ರಾಷ್ಟ್ರ ಮಟ್ಟದಲ್ಲಿ  ಕೃಷಿ ವಿವಿಗೆ ಉತ್ತಮ ಹೆಗ್ಗಳಿಕೆ:     
ಮೇ.26 ರಂದು ಕೃಷಿ ವಿವಿಯಲ್ಲಿ 14 ನೇ ಘಟಿಕೋತ್ಸವ-ಡಾ.ಎಂ.ಹನುಮಂತಪ್ಪ

ಜಯ ಧ್ವಜ ನ್ಯೂಸ್ ರಾಯಚೂರು ಮೇ.24 -   ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ 14ನೇ ಘಟಿಕೋತ್ಸವ ಮೇ.26ರ ಬೆಳಿಗ್ಗೆ 11 ಗಂಟೆಗೆ ವಿಶ್ವವಿದ್ಯಾಲಯದ ಪ್ರೇಕ್ಷಾಗೃಹದಲ್ಲಿ ನಡೆಯಲಿದೆ ಎಂದು ಕೃಷಿ ವಿವಿ ಕುಲಪತಿಗಳಾದ ಡಾ.ಎಂ.ಹನುಮಂತಪ್ಪ ಅವರು ಹೇಳಿದರು.  

 ಅವರಿಂದು ನಗರದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಅಂತಾರಾಷ್ಟ್ರೀಯ ಅತಿಥಿ ಗೃಹದಲ್ಲಿ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ  ಮಾತನಾಡಿದರು. 

 ಕಾರ್ಯಕ್ರಮದಲ್ಲಿ ಘನತವೆತ್ತ ರಾಜ್ಯಪಾಲರು ಹಾಗೂ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಾಧಿಪತಿಗಳು ಆಗಿರುವ ಥಾವರ್ ಚಂದ್ ಗೆಹ್ಲೋಟ್ ಅವರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ .  ವಿಶ್ವವಿದ್ಯಾಲಯದ ಸಹ ಕುಲಾಧಿಪತಿ ಹಾಗೂ ಕೃಷಿ ಸಚಿವರಾದ ಎನ್. ಚೆಲುವರಾಯಸ್ವಾಮಿ ಅವರು ಘಟಿಕೋತ್ಸವಕ್ಕೆ ಚಾಲನೆ ನೀಡಲಿದ್ದಾರೆ ಎಂದರು. ಘಟಿಕೋತ್ಸವದ  ಮುಖ್ಯ ಅತಿಥಿಗಳಾಗಿ ಹಾಗೂ ಘಟಿಕೋತ್ಸವ ಮುಖ್ಯ ಭಾಷಣಕಾರರಾಗಿ ಭಾರತೀಯ ವಿಶ್ವವಿದ್ಯಾಲಯಗಳ ಸಂಘದ ಗೌರವಾನ್ವಿತ ಮಹಾಕಾರ್ಯದರ್ಶಿಗಳಾದ ಡಾ. ಪಂಕಜ ಮಿತ್ತಲ್ ಅವರು ಆಗಮಿಸುತ್ತಿದ್ದಾರೆ. ಜೊತೆಗೆ ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ವ್ಯವಸ್ಥಾಪನಾ ಮಂಡಳಿಯ ಗೌರವಾನ್ವಿತ ಸದಸ್ಯರುಗಳು, ವಿದ್ಯಾವಿಷಯಕ ಪರಿಷತ್ತಿನ ಸದಸ್ಯರುಗಳು, ಪದವಿ ಪುರಸ್ಕೃತ ವಿದ್ಯಾರ್ಥಿಗಳು ಮತ್ತು ಪೋಷಕರು, ಗಣ್ಯರು, ಹಿತೈಷಿಗಳು ಹಾಗೂ ವಿಶ್ವವಿದ್ಯಾಲಯದ ಅಧಿಕಾರಿಗಳು ಉಪಸ್ಥಿತರಿರುವರು ಎಂದರು. 


