ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಸಭೆ:          ಅಧಿಕಾರಿಗಳು ಶಿಸ್ತು ಮತ್ತು ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಿ- ಡಾ.ಶರಣ ಪ್ರಕಾಶ್ ಪಾಟೀಲ್.                                                                                       ರಾಯಚೂರು,ಜೂ.21- ಅಧಿಕಾರಿಗಳು ಶಿಸ್ತುಬಧ್ಧರಾಗಿ ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸುವಂತೆ ಜಿಲ್ಲಾ ಉಸ್ತುವಾರಿ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಹೇಳಿದರು. ಅವರಿಂದು ನಗರದ ಜಿ.ಪಂ ಸಭಾಂಗಣದಲ್ಲಿ ಕುಡಿಯುವ ನೀರು , ಬೀಜ ಮತ್ತು ಗೊಬ್ಬರ ದಾಸ್ತಾನು ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.                                         ಕುಡಿಯುವ ನೀರು ಸರಬರಾಜು ಬಗ್ಗೆ ನಗರ ಸೇರಿದಂತೆ‌ ತಾಲೂಕುವಾರು ಮಾಹಿತಿ ಪಡೆದ ಅವರು ನಗರದಲ್ಲಿ ಜಲ ಶುದ್ಧಿಕರಣ ಘಟಕ ಕಾರ್ಯನಿರ್ವಹಣೆ ಬಗ್ಗೆ ಅಧಿಕಾರಿಗಳಿಗೆ ಚಾಟಿ ಬೀಸಿದರು.


ವಿಧಾನ ಪರಿಷತ್ ಸದಸ್ಯ ಎ.ವಸಂತ ಕುಮಾರ್ ಮಾತನಾಡಿ ದೇವಸ್ಗೂರಿನಲ್ಲಿ ನಿಜಾಮರ ಕಾಲದ ನೀರು ಶುದ್ಧೀಕರಣ ಸಂಗ್ರಹಗಾರ ಬಗ್ಗೆ ನಗರಸಭೆ ಪೌರಾಯುಕ್ತರಿಗೆ ತರಾಟೆ ತೆಗೆದುಕೊಂಡು ಅದು ಈಗ ಅನಧಿಕೃತ ವ್ಯಕ್ತಿಗಳ ಪಾಲಾಗಿದ್ದು ಅದರ ಬಗ್ಗೆ ಗಮನ ಹರಿಸಿ ಎಂದ ಅವರು ನಗರದಲ್ಲಿ  ಜಲ  ಶುದ್ಧಿಕರಣ ಘಟಕಗಳಲ್ಲಿ ಲ್ಯಾಬ್ ಟೆಕ್ನಿಷಿಯನ್ ಇಲ್ಲದೆ ಸಮರ್ಪಕವಾಗಿ ಜಲ ಶುದ್ಧೀಕರಣ ವಾಗುತ್ತಿಲ್ಲವೆಂದರು.

