ಮಾವಿನಕೆರೆ ಸಮಗ್ರ ಅಭಿವೃದ್ದಿಗೆ ನೀಲಿ ನಕ್ಷೆ ಸಿದ್ಧ - ಸಚಿವ ಎನ್ ಎಸ್ ಭೋಸರಾಜು
-
ರಾಯಚೂರು,ಅ.23- ಸ್ವಚ್ಚ, ಸುಂದರ ಹಾಗೂ ಅತ್ಯಾಕರ್ಷಕವಾಗಿ ರಾಯಚೂರಿನ ಮಾವಿನಕೆರೆ ಅಭಿವೃದ್ದಿಪಡಿಸಲು ಸಣ್ಣ ನೀರಾವರಿ ಇಲಾಖೆ ಹಾಗೂ ಜಿಲ್ಲಾಡಳಿತ ಜಂಟಿಯಾಗಿ ಮುಂದಾಗಿದ್ದು, ಅಭಿವೃದ್ದಿಯ ನೀಲಿ ನಕ್ಷೆಯನ್ನು ಸಿದ್ಧಪಡಿಸಲಾಗಿದೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್ ಎಸ್ ಭೋಸರಾಜು ತಿಳಿಸಿದ್ದಾರೆ
ರಾಯಚೂರು ಜಿಲ್ಲಾಧಿಕಾರಿಗಳಾದ ನಿತೀಶ್ ಕೆ ಹಾಗೂ ನಗರಾಭಿವೃದ್ದಿ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವರು ಮಾವಿನಕೆರೆಯ ಸಮಗ್ರ ಅಭಿವೃದ್ದಿಯ ಬ್ಲೂಪ್ರಿಂಟ್‌ಗಳ ಪ್ರಾತ್ಯಕ್ಷಿಕೆಯನ್ನು ಪರಿಶೀಲಿಸಿದರು.
ರಾಯಚೂರು ಮಾವಿನಕೆರೆ ಸುಮಾರು 115 ಏಕರೆ ಪ್ರದೇಶದ ವಿಸ್ತಾರ ಹೊಂದಿದೆ. ಸಾರ್ವಜನಿಕರ ಉಪಯೋಗಕ್ಕಾಗಿ ಹಾಗೂ ನಗರದ ಸೌಂದರ್ಯವನ್ನು ಇಮ್ಮಡಿಗೊಳಿಸುವ ನಿಟ್ಟಿನಲ್ಲಿ ಕೆರೆಯನ್ನು ಅಭಿವೃದ್ದಿಗೊಳಿಸುವುದು ಬಹಳ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕೆರೆಯನ್ನು ಅಭಿವೃದ್ದಿಗೊಳಿಸಲು ಅಗತ್ಯ ಅನುದಾನವನ್ನು ಕ್ರೋಢೀಕರಿಸಲಾಗುತ್ತಿದೆ. ಕೆರೆಯನ್ನು ಸರ್ವತೋಮುಖ ಅಭಿವೃದ್ದಿಗೊಳಿಸುವ ನಿಟ್ಟಿನಲ್ಲಿ ಕನ್ಸಲ್ಟೆಂಟ್ ಏಜನ್ಸಿ ಈಗಾಗಲೇ ನೀಲಿ ನಕ್ಷೆಯನ್ನು ತಯಾರು ಮಾಡಿದ್ದು, ಅಭಿವೃದ್ದಿಯ ಯೋಜನೆಯನ್ನು ತಯಾರಿಸಿದೆ.
ಕೆರೆಯ ಸರ್ವತೋಮುಖ ಅಭಿವೃದ್ದಿ
ಐತಿಹಾಸಿಕ ನಗರವಾಗಿರುವ ರಾಯಚೂರಿನ ಸೌಂದರ್ಯವನ್ನು ಇಮ್ಮಡಿಗೊಳಿಸುವ ನಿಟ್ಟಿನಲ್ಲಿ ಕೆರೆಯ ಸರ್ವತೋಮುಖ ಅಭಿವೃದ್ದಿ ಬಹಳ ಅಗತ್ಯವಾಗಿದೆ. ಕೆರೆ ಒತ್ತುವರಿಯನ್ನು ತಡೆಯುವುದು, ನಗರದ ಜನರಿಗೆ ಅನುಕೂಲವಾಗುವಂತೆ, ಕೆರೆ ಸೌಂದರ್ಯವನ್ನು ಆಸ್ವಾದಿಸುವಂತೆ ಅಭಿವೃದ್ದಿಕರಿಸುವುದು ನಮ್ಮ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಕೆರೆಯ ದಂಡೆಯನ್ನು ಆಕರ್ಷಣೆಯ ಕೇಂದ್ರವನ್ನಾಗಿಸುವ ನಿಟ್ಟಿನಲ್ಲಿ ಯೋಜನೆಯ ರೂಪಿಸಲಾಗಿದೆ. ಕೆರೆಯ ದಂಡೆಯನ್ನು ಜಾಗಿಂಗ್ ಮತ್ತು ವಾಕಿಂಗ್ ಟ್ರ್ಯಾಕ್ ಆಗಿ ಪರಿವರ್ತಿಸುವುದು, ಕೆರೆಯ ಸುತ್ತಲೂ ಶೌಚಾಲಯಗಳ ನಿರ್ಮಾಣ, ನಗರದ ಕೊಳಚೆ ನೀರು ಕೆರೆಗೆ ಹರಿಯದಂತೆ ತಡೆಯುವುದು, ಕೆರೆಯ ತಳವನ್ನು ಸ್ವಚ್ಚಗೊಳಿಸುವುದು, ಕೆರೆಯ ಮಧ್ಯೆ ಸಣ್ಣ ದ್ವೀಪಗಳನ್ನು ನಿರ್ಮಿಸುವುದು, ಕೆರೆಯ ನೀರಿನ ಶುದ್ದೀಕರಣ ಹೀಗೆ ಹತ್ತು ಹಲವು ಯೋಜನೆಗಳನ್ನು ಅಳವಡಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗಿದೆ.
ರಾಯಚೂರು ಜಿಲ್ಲಾಡಳಿತ, ನಗರಾಭಿವೃದ್ದಿ ಇಲಾಖೆ ಹಾಗೂ ಸಣ್ಣ ನೀರಾವರಿ ಇಲಾಖೆಯ ಸಹಯೋಗದೊಂದಿಗೆ ಈ ಕೆರೆಯನ್ನು ಸರ್ವತೋಮುಖ ಅಭಿವೃದ್ದಿಗೊಳಿಸಲಾಗುವುದು. ಈ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸಚಿವರಾದ ಎನ್ ಎಸ್ ಭೋಸರಾಜು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
Comments
Post a Comment