ಕೃಷಿಯಲ್ಲಿ ಸ್ನಾತಕ ಪದವಿಯನ್ನು ರಾಯಚೂರು, ಭೀಮರಾಯನಗುಡಿ, ಕಲಬುರಗಿ, ಗಂಗಾವತಿ ಮತ್ತು ಹಗರಿಗಳಲ್ಲಿ ಸ್ಥಾಪಿತವಾದ ಮಹಾವಿದ್ಯಾಲಯಗಳಲ್ಲಿ ನಡೆಸಲಾಗುತ್ತಿದೆ. ಕೃಷಿ ತಾಂತ್ರಿಕ ಸ್ನಾತಕ ಪದವಿಯನ್ನು ರಾಯಚೂರಿನ ಕೃಷಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಅಭ್ಯಸಿಸಲಾಗುತ್ತಿದೆ. ರಾಯಚೂರು ಆವರಣದ ವಿವಿಧ ವಿಭಾಗಗಳಲ್ಲಿ 15 ಸ್ನಾತಕೋತ್ತರ ಹಾಗೂ 14 ಪಿ.ಹೆಚ್.ಡಿ ಪದವಿ ಕಾರ್ಯಕ್ರಮಗಳನ್ನು ನಿರ್ವಹಿಸಲಾಗುತ್ತಿದೆ. 

2022-23ನೇ ಸಾಲಿನಲ್ಲಿ 464 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದು ವಿವಿಯಲ್ಲಿ 2022-23ನೇ ಸಾಲಿನಲ್ಲಿ ಸ್ನಾತಕ ಪದವಿಗೆ 216 ವಿದ್ಯಾರ್ಥಿನಿಯರು ಸೇರಿದಂತೆ ಒಟ್ಟು 464 ವಿದ್ಯಾರ್ಥಿಗಳು ಪ್ರವೇಶ ಪಡೆದಿರುತ್ತಾರೆ. ಕೃಷಿ ಪದವಿಗೆ 387 ವಿದ್ಯಾರ್ಥಿಗಳು, ಬಿ.ಟೆಕ್ ಕೃಷಿ ತಾಂತ್ರಿಕ ಪದವಿಗೆ ಒಟ್ಟು 77 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಅಲ್ಲದೇ ಸ್ನಾತಕೋತ್ತರ ಪದವಿಗಳಿಗೆ 132, ಪಿ.ಹೆಚ್.ಡಿ ಕೋರ್ಸಗಳಿಗೆ 43 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದು, ಅದರಲ್ಲಿ ಒಟ್ಟು 82 ವಿದ್ಯಾರ್ಥಿನಿಯರು ಪ್ರವೇಶ ಪಡೆದಿರುತ್ತಾರೆ. ಕೃಷಿ ಡಿಪ್ಲೋಮಾ ಅಧ್ಯಯನಕ್ಕೆ 77 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ ಎಂದರು. 

ಸ್ನಾತಕ ಪದವಿ ಯೋಜನೆಯಲ್ಲಿ 65 ವಿದ್ಯಾರ್ಥಿಗಳಿಗೆ ಕೃವಿವಿಯ ಮೆರಿಟ್ ಹಾಗೂ 17 ವಿದ್ಯಾರ್ಥಿಗಳಿಗೆ ಸಾಮಾನ್ಯ ಶಿಷ್ಯವೇತನ ದೊರೆತಿದೆ. ಸ್ನಾತಕೋತ್ತರ ವಿಭಾಗದಲ್ಲಿ 50 ವಿದ್ಯಾರ್ಥಿಗಳು ಕೃವಿವಿ ಮೆರಿಟ್ ಶಿಷ್ಯವೇತನಗಳನ್ನೂ ಮತ್ತು 174 ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಪ್ರೋತ್ಸಾಹಕ ಶಿಷ್ಯವೇತನಗಳನ್ನು, 3 ವಿದ್ಯಾರ್ಥಿಗಳು ರಾಜೀವ್ ಗಾಂಧಿ ಫೆಲೋಶಿಫ್‌ಗಳನ್ನೂ, 3 ವಿದ್ಯಾರ್ಥಿಗಳು ಯುಜಿಸಿ, ಎನ್‌ಇಟಿ, ಜೆಆರ್‌ಎಫ್ ಶಿಷ್ಯವೇತನವನ್ನು ಪಡೆದಿರುತ್ತಾರೆ. 3 ವಿದ್ಯಾರ್ಥಿಗಳು ಕೃಷಿ ನೇಮಕಾತಿ ಸೇವಾ ಪರೀಕ್ಷೆಯಲ್ಲಿ ಮತ್ತು 37 ವಿದ್ಯಾರ್ಥಿಗಳು ರಾಷ್ಟೀಯ ಅರ್ಹತಾ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ ಎಂದರು. 

