ನಾಲವಾರ ಮಠದಲ್ಲಿ  ದಕ್ಷಿಣ ಭಾರತದ ದೀಪಮೇಳ ಅದ್ಧೂರಿ ತನಾರತಿ

ಜಯ ಧ್ವಜ ನ್ಯೂಸ್ ರಾಯಚೂರು, ಏ.29- ಚಿತಾಪೂರ ತಾಲೂಕಿನ ನಾಲವಾರ ಶ್ರೀ ಕೋರಿ ಸಿದ್ದೇಶ್ವರ ಮಹಾ ಸಂಸ್ಥಾನ ಮಠದಲ್ಲಿ ಶ್ರೀಮಠದ ಪೀಠಾಧಿಪತಿಗಳಾದ ಪೂಜ್ಯಶ್ರೀ ಸಿದ್ಧ ತೋಟೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳವರ ದಿವ್ಯ ಸಾನಿಧ್ಯದಲ್ಲಿ ತನಾರತಿ ಮತ್ತು ಪಲ್ಲಕ್ಕಿ ಮಹೋತ್ಸವವನ್ನು ಸಹಸ್ರಾರು ಸದ್ಭಕ್ತರ ಸಮ್ಮುಖದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಆರಾಧ್ಯ ಗುರುವಿಗೆ ಹರಕೆ ಸಲ್ಲಿಸಿದ  ಸಹಸ್ರಾರು ಭಕ್ತರು, ನಾಡಿನ ವಿಶಿಷ್ಟ ಉತ್ಸವಗಳಲ್ಲಿ ಒಂದಾದ ನಾಲವಾರದ ಸದ್ಗುರು ಶ್ರೀ ಕೋರಿಸಿದ್ಧೇಶ್ವರ ಮಹಾಸಂಸ್ಥಾನ ಮಠದ  ತನಾರತಿ ಉತ್ಸವವು  ಸಹಸ್ರಾರು ಭಕ್ತರ ಮಧ್ಯೆ ಅಕ್ಷಯತದಿಗೆ ಅಮಾವಾಸ್ಯೆ ಪ್ರಯುಕ್ತ ಅದ್ಧೂರಿಯಾಗಿ ಜರುಗಿತು.

ದಕ್ಷಿಣ ಭಾರತದ ಮಹಾದೀಪಮೇಳವೆಂದೇ ಪ್ರಖ್ಯಾತವಾದ ನಾಲವಾರದ ತನಾರತಿ ಉತ್ಸವವು ಇಷ್ಟಾರ್ಥಗಳು ಈಡೇರಿದ ಪ್ರಯುಕ್ತ ಕೃತಜ್ಞತೆಯ ರೂಪದಲ್ಲಿ ಕರ್ತೃ ಕೋರಿಸಿದ್ಧೇಶ್ವರರ ಗದ್ದುಗೆಗೆ ಸಲ್ಲಿಸುವ ಹರಕೆಯಾಗಿದ್ದು ದೇಶದ ವಿವಿಧ ಭಾಗಗಳ ಸಾವಿರಾರು ಸದ್ಭಕ್ತರು ಪಾಲ್ಗೊಂಡು ಹರಕೆ ತೀರಿಸಿದರು.

ಶ್ರೀ ಮಠದ ಹಳೆಯ ಜಾತ್ರೆ ಹಾಗೂ ಪ್ರಸಕ್ತ ವರ್ಷದ ಎರಡನೆಯ ತನಾರತಿ ಉತ್ಸವವು ಪೀಠಾಧಿಪತಿಗಳಾದ ಡಾ. ಸಿದ್ಧತೋಟೇಂದ್ರ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ವೈಭವದಿಂದ ನಡೆಯಿತು.

ಡಾ.ಸಿದ್ಧತೋಟೇಂದ್ರ ಮಹಾಸ್ವಾಮಿಗಳು ಶ್ರೀಮಠದ ಪಾರಂಪರಿಕ ವಿಶೇಷ ಉಡುಪು ಧರಿಸಿ ಉತ್ಸವದ ನೇತೃತ್ವ ವಹಿಸಿದ್ದರು. ಅವರ ಹಿಂದೆ ಸಾವಿರಾರು ಸದ್ಭಕ್ತರು ವಿಶೇಷವಾಗಿ ತಯಾರಿಸಿದ ಹಣತೆಗಳನ್ನು ತಲೆಯ ಮೇಲೆ ಹೊತ್ತುಕೊಂಡು ಮಠದ ಸುತ್ತಲೂ ಐದು ಸುತ್ತು ಪ್ರದಕ್ಷಿಣೆ ಹಾಕಿದರು.

