ಕ್ರಿಶ್ಚಯನ್ ಅಭಿವೃದ್ಧಿ ನಿಗಮದ ಅರ್ಹ ಫಲಾನುಭವಿಗಳು ಸರ್ಕಾರದ ಸೌಲಭ್ಯ ಪಡೆಯಿರಿ- ಸಂಜಯ್
ಜಯ ಧ್ವಜ ನ್ಯೂಸ್ , ರಾಯಚೂರು, ಮೇ 28- ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ಜಿಲ್ಲೆಯ ಪ್ರತಿಯೊಬ್ಬ ಅರ್ಹ ಫಲಾನುಭವಿಗಳು ಪಡೆಯಬೇಕೆಂದು ಕ್ರಿಶ್ಚಿಯನ್ ಅಭಿವೃದ್ಧಿ ನಿಗಮದ ಉಪಾಧ್ಯಕ್ಷರಾದ ಸಂಜಯ್ ಜಾಗೀರದಾರ್ ಹೇಳಿದರು.
ಅವರಿಂದು ನಗರದ ಪತ್ರಿಕಾಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ರಾಜ್ಯದ ವಿವಿಧ ನಿಗಮಗಳಿಂದ ಅನೇಕ ಸೇವೆ, ಸೌಲಭ್ಯಗಳನ್ನು ನೀಡಲಾಗುತ್ತಿದ್ದು, ಅಲ್ಪಸಂಖ್ಯಾತರ ಕಚೇರಿ ಸೇರಿದಂತೆ ನಿಗಮಕ್ಕೆ ಭೇಟಿ ನೀಡಿ ಯೋಜನೆ, ಸೌಲಭ್ಯಗಳ ಕುರಿತು ಮಾಹಿತಿ ಪಡೆಯಬೇಕು. ಅವುಗಳ ಸದುಪಯೋಗ ಪಡೆದುಕೊಳ್ಳಬೇಕು. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವಿವಿಧ ಸೌಲಭ್ಯ ಯೋಜನೆಗಳ ಬಗ್ಗೆ ಕರಪತ್ರಗಳನ್ನು ಹಂಚಿ ಫಲಾನುಭವಿಗಳಿಗೆ ಮಾಹಿತಿ ನೀಡುವಂತೆ ಕ್ರಮವಹಿಸಲು ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಿದ್ದೇನೆ ಎಂದು ಅವರು ಹೇಳಿದರು.
371 (ಜೆ) ಜಾರಿ ಮುಂಚೆ ಈ ಭಾಗದಲ್ಲಿ ವೈದ್ಯರ ಸಂಖ್ಯೆ ಕಡಿಮೆಯಿದ್ದು, 371(ಜೆ) ಜಾರಿ ನಂತರ ವೈದ್ಯರು ಸೇರಿದಂತೆ ಇಂಜಿನಿಯರಗಳ ಸಂಖ್ಯೆ ಹೆಚ್ಚಳವಾಗಿದೆ. ಇದಕ್ಕೆ ಮುಖ್ಯ ಕಾರಣ ಈ ಭಾಗದ ಹಿರಿಯ ರಾಜಕಾರಣಿಯಾದ ಮಲ್ಲಿಕಾರ್ಜುನ ಖರ್ಗೆ ಅವರಾಗಿದ್ದಾರೆ ಎಂದು ಹೇಳಿದರು.
ನಿಗಮದ ಕೈಪಿಡಿಯಲ್ಲಿ ಯೋಜನೆ ಕುರಿತು ಮಾಹಿತಿ ಒದಗಿಸಲಾಗಿದ್ದು ಪ್ರತಿಯೊಬ್ಬರೂ ಕೈಪಿಡಿ ಓದಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಬೇಕು. ಉನ್ನತ ಶಿಕ್ಷಣ ಪಡೆದು ಐಎಎಸ್ ಐಪಿಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು. ಶಿಕ್ಷಣಕ್ಕಾಗಿ ನಿಗಮದಿಂದ ಅನೇಕ ಸೌಲಭ್ಯಗಳನ್ನು ಒದಗಿಸಲಾಗುತ್ತಿದ್ದು, ಒಟ್ಟು 30 ಲಕ್ಷ ರೂಪಾಯಿಗಳಷ್ಟು ಸಹಾಯಧನವನ್ನು ವಿದೇಶದಲ್ಲಿ ವಿದ್ಯಾಭ್ಯಾಸಕ್ಕಾಗಿ ನೀಡಲಾಗುತ್ತಿದೆ. ಪಿಎಸ್‌ಐ ತರಬೇತಿ ಸಹ ನೀಡಲಾಗುತ್ತಿದೆ. ಅವುಗಳನ್ನು ಅರ್ಹ ಫಲಾನುಭವಿಗಳು ಬಳಸಿಕೊಳ್ಳಬೇಕು ಎಂದು ಹೇಳಿದರು.
ಕ್ರಿಶ್ಚಿಯನ್ ಅಭಿವೃದ್ಧಿ ನಿಗಮದಿಂದ ಶಿಕ್ಷಣ ಕ್ಷೇತ್ರಕ್ಕೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಶೇ.75ರಷ್ಟು ಫಲಿತಾಂಶ ಪಡೆದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತದೆ ಎಂದು ಹೇಳಿದರು.
ಈ ವೇಳೆ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿಗಳಾದ ಸಂಗಮೇಶ್ ಅವರು ಮಾತನಾಡಿ, ಜಿಲ್ಲೆಯ ವಸತಿ ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟ ಶಿಕ್ಷಣ ಜೊತೆಗೆ ಊಟ ಉಪಹಾರವನ್ನು ನೀಡಲಾಗುತ್ತಿದ್ದು, ಕೆಲವೊಂದು ವಸತಿ ಶಾಲೆಯಲ್ಲಿ ಕಾಟ್ ಗಳ ಕೊರತೆ ಇದ್ದು ಅದರ ಕುರಿತು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಮಾಹಿತಿ ಕೇಳಿದ್ದಾರೆ ಶೀಘ್ರದಲ್ಲೇ ಸಮಸ್ಯೆಯನ್ನು ಪರಿಹರಿಸಲಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ರಾಯಚೂರು ತಾಲೂಕು ವಿಸ್ತರಣಾಧಿಕಾರಿ ನರಸಿಂಹ ನಾಯಕ ಸೇರಿದಂತೆ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧಿಕಾರಿಗಳು ಇದ್ದರು.
Comments
Post a Comment