ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಪ್ರಗತಿ ಪರಿಶೀಲನಾ ಸಭೆ:
ಕೊಳಚೆ ಪ್ರದೇಶಗಳ ಘೋಷಣೆಗೆ ಶ್ರೀಘ್ರದಲ್ಲೇ ಪ್ರಸ್ತಾವನೆ ಸಲ್ಲಿಸಿ-ಪ್ರಸಾದ್ ಅಬ್ಬಯ್ಯ
ರಾಯಚೂರು,ಜು.30- ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಕೊಳಚೆ ಪ್ರದೇಶಗಳ ಘೋಷಣೆಗಾಗಿ ಸ್ಥಳೀಯ ಸಂಸ್ಥೆಗಳು ಹಾಗೂ ಜಿಲ್ಲೆಯ ವಿವಿಧ ತಹಶೀಲ್ದಾರ್ ಹಂತದ ಬಾಕಿ ಇರುವ ಪ್ರಸ್ತಾವನೆಯನ್ನು ಶ್ರೀಘ್ರದಲ್ಲೇ ಸಲ್ಲಿಸಬೇಕೆಂದು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರು ಹಾಗೂ ಹುಬ್ಬಳಿ-ಧಾರವಾಡ ಪೂರ್ವ ಕ್ಷೇತ್ರದ ಶಾಸಕರಾದ ಪ್ರಸಾದ್ ಅಬ್ಬಯ್ಯ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅವರಿಂದು ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ, ಮಾತನಾಡಿದರು.
ಜಿಲ್ಲೆಯಲ್ಲಿ ಕೊಳಚೆ ಪ್ರದೇಶ ಘೋಷಣೆಗಾಗಿ ರಾಯಚೂರಿನಲ್ಲಿ 12, ದೇವದುರ್ಗದಲ್ಲಿ 08, ಮಾನವಿಯಲ್ಲಿ 04 ಒಟ್ಟು 24 ಪ್ರದೇಶಗಳು ಬಾಕಿಯಿದ್ದು, ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಗಮನಹರಿಸಿ ಪ್ರಸ್ತಾವನೆಗೆ ಸಲ್ಲಿಸಬೇಕು. ಕೊಳಚೆ ಪ್ರದೇಶದ ಒಟ್ಟು 24,389 ಕುಟುಂಬಗಳು ಇದ್ದು, 98,545 ಜನರು ವಾಸವಾಗಿದ್ದಾರೆ ಎಂದರು.
ಕೊಳಚೆೆ ಪ್ರದೇಶದ ವಿವಿಧ 294 ಯೋಜನೆಗಳಿಗೆ ಒಟ್ಟು ಮೊತ್ತ 13,276 ಕೋಟಿ ರೂ.ಗಳಲ್ಲಿ ಕೇಂದ್ರದ ಪಾಲು 2703.80 ಕೋಟಿ ರೂ.ಗಳು ಹಾಗೂ ರಾಜ್ಯದ ಪಾಲು 2895.10 ಕೋಟಿ ರೂ.ಗಳು ಮತ್ತು ಉಳಿಕೆ ಮೊತ್ತವನ್ನು ನಗರ ಸ್ಥಳೀಯ ಸಂಸ್ಥೆಗಳಿಂದ 395.06 ಕೋಟಿ ರೂ.ಗಳು ಅಲ್ಲದೆ ಫಲಾನುಭವಿಗಳ ವಂತಿಕೆಯಿಂದ 6691.00 ಕೋಟಿ ರೂ.ಗಳು ಹಾಗೂ ಮೂಲಭೂತ ಸೌಲಭ್ಯಕ್ಕಾಗಿ 596.19 ಕೋಟಿ ರೂ.ಗಳು ಮಂಜೂರು ಮಾಡಲಾಗಿದೆ ಎಂದರು.
