ಜಿಲ್ಲಾಡಳಿತದಿಂದ ಅದ್ಧೂರಿಯಾಗಿ ಬಸವ ಜಯಂತಿ ಆಚರಣೆ : ಬಸವಣ್ಣನವರ ಆದರ್ಶಗಳನ್ನು ಅಳವಡಿಸಿಕೊಳ್ಳಿ- ಸಂಸದ ಜಿ.ಕುಮಾರ ನಾಯಕ
ಜಯ ಧ್ವಜ ನ್ಯೂಸ್ ರಾಯಚೂರು, ಏ.30- 12 ನೆಯ ಶತಮಾನದಲ್ಲಿ ಸಮಾನತೆ ಸಾರಿದ ಬಸವಣ್ಣನವರ ಆದರ್ಶಗಳನ್ನು ಎಲ್ಲರ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ರಾಯಚೂರು ಲೋಕಸಭಾ ಸದಸ್ಯರಾದ ಜಿ.ಕುಮಾರ ನಾಯಕ ಅವರು ಹೇಳಿದರು.
ಅವರಿಂದು ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ರಾಯಚೂರು ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಹಮ್ಮಿಕೊಂಡಿದ್ದ ಬಸವ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಸಮಾಜದಲ್ಲಿರುವ ಪ್ರತಿಯೊಂದು ಸಮಸ್ಯೆಗಳಿಗೂ ವಿಶ್ವಗುರು ಬಸವಣ್ಣನವರ ಸಂದೇಶಗಳಲ್ಲಿ ಪರಿಹಾರವಿದೆ. ಬಸವಣ್ಣನವರ ಸಂದೇಶಗಳು ಸರ್ವಕಾಲಕ್ಕೂ ಜೀವಂತವಾಗಿರುತ್ತವೆ. ಅವರ ವಚನಗಳಲ್ಲಿರುವ ಅಂಶಗಳು ಇಂದಿಗೂ ಜೀವಂತವಾಗಿವೆ ಎಂದರು.
ಸಮಾಜದಲ್ಲಿ ಸಮಾನತೆಯೆಂಬುವುದು ಇರಬೇಕು ಶರಣ ಬಸವಣ್ಣನ ಮಾತು ಪೂರ್ಣವಾಗಿ ಆಚರಣೆಗೆ ತರಬೇಕು. ಸಮಾಜದ ಪ್ರತಿಯೊಬ್ಬರೂ ಕೂಡ ಅವರ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಅವಶ್ಯಕತೆಯಿದೆ ಎಂದು ಹೇಳಿದರು.
ಗುರು ಬಸವಣ್ಣನ ಜಯಂತಿಯ ದಿನದಂದು ಅವರ ಸಂದೇಶ ನೆನಸಿಕೊಳ್ಳುತ್ತಿರುವುದು ಆಶಾದಾಯಕ ಹೆಜ್ಜೆಯಾಗಿದ್ದು, ಮನುಷ್ಯರ ನಡುವೆ ಸೌಹಾರ್ಧತೆ ಇರಬೇಕು ಹಣ, ಜಾತಿ, ಸೇರಿದಂತೆ ಅನೇಕ ಕಾರಣಗಳಿಂದ ಸೌಹಾರ್ಧತೆ ಕಳೆದುಹೋಗುತ್ತಿವೆ ಎಂದರು.
ಬಸವಣ್ಣ ನೀಡಿದ ವಚನಗಳಲ್ಲಿರುವ ಸಂದೇಶವನ್ನು ಅಕ್ಷರ ಜ್ಞಾನವಿಲ್ಲದವರು ಕೂಡ ಅರ್ಥ ಮಾಡಿಕೊಳ್ಳುತ್ತಾರೆ. ಸಮಾಜಕ್ಕೆ ಉತ್ತಮ ಸಂದೇಶವನ್ನು ಗಟ್ಟಿಯಾಗಿ ಹೇಳಿದ್ದಾರೆ ಎಂದರು.
ಈ ವೇಳೆ ರಾಯಚೂರು ನಗರ ಕ್ಷೇತ್ರದ ಶಾಸಕ ಡಾ.ಶಿವರಾಜ ಎಸ್. ಪಾಟೀಲ್ ಅವರು ಮಾತನಾಡಿ, ಬಸವಣ್ಣನವರ ತತ್ವ, ಸಿದ್ಧಾಂತಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಪಾಲನೆ ಮಾಡಿದಾಗ ಮಾತ್ರ ಜಯಂತಿ ಆಚರಣೆ ಸಾರ್ಥಕವಾಗುತ್ತದೆ. ರಾಯಚೂರಿನಲ್ಲಿ ಯಾವುದೇ ಉಪ ಪಂಗಡಗಳನ್ನು ಮಾಡದೇ ಒಗ್ಗಟ್ಟಿನಿಂದ ಜಯಂತಿ ಆಚರಣೆ ಮಾಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು.
