ಕಾರ್ಮಿಕರ ಬಾಕಿ ವೇತನ ಪಾವತಿಗಾಗಿ ಆಗ್ರಹಿಸಿ  ತುಂಗಭದ್ರ ನೀರಾವರಿ ವಲಯ ಹಂಗಾಮಿ ಕಾರ್ಮಿಕ ಸಂಘದಿಂದ ಹೆದ್ದಾರಿ ತಡೆ 


ಜಯಧ್ವಜ ನ್ಯೂಸ್, ರಾಯಚೂರು, ಮಾ.25-

  ಕಾರ್ಮಿಕರ ಬಾಕಿ ವೇತನ ಪಾವತಿಗಾಗಿ ಆಗ್ರಹಿಸಿ  ತುಂಗಭದ್ರ ನೀರಾವರಿ ವಲಯ ಹಂಗಾಮಿ ಕಾರ್ಮಿಕ ಸಂಘದಿಂದ ಇಂದು  ಹೆದ್ದಾರಿ ತಡೆ ನಡೆಸಲಾಯಿತು.

ಸಾಥ್ ಮೇಲೆ ಕ್ರಾಸ್ ನಲ್ಲಿ  ಹೆದ್ದಾರಿ ತಡೆ ಚಳುವಳಿ ನಡೆಸಲು ಕರ್ನಾಟಕ ನೀರಾವರಿ ನಿಗಮದ ಸಿರವಾರ ಸಿಂಧನೂರ ಮತ್ತು ಯರಮರಸ ವಿಭಾಗದ  ಕಾರ್ಯಪಾಲಕ ಅಭಿಯಂತರರು ಕಾರಣರಾಗಿದ್ದಾರೆ ಹಾಗೆ ರಾಯಚೂರು ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರವು ಇದಕ್ಕೆ ಹೊಣೆಯಾಗಿದೆ ಎಂದು ದೂರಲಾಯಿತು.

   ಏಕೆಂದರೆ, ನಮ್ಮ ಇಂದಿನ ಹೋರಾಟವು  ಸರ್ಕಾರಿ ಸೌಲಭ್ಯ ಕೇಳುವುದಕ್ಕಾಗಿ ಅಲ್ಲ. ದಾನ ಧರ್ಮಕ್ಕಾಗಿ ಕೈ ಒಡ್ಡುವುದಕ್ಕೂ ಅಲ್ಲ ಜಿಲ್ಲೆಯ ತುಂಗಭದ್ರಾ ಎಡದಂಡೆ ಕಾಲುವೆ ವ್ಯಾಪ್ತಿಯ ಯರಮರಸ್ ಸಿಂಧನೂರ ಸಿರವಾರ ವಿಭಾಗಗಳ  ಒಟ್ಟು 748 ನೀರು ಸರಬರಾಜು/ ಗ್ಯಾಂಗ್ ಮ್ಯಾನ್ ಕಾರ್ಮಿಕರ ಕಳೆದ ಐದು ತಿಂಗಳ ಸಂಬಳವನ್ನು ಕಾನೂನು ಬಹಿರವಾಗಿ ಪಾವತಿ ಮಾಡದೆ ಕಾರ್ಮಿಕ ವಿರೋಧಿ ಕಾನೂನು ವಿರೋಧಿ ಸರಕಾರದ ನಡೆಯಿಂದಾಗಿ.

 ಜೊತೆಗೆ, ದುಡಿದ ಕೂಲಿ ಕೇಳಿದರೆ ದರ್ಪದ ಮಾತಾಡಿ, ತುಂಗಭದ್ರ ಕಾರ್ಮಿಕರನ್ನು ಮತ್ತು ಅವರ ಸಂಕಷ್ಟಕರವಾದ ಜೀವನವನ್ನು ಅಪಹಾಸ್ಯ ಮಾಡಿದ ಸಿರವಾರ ಇ ಇ ಶ್ರೀಮತಿ ವಿಜಯಲಕ್ಷ್ಮಿ ಅವರ ದುಷ್ಟತನ ಮತ್ತು ದುರಡಳಿತದಿಂದಾಗಿ ಇಂದು ಹೆದ್ದಾರಿ ತಡೆ ಚಳುವಳಿ ನಡೆದಿದೆ.

