ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಜಿಲ್ಲಾಮಟ್ಪದ ಪತ್ರಿಕಾ ದಿನಾಚರಣೆ ಹಾಗೂ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ: 
                  ಕಾರ್ಪೋರೇಟ್ ಕಂಪನಿಗಳ ಕಪಿ ಮುಷ್ಟಿಯಿಂದ ಮಾಧ್ಯಮ ಹೊರಬರಬೇಕು- ಡಾ.ಶರಣ ಪ್ರಕಾಶ್ ಪಾಟೀಲ್. 
                               ರಾಯಚೂರು,ಜು.28- ದೇಶದಲ್ಲಿ ಕಾರ್ಪೋರೇಟ್ ಕಂಪೆನಿಗಳ ಕಪಿಮುಷ್ಠಿಯಲ್ಲಿರುವ ಮಾಧ್ಯಮ ಸಂಸ್ಥೆಗಳು ಹೊರಬಂದಾಗ ಮಾತ್ರ ನೈಜ ಪತ್ರಿಕೋದ್ಯಮ ಉಳಿಯಲು ಸಾಧ್ಯವೆಂದು ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ಹೇಳಿದರು. ಅವರಿಂದು ನಗರದ ಡಾ.ಅಂಬೇಡ್ಕರ ಹಾಗೂ ಬಾಬು ಜಗಜೀವನರಾಮ್ ಸಮುದಾಯ ಭವನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಘಟಕ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ ಜಿಲ್ಲಾ ಮಟ್ಟದ ಪತ್ರಿಕಾ ದಿನಾಚರಣೆ ಹಾಗೂ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪತ್ರಕರ್ತರಿಗೆ ಪ್ರಶಸ್ತಿ  ವಿತರಿಸಿ ಮಾತನಾಡಿದರು. ಪತ್ರಿಕಾರಂಗ ಪ್ರಜಾ ಪ್ರಭುತ್ವದ ನಾಲ್ಕನೆ ಅಂಗ, ಪತ್ರಕರ್ತರು ನಿರ್ಭೀತ ರಾಗಿ ಕಾರ್ಯನಿರ್ವಹಿಸಬೇಕು ಈ ದಿನ ಸಮಾಜದಲ್ಲಿ ಬದಲಾವಣೆ ಕಾಣುತ್ತಿದ್ದರೆ ಅದರಲ್ಲಿ ಪತ್ರಿಕಾ ಮತ್ತು ವಿದ್ಯುನ್ಮಾನ ಮಾಧ್ಯಮದ ಕೊಡುಗೆಯೂ ಇದೆ ಎಂದರು. ಸ್ವಾತಂತ್ರ್ಯ ಪೂರ್ವದಲ್ಲಿ ಆಂಗ್ಲರ ವಿರುದ್ಧ ಪತ್ರಿಕೆಗಳು ನಿಷ್ಟುರ ವರದಿ ಪ್ರಕಟಿಸಿ ಭಾರತಕ್ಕೆ ಸ್ವಾತಂತ್ರ್ಯ ದೊರಕಲು ಸಹಕರಿಸಿದವು ಎಂದ ಅವರು ಸ್ವಾತಂತ್ರ್ಯ ನಂತರ ಪತ್ರಿಕಾ ರಂಗದಲ್ಲಿ ಅನೇಕ ಸುಧಾರಣೆಗಳಾಗಿವೆ ಟಿವಿ ಬಂದ ನಂತರ ವಿದ್ಯುನ್ಮಾನ ಮಾಧ್ಯಮ ಪ್ರವರ್ಧಮಾನಕ್ಕೆ ಬಂದಿದ್ದು ನ್ಯೂಸ್ ಚಾನಲ್ ಗಳ ಭರಾಟೆಯಲ್ಲಿ ಪತ್ರಿಕೆಗಳು ತನ್ನ ಘನತೆ ಕಾಪಾಡಿಕೊಂಡಿದೆ ಎಂದರು.