 ಕೃಷಿ ವಿವಿಯ 14ನೇ ಘಟಿಕೋತ್ಸವದಲ್ಲಿ 352 ವಿದ್ಯಾರ್ಥಿಗಳಿಗೆ ಸ್ನಾತಕ ಪದವಿ, 136 ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಪದವಿ ಹಾಗೂ 39 ವಿದ್ಯಾರ್ಥಿಗಳಿಗೆ ಡಾಕ್ಟರೇಟ್ ಪದವಿಗಳನ್ನು ಪ್ರದಾನ ಮಾಡಲಾಗುತ್ತಿದೆ. ಇವರಲ್ಲಿ ವಿದ್ಯಾರ್ಥಿನಿಯರು 152 ಸ್ನಾತಕ ಪದವಿ, 62 ಸ್ನಾತಕೋತ್ತರ ಪದವಿ ಹಾಗೂ 19 ಡಾಕ್ಟರೇಟ್ ಪದವಿಗಳನ್ನು ಹೊಂದುತ್ತಿದ್ದು, ಸ್ನಾತಕ ಪದವಿಯಲ್ಲಿ 27 ಚಿನ್ನದ ಪದಕಗಳನ್ನು ಮತ್ತು 2 ಸ್ನಾತಕ ವಿದ್ಯಾರ್ಥಿಗಳಿಗೆ ನಗದು ಬಹುಮಾನ, ಸ್ನಾತಕೋತ್ತರ ಪದವಿಯಲ್ಲಿ 17 ಚಿನ್ನದ ಪದಕಗಳನ್ನು ಹಾಗೂ 15 ಚಿನ್ನದ ಪದಕಗಳನ್ನು ಡಾಕ್ಟರೇಟ್ ಪದವಿ ವಿದ್ಯಾರ್ಥಿಗಳಿಗೆ ಗೌರವಾನ್ವಿತ ರಾಜ್ಯಪಾಲರು ಪ್ರದಾನ ಮಾಡಲಿದ್ದಾರೆ. ಈ ಘಟಿಕೋತ್ಸವದಲ್ಲಿ ಕೃಷಿ ಮತ್ತು ಕೃಷಿಯೇತರ ಚಟುವಟಿಕೆಗಳಲ್ಲಿ ಉತ್ಕೃಷ್ಠ ಸಾಧನೆ ಮಾಡಿದ ಒಬ್ಬ ರೈತರಿಗೆ ಗೌರವ ಡಾಕ್ಟರೇಟ್ ಪ್ರಶಸ್ತಿಯನ್ನು ಪ್ರಧಾನ ಮಾಡಲಾಗುತ್ತದೆ ಎಂದರು. 

ವಿಶ್ವವಿದ್ಯಾಲಯದ ಗ್ರಂಥಾಲಯವು ಕೃಷಿಜ್ಞಾನ ಭಂಡಾರವಾಗಿದ್ದು, ಒಟ್ಟು 61,071 ಪುಸ್ತಕಗಳನ್ನೂ, 9603 ಏಕೀಕೃತ ಸಂಪುಟಗಳನ್ನೂ, 3167 ಪ್ರಬಂಧಗಳನ್ನೂ, 471 ಕೃಷಿ ಸಂಬಂಧಿಸಿದ ವಾರ್ಷಿಕ ವರದಿಗಳನ್ನೂ, 250ಕ್ಕೂ ಹೆಚ್ಚು ಕೃಷಿ ವಿಶ್ವವಿದ್ಯಾಲಯ ಮತ್ತು ಕೃಷಿಗೆ ಸಂಬಂಧಿಸಿದ ಸಂಸ್ಥೆಗಳ ವಾರ್ಷಿಕ ವರದಿಗಳ ಭಂಡಾರವನ್ನು ಹೊಂದಿದೆ. ಅಲ್ಲದೇ, 4 ಸಾವಿರಕ್ಕೂ ಹೆಚ್ಚು ವಿದ್ಯುನ್ಮಾನ ನಿಯತಕಾಲಿಕೆಗಳ ಪ್ರಯೋಜನೆಗಳನ್ನು ಹಾಗೂ ಬಳಕೆಯ ಕ್ರಮವನ್ನು ಸಿಇಆರ್‌ಎ ಒಕ್ಕೂಟದಲ್ಲಿ ಭಾಗವಹಿಸುವ ಮೂಲಕ ಸುಗಮಗೊಳಿಸಿದೆ ಎಂದರು. 

