ಮಹಾಮಹಿಮರು ದಾಸ ಶ್ರೇಷ್ಠ ಮಹಿಪತಿ ದಾಸರು
ಮಹಾ ಮಹಿಮರಾದ ಮಹಿಪತಿ ದಾಸರ ಜೀವನ ಚರಿತ್ರೆಯೇ ವಿಸ್ಮಯದಿಂದ ಕೂಡಿದೆ. ಅವರು ನವಾಬನ ಆಸ್ಥಾನದಲ್ಲಿ ಖಜಾಂಚಿಗಳಾಗಿ ಒಳ್ಳೆಯ ಜವಾಬ್ದಾರಿಯಲ್ಲಿ ಹುದ್ದೆ ನಿರ್ವಹಿಸಿ, ಶ್ರೀಮಂತಿಕೆಯ ಸೌಕರ್ಯಗಳಿದ್ದರೂ ಜೀವನದಲ್ಲಿ ನಡೆದ ವಿಚಿತ್ರ ಘಟನೆಯಿಂದ ವೈರಾಗ್ಯದ ಹಾದಿ ತುಳಿದು ಹಾರಿದಾಸರಾಗಿರುವ ಇವರ ಜೀವನವೇ ಅತಿ ಸೋಜಿಗದಿಂದ ಕೂಡಿದೆ.
ಹರಿದಾಸರ ಪರಂಪರೆಯಲ್ಲಿ ಪ್ರಸಿದ್ಧ ಹರಿದಾಸರ ಜೀವನವನ್ನು ನೋಡಿದಾಗ ಅವರ ಬದುಕಿನಲ್ಲಿ ಕೆಲವು ವಿಸ್ಮಯದ ಘಟನೆಗಳಿಂದ ತಿರುವು ಪಡೆದು ವೈರಾಗ್ಯ ಭಾವದಿಂದ ಇಡೀ ಜೀವನವನ್ನೇ ಭಕ್ತಿ ಮಾರ್ಗದ ಪುನರುತ್ಥಾನಕ್ಕಾಗಿ ಕಾಲಲ್ಲಿ ಗೆಜ್ಜೆ ಕಟ್ಟಿ, ಕೈಯಲ್ಲಿ ತಾಳ ಹಿಡಿದು ತಂಬೂರಿಯನ್ನು ಮೀಟುತ್ತಾ ಸಂಕೀರ್ತನೆಗಳನ್ನು ಹಾಡುತ್ತಾ ಭಗವಂತನೆಂಬ ಬೆಳಕಿನ ಕಡೆಗೆ ಭಕ್ತಿಯ ಸೇತುವೆ ನಿರ್ಮಿಸಿ, ತಮ್ಮನ್ನು ತಾವು ಹರಿಗೆ ಅರ್ಪಿಸಿಕೊಂಡು ವೈಕುಂಠ ಬಾಗಿಲು ತಟ್ಟಿದ ಹಲವಾರು ಮಹನೀಯರ ಸಾಲಿನಲ್ಲಿ ಮಹಿಪತಿ ದಾಸರು ಸಹ ಸೇರುತ್ತಾರೆ.
ದಾಸರ ಪರಂಪರೆಯಲ್ಲಿ ಬರುವ ಮಹಿಪತಿ ದಾಸರು ಮೂಲತಃ ಬಾಗಲಕೋಟೆಯವರು. ಇವರ ಮನೆತನದ ಹೆಸರು ಕಾಥೇ ವಾಡೆ. ಇವರು ಕ್ರಿಸ್ತಶಕ 1611 ರಲ್ಲಿ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಐಗಳಿ ಗ್ರಾಮದಲ್ಲಿ ಜನಿಸಿದರು. ಇವರ ಮನೆತನದವರು ಸಂಚಾರ ಮಾಡುತ್ತಾ ಬಿಜಾಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಕಾಖಂಡಿಕೆ ಗ್ರಾಮದಲ್ಲಿ ನೆಲೆಸಿದರು. ಇವರ ತಂದೆ ಹೆಸರು ಕೊನೇರಾಯ, ಇವರು ವೈದಿಕ ವೃತ್ತಿಯನ್ನು ಮಾಡುತ್ತಾ ಬಿಜಾಪುರದಲ್ಲಿ ನೆಲೆಸಿದ್ದರು.