ಇಂದು ಮಾಹಿತಿ ತಂತ್ರಜ್ಞಾನದ ಅಗಾಧ ಬೆಳವಣಿಗೆಯಿಂದ ಸಾಮಾಜಿಕ ಜಾಲ ತಾಣ ಉತ್ತುಂಗ ಸ್ಥಿತಿಯಲ್ಲಿದೆ ಮೊಬೈಲ್ ನಲ್ಲಿ ಬೆರಳ ತುದಿಯಲ್ಲಿ ಪ್ರಪಂಚವೆ ನೋಡ ಬಹುದಾಗಿದೆ ಎಂದರು. ಮಾಧ್ಯಮ ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಬೇಕೆಂದ ಅವರು ಕೇಂದ್ರ ಸರ್ಕಾರ ಮಾಧ್ಯಮ ರಂಗ ರಕ್ಷಣೆಗೆ ಕಾಯ್ದೆ ರೂಪಿಸುವ ಅವಶ್ಯಕತೆಯಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿ ಪತ್ರಕರ್ತರ ಸಮಸ್ಯೆ ನಿವಾರಣೆಗೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.                                       ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ಮಾತನಾಡಿ ದೇಶದ ಉದ್ದಗಲಕ್ಕೂ ನಡೆಯುವ ದಿನ ನಿತ್ಯದ ವಿದ್ಯಮಾನಗಳ ಮೇಲೆ ಮಾಧ್ಯಮ ಬೆಳಕು ಚೆಲ್ಲುತ್ತಿದೆ ಇಂದಿನ ಎಲೆಕ್ಟ್ರಾನಿಕ್ ಮಾಧ್ಯಮದ ನೂರಾರು ಚಾನೆಲ್ ಗಳು ಮಧ್ಯೆಯೂ ಮುದ್ರಣ ಮಾಧ್ಯಮ ತನ್ನ ಘನತೆ ಉಳಿಸಿಕೊಂಡಿದ್ದು ಶ್ಲಾಘನೀಯವೆಂದ ಅವರು ಗ್ರಾಮಿಣ ಪತ್ರಕರ್ತರಿಗೆ ಬಸ್ ಪಾಸ್ ನೀಡುವ ಬೇಡಿಕೆ ಗಮನಕ್ಕಿದ್ದು ಸಿಎಂ ಗಮನ ಸೆಳೆಯುತ್ತೇನೆಂದ ಅವರು ಪತ್ರಕರ್ತರಿಗೆ ನಿವೇಶನ ಮತ್ತು ಮನೆಗಳ ನಿರ್ಮಾಣ ಸ್ಥಳೀಯ ಸಂಸ್ಥೆಗಳು , ನಗರಾಭಿವೃದ್ಧಿ ಪ್ರಾಧಿಕಾರದ ಸಹಕಾರವಿದ್ದರೆ ಸಾಧ್ಯವೆಂದರು.

ನನಗೆ ಈಗ ಎಂಬತ್ತು ವರ್ಷ ಸಮೀಪಿಸುತ್ತಿದ್ದು ನನ್ನ ಸುಧೀರ್ಘ ರಾಜಕೀಯ ಜೀವನಕ್ಕೆ ಪತ್ರಕರ್ತರೆ ಸ್ಪೂರ್ತಿ ಎಂದು ಹಿರಿಯ ಪತ್ರಕರ್ತರೊಂದಿಗಿನ ಒಡನಾಟ ಮೆಲುಕು ಹಾಕಿದರು.

