ಜೂ.21 ರಿಂದ 23 ರವರೆಗೆ ನಗರದಲ್ಲಿ ಮೈಸೂರು ದಸರಾ ಮಾದರಿಯಲ್ಲಿ  ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬ: ಎತ್ತುಗಳಿಂದ ಭಾರವಾದ ಕಲ್ಲು ಎಳೆಯುವ ಸ್ಪರ್ದೆ, ಲಕ್ಷ್ಮಮ್ಮದೇವಿ ಮೂರ್ತಿ ಅಂಬಾರಿ ಮೆರವಣಿಗೆ, ನೃತ್ಯರೂಪಕ, ಕುಸ್ತಿ ಮುಂತಾದ ವೈವಿಧ್ಯಮಯ ಕಾರ್ಯಕ್ರಮ -  ಪಾಪಾರೆಡ್ಡಿ.                                                       ರಾಯಚೂರು,ಜೂ.18-  ನಗರದಲ್ಲಿ ಜೂ.21 ರಿಂದ 23ರವರೆಗೆ ಮೂರು ದಿನಗಳ ಕಾಲ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬ ಆಯೋಜಿಸಲಾಗುತ್ತಿದೆ ಎಂದು ಮಾಜಿ ಶಾಸಕರು ಹಾಗು ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬದ ಅಧ್ಯಕ್ಷರಾದ ಎ.ಪಾಪಾರೆಡ್ಡಿ ಹೇಳಿದರು. ಅವರಿಂದು ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಸತತ 24 ವರ್ಷಗಳಿಂದ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬ ಆಯೋಜಿಸಲಾಗುತ್ತಿದ್ದು ಈ ವರ್ಷವು ಮುನ್ನೂರು ಕಾಪು ಸಮಾಜದ ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಂಯುಕ್ತ ಸಹಕಾರದೊಂದಿಗೆ ಜೂ.21 ರಂದು  ನಗರದ ರಾಜೇಂದ್ರ ಗಂಜ್ ಅವರಣದಲ್ಲಿ ಬೆಳಿಗ್ಗೆ 8ಕ್ಕೆ ನಡೆಯುವ ಉದ್ಘಾಟನಾ ಸಮಾರಂಭ ಸಾನಿಧ್ಯವನ್ನು ವಿವಿಧ ಮಠಾಧೀಶರು ವಹಿಸಲಿದ್ದು ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ ಪಾಟೀಲ್ ನೆರವೇರಿಸಲಿದ್ದಾರೆ ಎಂದರು. ಮುಖ್ಯ ಅತಿಥಿಗಳಾಗಿ  ಶಾಸಕರು , ವಿಧಾನಪರಿಷತ್ ಸದಸ್ಯರು,ವಿವಿಧ ಸಮಾಜದ ಅಧ್ಯಕ್ಷರು,ಗಣ್ಯರು ಭಾಗವಹಿಸಲಿದ್ದು ಅಂದು ಕರ್ನಾಟಕ ರಾಜ್ಯ ಎತ್ತುಗಳಿಂದ ಒಂದು ಟನ್ ಭಾರವಾದ ಕಲ್ಲು ಎಳೆಯುವ ಸ್ಪರ್ದೆ ನಡೆಯಲಿದೆ ಎಂದ ಅವರು ಸಂಜೆ 6 ಗಂಟೆಗೆ ವೀರಾಂಜನೇಯ ಕಲ್ಯಾಣ ಮಂಟಪದಲ್ಲಿ ವಿವಿಧ ರಾಜ್ಯಗಳ ಕಲಾ ತಂಡಗಳಿಂದ ನಡೆಯುವ ನೃತ್ಯ ರೂಪಕ ಕಾರ್ಯಕ್ರಮ ಸಾನಿಧ್ಯವನ್ನು ಕಿಲ್ಲೆ ಬೃಹನ್ಮಠದ ಶ್ರೀ ಶಾಂತ ಮಲ್ಲ ಶಿವಾಚಾರ್ಯ ಶ್ರೀಗಳು ವಹಿಸಲಿದ್ದು ಶಾಸಕ ಡಾ.ಶಿವರಾಜ ಪಾಟೀಲ್ ಉದ್ಘಾಟಿಸಲಿದ್ದು ಮುನ್ನೂರು ಕಾಪು  ಸಮಾಜದ ಅಧ್ಯಕ್ಷರು, ಹಾಲಿ, ಮಾಜಿ ನಗರ ಸಭೆ ಸದಸ್ಯರು ಇನ್ನಿತರರು ಪಾಲ್ಗೊಳ್ಳಲಿದ್ದಾರೆ ಎಂದರು.      ಜೂ.22 ರಂದು ಬೆಳಿಗ್ಗೆ 8ಕ್ಕೆ ನಡೆಯುವ ಕಾರ್ಯಕ್ರಮ ಉದ್ಘಾಟನೆ ಸಾನಿಧ್ಯವನ್ನು ಹರಿಹರಪುರ ಶ್ರೀ ಸ್ವಯಂ ಪ್ರಕಾಶ್ ಸಚ್ಚಿದಾನಂದ ಸರಸ್ವತಿ ಶ್ರೀಗಳು, ಸೇರಿದಂತೆ ವಿವಿಧ ಮಠಾಧೀಶರು ವಹಿಸಲಿದ್ದು ,ಉದ್ಘಾಟನೆಯನ್ನು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ನೆರವೇರಿಸಲಿದ್ದು ವಿಶೇಷ ಆಹ್ವಾನಿತರಾಗಿ ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿ, ಲಿಂಗಸ್ಗೂರು ಶಾಸಕ ಮಾನಪ್ಪ ವಜ್ಜಲ್ ಆಗಮಿಸಲಿದ್ದು ಅನೇಕ ಗಣ್ಯರು ಭಾಗವಹಿಸಲಿದ್ದಾರೆಂದ ಅವರು ಎತ್ತುಗಳಿಂದ ಎರೆಡು ಟನ್ ಭಾರವಾದ ಕಲ್ಲು ಎಳೆಯುವ ಸ್ಪರ್ದೆ ನಡೆಯಲಿದ್ದು ಅಖಿಲ ಭಾರತ ಮುಕ್ತ ಸ್ಪರ್ದೆ ನಡೆಯಲಿದ್ದು  ಸಂಜೆ 4ಕ್ಕೆ ಮಾತಾ ಲಕ್ಷ್ಮಮ್ಮ ದೇವಿ ಮೂರ್ತಿಯ ಅಂಬಾರಿ ಹಾಗೂ ಎತ್ತುಗಳು ಬೃಹತ್ ಮೆರವಣಿಗೆ ನಡೆಯಲಿದೆ ಎಂದರು.