ಇವರಿಗೆ ಇಬ್ಬರ ಮಕ್ಕಳು ಒಬ್ಬರು ಗುರುರಾಯ, ಇನ್ನೊಬ್ಬರು ಮಹಿಪತಿರಾಯ,ಮಹಿಪತಿರಾಯರು ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಆಸಕ್ತಿ ಇತ್ತು. ಸಂಸ್ಕೃತ, ಕನ್ನಡ, ಪಾರ್ಸಿ, ಗ್ರೀಕ್, ಉರ್ದು ಭಾಷೆಗಳನ್ನು ಸುಲಲಿತವಾಗಿ ಮಾತನಾಡುತ್ತಾ ಅದರಲ್ಲಿ ಪರಿಣಿತಿಯನ್ನು ಪಡೆದಿದ್ದರು. ಪುರಾಣ, ಉಪನ್ಯಾಸ ಹಾಗೂ ಮಹಾಭಾರತ ಮತ್ತು ರಾಮಾಯಣದ ಪ್ರಸಂಗದ ಕಥೆಗಳನ್ನು ಸೊಗಸಾಗಿ ಹೇಳುವುದನ್ನು ರೂಡಿಸಿಕೊಂಡಿದ್ದರು.
ನವಾಬನ ಸಂಪರ್ಕ: ಬಿಜಾಪುರದಲ್ಲಿ ಮುಸ್ಲಿಂ ದೊರೆ ಅಲಿ ಮೊಹಮ್ಮದ್ ಷಾಹ ನ ಆಡಳಿತವಿತ್ತು. ಒಂದು ಬಾರಿ ಬಿಜಾಪುರದ ನರಸಿಂಹ ದೇವಾಲಯದ ಪ್ರಾಂಗಣದಲ್ಲಿ ಮಹಿಪತಿರಾಯರು ಪುರಾಣವನ್ನು ಹೇಳುತ್ತಿದ್ದರು.
ಮಹಿಪತಿರಾಯರ ಪುರಾಣವೆಂದರೆ ತುಂಬಾ ಪ್ರಸಿದ್ಧಿ ಪಡೆದಿತ್ತು, ಸಾವಿರಾರು ಜನರು ಸೇರುತ್ತಿದ್ದರು, ಅವರ ಪುರಾಣದ ಚತುರತೆಗೆ, ಸಾತ್ವಿಕತೆಗೆ, ಪ್ರಾಮಾಣಿಕತೆಗೆ ಜನರು ತುಂಬಾ ಗೌರವವನ್ನು ನೀಡುತ್ತಿದ್ದರು.
ಅOದು ಪುರಾಣ ನಡೆಯುತ್ತಿರುವ ಶ್ರೀ ನರಸಿಂಹ ದೇವಸ್ಥಾನದ ಮುಂದುಗಡೆಯಿಂದ ಸವಾರರೊಡನೆ ಮೇನೇಯಲ್ಲಿ ಕುಳಿತು ನವಾಬನು ಹೊರಟಿದ್ದನು. ಅಲ್ಲಿ ಸಹಸ್ರಾರು ಜನರು ಸೇರಿದ್ದು ನೋಡಿ, ಹಾಗೂ ಸುಸ್ರಾವ್ಯವಾಗಿ ಮಧುರ ಕಂಠದಿಂದ ಸಂಸ್ಕೃತದಲ್ಲಿ ಶ್ಲೋಕ ಗಳಿಂದ ಪುರಾಣ ಹೇಳುತ್ತಿರುವ ರಾಯರ ನೋಡಿ " ಅಲ್ಲಿ ಏನು ನಡೆದಿದೆ? ಅಲ್ಲಿ ಏಕೆ ಜನ ಸೇರಿದ್ದಾರೆ?" ಎಂದು ನವಾಬನು ಸವಾರರಿಗೆ ಕೇಳಿದನು, ಸವಾರರು"ಅಲ್ಲಿ ಹಿಂದೂ ಜನರ ಪುರಾಣ ನಡೆಯುತ್ತಿದೆ, ಪ್ರಸಿದ್ಧರಾದ ಮಹಿಪತಿರಾಯರು ಪುರಾಣ ಹೇಳುತ್ತಿದ್ದಾರೆ " ಎಂದು ಹೇಳಿದರು.