ಜಿಲ್ಲೆಯ ಕೊಳಚೆ ಪ್ರದೇಶದಲ್ಲಿ ವಾಸಿಸುವ ಜನರಿಗೆ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ಶೌಚಾಲಯ ಸೇರಿ ಅಗತ್ಯ ಸೌಕರ್ಯ ಒದಗಿಸಬೇಕು. ಅಲ್ಲದೆ ಕೊಳಚೆ ಪ್ರದೇಶಗಳಿಗೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನಾ ಮಾಡಿಬೇಕು ನಂತರ ಜಿಲ್ಲಾಡಳಿತಕ್ಕೆ ವರದಿ ನೀಡುವ ಮೂಲಕ ಅಧಿಕಾರಿಗಳು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕೆಂದು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಸ್ಲಂ ಪ್ರದೇಶದಲ್ಲಿ ಮನೆಗಳ ನಿಗದಿತ ಅವಧಯಲ್ಲಿ ನಿರ್ಮಾಣಕ್ಕಾಗಿ ಈರಣ್ಣ ಎನ್ನುವ ಗುತ್ತಿಗೆದಾರರಿಗೆ ನೀಡಲಾಗಿದ್ದು, ಇನ್ನೂವರಿಗೂ ಮನೆಗಳ ನಿರ್ಮಾಣ ಮಾಡಿಲ್ಲ. ಈ ಬಗ್ಗೆ ಅಧಿಕಾರಿಗಳು ಗಮನಹರಿಸಿ ಸೂಕ್ತ ಕ್ರಮ ಜರುಗಿಸಬೇಕು. ಜಿಲ್ಲೆಯ ಸಿಂಧನೂರಿನ ಗಂಗಾ ನಗರದ ಸ್ಲಂ ಪ್ರದೇಶದಲ್ಲಿ ವಾಸಿಸುವ ನಿವಾಸಿಗಳಿಗೆ ಅಗತ್ಯ ಸೌಕರ್ಯಗಳನ್ನು ಕೂಡಲೇ ಒದಗಿಸಿ ಅಲ್ಲಿಯ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯ ಅಧಿಕಾರಿಗಳಿಂದ ಆಗಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ರಾಯಚೂರು ನಗರದಲ್ಲಿ ಒಟ್ಟು 14ಕೊಳಚೆ ಪ್ರದೇಶ ಘೋಷಣೆಗೆ ಬಾಕಿಯಿದ್ದು, ನಗರಸಭೆಯಿಂದ 12 ಕೊಳಚೆ ಪ್ರದೇಶಗಳ ಘೋಷಣೆಗಾಗಿ ದಾಖಲಾತಿಗಳನ್ನು ಕ್ರೂಢಿಕರಿಸಲಾಗುತ್ತಿದೆ. ಹಾಗೂ ಶ್ರೀಘ್ರವಾಗಿ ಕೊಳಚೆ ಪ್ರದೇಶ ಘೋಷಣೆಗೆ ಪ್ರಸ್ತಾವನೆಯನ್ನು ಸಲ್ಲಿಸಲಾಗುತ್ತದೆಂದು ರಾಯಚೂರು ನಗರಸಭೆಯ ಪೌರಾಯುಕ್ತರು ಅಧ್ಯಕ್ಷರಿಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಾದ ನಿತೀಶ್. ಕೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಪುಟ್ಟಮಾದಯ್ಯ, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಆಯುಕ್ತರಾದ ಅಶೋಕ ಡಿ.ಎಸ್, ಕಲಬುರಗಿ ವಿಭಾಗದ ತಾಂತ್ರಿಕ ನಿರ್ದೇಶಕರು ಎಂ.ಎ.ಖಯ್ಯುಂ ರಾಯಚೂರು ನಗರಾಭಿವೃದ್ಧಿ ಕೋಶದ ನಿರ್ದೇಶಕರಾದ ಜಗದೀಶ್ ಗಂಗಣ್ಣನವರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಎಮ್.ಎನ್.ಚೇತನ ಕುಮಾರ್, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಮಹೇಶ್ ಪೋತ್ತೆದಾರ್, ರಾಯಚೂರು ನಗರಸಭೆಯ ಪೌರಾಯುಕ್ತರಾದ ಗುರುಸಿದ್ದಯ್ಯ, ಸಹಾಯಕ ಕಾರ್ಯಪಾಲಕ ಅಭಿಯಂತರರಾದ ದೇವೇಂದ್ರ ಕುಮಾರ್ ಸೇರಿದಂತೆ ಇತರರು ಸಭೆಯಲ್ಲಿ ಹಾಜರಿದ್ದರು.
Comments
Post a Comment