ಶಾಂತಿ ಸೌಹಾರ್ದತೆಯಿಂದ ಯುಗಾದಿ ಮತ್ತು ರಂಜಾನ ಆಚರಿಸಿ- ಎಎಸ್ಪಿ ಹರೀಶ್ ಜಯಧ್ವಜ ನ್ಯೂಸ್ ರಾಯಚೂರು , ಮಾ.26- ನಗರದ ಸದರ ಬಜಾರ ಪೋಲೀಸ್ ಠಾಣೆಯಲ್ಲಿ ಹೆಚ್ಚುವರಿ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳಾದ ಜಿ. ಹರೀಶರವರ ಅಧ್ಯಕ್ಷತೆಯಲ್ಲಿ ಮುಂಬರುವ ಯುಗಾದಿ, ಮತ್ತು ರಂಜಾನ ಹಬ್ಬಗಳ ಪ್ರಯುಕ್ತ ಸರ್ವ ಧರ್ಮಿಯರ ಶಾಂತಿ ಸಭೆಯನ್ನು ಕರೆಯಲಾಗಿತ್ತು.
ಸಭೆಯ ಪ್ರಾರಂಭದಲ್ಲಿ ಹಿರಿಯ ಮುಖಂಡರಾದ ಶ್ರೀನಿವಾಸ ಪತಂಗೆ, ಅಶೋಕ ಜೈನ್, ನಜೀರ ಪಂಜಾಬಿ, ರಸೂಲ ಸಾಬ್ ಮಾತನಾಡಿ ಯುಗಾದಿ ಮತ್ತು ರಂಜಾನ ಹಬ್ಬಗಳು ಅನಾದಿ ಕಾಲದಿಂದಲೂ ಜರುಗುತ್ತಾ ಬಂದಿರುವ ಬಹು ದೊಡ್ಡ ಹಬ್ಬಗಳಾಗಿವೆ, ಈ ಹಬ್ಬಗಳಲ್ಲಿ ಸರ್ವರು ಸಹೋದರತ್ವ ಸೌಹಾರ್ಧತೆಯಿಂದ ರಾಯಚೂರು ಜಿಲ್ಲೆಯಲ್ಲಿಯೇ ಮೊದಲಿನಿಂದಲೂ ಆಚರಣೆ ಮಾಡಿಕೊಂಡು ಬಂದಂಥ ಉದಾಹರಣೆಗಳಿವೆ, ಆದರೆ ಅಧಿಕಾರಿಗಳಿಗೆ ಮನವಿ ಮಾಡಿಕೊಳ್ಳುವುದೇನೆಂದರೆ ಹಬ್ಬಗಳಲ್ಲಿ ಮೂಲಭೂತ ಸೌಕರ್ಯಗಳಾದ ನೀರು, ವಿದ್ಯುತ್ ಸರಬರಾಜುಗಳನ್ನು ಸ್ವಲ್ಪ ಗಮನದಲ್ಲಿಟ್ಟುಕೊಂಡು ಯಾರಿಗೂ ತೊಂದರೆಯಾಗದಂತೆ ಕ್ರಮ ವಹಿಸಬೇಕು ಎಂದರು. ರಾಯಚೂರು ಜಿಲ್ಲೆ ಎಂಬುದು ಸೌಹಾರ್ಧತೆಯ ಜಿಲ್ಲೆ ಎಂಬ ಹೆಗ್ಗಳಿಕೆ ಇದೆ ಅದಕ್ಕೆಲ್ಲ ನಮ್ಮ ಜಿಲ್ಲೆಗೆ ಆಗಮಿಸುವ ಧಕ್ಷ ಅಧಿಮಾರಿಗಳ ಪಾತ್ರ ಮುಖ್ಯವಾಗಿದೆ ಎಂದರೂ ತಪ್ಪಾಗಲಾರದು ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಹಾಗೂ ಜಿಲ್ಲೆಗೆ ನೂತನವಾಗಿ ಡಿ.ವೈ.ಎಸ್.ಪಿ.