ಬಸವಣ್ಣನವರು 12 ಶತಮಾನದಲ್ಲಿ ಎಲ್ಲಾ ಸಮಾಜದವರನ್ನು ಒಗ್ಗೂಡಿಸಿಕೊಂಡು ಆಗಿನ ಕಾಲದಲ್ಲಿಯೇ ಅನುಭವ ಮಂಟಪವನ್ನು ಸ್ಥಾಪಿಸಿ ಇಂದಿನ ಸಂಸತ್ತಿನಲ್ಲಿ ಹೇಗೆ ಸಮಸ್ಯೆಗಳ ಬಗ್ಗೆ ಚರ್ಚೆಗಳು ನಡೆಯುತ್ತವೆಯೋ ಅದೇ ರೀತಿ ಆಂದಿನ ಶರಣ ಯುಗದಲ್ಲಿ ಸಮಾಜದ ಸಮಸ್ಯೆಗಳ ಕುರಿತು ಚರ್ಚೆಗಳು ನಡೆಯುತ್ತಿದ್ದವು ಎಂದರು.
ಈ ವೇಳೆ ಜಿಲ್ಲಾಧಿಕಾರಿಗಳಾದ ನಿತೀಶ್ ಕೆ. ಅವರು ಮಾತನಾಡಿ, ಕರ್ನಾಟಕ ರಾಜ್ಯ ಮಾತ್ರವಲ್ಲದೇ ಇಡೀ ದೇಶದಲ್ಲಿ ಅತ್ಯಂತ ಶ್ರೇಷ್ಠ ವ್ಯಕ್ತಿ ಬಸವಣ್ಣನವರಾಗಿದ್ದಾರೆ. ಶತಮಾನಗಳ ಹಿಂದೆ ಸಾಮಾಜಿಕ ಪರಿಸ್ಥಿತಿಯಲ್ಲಿ ಅಸಮಾನತೆ, ಬೇದ, ಭಾವ ಇದ್ದ ಸಂದರ್ಭದಲ್ಲಿ ಸ್ವಂತ ಜಾತಿಯನ್ನು ತೊರೆದು, ವರ್ಣದ ಆಧಾರದ ಮೇಲಿದ್ದ ಬೇದ ಭಾವ ವಿರುದ್ಧ ಹೋರಾಟ ಮಾಡಿದವರಾಗಿದ್ದಾರೆ ಎಂದರು.
ಸಮಾಜದ ಕಟ್ಟಕಡೆಯ ವ್ಯಕ್ತಿ, ಯಾವುದೇ ಜಾತಿಯಾಗಿರಲಿ, ಎಲ್ಲರೂ ಸಮಾನರು, ದೇವರ ಮುಂದೆ ಎಲ್ಲರೂ ಸಮಾನರು. ಈಗಲು ಅವರ ಸಂದೇಶ ಜೀವಂತವಾಗಿದ್ದು, ಆದರೆ ಸಮಾಜದಲ್ಲಿ ಇನ್ಮೂ ಅಸಮಾನತೆ ಕಾಣಸಿಗುತ್ತಿದೆ. ಅಸಮಾನತೆಯನ್ನು ತೊಲಗಿಸಲು ಪ್ರತಿಯೊಬ್ಬರು ಕೈಜೋಡಿಸಬೇಕು. ಕಡು ಬಡವರು, ಧಮನಿತರಿಗೆ, ಶೋಷಿತರಿಗೆ ಶೈಕ್ಷಣಿಕ ಬಲನೀಡಬೇಕು. ಶಿಕ್ಷಣ ಪಡೆದುಕೊಳ್ಳಬೇಕು. ಬಸವಣ್ಣನವರು ಪ್ರಜಾಪ್ರಭುತ್ವದ ಪ್ರಥಮ ಬುನಾಧಿಯನ್ನು ಹಾಕಿದವರು, ಮುಂದಿನ ದಿನಗಳಲ್ಲಿ ಅವರ ಆದರ್ಶ, ತತ್ವಗಳನ್ನು ಜೀವನದಲ್ಲಿ ಪಾಲಿಸಬೇಕು. ಅವರ ಕನಸ್ಸು ನನಸ್ಸಾಗುವಂತೆ ಮಾಡಬೇಕು ಎಂದು ಹೇಳಿದರು.