ಅಲ್ಲಿಯ ದೈವಿಕಳಿಯ ವಾತಾವರಣ,ಪುರಾಣ ಹೇಳುವ ರೀತಿ, ಸಂಸ್ಕೃತ ಶ್ಲೋಕಗಳ ಅನಾವರಣ, ಅಲ್ಲಿರುವ ಭಕ್ತಿರಸ, ಜನರ ತನ್ಮಯತೆಯನ್ನು ನೋಡಿ ನವಾಬನು ಆಕರ್ಷಿತಗೊಂಡನು. ಪುರಾಣ ಹೇಳುತ್ತಿರುವ ರಾಯರ ಅಸ್ಕಲಿತ ಮಾತುಗಳನ್ನು ಕೇಳುತ್ತಾ ಅಲ್ಲೇ ನಿಂತು ಬಿಟ್ಟು ಪುರಾಣವನ್ನು ಆಸ್ವಾದಿಸ ತೊಡಗಿದನು. ನವಾಬನು ಬಂದದ್ದು ನೋಡಿ ಅಲ್ಲಿರುವ ಸಂಘಟಕರೆಲ್ಲರೂ ಓಡೋಡಿ ಬಂದು ಗೌರವ ಸೂಚಿಸಿದರು " ಪುರಾಣ ಹೇಳುವವರನ್ನು ಅರಮನೆಗೆ ಕಳಿಸಿ ಅವರಿಂದ ನಾನು ಪುರಾಣದಲ್ಲಿ ಬರುವ ಹಲವಾರು ಕಥೆಗಳನ್ನು ಕೇಳಬೇಕೆಂದು ಬಯಸಿದ್ದೇನೆ. ರಾಯರ ಪುರಾಣ ಕೇಳಲು ನಾನು ಉತ್ಸಕನಾಗಿದ್ದೇನೆ. ಎಂದು ನವಾಬನು ಹೇಳಿ ಅರಮನೆಗೆ ಹೊರಟು ಹೋದನು.
ಸ್ವಲ್ಪೇ ದಿನದಲ್ಲಿ ಮಹಿಪತಿ ರಾಯರಿಂದ ನವಾಬನ ಅರಮನೆಯಲ್ಲಿ ರಾಮಾಯಣ, ಮಹಾಭಾರತ ,ಭಾಗವತದ, ಸ್ವಾರಸ್ಯಕರವಾದ ಕಥೆಗಳನ್ನು ಉರ್ದು, ಪಾರ್ಸಿ, ಗ್ರೀಕ್, ಭಾಷೆಯಲ್ಲಿ ಹೇಳಲು ಪ್ರಾರಂಭಿಸಿದರು. ಪುರಾಣ ಹೇಳುವ ಪ್ರೌಢಮೇಗೆ ಹಾಗೂ ಅವರ ವಾಕ್ಚಾತುರ್ಯಕ್ಕೆ ನವಾಬನ ಅರಮನೆಯ ಉನ್ನತ ಅಧಿಕಾರಿಗಳು, ಹಾಗೂ ರಾಣಿಯರು ಸಹ ರಾಯರಿಗೆ ಗೌರವ ಕೊಡಲು ಪ್ರಾರಂಭಿಸಿದರು. ಕೆಲವು ಬಾರಿ ಸಲಹೆಗಳನ್ನು ಕೇಳಲು ಸಹ ಮುಂದಾದರು.
ನವಾಬನ ಖಜಾಂಚಿಯಾಗಿ ಒOದು ಬಾರಿ ನವಾಬನ ಆಡಳಿತದಲ್ಲಿ ಅಧಿಕ ಮೊತ್ತದ ವ್ಯವಹಾರ ಏರುಪೇರಾಗಿತ್ತು. ಎಷ್ಟೇ ಪ್ರಯತ್ನಿಸಿದರು ಲೆಕ್ಕ ಸಿಗುತ್ತಿರಲಿಲ್ಲ. ಇಂತಹ ಸಂದರ್ಭದಲ್ಲಿ ನಾವಾಬನು ಮಹಿಪತಿರಾಯರನ್ನು ಕರೆಸಿ, ಲೆಕ್ಕಪತ್ರಗಳನ್ನು ಸರಿಪಡಿಸಿವಂತೆ ಹೇಳಿದನು. ಆಗ ರಾಯರು ಅತಿ ಶ್ರದ್ಧೆಯಿಂದ ನಿಷ್ಠೆಯಿಂದ ಬೊಕ್ಕಸದ ವ್ಯವಹಾರಗಳನ್ನೆಲ್ಲ ಅಚ್ಚುಕಟ್ಟಾಗಿ ವ್ಯವಸ್ಥಿತಗೊಳಿಸಿದರು. ಪೋಲಾಗುತ್ತಿರುವ ಹಣದ ವ್ಯವಹಾರವನ್ನು ನವಾಬನಿಗೆ ತೋರಿಸಿಕೊಟ್ಟು ಪೋಲಾಗದಂತೆ ಎಚ್ಚರಿಕೆವಹಿಸಿದರು. ಇದನ್ನೆಲ್ಲ ಮನ ಗಂಡ ನವಾಬನು ರಾಯರ ನಿಷ್ಠೆ, ಶ್ರದ್ಧೆ ಹಾಗೂ ಪ್ರಾಮಾಣಿಕತೆಯನ್ನು ಗಮನಿಸಿ ಇವರಿಗೆ ರಾಜ್ಯದ ಉನ್ನತ ಹುದ್ದೆಯಾದ ಖಜಾಂಚಿ ಹುದ್ದೆಯನ್ನು ನೀಡಿ ಗೌರವಿಸಿದನು.
