ಡ್ರಗ್ಸ್ ಬಳಕೆ ತಡೆಗಟ್ಟಲು ಪ್ರತಿಯೊಬ್ಬರ ಸಹಕಾರ ಅಗತ್ಯ -ಜಿಲ್ಲಾಧಿಕಾರಿ ನಿತೀಶ್.ಕೆ
ಜಯ ಧ್ವಜ ನ್ಯೂಸ್ ,ರಾಯಚೂರು, ಮೇ 27- ಸಾಮಾನ್ಯ ಜನತೆಗೆ ಡ್ರಗ್ಸ್ ನಿಂದ ಉಂಟಾಗುವ ಹಾನಿಗಳ ಕುರಿತು ಅರಿವು ಮೂಡಿಸಲು ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ ಮತ್ತು ನವೋದಯ ಮೆಡಿಕಲ್ ಕಾಲೇಜ್ ಸಹಯೋಗದಲ್ಲಿ ಇಂದು ಡ್ರಗ್ ಕುರಿತು ಜಾಗೃತಿ ಕಾರ್ಯಕ್ರಮ ನಡೆಯಿತು.
ನಗರದ ನವೋದಯ ಮೆಡಿಕಲ್ ಕಾಲೇಜಿನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳಾದ ನಿತೀಶ್ ಕೆ ಅವರು ಮಾತನಾಡಿ, ನಮ್ಮ ಸಮಾಜದ ರಕ್ಷಣೆಗೆ ಇಂತಹ ಜಾಗೃತಿ ಅವಶ್ಯಕವಾಗಿದೆ ಯುವಜನತೆ ಸಮಾಜದ ಶಕ್ತಿಯಾಗಿದೆ. ಡ್ರಗ್ಸ್ ಬಳಕೆಯಿಂದಾಗಿ ಅವರ ಉಜ್ವಲ ಭವಿಷ್ಯ ಧ್ವಂಸವಾಗುತ್ತಿದೆ. ಇದನ್ನು ತಡೆಗಟ್ಟಲು ಪ್ರತಿಯೊಬ್ಬರು ಸಹಕಾರ ನೀಡಬೇಕು. ಡ್ರಗ್ಸ್ ಸೇವನೆ ಆರೋಗ್ಯಕ್ಕೆ ಮಾತ್ರವಲ್ಲ, ಮಾನಸಿಕವಾಗಿ ಕೂಡಾ ವ್ಯಕ್ತಿಯನ್ನು ತೀವ್ರವಾಗಿ ದುರ್ಬಲಗೊಳಿಸುತ್ತದೆ ಅಲ್ಲದೆ ಮಕ್ಕಳನ್ನು ಸೂಕ್ತ ಮಾರ್ಗದಲ್ಲಿ ಬೆಳೆಸುವ ಜವಾಬ್ದಾರಿ ಪೋಷಕರ ಮೇಲಿದೆ ಎಂದರು.
ಈ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಎಂ.ಪುಟ್ಟಮಾದಯ್ಯ ಅವರು ಮಾತನಾಡಿ, ಸಮಾಜಕ್ಕೆ ಮಾರಕವಾಗಿರುವ ಡ್ರಗ್ಸ್, ಗಾಂಜಾ, ಅಫೀಮ್ ಸೇವನೆಯಿಂದ ವ್ಯಕ್ತಿಯ ಆರೋಗ್ಯ ಹಾಳಾಗುತ್ತದೆ. ಆರೋಗ್ಯ ಹಾಳಾದರೆ ಸಮಾಜವು ಹಾಳಾಗುತ್ತದೆ. ಸಮಾಜವು ಹಾಳಾಗಲು ಅವಕಾಶ ನೀಡದೆ ಜಿಲ್ಲೆಯ ಪ್ರತಿಯೊಬ್ಬರ ಸಹಕಾರದೊಂದಿಗೆ ಡ್ರಗ್ಸ್ ಮುಕ್ತ ಜಿಲ್ಲೆಯಾಗಿಸಲು ಶ್ರಮಿಸಬೇಕೆಂದು ಹೇಳಿದರು.
ಡ್ರಗ್ಸ್ ವಿರುದ್ಧ ಸೋಮವಾರ 9 ಪ್ರಕರಣ ದಾಖಲಾಗಿದ್ದು, ಅಕ್ರಮ ಚಟುವಟಿಕೆಗಳ ಕುರಿತು ಪೊಲೀಸ್ ಇಲಾಖೆಯಿಂದ ನಿರಂತರ ದಾಳಿ ನಡೆಸಲಾಗುತ್ತದೆ. ಮಾದಕ ವಸ್ತುಗಳ ಸಾಗಣೆ ಕುರಿತು ಮಾಹಿತಿ ದೊರಕಿದ್ದಲ್ಲಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದರು.
ಡ್ರಗ್ಸ್ ಮುಕ್ತ ಮಾಡಲು ಪಂಚಾಯತಿ ಮಟ್ಟ, ನಗರಸಭೆ ಮುಂತಾದ ಹಂತಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಈಗಾಗಲೇ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಸಾರ್ವಜನಿಕರು ವಾಹನವನ್ನು ನಿಧಾನವಾಗಿ ಚಾಲನೆ ಮಾಡಬೇಕು. ರಸ್ತೆ ನಿಯಮಗಳನ್ನು ಪಾಲನೆ ಮಾಡಬೇಕು ಎಂದು ಸಲಹೆ ಮಾಡಿದರು.
ಈ ಸಂದರ್ಭದಲ್ಲಿ ಡ್ರಗ್ ನಿಯಂತ್ರಣಾಧಿಕಾರಿ ಉದಯ ಕಿಶೋರ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಿ.ಹರೀಶ್, ನವೋದಯ ರಿಜಿಸ್ಟ್ರಾರ್ ಡಾ.ಟಿ. ಶ್ರೀನಿವಾಸ್, ನವೋದಯ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಬಿ.ದೇವಾನಂದ ಸೇರಿದಂತೆ ಪೊಲೀಸ್ ಇಲಾಖೆ ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ನವೋದಯ ಮೆಡಿಕಲ್ ಕಾಲೇಜಿನ ವಿವಿಧ ವಿಭಾಗದ ಮುಖ್ಯಸ್ಥರು ಹಾಗೂ ವಿದ್ಯಾರ್ಥಿಗಳು ಇದ್ದರು.
Comments
Post a Comment