ರಾಯಚೂರಿನಲ್ಲಿ ಟೊಯೋಟಾ ಎಬಿಸಿಡಿ ಕಾರ್ಯಕ್ರಮಕ್ಕೆ ಸಿಎಸ್ಆರ್ ಟೈಮ್ಸ್ ಪ್ರಶಸ್ತಿ

ರಾಯಚೂರು,ಆರ್.26-ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ವಿಚಾರದಲ್ಲಿ ಬದ್ಧತೆ ಮೆರೆಯುವ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) “ಸ್ವಚ್ಛ ಭಾರತ” ವಿಭಾಗದಡಿಯಲ್ಲಿ ಸಿಎಸ್‌ಆರ್‌ ಟೈಮ್ಸ್ ಅವಾರ್ಡ್ 2024 ಪುರಸ್ಕಾರಕ್ಕೆ ಪಾತ್ರವಾಗಿದೆ. ಕರ್ನಾಟಕದ ಅಭಿವೃದ್ಧಿಶೀಲ ಜಿಲ್ಲೆ ಆಗಿರುವ ರಾಯಚೂರಿನಲ್ಲಿ ತನ್ನ ಸಾಮಾಜಿಕ ಪರಿಣಾಮ ಬೀರುವ ಕಾರ್ಯಕ್ರಮವಾದ ಎಬಿಸಿಡಿ (ಎ ಬಿಹೇವಿಯರಲ್ ಚೇಂಜ್ ಡೆಮಾನ್‌ಸ್ಟ್ರೇಶನ್) ಮೂಲಕ ನೈರ್ಮಲ್ಯ, ಆರೋಗ್ಯ ಹೆಚ್ಚಿಸುವ ನಿಟ್ಟಿನಲ್ಲಿ ಟಿಕೆಎಂ ಸಂಸ್ಥೆಯು ನಡೆಸಿದ ಮಹತ್ವದ ಕೆಲಸವನ್ನು ಗುರುತಿಸಿರುವ ನೀತಿ ಆಯೋಗವು ಈ ಪ್ರಶಸ್ತಿ ಪುರಸ್ಕಾರಕ್ಕೆ ಟಿಕೆಎಂ ಸಂಸ್ಥೆಯನ್ನು ಆಯ್ಕೆ ಮಾಡಿದೆ.

ಗೋವಾದ ರಾಜಭವನದ ದರ್ಬಾರ್ ಹಾಲ್‌ನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ವಿದ್ಯುತ್ ಮತ್ತು ನವೀಕರಿಸಬಹುದಾದ ಇಂಧನ ಖಾತೆಯ ರಾಜ್ಯ ಸಚಿವ ಶ್ರೀಪಾದ್  ನಾಯಕ್, ಗೋವಾ ಸರ್ಕಾರದ ಮುಖ್ಯ ಕಾರ್ಯದರ್ಶಿ ಪುನೀತ್ ಕುಮಾರ್ ಗೋಯೆಲ್ ಉಪಸ್ಥಿತರಿದ್ದರು.

ಸಿಎಸ್‌ಆರ್‌ ಟೈಮ್ಸ್ ಪ್ರಶಸ್ತಿಯು ಅತ್ಯುತ್ತಮ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್‌) ಕೆಲಸಗಳನ್ನು ಮಾಡುವ ಸಂಸ್ಥೆಗಳನ್ನು ಗುರುತಿಸಿ ಗೌರವಿಸುವ ಗೌರವಾನ್ವಿತ ಪುರಸ್ಕಾರವಾಗಿದೆ. 2013ರಲ್ಲಿ ಇದನ್ನು ಆರಂಭಿಸಲಾಗಿತ್ತು. 

ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಸಂಸ್ಥೆಯು ರಾಯಚೂರಿನಲ್ಲಿ 100 ಸರ್ಕಾರಿ ಶಾಲೆಗಳಲ್ಲಿ ಎಬಿಸಿಡಿ ಕಾರ್ಯಕ್ರಮವನ್ನು ಜಾರಿಗೆ ತಂದಿತ್ತು. ಅದರ ಮೂಲಕ ಅಲ್ಲಿನ ಶಿಕ್ಷಕರು, ಮಕ್ಕಳು ಮತ್ತು ಸಿಬ್ಬಂದಿಗಳಲ್ಲಿ ಸ್ವಚ್ಛತೆ ಕುರಿತು ಅರಿವು ಮೂಡಿಸಿ ಬದಲಾವಣೆ ಉಂಟು ಮಾಡಲು ಶ್ರಮಿಸಿತ್ತು. ಪ್ರಾಯೋಗಿಕ ಮತ್ತು ಸೈದ್ಧಾಂತಿಕ ತರಬೇತಿಗಳನ್ನು ಒಳಗೊಂಡಿದ್ದ ಎಬಿಸಿಡಿಯಡಿ, ಶಾಲಾಡಳಿತ ಮತ್ತು ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿಯನ್ನು ಒಗ್ಗೂಡಿಸಿ ಜಾಗೃತಿ ಮೂಡಿಸುವ ಕೆಲಸ ಮಾಡಿತು. ಶಾಲೆ ಮತ್ತು ಸಮುದಾಯಗಳಲ್ಲಿ ಈ ಕುರಿತ ವಿಡಿಯೋ ಪ್ರಾತ್ಯಕ್ಷಿಕೆಯನ್ನು ಪ್ರದರ್ಶಿಸಲಾಗಿತ್ತು. ಸ್ಥಳೀಯ ಜನ ಸಮುದಾಯಗಳಿಗೆ ಸ್ವಚ್ಛತೆ ಪರಿಸರವನ್ನು ಕಾಪಾಡುವ, ಆ ಮೂಲಕ ಉತ್ತಮ ಆರೋಗ್ಯಕರ ಪರಿಸರ ಸೃಷ್ಟಿಸುವ ತರಬೇತಿ ನೀಡಲಾಗಿತ್ತು. ಈ ಕ್ರಮಗಳು ಜಿಲ್ಲೆಯ ಆರೋಗ್ಯ ಮತ್ತು ನೈರ್ಮಲ್ಯ ಗುಣಮಟ್ಟವನ್ನು ಹೆಚ್ಚಿಸುವಲ್ಲಿ ಉತ್ತಮ ಪರಿಣಾಮ ಬೀರಿತ್ತು. ಟಿಕೆಎಂನ ಈ ಪ್ರಯತ್ನಗಳನ್ನು ಪ್ರಶಸ್ತಿಯ ಮೂಲಕ ಗೌರವಿಸಲಾಗಿದೆ.


ಈ ಕುರಿತು ಮಾತನಾಡಿದ  ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಕಾರ್ಪೊರೇಟ್ ಅಫೇರ್ಸ್ ಆಂಡ್ ಗವರ್ನೆನ್ಸ್ ವಿಭಾಗದ ಮುಖ್ಯಸ್ಥ ಮತ್ತು ಕಾರ್ಯನಿರ್ವಾಹಕ ಉಪಾಧ್ಯಕ್ಷ ವಿಕ್ರಮ್ ಗುಲಾಟಿ ಅವರು,  “ಅತ್ಯುತ್ತಮ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ಯೋಜನೆಗಳ ಮೂಲಕ ಸುಸ್ಥಿರ ಭವಿಷ್ಯವನ್ನು ಉಂಟು ಮಾಡಲು ಶ್ರಮಿಸುತ್ತಿರುವ ಟೊಯೋಟಾದ ಬದ್ಧತೆಗೆ ಈ ಪ್ರಶಸ್ತಿ ಉತ್ತಮ ಪುರಾವೆಯಾಗಿದೆ. ಸಮಾಜದ ಅಭಿವೃದ್ಧಿಯಲ್ಲೇ ನಿಜವಾದ ಅಭಿವೃದ್ಧಿ ಅಡಗಿದೆ ಎಂಬುದನ್ನು ಸಂಸ್ಥೆ ಬಲವಾಗಿ ನಂಬಿದೆ. ಹಾಗಾಗಿ ನಮ್ಮ ಗಮನ ಸದಾ ಸಮಾಜದ ಮೇಲೆ ಸಕಾರಾತ್ಮಕ ಪರಿಣಾಮ ಉಂಟು ಮಾಡುವುದರ ಕಡೆಗೆ ಇರುತ್ತದೆ. ಅದರಲ್ಲೂ ವಿಶೇಷವಾಗಿ ಮಕ್ಕಳ ವರ್ತನೆಯಲ್ಲಿ ಬದಲಾವಣೆ ತರುವ ಮೂಲಕ ದೀರ್ಘಾವಧಿಯ ಪರಿಣಾಮ ಉಂಟುಮಾಡುವ ಕೆಲಸ ಮಾಡಬಹುದಾಗಿದೆ” ಎಂದು ಹೇಳಿದರು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಪ್ರಕಾಶ್ ದೇಸಾಯಿ ಚನ್ನಪ್ಪನಹಳ್ಳಿ ನಿಧನ.

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್