ವಿಶೇಷ ಉಪನ್ಯಾಸಕಾರರಾಗಿ ಆಗಮಿಸಿದ ನ್ಯೂಸ್ 18 ಕನ್ನಡದ ಸಂಪಾದಕರಾದ ಹರಿಪ್ರಸಾದ್ ಮಾತನಾಡಿ ರಾಜ್ಯದಲ್ಲಿ ಪ್ರತಿಯೊಂದು ಜಿಲ್ಲೆ, ತಾಲೂಕುಗಳಲ್ಲಿ ಜುಲೈ ತಿಂಗಳಲ್ಲಿ ಪತ್ರಿಕಾ ದಿನಾಚರಣೆ ಮಾಡುವದಕ್ಕೆ ಕಾರಣ ಈ ತಿಂಗಳಲ್ಲಿಯೆ ಕನ್ನಡದ ಮೊದಲ ದಿನ ಪತ್ರಿಕೆ ಮಂಗಳೂರು ಸಮಾಚಾರ ಹೊರಬಂದಿತು ಮೊದಲು ಅದು ಸುದ್ದಿಯ ಕಾಗದ ವೆಂದು ಕರೆಸಿಕೊಳ್ಳುತ್ತಿತ್ತು ಸುಳ್ಳು ಸುದ್ದಿ ತಡೆಯಲು ನಿಖರ ‌ಸುದ್ದಿ ನೀಡುವ ಪತ್ರಿಕೆಯಾಗಿ ಹೊರಹೊಮ್ಮಿತು ಎಂದರು. ಪತ್ರಕರ್ತರು ಆಶಾವಾದಿಗಳು ಆಗಬೇಕು ಮಾಧ್ಯಮ ರಂಗ ಅನೇಕ ಏಳು ಬೀಳು ಕಂಡಿದೆ ನಮ್ಮಲ್ಲಿಯೂ ಅಪ್ರಾಮಾಣಿಕರು ಸುಳ್ಳು ಸುದ್ದಿ ಹರಡುವವರು ಇದ್ದಾರೆ ಅದಕ್ಕೆ ನಾವು ಧೃತಿಗೆಡದೆ ನಮ್ಮತನ ನಿರೂಪಿಸಬೇಕೆಂದರು. ಪತ್ರಕರ್ತರು ನಿಗರ್ವಿಗಳಾಗಬೇಕು ರಾಜಕಾರಣಿಗಳನ್ನು ವಿಮರ್ಶೆ ಮಾಡಬೇಕು ಸರ್ಕಾರದ ತಪ್ಪು ಜನರು ಪರವಾಗಿ ತಿಳಿಸಬೇಕೆಂದು ಅವರು ಪತ್ರಕರ್ತರು ಸ್ವಾಭಿಮಾನಿಗಳಾಗ ಬೇಕೆಂದರು.ನಮ್ಮ ರಾಜ್ಯದಲ್ಲಿ ಅದರಲ್ಲು ನಿಮ್ಮ ಜಿಲ್ಲೆಯಲ್ಲಿಯೂ ಒಂದು ಸೋಮಾಲಿಯಾ ಇದೆ ಇಲ್ಲಿ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಎಂದು ವರದಿ ಮಾಡಿದ ಸಿದ್ದು ಬಿರಾದಾರ್ ರವರಿಗೆ ದೇಶದ ಪ್ರತಿಷ್ಟಿತ ರಮಾನಾಥ ಗೋಯಾಂಕ ಪ್ರಶಸ್ತಿ ಲಭಿಸಿದ್ದು ಹೆಮ್ಮೆಯ ಸಂಗತಿ ಎಂದರು. ಪತ್ರಿಕಾ ಧರ್ಮ ಅತ್ಯಂತ ಪವಿತ್ರವಾದದ್ದು ಪತ್ರಕರ್ತರ ಹೆಸರಲ್ಲಿ ಅಕ್ರಮ ನಡೆಯದಂತೆ ನೋಡಿಕೊಳ್ಳುವುದು ಪತ್ರಕರ್ತರ ಸಂಘಗಳ ಕರ್ತವ್ಯವೆಂದರು.