ಸಂಜೆ 6ಕ್ಕೆ ನಿಜಲಿಂಗಪ್ಪ ಕಾಲೋನಿ ಗಣೇಶ ಕಟ್ಟೆಯಲ್ಲಿ ವಿವಿಧ ರಾಜ್ಯಗಳ ಕಲಾವಿದರಿಂದ ನೃತ್ಯ ರೂಪಕ ನಡೆಯಲಿದ್ದು ಕಾರ್ಯಕ್ರಮ ಸಾನಿಧ್ಯವನ್ನು ಸೋಮವಾರ ಹಿರೇಮಠದ ಅಭಿನವ ರಾಚೋಟಿ ಶಿವಾಚಾರ್ಯ ಶ್ರೀಗಳು ಹಾಗೂ ಕಿಲ್ಲೆ ಬೃಹನ್ಮಠದ ಶ್ರೀ ಶಾಂತ ಮಲ್ಲ ಶಿವಾಚಾರ್ಯ ಶ್ರೀಗಳು ವಹಿಸಲಿದ್ದು ಉದ್ಘಾಟನೆಯನ್ನು ಸಚಿವ ಬೋಸರಾಜು ಮಾಡಲಿದ್ದು ಅಧ್ಯಕ್ಷತೆಯನ್ನು ಶಾಸಕ ಡಾ.ಶಿವರಾಜ ಪಾಟೀಲ್ ವಹಿಸಲಿದ್ದಾರೆ ಎಂದ ಅವರು ನಗರಸಭೆ ಸದಸ್ಯರು ಇನ್ನಿತರ ಗಣ್ಯರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದರು.                                                  ಜೂ.23 ರಂದು ಬೆಳಿಗ್ಗೆ 8ಕ್ಕೆ ನಡೆಯುವ ಕಾರ್ಯಕ್ರಮ ಉದ್ಘಾಟನೆ ಸಾನಿಧ್ಯವನ್ನು ಚೌಕಿಮಠದ ಡಾ.ಸಿದ್ದಲಿಂಗ ಮಹಾಸ್ವಾಮಿಗಳು ವಹಿಸಲಿದ್ದು, ಉದ್ಘಾಟನೆಯನ್ನು ಸಂಸದ ಜಿ.ಕುಮಾರನಾಯಕ ಮಾಡಲಿದ್ದು ಮುಖ್ಯ ಅತಿಥಿಗಳಾಗಿ ಗದ್ವಾಲ ಶಾಸಕರಾದ ಬಂಡ್ಲ ಕೃಷ್ಣಾ ಮೋಹನ್ ರೆಡ್ಡಿ, ಮಕ್ತಲ್ ಶಾಸಕರಾದ ವಾಕಿಟಿ ಶ್ರೀ ಹರಿ,  ‌ಸೇರಿದಂತೆ ವಿವಿಧ ಸಮಾಜದ ಅಧ್ಯಕ್ಷರು, ಅನೇಕ ಗಣ್ಯರು ಭಾಗವಹಿಸಲಿದ್ದಾರೆ ಎಂದರು. ಮಧ್ಯಾಹ್ನ 3 ಕ್ಕೆ ಮುನ್ನೂರು ವಾಡಿ ಲಕ್ಷ್ಮಮ್ಮ ಕಲ್ಯಾಣ ಮಂಟಪ ಆವರಣದಲ್ಲಿ ಕಲ್ಲುಗುಂಡು ಹಾಗೂ ಉಸುಕಿನ ಚೀಲ ಎತ್ತುವ ಸ್ಪರ್ಧೆ ಹಾಗೂ ಸಂಜೆ 5ಕ್ಕೆ ಎಪಿಎಂಸಿ ಆವರಣದಲ್ಲಿ ಕುಸ್ತಿ ಸ್ಪರ್ಧೆ ನಡೆಯಲಿದ್ದು ಉದ್ಘಾಟನೆಯನ್ನು ಶಾಸಕ ಡಾ.ಶಿವರಾಜ ಪಾಟೀಲ್ ಮಾಡಲಿದ್ದು ತಾವು ಅಧ್ಯಕ್ಷತೆಯನ್ನು ವಹಿಸಲಿದ್ದೇವೆಂದರು. ಸಂಜೆ 6ಕ್ಕೆ ಗಂಜ್ ಕಲ್ಯಾಣ ಮಂಟಪದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ವಿವಿಧ ರಾಜ್ಯಗಳ ಕಲಾವಿದರಿಂದ ನೃತ್ಯ ಸ್ಪರ್ಧೆ ನಡೆಯಲಿದ್ದು ಶಾಸಕ ಡಾ.ಶಿವರಾಜ ಪಾಟೀಲ್ ಉದ್ಘಾಟಿಸಲಿದ್ದಾರೆಂದರು. ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬವನ್ನು ತಮ್ಮ ನೇತೃತ್ವದಲ್ಲಿ ಸಮಾಜ ಬಾಂಧವರು ಸಹಯೋಗದಲ್ಲಿ ನಡೆಸಲಾಗುತ್ತಿದ್ದು ಸುಮಾರು 50 ಲಕ್ಷ .ರೂ ವೆಚ್ಚದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ 10 ಲಕ್ಷ ರೂ. ಬಹುಮಾನಕ್ಕೆ ವೆಚ್ಚವಾಗುತ್ತದೆ ಎಂದ ಅವರು ಈ ಹಿಂದೆ ಹಟ್ಟಿ ಚಿನ್ನದ ಗಣಿ, ನಗರಸಭೆ ಮುಂತಾದ ಸರ್ಕಾರಿ ಸಂಸ್ಥೆಗಳಿಂದ ಅನುದಾನ ನೀಡಲಾಗುತ್ತಿತ್ತು ಅದು ಈಗ ಸ್ಥಗಿತವಾಗಿದ್ದು ನಾವು ಯಾರನ್ನು ಹಣ ಕೇಳಿಲ್ಲವೆಂದರು.

