ಹೊಸಪೇಟೆ ಗ್ರಾಮದಲ್ಲಿ ಕಾರ್ತಿಕ ದೀಪೋತ್ಸವ ಕಾರ್ಯಕ್ರಮ ಉದ್ಘಾಟಿನೆ: ಹೊಸಪೇಟೆ ಕೆಂಪಿನ ಮಠದ ಗತವೈಭವ ಮರುಕಳಿಸಿದೆ- ಕಿಲ್ಲೆ ಬೃಹನ್ಮಠ ಶ್ರೀಗಳು
ರಾಯಚೂರು,ನ.30- ಹೊಸಪೇಟೆಯ ಕೆಂಪಿನ ಮಠದಲ್ಲಿ ಗತವೈಭವ ಮರುಕಳಿಸಿದೆ ವ್ಯಕ್ತಿಗೆ ಸಾವಿದೆ ಮಠ ಮಾನ್ಯಗಳಿಗಿಲ್ಲ ಭಕ್ತರು ಈ ಮಠವನ್ನು ಮುಂದುವರಿಸಿಕೊಂಡು ಹೋಗಬೇಕು ಎಂದು ಕಿಲ್ಲೆ ಬೃಹನ್ಮಠದ ಶ್ರೀ ಶಾಂತಮಲ್ಲ ಶಿವಾಚಾರ್ಯ ಶ್ರೀ ಗಳು ಕರೆ ನೀಡಿದರು.
ತಾಲೂಕಿನ ಹೊಸಪೇಟೆ ಗ್ರಾಮದ ಕೆಂಪಿನ ಮಠದಲ್ಲಿ ಗುರುವಾರ ರಾತ್ರಿ ಹಮ್ಮಿಕೊಂಡಿದ್ದ ಕಾರ್ತಿಕ ದೀಪೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು. ಅನೇಕ ವರ್ಷಗಳ ಇತಿಹಾಸ ಈ ಮಠಕ್ಕಿದೆ. ನಾವು ಯಾರು ಮಾಡದ ಕಾರ್ಯವನ್ನು ಹಿಂದಿನವರು ಮಾಡಿ ಹೋಗಿದ್ದಾರೆ. ಅಂದಿನ ಕಾಲದಲ್ಲಿ ಇಷ್ಟು ಗಟ್ಟಿಮುಟ್ಟಾದ ಮಠ ಕಟ್ಟಿರುವುದು ಸಣ್ಣ ವಿಚಾರವಲ್ಲ. ಇಂದು ಆರ್‌ಸಿಸಿ ಕಟ್ಟಡ ಕಟ್ಟಬೇಕಾದರೆ ನಾನಾ ಪಡಿಪಾಡಲು ಪಡಬೇಕಿದೆ. ಆದರೆ, ಹಿಂದಿನ ಕಾಲದವರು ಕಲ್ಲಿನಲ್ಲಿಯೇ ಇಷ್ಟೊಂದು ಸದೃಢ ಮಠಗಳನ್ನು ಕಟ್ಟಿ ಹೋಗಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ ಎಂದರು. ಕಾಲಗರ್ಭದಲ್ಲಿ ಎಷ್ಟೊ ಘಟನೆಗಳು ನಡೆಯುತ್ತಿರುತ್ತವೆ. ಶಕುನಿಯಿಂದ ಮಹಾಭಾರತಕ್ಕೆ ಮಹತ್ವ ಸಿಕ್ಕರೆ, ರಾಮಾಯಣದಲ್ಲಿ ರಾವಣ ಪ್ರವೇಶದಿಂದ ಪ್ರಾಮುಖ್ಯತೆ ಬಂತು. ಕೊಂಡಿ ಮಂಚಣ್ಣ ಬಸವಣ್ಣನ ವಚನಗಳ ಮಂಥನವಾದಾಗಲೇ ಅದಕ್ಕೆ ನಿಜವಾದ ಅರ್ಥ ಸಿಕ್ಕಿತು. ಹಾಗೆಯೇ ಕೆಟ್ಟದ್ದಾಗಿದೆ ಎಂದು ಚಿಂತಿಸುವುದಕ್ಕಿಂತ ಅದರಿಂದ ನಾವು ಗಟ್ಟಿಯಾಗುವುದನ್ನು ಕಲಿಯಬೇಕು ಎಂದರು.
ನವಲಕಲ್ ಮಠದ ಶ್ರೀ ಸೋಮನಾಥ ಸ್ವಾಮೀಜಿ ಮಾತನಾಡಿ, ಹಾನಗಲ್ ಕುಮಾರ ಸ್ವಾಮಿಗಳೇ ಖುದ್ದು ತಮ್ಮ ಸ್ವರೂಪದಲ್ಲಿ ಈ ಮಠಕ್ಕೆ ಉತ್ತರಾಧಿಕಾರಿಯಾಗಿ ಬಂದಿದ್ದಾರೆ. ಭಕ್ತರು ಮನಸು ಮಾಡಿದರೆ ಹೊಸಪೇಟೆಯಲ್ಲಿ ಮತ್ತೊಂದು ವಿಜಯನಗರ ಸಾಮ್ರಾಜ್ಯವನ್ನು ಸೃಷ್ಟಿಸಬಹುದು ಎಂದರು.
ನೀಲಗಲ್ ಮಠದ ಶ್ರೀ ಡಾ.ಪಂಚಾಕ್ಷರಿ ಶಿವಾಚಾರ್ಯರು, ಸುವರ್ಣಗಿರಿ ವಿರಕ್ತಮಠದ ಶ್ರೀ ಮಹಾಲಿಂಗ ಶಿವಾಚಾರ್ಯರು,ಗಬ್ಬೂರು ಶ್ರೀ ಬೂದಿಬಸವ ಶಿವಾಚಾರ್ಯರು, ಕೆಂಪಿನ ಮಠದ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು, ಯದ್ದಲದೊಡ್ಡಿ ಶ್ರೀಗಳು, ಪಶ್ಚಿಮಾದ್ರಿ ಸಂಸ್ಥಾನ ವಿರಕ್ತಮಠದ ಮಠದ ಶ್ರೀ ಪಂಚಮಸಿದ್ದಲಿಂಗ ಶಿವಾಚಾರ್ಯರು, ಶ್ರೀ ಕಲ್ಮಠ ಸಂಸ್ಥಾನದ ಶ್ರೀ ಗುರುಸಿದ್ಧ ದೇವರು ಸಾನ್ನಿಧ್ಯ ವಹಿಸಿದ್ದರು. ಮರ್ಚೆಡ್‌ನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮಲ್ಲನಗೌಡ ಪಾಟೀಲ್ ಯರಗೇರಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮಹ್ಮದ್ ನಿಜಾಮುದ್ದೀನ್, ಈಶಾನ್ಯ ಕರ್ನಾಟಕ ವಾಲ್ಮೀಕಿ ನಾಯಕರ ಸಂಘದ ನಿರ್ದೇಶಕ ಶಿವರಾಜ್ ಬಿ.ಪಾಟೀಲ್ ಸೇರಿದಂತೆ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.
Comments
Post a Comment