ಖಜಾಂಚಿ ಹುದ್ದೆ ಸ್ವೀಕರಿಸಿದ ನಂತರ ನವಾಬನ ಬೊಕ್ಕಸಕ್ಕೆ ಹೆಚ್ಚು ಆದಾಯ ಬರತೊಡಗಿತು. ಇದರಿಂದ ಸುಪ್ರೀತನಾದ ನವಾಬನು ರಾಯರಿಗೆ ಹೆಚ್ಚಿನ ರೀತಿಯ ಸೌಲಭ್ಯವನ್ನು ನೀಡಿ ಅತಿ ಹತ್ತಿರವಾದನು. ಗುಡಿಗಳಲ್ಲಿ ಪುರಾಣ ಹೇಳಿ ವೈದಿಕ ವೃತ್ತಿ ಮಾಡಿಕೊಂಡು ಜೀವಿಸುತ್ತಿದ್ದ ಮಹಿಪತಿರಾಯರಿಗೆ ಸಂಪತ್ತು, ಗೌರವ, ಆಳು-ಕಾಳು, ಸುಪ್ಪತ್ತಿಗೆ, ಜವಾಬ್ದಾರಿ, ಮರ್ಯಾದೆ, ಬಂಗಲೆ ಪ್ರಾಪ್ತವಾದವು, ಇದರಿಂದ ರಾಯರು ಹಿಗ್ಗದೇ ಹರಿನಾಮ ಸ್ಮರಣೆಯನ್ನು ನಿರಂತರ ಮಾಡುತ್ತ ತಮಗೆ ಎಷ್ಟು ಬೇಕೋ ಅಷ್ಟು ಸಂಪತ್ತನ್ನು ತಮ್ಮಲ್ಲಿಟ್ಟುಕೊಂಡು ಉಳಿದಿದ್ದು ಬಡವರಿಗೆ ದಾನ ಮಾಡುತ್ತಿದ್ದರು.
ನುಂಗಾ- ನುಂಗಿಯರು ಬಿಜಾಪುರದಲ್ಲಿ ಷಹಾನುಂಗಾ- ಷಹಾನುಂಗಿ ಎಂಬ ಸೂಫಿ ಪಂಥದ ಬೈರಾಗಿ ಅಥವಾ ಅವಧೂತರಂತೆ ಕಾಣುವ ಇಬ್ಬರು ಅಣ್ಣ ತಂಗಿಯರಿದ್ದರು. ಇವರು ಅರೆ ಹುಚ್ಚರಂತೆ, ಅರೆ ಬಟ್ಟೆಯನ್ನು ಹಾಕಿ ,ಕೆಲವು ಬಾರಿ ದಿಗಂಬರರಾಗಿ ಬೀದಿ ಬೀದಿ ಅಲಿಯುತ್ತಿದ್ದರು. ತಮ್ಮಷ್ಟಕ್ಕೆ ತಾವೇ ಮಾತನಾಡುತ್ತಾ, ಕೆಲವೊಂದು ಬಾರಿ ತಾವೇ ನಗುತ್ತಾ, ಚಪ್ಪಾಳೆ ಬಾರಿಸುತ್ತಾ, ವಿಚಿತ್ರವಾಗಿ ವರ್ತಿಸುತ್ತಾ ಬೀದಿ ಬೀದಿ ಅಲೆಯುತ್ತಿದ್ದರು.
