ರುಸ್ಮಾ ಒಕ್ಕೂಟದಿಂದ ಶಿಕ್ಷಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ: ಕೆಕೆಆರ್ ಡಿಬಿ ಅನುದಾನದಲ್ಲಿ 1250 ಕೋಟಿ ರೂ. ಶಿಕ್ಷಣ ಕ್ಷೇತ್ರಕ್ಕೆ ಮೀಸಲು- ಸಚಿವ ಬೋಸರಾಜು ರಾಯಚೂರು,ಸೆ.27- ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ 1250 ಕೋಟಿ.ರೂ ಶಿಕ್ಷಣ ಕ್ಷೇತ್ರಕ್ಕೆ ಮೀಸಲಿರಿಸಲಾಗಿದೆ ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ಹೇಳಿದರು. ಅವರಿಂದು ರಾಯಚೂರು ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಒಕ್ಕೂಟ(ರುಸ್ಮಾ) ದಿಂದ ಆಯೋಜಿಸಿದ ಶಿಕ್ಷಕ ರತ್ನ ಪ್ರಶಸ್ತಿ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಸಮಾಜದಲ್ಲಿ ಸುಧಾರಣೆ ಬರಬೇಕಾದರೆ ಶಿಕ್ಷಣದಿಂದ ಮಾತ್ರ ಸಾಧ್ಯ ಶಿಕ್ಷಕರು ಸಮಾಜಕ್ಕೆ ಉತ್ತಮ ವಿದ್ಯಾರ್ಥಿಗಳನ್ನು ನೀಡಿದರೆ ಸ್ವಸ್ಥ ಸಮಾಜ ಸಾಧ್ಯವೆಂದರು.
ಈ ನಿಟ್ಟಿನಲ್ಲಿ ಸರ್ಕಾರದಿಂದ ಯಾವುದೆ ಅನುದಾನ ಪಡೆಯದೆ ಸ್ವಂತ ಬಲದ ಮೇಲೆ ರುಸ್ಮಾ ಒಕ್ಕೂಟ ಶಾಲೆಗಳು ಈ ಭಾಗದಲ್ಲಿ ಅತ್ಯುತ್ತಮ ಶಿಕ್ಷಣ ಕ್ರಾಂತಿ ಮಾಡುತ್ತಿವೆ ಎಂದರೆ ತಪ್ಪಾಗಲಾರದು ಎಂದರು. ರಾಷ್ಟ್ರ ಪತಿಗಳಾದ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ರವರ ಜನ್ಮದಿನವನ್ನು ಶಿಕ್ಷಕರ ದಿನಾಚರಣೆಯನ್ನಾಗಿ ಮಾಡಲಾಗುತ್ತದೆ ಸೆಪ್ಟೆಂಬರ್ ಒಂದು ತಿಂಗಳವರೆಗೂ ಶಿಕ್ಷಕರ ದಿನಾಚರಣೆ ಮೂಲಕ ಉತ್ತಮ ಶಿಕ್ಷಕರಿಗೆ ಗೌರವಿಸುವ ಕಾರ್ಯ ಶ್ಲಾಘನೀಯವೆಂದರು. ನಮ್ಮ ಸರ್ಕಾರ ಶಿಕ್ಷಣಕ್ಕೆ ಅತಿ ಹೆಚ್ಚು ಒತ್ತು ನೀಡುತ್ತಿದೆ ಕೆಕೆಆರ್ ಡಿಬಿಗೆ ವಾರ್ಷಿಕ ಐದು ಸಾವಿರ ಕೋಟಿ ರೂ. ಅನುದಾನ ನೀಡಲಾಗುತ್ತಿದ್ದು ಅದರಲ್ಲಿ ಶಿಕ್ಷಣ ಕ್ಷೇತ್ರಕ್ಕೆ 1250 ಕೋಟಿ ರೂ. ಮಿಸಲಿರಿಸಲಾಗಿದೆ ಎಂದರು. ಅಲ್ಲದೆ ಅಜೀಮ್ ಪ್ರೇಮ್‌ಜಿ ಫೌಂಡೇಶನ್ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡು 1591 ಕೋಟಿ. ರೂ. ಮೊಟ್ಟೆಗಾಗಿ ಆರ್ಥಿಕ ಸಹಾಯ ಮಾಡುತ್ತಿದ್ದು ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಮೊಟ್ಟೆ ನೀಡಿ ಅವರಿಗೆ ಪೌಷ್ಟಿಕಾಂಶ ಕೊರತೆ ನೀಗಿಸಲು ಸಹಕಾರಿಯಾಗಿದೆ ಎಂದರು. ಯುಪಿಎ ಸರ್ಕಾರದ ಅವಧಿಯಲ್ಲಿ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಮಲ್ಲಿಕಾರ್ಜುನ ಖರ್ಗೆ, ಧರಂ ಸಿಂಗ್ ಮುಂತಾದವರ ಪ್ರಯತ್ನದಿಂದ 371ಜೆ ತಿದ್ದುಪಡಿ ಈ ಭಾಗಕ್ಕೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ವಿಶೇಷ ಸೌಲಭ್ಯ ಸಿಗುವಂತೆ ಮಾಡಿದೆ ಎಂದರು. ಎಸ್.ಎಂ.ಕೃಷ್ಣ ಆಡಳಿತದಲ್ಲಿ ದೇವದುರ್ಗದ ಅರಕೇರದಿಂದಲೆ ಶಾಲೆಗಳಲ್ಲಿ ಬಿಸಿಯೂಟ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು ಎಂದರು.
ಖಾಸಗಿ ಶಾಲೆಗಳಿಗೂ ಸರ್ಕಾರ ಅನುದಾನ ನೀಡುವ ಚಿಂತನೆಯಿದ್ದು ಗುಣಮಟ್ಟ ಶಿಕ್ಷಣ ನೀಡುವ ಶಿಕ್ಷಣ ಸಂಸ್ಥೆಗಳನ್ನು ಗುರುತಿಸಿ ಅವುಗಳಿಗೆ ಆರ್ಥಿಕ ಧನ ಸಹಾಯ ಮಾಡುವ ಚಿಂತನೆ ಮುಂದಿನ ದಿನಗಳಲ್ಲಿ ಸಾಕಾರಗೊಳ್ಳಲಿದೆ ಎಂದ ಅವರು ಖಾಸಗಿ ಶಾಲೆಗಳ ಬಗ್ಗೆ ವೃಥಾ ಆರೋಪ ಸರಿಯಲ್ಲ ಇತ್ತೀಚೆಗೆ ಕಪಗಲ್ ಬಳಿ ಶಾಲಾ ಬಸ್ ಅಪಘಾತ ಪ್ರಕರಣದಲ್ಲಿ ಶಾಲೆಯ ಆಡಳಿತ ಮಂಡಳಿಯನ್ನು ಗುರಿ ಮಾಡುವುದು ಸರಿಯಲ್ಲವೆಂದರು.
ಕಾರ್ಯಕ್ರಮದಲ್ಲಿ ಖ್ಯಾತ ದಾಸವಾಣಿ ಕಲಾವಿದ ಶೇಷಗಿರಿ ದಾಸ್, ರಾಯಚೂರು ವಾಣಿ ಸಂಪಾದಕ ಅರವಿಂದ್ ಕುಲಕರ್ಣಿ, ಬಾಲಂಕು ಆಸ್ಪತ್ರೆ ವೈದ್ಯ ಡಾ.ಶ್ರೀ ಧರ ರೆಡ್ಡಿ, ಬಂಡಾಯ ಸಾಹಿತಿ ಬಾಬು ಬಂಡಾರಿಗಲ್, ಸಿಪಿಐ ಉಮೇಶ್ ಕಾಂಬ್ಳೆ ರವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಅತ್ಯುತ್ತಮ ಶಿಕ್ಷಕರಿಗೆ ಶಿಕ್ಷಕ ರತ್ನ ಪ್ರಶಸ್ತಿ ನೀಡಲಾಯಿತು. ಪ್ರಾಸ್ತಾವಿಕವಾಗಿ ರಾಜಾ ಶ್ರೀ ನಿವಾಸ್ ಮಾತನಾಡಿದರು. ಪ್ರತಿಭಾ ಗೋನಾಳ ಪ್ರಾರ್ಥಿಸಿ ನಾಡಗೀತೆ ಪ್ರಸ್ತುತಪಡಿಸಿದರು. ಸಾನಿಧ್ಯವನ್ನು ಕಿಲ್ಲೆ ಬೃಹನ್ಮಠದ ಶ್ರೀ ಶಾಂತಮಲ್ಲ ಶಿವಾಚಾರ್ಯ ಶ್ರೀಗಳು ವಹಿಸಿದ್ದರು. ವೇದಿಕೆ ಮೇಲೆ ನಗರಸಭೆ ಅಧ್ಯಕ್ಷೆ ನರಸಮ್ಮ ಮಾಡಗಿರಿ, ಉಪಾಧ್ಯಕ್ಷ ಸಾಜಿದ್ ಸಮೀರ್,ನಗರಸಭೆ ಹಿರಿಯ ಸದಸ್ಯ ಜಯಣ್ಣ, ರಮೇಶ್, ಜಗದೀಶ್ ಗುಪ್ತಾ, ನರಸಪ್ಪ,ನರಸಿಂಹಲು ಮಾಡಗಿರಿ, ಅರವಿಂದ್ ಕುಲಕರ್ಣಿ, ಡಾ.ಶೇಷಗಿರಿ ದಾಸ್, ಸುಧಾಮ, ರುದ್ರಪ್ಪ ಅಂಗಡಿ,ಡಾ.ಶ್ರೀಧರ ರೆಡ್ಡಿ, ಬಾಬು ಬಂಡಾರಿಗಲ್, ನಾಗಿರೆಡ್ಡಿ, ಮುರಳೀಧರ ಕುಲಕರ್ಣಿ ಸೇರಿದಂತೆ ರುಸ್ಮಾ ಒಕ್ಕೂಟ ಪದಾಧಿಕಾರಿಗಳು ಇನ್ನಿತರರು ಇದ್ದರು.
Comments
Post a Comment