ತ್ವರಿತ ಕಾಮಗಾರಿ ನಿರ್ವಹಿಸಲು ಬಾಬು ರಾವ್ ಒತ್ತಾಯ ರಾಯಚೂರು,ಸೆ.26- ಇದು ರಾಯಚೂರಿನ ಸರಾಫ್ ಬಜಾರ್ ಎಂದೇ ಖ್ಯಾತವಾಗಿರುವ ರಸ್ತೆಯ ದುಸ್ಥಿತಿ ಕಳೆದ ಮೂರು ತಿಂಗಳನಿಂದಲೂ ಆಮೆ ಗತಿಯಲ್ಲಿ ಸಾಗಿದ್ದ ಚರಂಡಿ ಕಾಮಗಾರಿಯೇ ಈಗಿನ ದುಸ್ಥಿತಿಗೆ ಪ್ರಮುಖ ಕಾರಣವೆಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಬೆರಳೆಣಿಕೆ ದಿನಗಳ ದೊಡ್ಡ ದೊಡ್ಡ ಹಬ್ಬಗಳ ಸಾಲುಗಟ್ಟಿ ಬರುತ್ತಿರುವುದರಿಂದ ಈ ರಸ್ತೆಯಲ್ಲಿ ಜನದಟ್ಟಣೆಗೆ ಕಾರಣವಾಗುತ್ತಿದೆ. ಆದರೆ ಈಗಿರುವ ಸ್ಥಿತಿಯಲ್ಲಿ ಜನ ತಿರುಗಾಡುವುದಕ್ಕೂ ಹಲವಾರು ಸಲ ಆಲೋಚಿಸಬೇಕಾದ ಪ್ರಸಂಗ ಎದುರಾಗಿದೆ. ಚರಂಡಿಯ ಗಲೀಜು ಹಾಗೂ ಗಬ್ಬೆದ್ದು ನಾರುವ ತ್ಯಾಜ್ಯವು ರಸ್ತೆಯಲ್ಲಿ ಮಲಿತು ನಿಂತಿದ್ದರೂ ಇದನ್ನು ಸರಿಪಡಿಸಬೇಕಾದವರ ಕಣ್ಣಿಗೆ ಕಾಣದಿರುವುದು ಅಚ್ಚರಿಯನ್ನು ಮೂಡಿಸುತ್ತದೆ. ಆ ಸ್ಥಳಕ್ಕೆ ಭೇಟಿ ಕೊಟ್ಟವರಿಗೆ ವಾಕರಿಕೆ ತರಿಸುತ್ತದೆ. ಇನ್ನು ಅಲ್ಲಿಯೇ ಸನಿಹದಲ್ಲಿರುವ ನಿವಾಸಿಗಳ ಗೋಳು ಕೇಳುವವರೇ ಇಲ್ಲದಂತಾಗಿ ಬಿಟ್ಟಿದೆ.
ಇಡೀ ರಾಜ್ಯ ಆವರಿಸುತ್ತಿರುವ ಡೆಂಗ್ಯೂ ನಂತಹ ಮಾರಕ ಕಾಯಿಲೆಗಳ ಉಗಮ ಸ್ಥಾನವಾಗಿ ಮಾರ್ಪಟ್ಟಿದೆ ಎಂದು ಅಲ್ಲಿನ ನಿವಾಸಿಗಳು ಆರೋಪಿಸಿ ನಗರಸಭೆ ಕಾರ್ಯ ವೈಖರಿಗೆ ಹಿಡಿ ಶಾಪ ಹಾಕುತ್ತಲೇ ಇದ್ದಾರೆ.
ನಗರಸಭೆಯವರು ಇತ್ತ ಕಡೆ ಗಮನಹರಿಸಿ ಚರಂಡಿ ನೀರನ್ನು ಚರಂಡಿಗೆ ಸೇರಿಸುವ ಒಂದು ಸಣ್ಣ ಕೆಲಸವನ್ನು ಮಾಡದಿರುವುದು ಅಲ್ಲಿನ ನಿವಾಸಿಗಳಿಗೆ ಹಾಗೂ ಆ ರಸ್ತೆಯಲ್ಲಿ ಸಂಚರಿಸುವರಿಗೆ ನುಂಗಲಾರದ ತುತ್ತಾಗಿದೆ. ನೂತನ ಅಧ್ಯಕ್ಷರು ಇತ್ತ ಕಡೆ ಗಮನ ಹರಿಸಿ ಜನರಿಗೆ ಅನುಕೂಲ ಮಾಡಿಕೊಡುತ್ತಾರಾ ಕಾದು ನೋಡಬೇಕಾಗಿದೆ.
ಸರಾಫ್ ಬಜಾರ ರಸ್ತೆ ಶೀಘ್ರ ಅಭಿವೃದ್ಧಿಗೊಳಿಸಿ, ಜನರಿಗೆ ಸಂಚಾರಕ್ಕೆ ಅನುವು ಮಾಡಿಕೊಡಬೇಕಾಗಿದೆ. ಈ ರಸ್ತೆಯು ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ, ನಗರಸಭೆ, ತಹಶೀಲ್ದಾರ ಕಛೇರಿಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತಯಾಗಿದ್ದು, ವಾಸವಿನಗರ, ಜವಾಹರನಗರ, ನೇತಾಜಿ ನಗರ, ತಿಮ್ಮಾಪೂರಪೇಟ,ಹರಿಜನವಾಡಾ,ಹೀಗೇ ಹಲವಾರು ಬಡಾವಣೆ ಜನರು ಬಳಸುವ ಪ್ರಮುಖ ರಸ್ತೆಯಾಗಿದೆ. ದಿನಾಲು ಸಾವಿರಾರು ಜನ ಈ ರಸ್ತೆಯಲ್ಲಿ ಸಂಚರಿಸುತ್ತಾರೆ. ತಕ್ಷಣ ರಾಜಕಾಲುವೆಯಲ್ಲಿ ತುಂಬಿರುವ ಹೂಳು ತೆಗೆಯಬೇಕು.ಕೊಳಕು ನೀರು ರಸ್ತೆಗೆ ಹರಿಯುತ್ತಿದ್ದು, ಕ್ರಮ ಜರುಗಿಸಬೇಕು.ನವರಾತ್ರಿ ಹಬ್ಬ ಹತ್ತಿರವಿದ್ದು, ದೇವಿ ಭಕ್ತರು ಬೆಳಗಿನ ಜಾವಾವೇ ದೇಗುಲಕ್ಕೆ ತೆರಳುತ್ತಾರೆ.ಬರೀ ರಸ್ತೆ ಬಂದ್ ಮಾಡುವುದರಿಂದ ಪ್ರಯೋಜನವಿಲ್ಲ. ತಕ್ಷಣವೇ ಇದಕ್ಕೊಂದು ಮುಕ್ತಿ ಕಾಣಿಸಬೇಕು. ಇಲ್ಲದಿದ್ದರೆ ಜನರೊಂದಿಗೆ ಸೇರಿ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಹಾಗೂ ಎಪಿಎಂಸಿ ಮಾಜಿ ಉಪಾಧ್ಯಕ್ಷ, ಸಮಾಜ ಸೇವಕ ಡಾ.ಬಾಬುರಾವ್ ಎಚ್ಚರಿಸಿದ್ದಾರೆ.
Comments
Post a Comment