ಕೋಟೆ ಕೊತ್ತಲಗಳ ಅಭಿವೃದ್ಧಿಗಾಗಿ ಸಮಗ್ರ ವರದಿ ಸಿದ್ಧಪಡಿಸಿ: ರಾಯಚೂರು ಕೋಟೆಗಳ ಸಂರಕ್ಷಣೆಗೆ ಜಿಲ್ಲಾಧಿಕಾರಿಗಳ ಸೂಚನೆ
ಜಯ ಧ್ವಜ ನ್ಯೂಸ್ ರಾಯಚೂರು ಏ. 24 - ನಗರದ ಬಸ್ ನಿಲ್ದಾಣ ಎದುರಿನ ಮೆಕ್ಕ ದರ್ವಾಜ್ ಕೋಟೆ, ಬೆಟ್ಟದ ಮೇಲಿನ ಕೋಟೆ ಪ್ರದೇಶಕ್ಕೆ ತೆರಳಿ ಅಲ್ಲಿ ಮೂಲಭೂತ ಸೌಕರ್ಯ ಕಲ್ಪಿಸುವುದಕ್ಕೆ ಜಿಲ್ಲಾಧಿಕಾರಿಗಳಾದ ನಿತೀಶ್ ಕೆ ಸೂಚಿಸಿದರು.
ಅವರಿಂದು ನಗರದಲ್ಲಿರುವ ಕೋಟೆಗಳಿರುವ ಪ್ರದೇಶಕ್ಕೆ ತೆರಳಿ ವೀಕ್ಷಣೆ ಮಾಡಿದರು. ಮೆಕ್ಕ ದರ್ವಾಜ್ ಕೋಟೆ ಪ್ರದೇಶಕ್ಕೆ ತೆರಳಿ ವೀಕ್ಷಣೆ ನಡೆಸಿದರು. ಈ ಪ್ರದೇಶವನ್ನು ಸಂರಕ್ಷಣೆ ಹೇಗೆ ಮಾಡಬಹುದು. ಇಲ್ಲಿ ಎಲ್ಲ ಬಗೆಯ ಮೂಲಭೂತ ಸೌಕರ್ಯ ಕಲ್ಪಿಸುವುದಕ್ಕೆ ಸಂಬಂಧಿಸಿದಂತೆ ಕ್ರಮ ವಹಿಸಲು ಮಹಾನಗರ ಪಾಲಿಕೆಯಿಂದ ಒಂದು ಸಮಗ್ರ ವರದಿ ತಯಾರಿಸುವ ಬಗ್ಗೆ ಮಹಾನಗರ ಪಾಲಿಕೆಯ ಆಯುಕ್ತರೊಂದಿಗೆ ಹಾಗೂ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರೊಂದಿಗೆ ಇದೆ ವೇಳೆ ಚರ್ಚಿಸಿದರು.
ಬಳಿಕ ಜಿಲ್ಲಾಧಿಕಾರಿಗಳು ಹತ್ತಿರದಲ್ಲಿನ ಕಂದಕದ ಸ್ಥಳಕ್ಕೆ ತೆರಳಿದರು. ಅಲ್ಲಿ ವಿಪರೀತವಾಗಿ ತುಂಬಿದ್ದ ಹೂಳನ್ನು ಕಂಡು ಅಧಿಕಾರಿಗಳೊಂದಿಗೆ ಚರ್ಚಿಸಿದರು. ಕಂದಕದಲ್ಲಿನ ಹೂಳನ್ನು ತೆಗೆಯಬೇಕು. ಜೊತೆಗೆ ಫಿನಿಸಿಂಗ್ ಮಾಡಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಬಳಿಕ ಬಸ್ ನಿಲ್ದಾಣದ ಹತ್ತಿರದ ಎತ್ತರದ ಗುಡ್ಡದ ಮೇಲಿನ ಕೋಟೆ ಪ್ರದೇಶದ ಆವರಣಕ್ಕೆ ತೆರಳಿದರು. ಪ್ರವಾಸಿಗರು ಮೇಲೇರಿ ತಿರುಗಾಡಲು ವಿದ್ಯುದೀಪದ ಕಂಬಗಳು, ಕುಳಿತುಕೊಳ್ಳಲು ಬೆಂಚು ಸೇರಿದಂತೆ ಎಲ್ಲಾ ರೀತಿಯ ವ್ಯವಸ್ಥೆಗೆ ಕ್ರಮ ವಹಿಸಬೇಕು. ಕೋಟೆ ಮೇಲಗಡೆ ಅಲ್ಲಲ್ಲಿ ಬಿದ್ದಿರುವುದನ್ನು ಸರಿಪಡಿಸಿ ಸಂರಕ್ಷಿಸಲು, ಪ್ರವಾಸಿಗರು ಮೇಲೆ ಹತ್ತಲು ಅನುಕೂಲವಾಗುವಂತೆ ಪಾಟುನಗಿಗಳನ್ನು ಹಾಕಲು ಕ್ರಮ ವಹಿಸುವುದಕ್ಕೆ ಸಂಬಂಧಿಸಿದಂತೆ ನಿಯಮಾನುಸಾರ ಪ್ರತ್ಯೇಕವಾಗಿ ಪ್ರಸ್ತಾವನೆಯೊಂದನ್ನು ಸಿದ್ಧಪಡಿಸಿ ಸಲ್ಲಿಸುವಂತೆ ಇದೆ ವೇಳೆ ಜಿಲ್ಲಾಧಿಕಾರಿಗಳು, ಮೈಸೂರಿನ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಅಭಿಯಂತರರಿಗೆ ಸೂಚನೆ ನೀಡಿದರು.
ಮಾವಿನಕೆರೆ ಪಕ್ಕದ ಕಾಸುಬಾವಿಯನ್ನು ಸಹ ತಂತಿಬೇಲಿ ಅಳವಡಿಸಿ ಅಲ್ಲಿನ ಹೂಳು ತೆಗೆದು ಸಂರಕ್ಷಣೆ ಮಾಡಲು ಸಹ ಇದೆ ವೇಳೆ ಜಿಲ್ಲಾಧಿಕಾರಿಗಳು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಆಯುಕ್ತರಾದ ಜುಬಿನ್ ಮೋಹಪಾತ್ರ, ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕರಾದ ಈರಣ್ಣ ಬಿರಾದಾರ, ಮೈಸೂರಿನ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಅಭಿಯಂತರರಾದ ತಾರಕೇಶ, ಲೋಕೋಪಯೋಗಿ ಇಲಾಖೆಯ ಸಹಾಯಕ ಅಭಿಯಂತರರಾದ ಮಹೇಶ, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರಾದ ರಾಜೇಂದ್ರ ಜಲ್ದಾರ ಸೇರಿದಂತೆ ಇತರರು ಇದ್ದರು.
Comments
Post a Comment