   ಸಂಸಾರ ನಡೆಸಲು ಕಷ್ಟವಾಗಿದೆ ; ಪ್ರತಿ ತಿಂಗಳು ಸಂಬಳ ಪಾವತಿ ಮಾಡುವಂತೆ  ಈಗಾಗಲೇ ಯರಮರಸ ಸಿಂಧನೂರ ಹಾಗೂ ಸಿರಿವಾರ ವಿಭಾಗೀಯ ಕಚೇರಿಗಳ ಮುಂದೆ ಹಲವಾರು ಬಾರಿ ಧರಣಿ ನಡೆಸಲಾಗಿದೆ. ಹಾಗೆಯೇ, ಸಂಬಂಧಪಟ್ಟ ಕಾರ್ಯ ಪಾಲಕ ಅಭಿಯಂತರೊಂದಿಗೆ ಅನೇಕ ಸುತ್ತಿನ ಮಾತುಕತೆ ನಡೆಸಲಾಗಿದೆ.


   ನಮ್ಮ ಈ ವಿನಂತಿಗೆ ನೀರಾವರಿ ಇಲಾಖೆಯಲ್ಲಿ  ಕವಡೆ ಕಿಮ್ಮತ್ತು  ಇಲ್ಲಾ. ವಿಶೇಷವಾಗಿ ಸಿರವಾರ  ವಿಭಾಗದ ಕಾರ್ಯಪಾಲಕ ಅಭಿಯಂತರರಾದ ಶ್ರೀಮತಿ ವಿಜಯಲಕ್ಷ್ಮಿ ಪಾಟೀಲ್ ಎಂಬುವವರು ಕಾರ್ಮಿಕರ ಸಂಬಳ ಕುರಿತು ಕೈಮುಗಿದು ಕೇಳಿದರೆ "ನೀವು ನಮಗೆ ಸಂಬಂಧವಿಲ್ಲ ನಮ್ಮಲ್ಲಿ ಸಂಬಳ ಕೇಳಬೇಡಿ ನಮ್ಮನ್ನು ಸಂಬಳ ಕೇಳಿದರೆ ಕೆಲಸದಿಂದ ತೆಗೆದುಹಾಕುತ್ತೇವೆ ನೀವು ಯಾರು ಎಂಬುದೇ ನಮಗೆ ಗೊತ್ತಿಲ್ಲ ಸರ್ಕಾರ ನಿಮಗೆ ಸಂಬಳ ಬಿಡುಗಡೆ ಮಾಡಿಲ್ಲ , ಜಾಸ್ತಿ ಮಾತಾಡಿದ್ರೆ ಕೆಲಸದಿಂದ ತೆಗೆದುಹಾಕುತ್ತೇನೆ" ಎಂದು ಹೇಳುವುದರ ಮೂಲಕ ಕಾರ್ಮಿಕರಿಗೆ ಹಾಗೂ ಕಾನೂನಿಗೆ ದೊಡ್ಡ ಪ್ರಮಾಣದ ಅಪಮಾನ ಮಾಡಿರುತ್ತಾರೆ.

  ಜೊತೆಗೆ ಇಲಾಖೆಯ ಸಂಬಂಧಪಟ್ಟ ಉನ್ನತ ಅಧಿಕಾರಿಗಳು 748 ಕಾರ್ಮಿಕರ ಜೀವನದ ಬಗ್ಗೆ ಕಿಂಚಿತ್ ತಲೆಕೆಡಿಸಿಕೊಳ್ಳದೆ  ಎಲ್ಲಾ ಕಾರ್ಮಿಕರನ್ನು ಹಗಲು ರಾತ್ರಿ ದುಡಿಸುತ್ತಿದ್ದಾರೆ. ತಿಂಗಳಲ್ಲಿ ಒಂದೇ ಒಂದು ದಿನ ರಜೆ ಇಲ್ಲ. ಓಟಿ ಇಲ್ಲ. ವಿಶ್ರಾಂತಿ ಹಾಗೂ ಆರೋಗ್ಯದ ಯಾವ ಸೌಲಭ್ಯಗಳು ಇಲ್ಲ. ಅಷ್ಟೇ ಅಲ್ಲ, ದುಡಿದ ಸಂಬಳ ಕೇಳಿದರೆ ವಿಜಯಲಕ್ಷ್ಮಿ ಪಾಟೀಲ್ ಸೇರಿ, ಬಹುತೇಕ ಇಂಜಿನಿಯರ್ ಗಳು ಕಾರ್ಮಿಕರ ಮೇಲೆ ದೌರ್ಜನ ನಡೆಸುತ್ತಿದ್ದಾರೆ. ಇಲ್ಲ ಸಲ್ಲದ ಮಾತಿನಿಂದ ಅವಮಾನ ಮಾಡುತ್ತಿದ್ದಾರೆ. ಕೆಲಸದಿಂದ ತೆಗೆದುಹಾಕುವ  ಬೆದರಿಕೆ ಹಾಕುತ್ತಿದ್ದಾರೆ.

