ದಿನಗಳಲ್ಲಿ ವಿವಿಧ ಚಟುವಟಿಕೆಗಳನ್ನು ನಡೆಸಲಾಯಿತು. ಉಪಯೋಗಿಸಿ ಬಿಟ್ಟ ಕಚ್ಚಾ ವಸ್ತುಗಳನ್ನು ಬಳಸಿಕೊಂಡು ಸರಳ ರೀತಿಯಲ್ಲಿ ಕ್ರಾಫ್ಟ್ಸ್ ತಯಾರಿಸುವುದನ್ನು ಇನ್ಫೆಂಟ್ ಜೀಸಸ್ ಶಾಲೆಯ ಶಿಕ್ಷಕಿಯಾದ ಗಾಯತ್ರಿ ಅವರು ಹೇಳಿಕೊಟ್ಟರು. ಸಿಗ್ನೇಚರ್ ಡ್ಯಾನ್ಸ್ ಸ್ಟುಡಿಯೋ ಡ್ಯಾನ್ಸ್ ಮಾಸ್ಟರ್ ಶ್ರೀನಿವಾಸ್ ಅವರು ಜಾನಪದ ನೃತ್ಯವನ್ನು ಅತ್ಯಂತ ಕ್ರಿಯಾಶೀಲವಾಗಿ ಮಕ್ಕಳಿಗೆ ಕಲಿಸಿದರು. ಶಿಕ್ಷಕರಾದ ಮುರಳಿಧರ ರೆಡ್ಡಿ ಅವರು ವಿನೋದದೊಂದಿಗೆ ಗಣಿತದ ಸರಳ ಸೂತ್ರಗಳನ್ನು ಆಸಕ್ತಿ ಬರುವಂತೆ ಹೇಳಿಕೊಟ್ಟರು. ಚಿತ್ರ ಕಲಾವಿದರಾದ ಗೋವಿಂದ ಅವರು ಚಿತ್ರಕಲೆಯ ಮೂಲ ಪಾಠಗಳನ್ನು ಹೇಳಿಕೊಟ್ಟರು. ಆರೋಗ್ಯ ಇಲಾಖೆಯ ಆಶ್ರಿತ ರೋಗಗಳ ನಿಯಂತ್ರಣ ಮೇಲ್ವಿಚಾರಕರಾದ ಶ್ರೀಮತಿ ಸಂಧ್ಯಾ ಅವರು, ಸೊಳ್ಳೆಗಳ ಉತ್ಪತ್ತಿ, ಅದರಿಂದ ಉಂಟಾಗುವ ರೋಗಗಳು, ಆರೋಗ್ಯದ ಮೇಲೆ ಬೀರುವ ದುಷ್ಪರಿಣಾಮಗಳು, ಸ್ವಚ್ಛತೆ ಮುಂತಾದ ಮುಂಜಾಗ್ರತ ಕ್ರಮಗಳ ಕುರಿತು ಮಕ್ಕಳಲ್ಲಿ ಅರಿವು ಮೂಡಿಸಿದರು. ಎಐಡಿಎಸೊ ಸಂಘಟನಾಕಾರರಾದ ಅಮೋಘ ಅವರು ತೆಂಗಿನಕಾಯಿ ಒಡೆದು ಹೂ ತರಿಸುವುದು, ದಾರ ತುಂಡು ಮಾಡಿ ಜೋಡಿಸುವುದು, ವಿಭೂತಿ ಮಂತ್ರಿಸಿ ಯಥೇಚ್ಛವಾಗಿ ವಿಭೂತಿ ಕೊಡುವುದು ಮುಂತಾದ ಪವಾಡಗಳನ್ನು ಪ್ರದರ್ಶನ ಮಾಡಿದರು. ನಂತರ ಪವಾಡ ರಹಸ್ಯ ಬಯಲು ಮಾಡಿ ಅದರ ಹಿಂದಿನ ಕೈಚಳಕವನ್ನು ಹೇಳಿಕೊಟ್ಟರು. ಶಿಕ್ಷಕಿ ಅರುಣಾಬಾಯಿ ಅವರು ಹಾಡು ಹಾಗೂ ಮಕ್ಕಳಿಗೆ ಮನೋರಂಜನ ಕ್ರೀಡೆಗಳನ್ನು ಹೇಳಿಕೊಟ್ಟರು. ಮಹಾನ್ ಕಲಾವಿದ ಚಾರ್ಲಿ ಚಾಪ್ಲಿನ್ ಅವರ ದಿ ಕಿಡ್ ಸಿನಿಮಾ ಪ್ರದರ್ಶನ ಮಾಡಲಾಯಿತು. ಈ ಶಿಬಿರದಲ್ಲಿ ರಾಯಚೂರಿನ ವಿವಿಧ ಭಾಗದ ೭೦ಕ್ಕೂ ಹೆಚ್ಚು ಮಕ್ಕಳು ಶಿಬಿರದಲ್ಲಿ ಭಾಗವಹಿಸಿದ್ದರು. ಎಐಡಿಎಸ್‌ಒನ ವೀರೇಶ್, ಹೇಮಂತ್, ಅಣ್ಣಪ್ಪ, ಮೌನೇಶ್ ಮತ್ತು ಪಾಲಕರು ಇನ್ನಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
Comments
Post a Comment