ಸಂಸತ್ ನಲ್ಲಿ ಒಮ್ಮುಖ ನಿರ್ಧಾರ : ವಿರೋಧ ಪಕ್ಷಗಳ ಸದಸ್ಯರಿಗೆ ಮಾತನಾಡಲು ಸ್ಪೀಕರ್ ಬಿಡುತ್ತಿಲ್ಲ- ಕುಮಾರ್ ನಾಯಕ್. ಜಯಧ್ವಜ ನ್ಯೂಸ್ ರಾಯಚೂರು ,ಮಾ.31- ಸಂಸತ್ ನಲ್ಲಿ ಕಲಾಪ ವೇಳೆ ವಿರೋಧ ಪಕ್ಷಗಳ ಸದಸ್ಯರಿಗೆ ಮುಕ್ತವಾಗಿ ಮಾತನಾಡಲು ಲೋಕಸಭಾಧ್ಯಕ್ಷರು ಅವಕಾಶ ನೀಡುತ್ತಿಲ್ಲವೆಂದು ಯಾದಗಿರಿ ಮತ್ತು ರಾಯಚೂರು ಲೋಕಸಭಾ ಸದಸ್ಯರಾದ ಜಿ.ಕುಮಾರ್ ನಾಯಕ್ ಆರೋಪಿಸಿದರು. ಅವರಿಂದು ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಸಂಸದೀಯ ಕಾರ್ಯಕಲಾಪಗಳಿಗೆ ಸುಗಮವಾಗಿ ನಡೆಯದೆ ಪ್ರಜಾಪ್ರಭುತ್ವಕ್ಕೆ ಧಕ್ಕೆ ತರುವ ರೀತಿಯಲ್ಲಿ ಕಾರ್ಯಚಟುವಟಿಕೆಗಳು ಸಂಸತ್ ನಲ್ಲಿ ನಡೆಯುತ್ತಿವೆ ಎಂದರು. ಲೋಕಸಭಾ ಸ್ಪೀಕರ್ ರವರು ವಿರೋಧ ಪಕ್ಷಗಳ ಸದಸ್ಯರಿಗೆ ಮಾತನಾಡುವುದಕ್ಕೆ ಅನುಮತಿ ನಿರಾಕರಣೆ ಮಾಡುತ್ತಿದ್ದಾರೆ ನಮಗೆ ನೀಡಿದ ಸಮಯದಲ್ಲಿ ಅರ್ಧಕ್ಕೆ ಮೊಟಕುಗೊಳಿಸುತ್ತಿದ್ದಾರೆ ಎಂದ ಅವರು ಉಪಸಭಾಪತಿ ಹುದ್ದೆ 2019ರಿಂದ ಖಾಲಿಯಿದ್ದು ಅದನ್ನು ಉದ್ದೇಶ ಪೂರ್ವಕವಾಗಿ ಖಾಲಿ ಬಿಡಲಾಗಿರುವ ಅನುಮಾನವಿದ್ದು ನಿಷ್ಪಕ್ಷಪಾತ ಕಾರ್ಯ ಕಲಾಪಗಳು ನಡೆಯದಿರಲು ಹಾದಿಯಾಗಿದೆ ಎಂದು ದೂರಿದರು. ವಿರೋಧ ಪಕ್ಷಗಳ ನಾಯಕರು, ಸದಸ್ಯರು ಮಾತನಾಡುವ ವೇಳೆ ಮೈ ಕ್ರೋಫೋನ್ ಬಂದ್ ಮಾಡಲಾಗುತ್ತಿದೆ ಅಲ್ಲದೆ ನಾವು ಮಾತನಾಡುವ ದೃಶ್ಯವನ್ನು ಪ್ರಸಾರ ಮಾಡದೆ ಅಭಿವ್ಯಕ್ತ ಸ್ವಾತಂತ್ರ್ಯ ಹರಣ ನಡೆಯುತ್ತಿದೆ ಎಂದರು.
ಕಾರ್ಯ ಕಲಾಪ ಸಮಿತಿ ಏಕೆ ಪಕ್ಷೀಯವಾಗಿ ನಡೆಯುತ್ತಿದೆ ಎಂದ ಅವರು ಬಜೆಟ್ ಮತ್ತು ಅನುದಾನ ಬೇಡಿಕೆ ಚರ್ಚೆ ವೇಳೆ ಪ್ರಮುಖ ಸಚಿವಾಲಯಗಳನ್ನು ಹೊರಗಿಡಲಾಗುತ್ತಿದೆ ಎಂದರು. ಸ್ಥಾಯಿ ಸಮಿತಿ, ಸಲಹಾ ಸಮಿತಿಯಲ್ಲಿ ಸ್ಪೀಕರ್ ಕಛೇರಿ ಹಸ್ತಕ್ಷೇಪ ಮಾಡಲಾಗುತ್ತಿದೆ ಎಂದರು. ಇತ್ತೀಚೆಗೆ ಏಮ್ಸ್ ಬಗ್ಗೆ ನಾನು ಸಹ ಮಾತನಾಡಿದ್ದೇನೆ ನಿನ್ನೆ ಡಾ.ಸಿ.ಎನ್.ಮಂಜುನಾಥ ಸಹ ಮಾತನಾಡಿದ್ದಾರೆ ಅದಕ್ಕೆ ನಾನು ಪ್ರಶಂಸೆ ಮಾಡಿದ್ದೇನೆಂದರು. ರಾಜ್ಯದಲ್ಲಿ ವಿಧಾನಸಭಾ ಸ್ಪೀಕರ್ ರವರು 18 ಬಿಜೆಪಿ ಶಾಸಕರನ್ನು ಅಮಾನತ್ತು ಮಾಡಿರುವ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು ನನಗೆ ಅದರ ಬಗ್ಗೆ ಸಂಪೂರ್ಣ ಮಾಹಿತಿಯಿಲ್ಲವೆಂದರು. ಈ ಸಂದರ್ಭದಲ್ಲಿ ಸಚಿವರಾದ ಎನ್.ಎಸ್.ಬೋಸರಾಜು, ಶಾಸಕರಾದ ಬಸನಗೌಡ ದದ್ದಲ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಪಾಟೀಲ ಇಟಗಿ, ಕೆ.ಶಾಂತಪ್ಪ, ಜಯಣ್ಣ,ಜಯವಂತರಾವ ಪತಂಗೆ, ಜಿ.ಶಿವಮೂರ್ತಿ,ಅಮರೇಗೌಡ ಹಂಚಿನಾಳ, ನಾಗರಾಜ್ ಇದ್ದರು.
Comments
Post a Comment