  ಸರ್ಕಾರದ ಕಾನೂನು ಬಾಹಿರವಾದ ಈ ದುರ್ನಡತೆ  ಹಾಗೂ ಇಲ್ಲಿನ ಇಂಜಿನಿಯರ್ ಗಳ  ದರ್ಪದಿಂದ ನ್ಯಾಯ ಪಡೆಯಲು  ನಮ್ಮ ಸಂಘ  13.3.2025 ರಂದು  ಅನಿವಾರ್ಯವಾಗಿ ರಸ್ತೆ ತಡೆ ಚಳುವಳಿಯನ್ನು ಘೋಷಿಸಿತು. ಈ ಹಿನ್ನೆಲೆಯಲ್ಲಿ  ಮಧ್ಯ ಪ್ರವೇಶಿಸಿದ ಪೊಲೀಸ ಇಲಾಖೆಯವರು, ಸಂಬಂಧಪಟ್ಟ ಅಧಿಕಾರಿಗಳಿಂದ  ಕೇವಲ ಹತ್ತು ದಿನಗಳಲ್ಲಿ ವೇತನ ಪಾವತಿಸುವುದಾಗಿ ಲಿಖಿತ ಭರವಸೆ  ಪತ್ರ ಕೊಡಿಸಿದರು. ಶ್ರೀಮತಿ ವಿಜಯಲಕ್ಷ್ಮಿ ಅವರ ಮೇಲೆ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಕೂಡ ಬರೆದುಕೊಟ್ಟರು. ಆದರೆ ಅದಾವುದು  ಸಂಪೂರ್ಣವಾಗಿ  ಅನುಷ್ಠಾನವಾಗಲಿಲ್ಲ. ಆದರೆ, ಅಧಿಕಾರಿಗಳ ಭರವಸೆಗೆ  ಬೆಲೆ ಕೊಟ್ಟು ನಾವು ನಮ್ಮ ಹೋರಾಟವನ್ನು  ಹತ್ತು ದಿನಗಳ ಕಾಲ ಮುಂದೂಡಿದ್ದೆವು. ಕೊಟ್ಟ ಮಾತಿನಂತೆ ಕರ್ತವ್ಯ ಪಾಲನೆ ಮಾಡುವುದರಲ್ಲಿ ನೀರಾವರಿ ಇಂಜಿನಿಯರ್ ಗಳು ತೋರಿಸಿದ ತಾತ್ಸಾರವೇ ಇಂದು ನಮ್ಮನ್ನು ರಸ್ತೆಗಳಿಯುವಂತೆ ಮಾಡಿದೆ.