ಮುಂದಿನ ವರ್ಷ 25 ವರ್ಷದ ರಜತ ಮಹೋತ್ಸವ ನಡೆಯಲಿದ್ದು ಐದು ದಿನಗಳ ವರೆಗೆ ಕಾರ್ಯಕ್ರಮ ಆಯೋಜಿಸುವ ಗುರಿಯಿದ್ದು ರಾಜ್ಯದ ಸಾಂಸ್ಕೃತಿಕ ರಾಯಭಾರಿಯನ್ನು ಆಹ್ವಾನಿಸಲಾಗುತ್ತದೆ ಎಂದರು. ರಾಯಚೂರು ಜಿಲ್ಲಾ ಉತ್ಸವ ಆಯೋಜನೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ತಾವು ಶಾಸಕರಾಗಿದ್ದಾಗ ರಾಯಚೂರು ಜಿಲ್ಲಾ ಉತ್ಸವ ಮಾಡಲಾಗಿತ್ತು ತದ ನಂತರ ಜನ ಪ್ರತಿನಿಧಿಗಳ ನಿರುತ್ಸಾಹದಿಂದ ಅದು ಮಾಡಲಾಗಿಲ್ಲ ಇದೀಗ ಜಿಲ್ಲೆಯ ಎನ್.ಎಸ್. ಬೋಸರಾಜು ಸಚಿವರಿದ್ದು ಅವರಿಗೆ ಒತ್ತಾಯಿಸಲಾಗುತ್ತದೆ ಎಂದರು. ತಮಗೆ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಕೊಡಿಸಲು ಸಮಾಜದವರು ಮುಂದೆ ಬರಬೇಕೆಂಬ ಪ್ರಶ್ನೆಗೆ ಪ್ರತಿಕ್ರಯಿಸಿದ ಅವರು ತಾವೆಲ್ಲರು ನೀಡುವ ಗೌರವವೇ ನನಗೆ ಗೌರವ ಡಾಕ್ಟರೇಟ್ ಇದ್ದಂತೆ ಎಂದರು. ಈ ಸಂದರ್ಭದಲ್ಲಿ ಜಿ.ಬಸವರಾಜ ರೆಡ್ಡಿ, ಎನ್.ಶ್ರೀನಿವಾಸರೆಡ್ಡಿ, ಪಿ.ಶ್ರೀನಿವಾಸರೆಡ್ಡಿ, ಎನ್.ಶೇಖರರೆಡ್ಡಿ, ಪ್ರತಾಪ್ ರೆಡ್ಡಿ, ಜಿ.ನರಸರೆಡ್ಡಿ , ಮಹೇಂದ್ರ ರೆಡ್ಡಿ ಇನ್ನಿತರರು ಇದ್ದರು.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಪ್ರಕಾಶ್ ದೇಸಾಯಿ ಚನ್ನಪ್ಪನಹಳ್ಳಿ ನಿಧನ.

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್