ಅವರನ್ನು ಕಂಡರೆ ಹಿಂದೂ ಮತ್ತು ಮುಸ್ಲಿಂ ಇಬ್ಬರಿಗೂ ಗೌರವ. ಭಯ ಭಕ್ತಿ, ಅವರು ಹೇಳುವ ಮಾತುಗಳೆಲ್ಲವೂ ಸತ್ಯವಾಗುತ್ತದೆ ಎಂದು ಜನರು ನಂಬಿದ್ದರು. ಅವರು ಯಾರ ಮನೆ ಮುಂದೆ ಕುಳಿತುಕೊಳ್ಳುತ್ತಾರೋ ಅವರಿಗೆ ಶಕುನ ಅಥವಾ ಅಪಶಕನೆ ಆಗುತ್ತದೆ ಎಂಬ ಬಲವಾದ ನಂಬಿಕೆ ಇತ್ತು. ಅವರು ಎಲ್ಲಿ ಊಟ ಮಾಡುತ್ತಾರೋ? ಎಲ್ಲಿ ವಾಸ ಮಾಡುತ್ತಾರೋ ಎಂಬ ಸಂಗತಿಗಳು ಯಾರಿಗೂ ತಿಳಿಯುತ್ತಿರಲಿಲ್ಲ. ಅವರುಗಳು ಹುಚ್ಚರಂತೆ ವರ್ತಿಸಿದರು ಸಹ ಅವರಲ್ಲಿ ಆಧ್ಯಾತ್ಮಿಕ ಚೈತನ್ಯ ವಿತ್ತು. ಅಲೌಕಿಕಜ್ಞಾನದ ಸಂಪತ್ತು ಅವರಲ್ಲಿ ಇತ್ತು. ಶ್ರೀಮಂತ ಮತ್ತು ಬಡವ ಎನ್ನದೆ ಎಲ್ಲರೂ ಅವರಿಗೆ ಭಯ ಭಕ್ತಿಯಿಂದ ನಮಸ್ಕರಿಸುತ್ತಿದ್ದರು.
ಜೀವನದಲ್ಲಿ ತಿರುವು ಒಂದು ಬಾರಿ ನವಾಬನ ಆದೇಶದಂತೆ ಬೇಗಂ ತಲವಾ ಕೆರೆಯ ಕಾಮಗಾರಿಗಳನ್ನು ವೀಕ್ಷಿಸಲು ರಾಯರು ಕಂದಕದ ಬಳಿ ತೆರಳಿದ್ದರು. ಕೋಟೆಯ ಕಂದಕದ ಬಳಿ ದೊಡ್ಡದಾದ ಕೆರೆಯ ದಂಡೆಯ ಹತ್ತಿರ ನುಂಗನು ನಿಂತಿದ್ದನ್ನು ಕಂಡ ರಾಯರು ಆತನಿಗೆ ವಿನಮ್ರವಾಗಿ ನಮಸ್ಕರಿಸಿದರು."ನಿನ್ನ ಕೈಯಲ್ಲಿ ಏನಿದೆ? ಅದನ್ನು ನನಗೆ ಕೊಡು" ಎಂದು ನುಂಗನು ಕೇಳಿದನು,ಇದನ್ನು ಕೊಡಲು ಬರುವುದಿಲ್ಲ ಇದು ರಾಜ ಮುದ್ರೆ, ಮೊಹರು ಎಂದು ಕರೆಯುತ್ತಾರೆ, ಜವಾಬ್ದಾರಿ ಸ್ಥಾನದಲ್ಲಿರುವವರು ಇಟ್ಟುಕೊಳ್ಳುವ "ಸಿಕ್ಕ" ಎಂದು ರಾಯರುಹೇಳಿದರು.
ಕೂಡಲೇ ನುಂಗನು ರಾಯರ ಹತ್ತರಕ್ಕೆ ಜಿಗಿದು ಆ ರಾಜಮುದ್ರೆಯ ಸಿಕ್ಕ ವನ್ನು ತೆಗೆದುಕೊಂಡೇ ಬಿಟ್ಟನು. ಅದನ್ನು ಮೂಸಿ ನೋಡುತ್ತಾ ಇದು ಹೆಣದ ವಾಸಿನೆ, ಮೌತ್ ಕಾ ಘಾಟ್, ಇದು ಹೆಣದ ವಾಸಿನೆ ಎಂದು ಕೂಗುತ್ತಾ ರಾಜ್ಯಮುದ್ರೆಯನ್ನು ಹಿಡಿದು ಓಡತೊಡಗಿದನು. ಗಾಬರಿಯಿಂದ ರಾಯರು ನುಂಗನ ಹಿಂದೆ ಓಡತೊಡಗಿದರು. ಅವರಿಗೆ ದುಗುಡ, ಭಯ, ಗಾಬರಿಯ ಎಲ್ಲವೂ ಒಮ್ಮೆಲೆ ಆಗಿತ್ತು. ಇದು ಸರ್ಕಾರದ ಮೊಹರು ಅದು ಕಳೆದು ಹೋದರೆ ಮಹಾ ಅಪರಾಧವಾಗುತ್ತದೆ, ಇದಕ್ಕೆ ಶಿಕ್ಷೆ ಸಹ ಇದೆ, ಎಂದುಕೊಳ್ಳುತ್ತಾ ಜೋರಾಗಿ ಕೂಗುತ್ತಾ ಮೊಹರನ್ನು ನೀಡಲು ಅಂಗಲಾಚತೊಡಗಿದರು. ರಾಯರು ಧರ್ಮಸಂಕಟದಿಂದ ವಿಲವಿಲ ಒದ್ದಾಡತೊಡಗಿದರು, ಮೋಹರನ್ನು ಕೊಡಲು ನಿರಂತರವಾಗಿ ಅಂಗಲಾಚ ತೊಡಗಿದರು. ತೀರ ದೀನನಾಗಿ ಕೇಳ ತೊಡಗಿದರು. ಗಲಾಟೆಯನ್ನು ಕಂಡ ಅಲ್ಲಿರುವ ಜನರು ಸೇರತೊಡಗಿದರು. ಜನರನ್ನು ನೋಡಿದ ತಕ್ಷಣ ನುಂಗನು ಮತ್ತೆ ಚಪ್ಪಾಳೆ ಬಾರಿಸ ತೊಡಗುತ್ತಾ, ಜೋರಾಗಿ ನಗಲು ಪ್ರಾರಂಭಿಸಿದ ಇದನ್ನು ಕಂಡ ರಾಯರಿಗೆ ಮತ್ತೆ ಭಯವಾಗತೊಡಗಿತು. ನುಂಗ ಅಷ್ಟರಲ್ಲಿ ಮೊಹರನ್ನು ತೂರುತ್ತಾ ಕಂದಕದ ನೀರಿಗೆ ಎಸೆದೇ ಬಿಟ್ಟನು! ರಾಯರಿಗೆ ಇನ್ನೂ ಗಾಬರಿಯಾಯಿತು ನನ್ನ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸಲಿಲ್ಲವೆಂಬ ಸಂಕಟ ಒಂದಡೆಯಾದರೆ, ನವಾಬನಿಗೆ ಹೇಗೆ ಮುಖ ತೋರಿಸುವುದು ಎಂಬ ಚಿಂತೆ ಆವರಿಸಿತು. ರಾಯರು ಖಿನ್ನತೆಗೆ ಒಳಗಾದಂತೆಲ್ಲಾ, ನುಂಗ ಅವರನ್ನು ನೋಡಿ ಜೋರಾಗಿ ನಗುತ್ತಾ ಚಪ್ಪಾಳೆ ಬಾರಿಸುತ್ತಿದ್ದನು. ಅತಿ ವಿನಮ್ರವಾಗಿ ಮೊಹರನ್ನು ಕೊಡುವಂತೆ ಅಂಗಲಾಚ ತೊಡಗಿದರು. ಅಷ್ಟರಲ್ಲಿ ನುಂಗನ ತಂಗಿ ನುಂಗಿ ಅಲ್ಲಿಗೆ ಬಂದಳು. ಅವಳು ಸಹ ರಾಯರ ಮುಖವನ್ನು ನೋಡಿ ನಗಲು ಪ್ರಾರಂಭಿಸಿದಳು.
ರಾಯರ ಮುಖವನ್ನು ದಿಟ್ಟಿಸಿ ನೋಡುತ್ತಾ ಅವರ ಗಾಬರಿ ಮತ್ತು ಭಯವನ್ನು ಕಂಡ ನುಂಗನು ತಂಗಿ ನುಂಗಿಗೆ ನೀರಿಗೆ ಇಳಿದು ಮೊಹರನ್ನುಕೊಡುವಂತೆಹೇಳಿದನು.
ನುಂಗಿ ನೀರಿಗೆ ಧುಮುಕಿದಳು ಮುಳುಗು ಹಾಕಿ ಕೈತುಂಬ ಒಂದೇ ರೀತಿಯ ಮೊಹೋರಗಳನ್ನು ಹೊರ ತೆಗೆದು, ಇದರಲ್ಲಿ ನಿನ್ನದು ಯಾವುದು ಅದನ್ನು ಆರಿಸಿಕೊ ಎಂದು ಕೈ ಚಾಚಿದಳು. ರಾಯರಿಗೆ ಆಶ್ಚರ್ಯ, ವಿಸ್ಮಯ, ಕಳವಳವಾಯಿತು, ನೋಡಲು ಒಂದೇ ರೀತಿಯ ಮೊಹರುಗಳಿವೆ, ಇದರಲ್ಲಿ ನನ್ನದು ಯಾವುದು ಎಂದು ಗುರುತು ಹಿಡಿಯುವುದು ಅಸಾಧ್ಯ ವಾಯಿತು, ಇವರಲ್ಲಿ ಎಂಥಾ ಶಕ್ತಿ, ಹಲವಾರು ಮೊಹರಗಳನ್ನು ಕೈಯಲ್ಲಿ ಹಿಡಿದು ನಿನ್ನ ಮೋಹರು ಆರಿಸಿಕೊ ಎಂದು ಹೇಳುತ್ತಿರುವುದು ರಾಯರಿಗೆ ಅತಿ ವಿಸ್ಮಯವೆನಿಸಿತು.
