ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಖಂಡಿಸಿ ಜೂ.21 ರಂದು ಬಿಜೆಪಿಯಿಂದ ರಸ್ತೆ ತಡೆ ಪ್ರತಿಭಟನೆ: ಗ್ಯಾರಂಟಿ ಭಾಗ್ಯಗಳೊಂದಿಗೆ ಕಾಂಗ್ರೆಸ್ ನಿಂದ ಬೆಲೆ ಏರಿಕೆ ಭಾಗ್ಯ- ಡಾ.ಶಿವರಾಜ ಪಾಟೀಲ್. ರಾಯಚೂರು,ಜೂ.19- ರಾಜ್ಯ ಸರ್ಕಾರದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಖಂಡಿಸಿ ಜೂ.21 ರಂದು ಜಿಲ್ಲೆಯಾದ್ಯಂತ ರಸ್ತೆ ತಡೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷ ಹಾಗೂ ನಗರ ಶಾಸಕ ಡಾ.ಶಿವರಾಜ ಪಾಟೀಲ್ ಹೇಳಿದರು. ಅವರಿಂದು ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ರಾಜ್ಯ ಸರ್ಕಾರ ಏಕಾಏಕಿ ಲೋಕಸಭಾ ಚುನಾವಣೆ ಮುಕ್ತಾಯವಾದ ನಂತರ ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಏರಿಕೆ ಮಾಡಿದ್ದು ಜನ ಸಾಮಾನ್ಯರ ಮೇಲೆ ಹೊರೆ ಹಾಕಿದೆ ಎಂದರು. ಸಿಎಂ ಸಿದ್ದರಾಮಯ್ಯ ಹಣಕಾಸು ಖಾತೆ ಸಹ ನಿಭಾಯಿಸುತ್ತಿದ್ದು 15 ಬಾರಿ ಬಜೆಟ್ ಮಂಡಿಸಿದ ಹೆಗ್ಗಳಿಕೆಗೆ ಪಾತ್ರವಾಗಿರುವ ಅವರು ರಾಜ್ಯದ ಆರ್ಥಿಕ ಸ್ಥಿತಿಗತಿ ಅರಿಯದೆ ಐದು ಗ್ಯಾರಂಟಿಗಳನ್ನು ಉಚಿತವಾಗಿ ನೀಡಿ ಅವುಗಳಿಗೆ ಬೇಕಾಗುವ ಹಣಕಾಸು ವ್ಯವಸ್ಥೆ ಮಾಡಲು ಆಗದೆ ತೈಲ ಬೆಲೆ ಏರಿಕೆ ಮಾಡಿ ಒಂದು ಕೈಯಿಂದ ಕೊಟ್ಟು ಮತ್ತೊಂದು ಕೈಯಿಂದ ಜನರ ಜೇಬಿಗೆ ಕತ್ತರಿ ಹಾಕಿದಂತಾಗಿದೆ ಎಂದರು.
ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಬೇಕಾದ ಅನುದಾನ ಮತ್ತು ಪರಿಹಾರ ನ್ಯಾಯಯುತವಾಗಿ ನೀಡಿದೆ ಅಲ್ಲದೆ ಜಾಗತಿಕ ಮಟ್ಟದಲ್ಲಿ ತೈಲ ಬೆಲೆ ಆಧರಿಸಿ ಬೆಲೆ ಏರಿಳಿತ ಮಾಡುತ್ತಿದೆ ಆದರೆ ರಾಜ್ಯ ಸರ್ಕಾರ ಏಕಾಏಕಿ ಗ್ಯಾರಂಟಿ ಗಳಿಗೆ ಹಣ ಹೊಂದಿಸಲು ತೈಲ ಬೆಲೆ ಏರಿಸಿದ್ದು ಖಂಡನೀಯವೆಂದ ಅವರು ರಾಜ್ಯ ಸರ್ಕಾರ ಸಬ್ ರೆಜಿಸ್ಟರ್ ಆಸ್ತಿ ದರ ಏರಿಸಿದೆ, ವಿದ್ಯುತ್ ದರ ಹೆಚ್ಚಿಸಿದೆ, ಸರ್ಕಾರಿ ಆಸ್ತಿ ಮಾರಲು ಹೊರಟಿದೆ ಇದೀಗ ಇಂಧನ ಬೆಲೆ ಏರಿಸುವ ಮೂಲಕ ಜನರಿಗೆ ಮೋಸ ಮಾಡಿದೆ ಅದ್ದರಿಂದ ರಾಜ್ಯ ಸರ್ಕಾರದ ವಿರುಧ್ದ ಜಿಲ್ಲೆಯಾದ್ಯಂತ ರಸ್ತೆ ತಡೆ ಪ್ರತಿಭಟನೆ ಮಾಡುತ್ತಿದೆ ಎಂದ ಅವರು ಅಂದು ಬೆಳಿಗ್ಗೆ ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ರಸ್ತೆ ತಡೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು ಸಾರ್ವಜನಿಕರು ಬೆಲೆ ಏರಿಕೆ ವಿರುದ್ಧ ನಡೆಸುವ ಹೋರಾಟಕ್ಕೆ ಬೆಂಬಲಿಸಬೇಕೆಂದು ಕೋರಿದರು. ಈ ಸಂದರ್ಭದಲ್ಲಿ ಮಾಜಿ ಎಂಎಲ್ಸಿ ಎನ್.ಶಂಕ್ರಪ್ಪ, ಮಾಧ್ಯಮ ಉಸ್ತುವಾರಿ ಹಾಗೂ ಕೇಂದ್ರ ಸರ್ಕಾರದ ಹೆಚ್ ಪಿ ಐ ಎಲ್ ಸ್ವತಂತ್ರ ನಿರ್ದೇಶಕ ಗಿರೀಶ್ ಕನಕವೀಡು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರವೀಂದ್ರ ಜಲ್ದಾರ್, ಶಂಕರರೆಡ್ಡಿ, ಕೆ.ಎಂ. ಪಾಟೀಲ್, ಸಂತೋಷ, ಶಿವಕುಮಾರ್, ಮಲ್ಲಿಕಾರ್ಜುನ ಇನ್ನಿತರರು ಇದ್ದರು.
Comments
Post a Comment