ಗಳಾಗಿ ಅಧಿಕಾರ ಸ್ವೀಕರಿಸಿದ ಶಾಂತವೀರರವರು ಮಾತನಾಡಿ ನಮ್ಮ ದೇಶವು ಸಂಸ್ಕೃತಿ ಸಂಪ್ರದಾಯಗಳನ್ನು ಆಚರಣೆ ಮಾಡಿಕೊಂಡು ಬಂದಂಥಹ ದೇಶವಾಗಿದೆ, ಆದುದರಿಂದ ನಮ್ಮ ದೇಶ, ನಾಡಿಗೆ ಮಹಿಳೆಯರ ಹೆಸರಿನಿಂದ ಕರೆಯುತ್ತಾರೆ, ಮಹಿಳೆ ಎಲ್ಲಿ ಪಾದಾರ್ಪಣೆ ಮಾಡುತ್ತಾಳೋ ಅಲ್ಲಿ ಶಾಂತಿ ಮತ್ತು ಅಭಿವೃದ್ಧಿ ಇರುತ್ತದೆ, ಆದುದರಿಂದ ದೇಶವನ್ನು ಭಾರತಾಂಬೆಯಾಗಿ ಕರ್ನಾಟಕ ರಾಜ್ಯವನ್ನು ಕನ್ನಡಾಂಬೆ ಎಂದು ಕರೆಯುತ್ತಾರೆ, ಇಂಥ ಪುಣ್ಯ ಭೂಮಿಯಲ್ಲಿ ಜನಿಸಿದ ನಾವು ನೀವೆಲ್ಲರೂ ಸೌಭಾಗ್ಯವಂತರೆಂದು ಭಾವಿಸಬೇಕಾಗಿದೆ, ನಮ್ಮ ಭಾರತವು ಇಡೀ ವಿಶ್ವಕ್ಕೆ ಗುರುವಿನ ಸ್ಥಾನದಲ್ಲಿದೆ ಅದನ್ನು ಗಮನದಲ್ಲಿಟ್ಟುಕೊಂಡು ನಾವೆಲಗಲ್ಲರೂ ಯಾವುದೇ ಹಬ್ಬ ಹರಿದಿನಗಳನ್ನು ತಮ್ಮ ತಮ್ಮ ಸಂಪ್ರದಾಯದ ಪ್ರಕಾರ ಶಾಂತಿ ಸೌಹಾರ್ಧತೆಯೊಂದಿಗೆ ಆಚರಿಸಿ ಮತ್ತೊಬ್ಬರಿಗೆ ಮಾದರಿಯಶಗಬೇಕಾಗಿದೆ ಎಂದು ಹೇಳಿದರು.
ನಂತರ ಅಧ್ಯಕ್ಷತೆ, ನೇತೃತ್ವ ವಹಿಸಿದ್ದ ಎಎಸ್ಪಿ ಜಿ. ಹರೀಶರವರು ಮಾತನಾಡಿ ಯುಗಾದಿ ಮತ್ತು ರಂಜಾನ ಹಬ್ಬಗಳು ದೇಶದ ದೊಡ್ಡ ಮಹತ್ವದ ಹಬ್ಬಗಳು ಈ ಹಬ್ಬಗಳಲ್ಲಿ ಹಿಂದುಗಳು ಬೇವು ಬೆಲ್ಲವನ್ನು ಒಬ್ಬರಿಗೊಬ್ಬರು ವಿನಿಮಯ ಮಾಡಿಕೊಂಡು ವರ್ಷವಿಡಿ ನಾವೇನೇ ತಪ್ಪು ಮಾಡಿದ್ದರೂ ಅವುಗಳು ಸಿಹಿ ಕಹಿಯಂತೆ ಒಂದಾಗಲಿ ಎಂಬ ಸಂಕೇತದಲ್ಲಿ ಆಚರಿಸುತ್ತಾರೆ, ಇಸ್ಲಾಂ ಧರ್ಮದವರು ಆಚರಣೆ ಹೇಗೆಂದರೆ ಅದೆಂತಹ ಸಂದಿಘ್ನ ಪರಿಸ್ಥಿತಿ ಬಂದರೂ ಸಹಿತ ಬಾಯಲ್ಲಿ ಒಂದು ಹನಿ ನೀರನ್ನು ಕುಡಿಯದೇ ನೀರಾಹಾರಿಗಳಾಗಿ ದೇಶದ ಸರ್ವರಿಗೂ ಆ ಅಲ್ಲಾಹನು ಸರ್ವರಿಗೂ ಸುಖ, ಶಾಂತಿ, ಆರೋಗ್ಯ, ನೆಮ್ಮಧಿ ನೀಡಲಿ ಸರ್ವರೂ ಸಹಬಾಳ್ವೆಯಿಂದ ಬಾಳಲಿ ಎಂಬ ಉದ್ದೇಶದಿಂದ ಸುಮಾರು ಮುವತ್ತು ದಿನಗಳ ಕಠಿಣ ಉಪವಾಸ ವೃತವನ್ನು ಆಚರಣೆ ಮಾಡುತ್ತಾರಲ್ಲ ಅದು ಶ್ಲಾಘನೀಯವಾದುದು, ಈ ಎರಡೂ ಹಬ್ಬಗಳು 30 ರಂದು ಬೆವು ಬೆಲ್ಲ ವಿನಿಮಯದ ದಿನವಾಗಿದೆ, ದಿ. 