ನುಂಗಾ ನುಂಗಿಯ ಕೈಯಲ್ಲಿದ್ದ ಹಲವಾರು ಮೊಹರಿನಲ್ಲಿ ಒಂದು ಮೊಹರನ್ನು ತೆಗೆದು ಮತ್ತೆ ಮೂಸಿ ನೋಡಿ ಇದು ಹೆಣದ ವಾಸಿನೆ ನೀನು ಇಟ್ಟುಕೊಂಡರೆ ಹಾಳಾಗುತ್ತಿ ಎಂದು ಹೇಳುತ್ತಾ ರಾಯರ ಹತ್ತಿರ ಮೋಹರನನ್ನು ಒಗೆದು ಜನರ ಮಧ್ಯೆ ಕಣ್ಮರೆಯಾದರು.
ಈ ಘಟನೆಯಿಂದ ರಾಯರು ತುಂಬಾ ವಿಲಿಚಿತಗೊಂಡರು. ಅಂತರ್ಮುಖಿಗಳಾಗತೊಡಗಿದರು, ನುಂಗಿ ಕೈಚಾಚಿ ಇದರಲ್ಲಿ ನಿನ್ನದು ಯಾವುದಾದರೂ ತೆಗೆದುಕೋ ಎಂದು ಹೇಳುವ ಮಾತು ಕಿವಿಯಲ್ಲಿ ಗುಯ್ ಗುಡುತ್ತಿತ್ತು. ಈ ಘಟನೆಯಿಂದ ಅವರ ಮನಸ್ಸು ಆಧ್ಯಾತ್ಮದ ಕಡೆಗೆ ಎಳೆಯ ತೊಡಗಿತು. ಕಣ್ಣು ಮುಚ್ಚಿದರೆ ಕಣ್ಣು ತೆಗೆದರೆ ನುಂಗ ನುಂಗಿಯರು ಬರತೊಡಗಿದರು ಅವರ ಮೇಲೆ ನುಂಗನ ಮಾತುಗಳು ತುಂಬಾ ಪ್ರಭಾವ ಬೀರಿದವು.
ನನ್ನ ಕೆಲಸ ನವಾಬನ ಆಸ್ಥಾನದಲ್ಲಿ ಇರುವುದಲ್ಲ. ಹರಿಯ ಸಾಧನೆಗೆ ಇಡೀ ಜೀವನವೇ ಮುಡುಪಾಗಿಟ್ಟುಕೊಳ್ಳಬೇಕು, ದಾಸರಾಗಬೇಕು, ಹರಿನಾಮ ಸ್ಮರಣೆ ಮಾಡಬೇಕು, ದೇವರನ್ನು ಕಾಣಬೇಕು ಎಂದು ಮನಸ್ಸು ಹಂಬಲಿಸ ತೊಡಗಿತು. ಹಣದ ಸುಪ್ಪತ್ತಿಗೆ, ಗೌರವ ಮರ್ಯಾದೆ ಇವೆಲ್ಲವೂ ಕ್ಷಣಿಕ ಎನಿಸಿ ತೊಡಗಿದವು ಹರಿನಾಮದ ದಾಸತ್ವ ವೇ ಶಾಶ್ವತ ಎನಿಸ ತೊಡಗಿತು, ಅವರು ವೈರಾಗ್ಯದ ಕಡೆ ಮುಖ ಮಾಡತೊಡಗಿದರು.ಅOದು ರಾಜ್ಯದ ಖಜಾಂಚಿ ಹುದ್ದೆಯನ್ನು ತ್ಯಜಿಸಲು ನಿಶ್ಚಯಿಸಿ ನುಂಗನನ್ನು ಹುಡುಕಿ ಅವರಿಂದಲೇ ಶಿಷ್ಯತ್ವವನ್ನು ಪಡೆಯಬೇಕೆಂದು ನಿರ್ಧರಿಸಿದರು. ರಾತ್ರಿಯೆಲ್ಲಾ ನುಂಗನನ್ನು ಹುಡುಕಿದರು ಆದರೆ ನುಂಗ ಸಿಗಲಿಲ್ಲ.