ಪುರವಂತಿಕೆ, ಪೂರ್ಣಕುಂಭ, ಭಾಜಾ-ಭಜಂತ್ರಿ, ವೈದಿಕರ ವೇದಘೋಷಗಳ ಮಧ್ಯೆ ನಡೆದ ಈ ಉತ್ಸವವು ಮಧ್ಯರಾತ್ರಿ 12 ಗಂಟೆಗೆ ಪ್ರಾರಂಭವಾಗಿ ಬೆಳಗಿನ ಬ್ರಾಹ್ಮಿಣಿ ಮೂಹೂರ್ತದಲ್ಲಿ ಸಂಪನ್ನಃಗೊಳ್ಳುತ್ತದೆ.

ಮಧ್ಯರಾತ್ರಿ ಸ್ನಾನಾದಿಗಳನ್ನು ಪೂರೈಸಿಕೊಂಡು, ಗದ್ದುಗೆಗೆ ನಮಿಸಿ, ಗೋದಿಹಿಟ್ಟಿನಿಂದ ವಿಶೇಷ ಪ್ರಣತೆಗಳನ್ನು ತಯಾರಿಸಿ ಅದರಲ್ಲಿ ಜ್ಯೋತಿ ಪ್ರಜ್ವಲಿಸಿ ಮಹಾಗುರುವಿಗೆ ಬೆಳಗಿ ಭಕ್ತರು ಧನ್ಯತೆಯನ್ನು ಅನುಭವಿಸಿದರು.

ಭಕ್ತರು ಬೇಡಿಕೊಂಡ ಇಷ್ಟಾರ್ಥಗಳು ಈಡೇರಿದ ನಂತರ ತನಾರತಿ ಹರಕೆಯನ್ನು ಸಲ್ಲಿಸುವ ಪರಂಪರೆ ಕಳೆದ ಮೂರು ಶತಮಾನಗಳಿಂದಲೂ ಶ್ರೀಮಠದಲ್ಲಿ ನಡೆಯುತ್ತಾ ಬಂದಿದ್ದು ನಾಲವಾರ ಶ್ರೀಮಠದ ಪಾರಂಪರಿಕ ಉತ್ಸವವಾಗಿದೆ .

ತನಾರತಿ ಸಂದರ್ಭದಲ್ಲಿ ದೀಪಗಳ ಸಾಲು ನದಿಯ ರೀತಿ ಹರಿಯುವ ದೃಶ್ಯ ಕಣ್ಮನ ಸೆಳೆಯುತ್ತದೆ. ಈ ರೀತಿಯ ವೈಶಿಷ್ಟ್ಯ ಪೂರ್ಣ ಉತ್ಸವ ನಾಡಿನ ಯಾವುದೇ ಭಾಗದಲ್ಲಿ ಕಾಣಸಿಗುವುದಿಲ್ಲ. ಈ ಉತ್ಸವ ಆರಂಭವಾಗುತ್ತಿದ್ದಂತೆ ಶ್ರೀ ಕ್ಷೇತ್ರ ಸನ್ನತಿ ವೇದ ಪಾಠ ಶಾಲೆಯ ಮಕ್ಕಳಿಂದ ಸಂಸ್ಕೃತ ವೇದಘೋಷಗಳು ಮೊಳಗಿದವು.

ಈ ಸಂದರ್ಭದಲ್ಲಿ ಶ್ರೀಮಠದ ಕಾರ್ಯದರ್ಶಿಗಳಾದ ಸದಾಶಿವಪ್ಪನವರು ಶ್ರೀಮಠದ ಸರ್ವ ಶಿಷ್ಯ ವೃಂಧದವರು, ಸಹಸ್ರಾರು ಸದ್ಭಕ್ತರು ತನಾರತಿಗೆ ಸಾಕ್ಷಿಯಾದರು.

Comments

Popular posts from this blog