ಮಹಾನಗರ ಪಾಲಿಕೆ ಅಯ ವ್ಯಯ ಸಭೆ: 28.58 ಕೋಟಿ ರೂ. ಉಳಿತಾಯ ಬಜೆಟ್ ಮಂಡನೆ. ಜಯ ಧ್ವಜ ನ್ಯೂಸ್, ರಾಯಚೂರು,ಮಾ.28- ಮಹಾನಗರ ಪಾಲಿಕೆ ಅಯ ವ್ಯಯ ಮಂಡನೆ ಇಂದು ನೆರವೇರಿತು. ಬೆಳಿಗ್ಗೆ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಹಾನಗರ ಪಾಲಿಕೆ ಮಹಾಪೌರರಾದ ನರಸಮ್ಮ ನರಸಿಂಹಲು ಮಾಡಗಿರಿ ಹಾಗೂ ಉಪ ಮಹಾಪೌರರಾದ ಸಾಜಿದ್ ಸಮೀರ್ ರವರು 2025-26 ನೇ ಸಾಲಿನ 28.58 ಕೋಟಿ ರೂ.ಗಳ ಉಳಿತಾಯ ಬಜೆಟ್ ಮಂಡಿಸಿದರು. ನಿಗದಿತ ಅವಧಿಗಿಂತ ಇಪ್ಪತ್ತು ನಿಮಿಷ ತಡವಾಗಿ ಬಜೆಟ್ ಸಭೆ ಆರಂಭವಾಯಿತು ಪ್ರಾರಂಭದಲ್ಲಿ ಬೆರಳೆಣಿಕೆ ಸದಸ್ಯರು ಹಾಜರಿದ್ದರು ಆಡಳಿತ ಪಕ್ಷಕ್ಕಿಂತ ವಿರೋಧ ಪಕ್ಷದ ಸದಸ್ಯರೆ ಮೊದಲಿಗೆ ಆಗಮಿಸಿದ್ದರು. ತದನಂತರ ಬಜೆಟ್ ಆರಂಭಿಸಿದ ಮೇಲೆ ಒಬ್ಬೊಬ್ಬರಾಗಿ ಸದಸ್ಯರು ಬಂದರು. ಮಹಾಪೌರರು ಬಜೆಟ್ ಸಭೆ ಆರಂಭಿಸಿದರು. ಉಪಮಹಾಪೌರ ಸಾಜಿದ್ ಸಮೀರ್ ಯುಗಾದಿ ಮತ್ತು ರಂಜಾನ್ ಹಬ್ಬದ ಶುಭಾಶಯ ಕೋರಿ ಬಜೆಟ್ ಅಂಕಿ ಅಂಶ ಸಭೆಯಲ್ಲಿ ಮಂಡಿಸಿದರು. ಸದಸ್ಯರಾದ ಜಯಣ್ಣ ಮಾತನಾಡಿ ಬಜೆಟ್ ಮಾಹಿತಿಯನ್ನು ಸಭೆಗೆ ಲೆಕ್ಕ ವಿಭಾಗದ ಅಧಿಕಾರಿಗಳು ಮಂಡಿಸಿದ ನಂತರ ಅದರ ಮೇಲೆ ಏನಾದರು ಪ್ರಶ್ನೆಯಿದ್ದರೆ ಚರ್ಚಿಸುವುದು ಸೂಕ್ತವೆಂದರು ಸದಸ್ಯ ಈ.ಶಶಿರಾಜ ಅಂಕಿ ಅಂಶಗಳು ತಿಳಿಸಿದ ವೇಳೆಯೆ ಅದರ ಬಗ್ಗೆ ಚರ್ಚಿಸಿದರೆ ಗೊಂದಲ ನಿವಾರಣೆಯಾಗುತ್ತದೆ ಎಂದರು. ಬಜೆಟ್ ಅಂಕಿ ಅಂಶಗಳು ಓದುವ ವೇಳೆ ಸದಸ್ಯ ಜಯಣ್ಣರವರಿಗೆ ನೀಡಿದ ಬಜೆಟ್ ಪ್ರತಿಯಲ್ಲಿ ಪುಟ 12 ದಲ್ಲಿರುವ ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆ ಮಾಹಿತಿ ಮುದ್ರಣವಾಗದಿರುವುದನ್ನು ಸಭೆ ಗಮನಕ್ಕೆ ತಂದಾಗ ತಕ್ಷಣ ಎಚ್ಚೆತ್ತುಕೊಂಡ ಆಯುಕ್ತರು ಅದನ್ನು ಸರಿ ಪಡಿಸಲು ತಿಳಿಸಿದರು ಸಭೆ ಮುಂದುವರೆಯಿತು. ಎಂ .ಕೆ.ನಾಗರಾಜ ಮಾತನಾಡಿ ಪುಟ 8 ಮತ್ತು 11ರಲ್ಲಿ ಮಹಾನಗರ ಪಾಲಿಕೆ ದೇಣಿಗೆ ಪುನರಾವರ್ತನೆಯಾದ ಬಗ್ಗೆ ಕೇಳಿದಾಗ ಆಯುಕ್ತರು ಮಾತನಾಡಿ ನಲ್ಮ್ ಯೋಜನೆ ಮತ್ತು ಮತ್ತಿತರ ಅನುದಾನ ದೇಣಿಗೆ ಬಗ್ಗೆ ಸ್ಪಷ್ಟ ಪಿಡಿಸಿದರು. ಶ್ರೀ ನಿವಾಸ ರೆಡ್ಡಿ ಮಾತನಾಡಿ ಶುಕ್ರವಾರ ಮುಸ್ಲಿಂ ಬಾಂಧವರು ಪ್ರಾರ್ಥನೆ ದಿನವಾಗಿರುತ್ತದೆ ಮುಂದಿನ ದಿನಗಳಲ್ಲಿ ಸಭೆ ಆಯೋಜನೆ ಬದಲಾದ ದಿನದಲ್ಲಿ ನಿಗದಿಪಡಿಸಬೇಕೆಂದರು. ವೇದಿಕೆ ಮೇಲೆ ಮಹಾನಗರ ಪಾಲಿಕೆ ಆಯುಕ್ತ ಜುಬಿನ್ ಮಹೋಪಾತ್ರ ಇದ್ದರು. ಸಭೆಯಲ್ಲಿ ಉಪ ಆಯುಕ್ತ ಗುರು ಸಿದ್ಧಯ್ಯ ಹಿರೇಮಠ, ಮಹಾನಗರ ಪಾಲಿಕೆ ಸದಸ್ಯರು, ನಾಮನಿರ್ದೇಶಿತ ಸದಸ್ಯರಿದ್ದರು. ಸಭೆಯಲ್ಲಿ ಸದಸ್ಯರು, ಸಿಬ್ಬಂದಿಗಳು, ಮಾಧ್ಯಮದವರನ್ನು ಹೊರತು ಪಡಿಸಿ ಅನ್ಯರಿಗೆ ಪ್ರವೇಶ ನಿರಾಕರಿಸಲಾಗಿತ್ತು.
Comments
Post a Comment