ಈ ಕೂಡಲೆ ಇ ಇ ವಿಜಯಲಕ್ಷ್ಮಿ ಅವರ ಮೇಲೆ ಶಿಸ್ತಿನ ಕ್ರಮ ಜರುಗಿಸಿಬೇಕು, ರಾಯಚೂರು ಜಿಲ್ಲೆಯ 12 ಉಪ ವಿಭಾಗದ  748 ಗ್ಯಾಂಗಮನ್ ಕಾರ್ಮಿಕರ  ಬಾಕಿ ವೇತನ ಪಾವತಿಸಿಸಬೇಕು, ವೇತನ ಪಾವತಿ ಕಾಯ್ದೆ -1939 ರ ಪ್ರಕಾರ ಪ್ರತಿ ತಿಂಗಳು ಐದನೇ ತಾರೀಖ ಒಳಗೆ  ವೇತನ ಪಾವತಿ ಮಾಡುವ ವ್ಯವಸ್ಥೆ ಜಾರಿಗೆ ತರಬೇಕು, ಕನಿಷ್ಠ ವೇತನ ಕಾಯ್ದೆ 1048 ರ ಪ್ರಕಾರ  ದಿನಕೆ ಎಂಟು ಗಂಟೆ ಕೆಲಸ  ವಾರದ ಹಾಗೂ ರಾಷ್ಟ್ರೀಯ ರಜೆಗಳು ನೀಡಬೇಕು, ಗುತ್ತಿಗೆ ಕಾರ್ಮಿಕ (ರದ್ದತಿ ಹಾಗೂ ನಿಯಂತ್ರಣ) ಕಾಯ್ದೆ 1970ರ ಪ್ರಕಾರ ಕಾರ್ಮಿಕರ ಸಂಬಳಕ್ಕೆ ಪ್ರಧಾನ ಮಾಲೀಕರೇ ಹೊಣೆ ಎಂದು ಜವಾಬ್ದಾರಿ ನಿಭಾಯಿಸಿ ಮೇಲ್ಕಂಡ ಸಮಸ್ಯೆಗಳಿಗೆ  ಶೀಘ್ರದಲ್ಲಿ  ಕಾನೂನಾತ್ಮಕ ಪರಿಹಾರವನ್ನು ಅನುಷ್ಠಾನ ಮಾಡದಿದ್ದಲ್ಲಿ  ಜಿಲ್ಲಾಡಳಿತದ ವಿರುದ್ಧ ತೀವ್ರ ಸ್ವರೂಪದ ಹೋರಾಟಕ್ಕೆ  ಮುಂದಾಗಲಿದ್ದೇವೆಂದು ತಿಳಿಸಲಾಯಿತು  ಇದಕ್ಕೆ ಉತ್ತರಿಸಿದ ರಾಯಚೂರು ತಹಸೀಲ್ದಾರ ಮತ್ತು ನೀರಾವರಿ ಇಲಾಖೆ ಅಧಿಕಾರಿಗಳು ಬಾಕಿ ಇರುವ ನೀರಾವರಿ ಕಾರ್ಮಿಕರ ವೇತನವನ್ನು ಕೂಡಲೇ ಪಾವತಿಸಲು ಕ್ರಮ ಕೈಗೊಂಡು ನಂತರ 12 ಸಬ್ ಡಿವಿಜನ್ ನ ಅಧಿಕಾರಿಗಳ ಜೊತೆಗೆ ಮತ್ತು ಕಾರ್ಮಿಕ ಮುಖಂಡರೊಂದಿಗೆ ಸಭೆ ನಡೆಸಿ ಭವಿಷ್ಯ ನಿಧಿ, ಇಎಸ್ ಐ ಹಾಗೂ ಇತರೆ ಬೇಡಿಕೆಗಳನ್ನು ಚರ್ಚೆ ಮಾಡಿ ಬಗೆ ಹರಿಸುವುದಾಗಿ ಭಾರವಸೆ ನೀಡಿದರು. ಈ ಸಂದರ್ಭದಲ್ಲಿ ಟಿಯುಸಿಐ ಅಧ್ಯಕ್ಷ ಆರ್.ಮಾನಸಯ್ಯ, ರಾಜ್ಯ ಉಪಾಧ್ಯಕ್ಷ ಎಂ. ಗಂಗಾಧರ, ಟಿಯುಸಿಐ ಜಿಲ್ಲಾಧ್ಯಕ್ಷ ಜಿ ಅಮರೇಶ ಪ್ರಧಾನ ಕಾರ್ಯದರ್ಶಿ ಜಿ ಅಡವಿರಾವ್, ತುಂಗಭದ್ರ ಎಡದಂಡೆ ಕಾಲುವೆ ಕಾರ್ಮಿಕ ಮುಖಂಡರಾದ, ರುಕ್ಮಪ್ಪ, ಬಸವರಾಜ ಯಾದವ್, ಹನುಮಂತಪ್ಪ, ಆಂಜನೇಯ, ಮುದಿಯಪ್ಪ, ಅಮರೇಗೌಡ, ಶರಣಪ್ಪ, ರಾಮಣ್ಣ ಪೋತ್ನಾಳ್, ರಾಧಾಕೃಷ್ಣ, ಮುದುಕಪ್ಪ, ಎಂ ನಿಸರ್ಗ,ಸಿದ್ದಪ್ಪ, ಹನುಮೇಶ, ಹೆಚ್ ಮಲ್ಲೇಶ್, ಎಂ ನಿರಂಜನಕುಮಾರ್, ಆಂಜನೇಯ, ಸೇರಿದಂತೆ ನೂರಾರು ಕಾರ್ಮಿಕರು ಹೆದ್ದಾರಿ ತಡೆ ಹೋರಾಟದಲ್ಲಿ ಭಾಗವಹಿಸಿದ್ದರು.


 

Comments

Popular posts from this blog