 ವಿಶ್ವವಿದ್ಯಾಲಯದ ಪ್ರಾರಂಭದಿಂದ ಇಲ್ಲಿವರೆಗೆ 597 ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲಾಗಿದು,್ದ ಅವುಗಳಲ್ಲಿ 66 ಬೆಳೆ ಉತ್ಪಾದನೆ ಹೆಚ್ಚಿಸುವುದು. 545 ತಂತ್ರಜ್ಞಾನಗಳು ಸಸ್ಯ ಸಂರಕ್ಷಣೆ, ಕೃಷಿ ತಾಂತ್ರಿಕ ಅನ್ವಯಿಕವಾಗಿವೆ. ಮತ್ತು ಎಲ್ಲ ತಂತ್ರಜ್ಞಾನಗಳು ಕಲ್ಯಾಣ ಕರ್ನಾಟಕ ಭಾಗದ ರೈತರ ಶಕ್ತಿ ಮತ್ತು ಸಮಯವನ್ನು ಉಳಿತಾಯ ಮಾಡಿರುವುದಲ್ಲದೆ ಅವರ ಆದಾಯವನ್ನು ದ್ವಿಗುಣಗೊಳಿಸಲು ಸಹಾಯಕವಾಗಿವೆ ಎಂದರು. 2022-23ನೇ ಸಾಲಿನಲ್ಲಿ ಸುಧಾರಿತ ತಳಿಗಳು ಸೇರಿದಂತೆ ಅನೇಕ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಿ ರೈತರ ಬಳಕೆಗೆ ಬಿಡುಗಡೆಗೊಳಿಸಲಾಗಿದೆ ಎಂದರು. 

ಪ್ರಮುಖವಾಗಿ ಭತ್ತದಲ್ಲಿ ಪೌಷ್ಠಿಕಾಂಶ ಬಲವರ್ಧಿತ ತಳಿಯಾದ ಜಿಎನ್‌ವಿ-1109ಯು ಈ ಭಾಗದಲ್ಲಿ ತಲೆದೋರಿರುವ ಅಪೌಷ್ಠಕತೆಯನ್ನು ಹೋಗಲಾಡಿಸುವ ಆಶಾಭಾವನೆಯನ್ನು ಹೊಂದಿದೆ. ಕೊರಲೆ ಬೆಳೆಯಲ್ಲಿ ಹೆಚ್‌ಬಿಆರ್-2, ಶೇಂಗಾದಲ್ಲಿ ಐಸಿಆರ್‌ಸಿ-1 ತಳಿಗಳು ಬಿಡುಗಡೆಗೊಂಡಿದ್ದು, ಬೆಳೆಗಾರರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ ಎಂದರು. 2022-23ನೇ ಸಾಲಿನಲ್ಲಿ ಒಟ್ಟು 7,292 ಕ್ವಿಂಟಲ್ ಪ್ರಮಾಣೀಕರಿಸಿದ ಬೀಜಗಳನ್ನು ಉತ್ಪಾದಿಸಿ ರೈತರಿಗೆ ಒದಗಿಸಿದೆ. ಅಲ್ಲದೇ ವಿಶ್ವವಿದ್ಯಾಲಯವು 67,965 ಕೆ.ಜಿ ಜೈವಿಕ ಪರಿಕರ ಮತ್ತು ಸಾವಯವ ಗೊಬ್ಬರಗಳನ್ನು ಉತ್ಪಾದಿಸಿ ರೈತರಿಗೆ ರಿಯಾಯಿತಿ ದರದಲ್ಲಿ ವಿತರಿಸಿದೆ. ವಿಶ್ವವಿದ್ಯಾಲಯದ ಸಂಸ್ಕರಣೆ ಮತ್ತು ಆಹಾರ ತಾಂತ್ರಿಕತೆ, ಸಸ್ಯ ರೋಗ ಶಾಸ್ತ್ರ ನವೀಕರಿಸಬಹುದಾದ ಶಕ್ತಿ ತಂತ್ರಜ್ಞಾನ ವಿಷಯಗಳಲ್ಲಿ 3 ಪೇಟೆಂಟ್‌ಗಳು ವಿಶ್ವವಿದ್ಯಾಲಯಕ್ಕೆ ದೊರೆತಿರುವುದು ಸಂತಸ ತಂದಿದೆ ಎಂದರು. 