ಶಾಸಕ ಡಾ.ಶಿವರಾಜ ಪಾಟೀಲ್ ಮಾತನಾಡಿ ನಗರದಲ್ಲಿ ಅಶುದ್ಧ ಕುಡಿಯುವ ನೀರು ಸರಬರಾಜು ಬಗ್ಗೆ ನಗರಸಭೆ ಗಂಭೀರವಾಗಿ ಚಿಂತಿಸಬೇಕು ಎಂದು ಅವರು ಈ ಬಗ್ಗೆ ಅಧಿಕಾರಿಗಳು ಅಸಡ್ಡೆ ತಾಳಬಾರದೆಂದರು. ಶಾಸಕ ಹಂಪನಗೌಡ ಬಾದರ್ಲಿ ಮಾತನಾಡಿ ಮುಂಗಾರು ನಿಗದಿತವಾಗಿ ಪ್ರಾರಂಭವಾಗಿದೆ ರೈತರಿಗೆ ಸಮರ್ಪಕವಾಗಿ ಗೊಬ್ಬರ ಮತ್ತು ಬೀಜ ದಾಸ್ತಾನಿಗೆ ಒತ್ತಾಯಿಸಿದರು. ಕೃಷಿ ಜಂಟಿ ನಿರ್ದೇಶಕರು   ಗೊಬ್ಬರ ಮತ್ತು ಬೀಜ ದಾಸ್ತಾನು ಬಗ್ಗೆ ಮಾಹಿತಿ ನೀಡಿದರು. ಶಾಸಕ ಹಂಪಯ್ಯ ನಾಯಕ ಮಾತನಾಡಿ ಕೃಷಿ ಅಧಿಕಾರಿಗಳಿಗೆ ರೈತರ ಬಗ್ಗೆ ಕಾಳಜಿಯಿಲ್ಲ ಅವರಿಗೆ ಸಮರ್ಪಕ ಮಾಹಿತಿ ನೀಡುವುದಿಲ್ಲವೆಂದು ಕಿಡಿ ಕಾರಿದರು.  ಫಸಲ್ ಬೀಮಾ ಯೋಜನೆಯಲ್ಲಿ ಅನರ್ಹರ ಖಾತೆಗೆ ಕೋಟ್ಯಾಂತರ ಹಣ ಜಮಾವಣೆಯಾಗಿದೆ ಇದೊಂದು ಜಾಲವಿದ್ದು ಸರ್ಕಾರ ಗಂಭೀರವಾಗಿ ಚಿಂತಿಸಬೇಕು ಎಂದರು. ವಿಧಾನ ಪರಿಷತ್ ಸದಸ್ಯ ಎ.ವಸಂತಕುಮಾರ ಮಾತನಾಡಿ ಆನ್ ಲೈನ್ ಮೂಲಕ ಫಸಲು ಬೀಮಾ ಯೋಜನೆ ನೊಂದಣಿಯಲ್ಲಿ ಲೋಪದೋಷಗಳಿದ್ದು ಆದ್ದರಿಂದ ಅಕ್ರಮಕ್ಕೆಯಡೆಯಾಗಿದ್ದು ಸರ್ಕಾರ ಲೋಪದೋಷ ನಿವಾರಿಸಬೇಕೆಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ .ಬಿ ಮಾತನಾಡಿ ಇದೊಂದು ರಾಜ್ಯ ಮಟ್ಟದ ಹಗರಣ ಹಿನ್ನೆಲೆ ಸಿಐಡಿ ತನಿಖೆ ನಡೆಯುತ್ತಿದೆ ತಪ್ಪಿತಸ್ಥರ ಮೇಲೆ ಚಾರ್ಜ್ ಶೀಟ್ ದಾಖಲಾಗಿದೆ ಎಂದರು. ಸಚಿವರು ಮಾತನಾಡಿ  ಫಸಲ್ ಬೀಮಾ ಆನ್ ಲೈನ್ ಅರ್ಜಿ ನೋಂದಣಿ ಲೋಪದೋಷ ಸರಿಪಡಿಸಲು ಕೃಷಿ ಸಚಿವರೊಂದಿಗೆ ಸಮಾಲೋಚಿಸಲಾಗುತ್ತದೆ ಎಂದರು. ಡಾ.ಶಿವರಾಜ ಪಾಟೀಲ್ ಮಾತನಾಡಿ ರಿಂಗ್ ರೋಡ್ ಮತ್ತು ವಿಮಾನ ನಿಲ್ದಾಣ ನಿರ್ಮಾಣ ಅಡತಡೆ ಬಗ್ಗೆ  ಸಚಿವರ ಗಮನ ಸೆಳೆದರು .ಸಹಾಯಕ ಆಯುಕ್ತೆ ಮೆಹೆಬೂಬಿ ಮಾತನಾಡಿ ಉದ್ದೇಶಿತ ವಿಮಾನ ನಿಲ್ದಾಣಕ್ಕೆ ಭೂ ಸ್ವಾಧೀನ ವಿಳಂಬವಾಗಿದೆ ಅಲ್ಲಿ ವಾಸವಿರುವ  ಮನೆ ಮಾಲೀಕರು ನ್ಯಾಯಾಲಯದಲ್ಲಿ ತಡೆಯಾಜ್ಞೆ ದಾವೆ ಹೊಡಿದ್ದಾರೆ ಎಂದ ಅವರು ತಾವು ಲೋಕಸಭಾ ಚುನಾವಣೆ ಹಿನ್ನೆಲೆ ಬೇರೆಡೆ ವರ್ಗಾವಣೆಯಾಗಿದ್ದರಿಂದ ಸಂಪೂರ್ಣ ಮಾಹಿತಿಯಿಲ್ಲ ಈ ಬಗ್ಗೆ ಮಾಹಿತಿ ಪಡೆಯುತ್ತೇನೆ ಎಂದರು. ಎ.ವಸಂತ ಕುಮಾರ್ ಮಾತನಾಡಿ ಜಿಲ್ಲೆಯ ರಸ್ತೆ ಮತ್ತು ವಿಮಾನ ನಿಲ್ದಾಣ ಕುರಿತು ಪ್ರತ್ಯೇಕ ಸಭೆ ಕರೆಯುವಂತೆ ಕೋರಿದರು.    ವೇದಿಕೆ ಮೇಲೆ ಶಾಸಕ ಬಸನಗೌಡ ದದ್ದಲ್, ಸಂಸದ ಜಿ.ಕುಮಾರ ನಾಯಕ, ಜಿ.ಪಂ ಸಿಇಓ ರಾಹುಲ್ ತುಕಾರಾಂ ಪಾಂಡ್ವೆ, ಎಸ್ಪಿ ನಿಖಿಲ್ .ಬಿ, ಶಾಸಕ ಹಂಪನಗೌಡ ಬಾದರ್ಲಿ ಇದ್ದರು.              ಸಭೆಯಲ್ಲಿ ಆರ್ ಡಿ ಎ ಅಧ್ಯಕ್ಷ ರಾಜಶೇಖರ ರಾಮಸ್ವಾಮಿ ,ಎಪಿಎಂಸಿ ಅಧ್ಯಕ್ಷ ಮಲ್ಲಿಕಾರ್ಜುನಗೌಡ ಸೇರಿದಂತೆ ಅಪರ ಜಿಲ್ಲಾಧಿಕಾರಿಗಳು, ತಹಶೀಲದಾರರು,   ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

Comments

Popular posts from this blog