  ಪ್ರಾಸ್ತಾವಿಕವಾಗಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷ ಆರ್.ಗುರುನಾಥ ಮಾತನಾಡಿ ಪ್ರತಿವರ್ಷ ಪತ್ರಿಕಾ ದಿನಾಚರಣೆ ಆಚರಿಸಲಾಗುತ್ತದೆ ಪತ್ರಕರ್ತರಿಗೆ ವಾರ್ಷಿಕ ಪ್ರಶಸ್ತಿ ಸಹ ನೀಡಲಾಗುತ್ತದೆ ಸರ್ಕಾರ ನಮ್ಮ ಕಷ್ಟ ಆಲಿಸಬೇಕೆಂದ ಅವರು ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್ ನೀಡಬೇಕೆಂದು ಬಹು ದಿನಗಳ ಬೇಡಿಕೆಯಿದೆ ಹಾಗೆ ಪತ್ರಕರ್ತರು ಆರ್ಥಿಕ ಸಂಕಷ್ಟದಿಂದ ಜೀವನ ಕಳೆಯುತ್ತಿದ್ದಾರೆ ಸ್ಥಳಿಯ ಪತ್ರಿಕೆಗಳು ಸಂಕಷ್ಟದಲ್ಲಿವೆ ಆದ್ದರಿಂದ ಪತ್ರಕರ್ತರ ಕಲ್ಯಾಣ ಮಂಡಳಿ ಸ್ಥಾಪಿಸಬೇಕೆಂದ ಅವರು ಜಿಲ್ಲಾ ಪತ್ರಕರ್ತರ ಕ್ಷೇಮ ನಿಧಿ ಸ್ಥಾಪಿಸಲು ಕೋರಿದರು.

ಜೀವಮಾನದ ಸಾಧನೆಗಾಗಿ ಈಶಾನ್ಯ ಟೈಮ್ಸ್ ಸಂಪಾದಕ ನಾಗತಿಹಳ್ಳಿ ನಾಗರಾಜ್ ಮತ್ತು ವಿಶಿಷ್ಟ ಸಾಧನೆಗಾಗಿ ದೇವದುರ್ಗ ಕನ್ನಡ ಪ್ರಭ ವರದಿಗಾರ ನರಸಿಂಗರಾವ್ ಸರ್ಕೀಲ್ ರವರಿಗೆ ಪ್ರಶಸ್ತಿ ನೀಡಲಾಯಿತು ಅದೇ ರೀತಿ ಅನೇಕ ಪತ್ರಕರ್ತರಿಗೆ ಹಾಗು ಜಾಹಿರಾತು ವ್ಯವಸ್ಥಾಪಕರು ಮತ್ತು ಪತ್ರಿಕಾ ವಿತರಕರಿಗೆ ವಾರ್ಷಿಕ ದತ್ತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ವೇದಿಕೆ ಮೇಲೆ ವಿಧಾನ ಪರಿಷತ್ ಸದಸ್ಯ ಎ.ವಸಂತಕುಮಾರ್, ಶಾಸಕರಾದ ಹಂಪನಗೌಡ ಬಾದರ್ಲಿ, ಹಂಪಯ್ಯ ನಾಯಕ, ಬಸವನಗೌಡ ತುರವಿಹಾಳ, ಡಾ.ಶಿವರಾಜ ಪಾಟೀಲ್, ಆರ್ ಡಿ ಎ ಅಧ್ಯಕ್ಷ ರಾಜಶೇಖರ ರಾಮಸ್ವಾಮಿ, ಜಿಲ್ಲಾಧಿಕಾರಿ ನಿತೀಶ್,

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪುಟ್ಟಮಾದಯ್ಯ, ಕೆಯುಡಬ್ಲೂಜೆ ರಾಜ್ಯ ಸಮಿತಿ ಸದಸ್ಯ ಶಿವಮೂರ್ತಿ ಹಿರೇಮಠ, ಉಪಾಧ್ಯಕ್ಷ ಶಿವಪ್ಪ ಮಡಿವಾಳ, ಪ್ರಧಾನ ಕಾರ್ಯದರ್ಶಿ ಪಾಶಾ ಹಟ್ಟಿ,  ಸೇರಿದಂತೆ ಕಾರ್ಯಕಾರಿ ಸಮಿತಿ ಸದಸ್ಯರು ,ಇನ್ನಿತರರು ಇದ್ದರು.

ಸಿದ್ದಯ್ಯ ಸ್ವಾಮಿ ಕುಕನೂರು ನಿರೂಪಿಸಿದರು. ನಾಡಗೀತೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು.

ಕಾರ್ಯಕ್ರಮದಲ್ಲಿ ಹಿರಿಯ ಕಿರಿಯ ಪತ್ರಕರ್ತರು ಭಾಗವಹಿಸಿದ್ದರು.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್

ತರಕಾರಿ ಮಾರಾಟಗಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಅಂಬಾಜಿರಾವ್ ಒತ್ತಾಯ