30 ರಂದು ಚಂದ್ರನ ದರ್ಶನವಾದರೆ 31 ರಂದು ರಂಜಾನ್ ಕೊನೆಯ ದಿನವಾಗುತ್ತದೆ, ಆದುದರಿಂದ ಎರಡೂ ಹಬ್ಬಗಳಲ್ಲಿಯೂ ನಮ್ಮ ಪೋಲೀಸ್ ಇಲಾಖೆಯಿಂದ ಮತ್ತು ಇನ್ನೂ ಹೆಚ್ಚುವರಿಯಾಗಿ ಪೋಲೀಸ್ ತಂಡಗಳನ್ನು ಆಹ್ವಾನ ಮಾಡಿಕೊಂಡು ಹಬ್ಬಗಳಿಗೆ ಯಾವುದೇ ತರಹದ ಅಹಿತಕರ ಘಟನೆಗಳು ಜರುಗದಂತೆ ನಾವು ನಿಗಾವಹಿಸುತ್ತೇವೆ, ಆದರೆ ಇದರ ಮೇಲೂ ಏನಾದರೂ ಘಟನೆಗಳು ಸಂಭವಿಸಿದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳ ಆಧೇಶಗಳ ಮೇರೆಗೆ ಸೂಕ್ತ ಕಾನೂನು ಕ್ರಮಗಳೂ ಇವೆ, ಆದರೆ ಪೋಲೀಸ್ ಇಲಾಖೆಯು ಆ ಕ್ರಮಗಳನ್ನು ಕೈಗೆತ್ತಿಕೊಳ್ಳದಂತೆ ಹಬ್ಬಗಳನ್ನು ಆಚರಿಸುವುದು ನಿಮ್ಮ ಗಮನಕ್ಕಿರಲಿ ಎಂದು ಹೇಳಿದರು.
ನೇತಾಜಿ ನಗರ ಪಿ.ಎಸ್.ಐ. ಚಂದ್ರಪ್ಪನವರು ಸರ್ವರನ್ನು ಸ್ವಾಗತಿಸಿದರು.
ಸದಾರ ಬಜಾರ ಸಿ.ಪಿ.ಐ. ತಿಮ್ಮಣ್ಣನವರು ಸರ್ವರಿಗೂ ವಂದಿಸಿದರು.
ಈ ಸಂದರ್ಭದಲ್ಲಿ ನಾಗರಾಜ ಮೇಕಾ ಸಿ.ಪಿ.ಐ., ವೆಸ್ಟ್, ಮಂಜುನಾಥ ಪಿ.ಎಸ್.ಐ., ವೆಸ್ಟ್, ಅಮಿತಾ ಪಿ.ಎಸ್.ಐ., ಮಾರ್ಕೇಟ್ ಯಾರ್ಡ್, ನರಸಮ್ಮ, ವಕ್ಫ್ ಬೋರ್ಡ್ ಅಧಿಕಾರಿ ಫರೀದ್ ಖಾನ್, ಪಿ.ಎಸ್.ಐ. ಶ್ಯಾಮ್ ಪಿ.ಎಸ್.ಐ., ಶ್ರೀನಿವಾಸ ಎ.ಎಸ್.ಐ., ಚಾಂದ್ ಹೆಚ್.ಸಿ., ಬಸವರಾಜ ಪೋಲೀಸ್, ಮುಖಂಡರಾದ ಡಾ. ಭಾಸ್ಕರ್ ಬಾಬು, ಸೂರಿ, ಶರಣ ಬಸವ ಬಜರಂಗ ದಳ, ಪ್ರಭು ನಾಯಕ ಮಡ್ಡಿಪೇಟೆ, ಮಹಾವೀರ, ಇಸ್ಮಾಯಿಲ್ ಸಾಬ್, ಅಶೋಕ ಶೆಟ್ಟಿ, ಹಾಗೂ ಇನ್ನಿತರರು ಉಪಸ್ಥಿತರಿದ್ದರು.
Comments
Post a Comment