ಕೃಷಿಯಲ್ಲಿ ಸಾಧನೆ ಮಾಡಿದ ಮತ್ತು ಪ್ರಗತಿಪರ ಕೃಷಿ ಮಾಡಿರುವ ರೈತರೋರ್ವರಿಗೆ ಪ್ರಶಸ್ತಿ ನೀಡಲಾಗುತ್ತದೆ ಎಂದು ಅವರು ಗಂಗಾವತಿ ಸೋನಾ ಮಸೂರಿ ತಿಳಿ ಅಭಿವೃದ್ಧಿ ನಮ್ಮ ವಿವಿಯಿಂದಲೆ ಆಗಿದ್ದು ಸವಳು ಭೂಮಿಯಲ್ಲಿ ಅಧಿಕ ಇಳುವರಿ ನೀಡುತ್ತದೆ ಚುರುಮುರಿ ತಯಾರಿಕೆಗೆ ಬಳಸಲಾಗುತ್ತದೆ ಮಕ್ಕಳಲ್ಲಿ ಪೌಷ್ಟಿಕಾಂಶ ಕೊರತೆ ನೀಗಿಸುತ್ತದೆ ಎಂದರು.                                                   ಕೃಷಿ ವಿವಿ ಸಹಾಯಕ ಪ್ರಾಧ್ಯಾಪಕಕರಿಗೆ ವೇತನ ಬಿಡುಗಡೆ ಪ್ರಕ್ರಿಯೆ ನಡೆಯುತ್ತಿದೆ ಎಂದು ಅವರು ವಿವಿಯಿಂದ ನವ ಉದ್ಯಮಿಗಳಿಗೆ ಸ್ಟಾರ್ಟ್ ಅಪ್ ಅಡಿ ಸಿರಿ ಧಾನ್ಯ ಖಾದ್ಯ ತಯಾರಿಕೆಗೆ ಅನುವು ಮಾಡಿಕೊಡಲಾಗುತ್ತದೆ ಎಂದರು. ಮುಂಗಾರು ಪೂರ್ವ ಮಳೆ ಹಿನ್ನೆಲೆಯಲ್ಲಿ ರೈತರಿಗೆ ಜಾಗೃತಿ ಮೂಡಿಸಲಾಗುತ್ತದೆ ಎಂದರು. ರಾಷ್ಟ್ರ ಮಟ್ಟದಲ್ಲಿ ವಿವಿಗೆ ಉತ್ತಮ ಮನ್ನಣೆಯಿದ್ದು ಸೂರ್ಯಕಾಂತಿ ಮತ್ತು ಸಿರಿಧಾನ್ಯ ತಳಿ ಅಭಿವೃದ್ಧಿಪಡಿಸಿದ್ದಕ್ಕಾಗಿ ಉತ್ತಮ‌ ಹೆಗ್ಗಳಿಕೆ ಲಭಿಸಿದೆ ಎಂದರು.  ಕೆ ಕೆ ಆರ್ ಡಿ ಬಿ ಯಿಂದ ಕೈಗೊಳ್ಳುವ ಕನ್ವೆಂಷನ್ ಸೆಂಟರ್ ಕಟ್ಟಡ ನಿರ್ಮಾಣಕ್ಕೆ ಅರ್ಧ ಎಕರೆ ಭೂಮಿ ನೀಡಲಾಗುತ್ತದೆ ಇದರಿಂದ ವಿವಿಗೆ ಕಾರ್ಯಕ್ರಮ ಆಯೋಜನೆಗೆ ಅನುಕೂಲವಾಗುತ್ತದೆ ಕಟ್ಟಡ ಒಡೆತನ ವಿವಿ ಅಡಿ ಬರುತ್ತದೆ ಎಂದರು.                                           ಈ  ಸಂದರ್ಭದಲ್ಲಿ  ವಿವಿಯ  ಕುಲ ಸಚಿವರಾದ ಡಾ.ಕೆ.ಆರ್.ದುರುಗೇಶ್, ಅಮರೇಗೌಡ , ಶಿವಶಂಕರ್,  ಡಾ.ಗುರುರಾಜ್ ಸುಂಕದ, ಜಾಗೃತಿ ದೇಶಮಾನೆ, ಸತೀಶ್ ಕುಮಾರ್ ಸೇರಿದಂತೆ ಇನ್ನಿತರರು ಇದ್ದರು.


Comments

Popular posts from this blog