ಉಪನ್ಯಾಸಕರಾಗಿ ಕಲಬುರಗಿ ಶರಣ ಸಾಹಿತಿ ಮಹಾಂತೇಶ ಎಸ್.ಕುಂಬಾರ ಹೊವಿನಹಳ್ಳಿ ಅವರು ಮಾತನಾಡಿ, ಈ ನೆಲದ ಸಾಂಸ್ಕೃತಿಕ ಪುರುಷರಾಗಿ ಬಸವಣ್ಣನವರನ್ನು ಸ್ವೀಕರಿಸಲಾಗಿದೆ. ಬಸವಣ್ಣನವರ ಸಂದೇಶ ತತ್ವಗಳನ್ನು ಇಡೀ ಜಗತ್ತಿಗೆ ಪಸರಿಸುವ ವಿಶೇಷವಾದ ಜವಾಬ್ದಾರಿ ಈ ನಾಡಿನ ನಾಗರಿಕರಲ್ಲಿದೆ. ಕಾಯಕ ಧರ್ಮ ಎಂಬ ರಾಷ್ಟ್ರಧರ್ಮವನ್ನು ಇಡೀ ಜಗತ್ತಿಗೆ ನೀಡಿದ ಏಕೈಕ ಶರಣ ಬಸವಣ್ಣನವರಾಗಿದ್ದು, ಅವರ ಧರ್ಮವನ್ನು ಪಸರಿಸುವ ಕಾರ್ಯ ಜಾಗತಿಕವಾಗಿ ಆಗಬೇಕಿದೆ. ಅದರೆ ಸಂಸ್ಕೃತಿ, ಪರಂಪರೆಯನ್ನು ,ತತ್ವಗಳನ್ನು ಮರೆತು ಇಡೀ ಜಗತ್ತು ಬದಲಾಗುತ್ತಿದೆ. ಶ್ರೇಷ್ಠ ಧರ್ಮವನ್ನೂ ನೀಡಿದ್ದಾರೆ. ಸಮಾನತೆಯ ಸಮಾಜವನ್ನೂ ನೀಡಿದ್ದಾರೆ. ಎಲ್ಲದ್ದಕ್ಕೂ ಮಿಗಿಲಾಗಿ ಕಾಯಕವನ್ನು ಇಡೀ ಜಗತ್ತಿಗೆ ನೀಡಿದ್ದಾರೆ. ಅವರು ನೀಡಿದ ಧರ್ಮ ಜಾತಿಗೆ, ರಾಜ್ಯಕ್ಕೆ ಸೀಮಿತವಾದ ಧರ್ಮವಲ್ಲ. ರಾಷ್ಟ್ರ ಧರ್ಮವಾಗಿದೆ ಎಂದು ಹೇಳಿದರು.
ಜಗಜ್ಯೋತಿ ಬಸವೇಶ್ವರ ಪ್ರತಿಮೆಗೆ ಸಚಿವರಿಂದ ಮಾಲಾರ್ಪಣೆ
12ನೆಯ ಶತಮಾನದಲ್ಲಿ ಸಮಾನತೆ ಸಾರಿದ ಬಸವಣ್ಣನವರ ಜಯಂತಿ ಅಂಗವಾಗಿ ಇಂದು ಬೆಳಿಗ್ಗೆ ನಗರದ ಬಸವೇಶ್ವರ ವೃತ್ತದ ಪ್ರತಿಮೆಗೆ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಎಸ್.ಭೋಸರಾಜು ಅವರು ಮಾಲಾರ್ಪಣೆ ಮಾಡಿ, ನಮನ ಸಲ್ಲಿಸಿದರು.
ಈ ವೇಳೆ ಚಿಕ್ಕಸುಗೂರು ಚೌಕಿ ಮಠದ ಡಾ.ಸಿದ್ದಲಿಂಗ ಸ್ವಾಮೀಜಿ, ವಿಧಾನ ಪರಿಷತ್ ಸದಸ್ಯರಾದ ಎ.ವಸಂತ ಕುಮಾರ, ಮಹಾನಗರ ಪಾಲಿಕೆ ಅಧ್ಯಕ್ಷೆ ನರಸಮ್ಮ ನರಸಿಂಹಲು ಮಾಡಗಿರಿ, ಎಪಿಎಂಸಿ ಅಧ್ಯಕ್ಷ ಮಲ್ಲಿಕಾರ್ಜುನಗೌಡ, ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ರಾಜಶೇಖರ ರಾಮಸ್ವಾಮಿ, ರಾಯಚೂರು ಮಹಾನಗರ ಪಾಲಿಕೆಯ ಆಯುಕ್ತರಾದ ಜುಬಿನ್ ಮೊಹೊಪಾತ್ರ, ರಾಯಚೂರು ಸಹಾಯಕ ಆಯುಕ್ತರಾದ ಗಜಾನನ ಬಾಳೆ, ರಾಯಚೂರು ತಹಶೀಲ್ದಾರ್ ಸುರೇಶ ವರ್ಮ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಹರೀಶ್, ಸಮಾಜದ ಮುಖಂಡರಾದ ಶರಣಬೂಪಾಲ ನಾಡಗೌಡ, ಚಂದ್ರಶೇಖರ ಮಿರ್ಜಾಪುರ, ರಾಚನಗೌಡ ಕೋಳೂರು, ಜೆ.ಬಸವರಾಜ, ಹರವಿ ನಾಗನಗೌಡ, ಶಿವಶರಣರೆಡ್ಡಿ, ಬಸವರಾಜ ದರೂರ ಸೇರಿದಂತೆ ಇತರರಿದ್ದರು.
Comments
Post a Comment