ಅಂದು ರಾತ್ರಿ ಅದೇ ಕಂದಕದ ಹತ್ತಿರ ನುಂಗ ನಿಂತಿದ್ದು ಕಾಣಿಸಿತ್ತು ರಾಯರು ಅವಸರವಾಗಿ ಅವನತ್ರ ತೆರಳಿದರು, ನುಂಗ ಅಲ್ಲಿಂದಲೇ ಜೋರಾಗಿ ಕೂಗಿ ಸಾರವಾಡದ ಶ್ರೀ ಭಾಸ್ಕರ್ ಸ್ವಾಮಿಗಳ ಹತ್ತಿರ ಹೋಗಿ ದೀಕ್ಷೆ ಪಡೆಯಲು ಹೇಳಿದನು.ನುಂಗ ಹೇಳಿದಂತೆ ಅಂದಿನ ಕಾಲದ ಮಹಾಯೋಗಿಗಳು, ಶ್ರೀ ಭಾಸ್ಕರ್ ಸ್ವಾಮಿಗಳಲ್ಲಿ ತೆರಳಿ ದಾಸ ದೀಕ್ಷೆಯನ್ನು ಪಡೆದರು. ಅಂದಿನಿಂದ ಮಹಿಪತಿ ರಾಯರು ಮಹಿಪತಿ ದಾಸರಾದರು.ಮಹಿಪತಿ ದಾಸರು 600 ಹೆಚ್ಚು ದೇವರ ನಾಮ ಸಂಕೀರ್ತನೆಗಳು, ಕೋಲಾಟದ ಪದಗಳನ್ನು," ಗುರು ಮಹಿಪತಿ" ಎಂಬ ಅಂಕಿತದಿಂದ ರಚಿಸಿದ್ದಾರೆ.
ನುಂಗನ ಭವಿಷ್ಯವಾಣಿಯಂತೆ ಬಿಜಾಪುರದ ಸುಲ್ತಾನನ ಮೇಲೆ ಶತ್ರುಗಳು ದಾಳಿ ಮಾಡಿ ವಶಪಡಿಸಿಕೊಂಡರು ಇದರಿಂದ ಸಾವಿರಾರು ಜನರು ಪ್ರಾಣ ಕಳೆದುಕೊಂಡರು. ಕೊನೆಯ ಕಾಲದಲ್ಲಿ ಮಹಿಪತಿ ದಾಸರು ಕಾಖಂಡಿಕೆಯಲ್ಲಿ ನೆಲೆ ನಿಂತು ಸಾಧನೆ ಮಾಡ ತೊಡಗಿದರು. ಕೊನೆಯ ಹಂತದಲ್ಲಿ ಅವರ ಕುಲಗುರುಗಳಾದ ಪ್ರಹ್ಲಾದ್ ಕೃಷ್ಣಾಚಾರ್ಯರನ್ನು ಭೇಟಿಯಾಗಲು ಕೊಲ್ಲಾರ ಗ್ರಾಮಕ್ಕೆ ತೆರಳಿದರು. 1681 ರಲ್ಲಿ ಕಾರ್ತಿಕ ಮಾಸದ ಅಮಾವಾಸ್ಯೆ ದಿನದಂದು ಕೊಲ್ಲಾರ ಗ್ರಾಮದಲ್ಲೇ ಹರಿಪಾದ ಸೇರಿದರು. ಕೊಲ್ಲಾರ ಗ್ರಾಮದಲ್ಲಿ ಅವರ ಬೃಂದಾವನ ಇದೆ. ಇವರನ್ನು ಇಂದಿಗೂ ಕಾಖಂಡಿಕಿಯ ಮಹಿಪತಿ ದಾಸರೆಂದು ಕರೆಯುತ್ತಾರೆ. ಇಂದು ರಾಜ್ಯದಾದ್ಯಂತ ಅವರ ಪುಣ್ಯ ಆರಾಧನೆಯು ಅತಿ ವಿಜ್ರಂಭಣೆಯಿಂದ ಜರುಗುತ್ತಿದೆ.
ದಾಸ ಶ್ರೇಷ್ಠರಾದ, ಮಹಾಮಹಿಮರಾದ ಮಹಿಪತಿ ದಾಸರು ಕಾಖಂಡಿಕೆ ಇವರ 343 ನೇ ಪುಣ್ಯ ಆರಾಧನೆಯ ನಿಮಿತ್ಯ ಈ ವಿಶೇಷ ಲೇಖನ
-ಮುರಳಿಧರ ಕುಲಕರ್ಣಿ , ರಾಯಚೂರು.
ಮೋ.9448570225
Comments
Post a Comment