ಓಪೆಕ್ ಆಸ್ಪತ್ರೆಯಲ್ಲಿ ತಜ್ಞ ವೈದ್ಯರ ಕೊರತೆ ನೀಗಿಸುವಂತೆ ಡಾ.ಬಾಬುರಾವ್ ಆಗ್ರಹ 


ಜಯ ಧ್ವಜ ನ್ಯೂಸ್ ರಾಯಚೂರು,ಮೇ.25-              ನಗರದ ಒಪೆಕ್ ಆಸ್ಪತ್ರೆಗೆ ಅತ್ಯಗತ್ಯವಾಗಿ ಬೇಕಾಗಿರುವ ತಜ್ಞ ವೈದ್ಯರನ್ನು ಕೂಡಲೇ ನೇಮಕ ಮಾಡಿಕೊಳ್ಳುವಂತೆ  ಭಾರತೀಯ ಜನತಾ ಪಕ್ಷದ ಜಿಲ್ಲಾ ಉಪಾಧ್ಯಕ್ಷ ಡಾ.ಬಾಬುರಾವ್ ಆಗ್ರಹಿಸಿದ್ದಾರೆ .


ಈ ಕುರಿತು ಪತ್ರಿಕಾ  ಪ್ರಕಟಣೆ ನೀಡಿರುವ ಅವರು,ನಗರದ ಒಪೆಕ್ ಆಸ್ಪತ್ರೆ ಹೊಸ ಕಾಯಕಲ್ಪ ದೊಂದಿಗೆ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ಒದಗಿಸಲು ಮುಂದಾಗಿರುವುದು ಒಳ್ಳೆಯ ಬೆಳವಣಿಗೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಉತ್ತಮ ಚಿಕಿತ್ಸೆ ದೊರೆಯುತ್ತಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ. ಜನರ ಆಶೋತ್ತರಗಳಿಗೆ ಸರ್ಕಾರ ಹಾಗೂ ಉಸ್ತುವಾರಿ ಸಚಿವರು ಮುತುವರ್ಜಿ ವಹಿಸಿದ್ದರಿಂದ ಆಸ್ಪತ್ರೆಗೆ ಹೊಸ ಕಳೆ ಬಂದಿದೆ. ಆದರೆ ಎಂಡೋಕ್ರೈನೋಲಾಜಿಸ್ಟ್ ಸೇರಿದಂತೆ ಅವಶ್ಯಕವಾಗಿರುವ ತಜ್ಞ ವೈದ್ಯರ ನೇಮಕ ಮಾಡಿಕೊಳ್ಳಬೇಕಾಗಿದೆ ಎಂದು ಆಗ್ರಹಿಸಿರುವ ಅವರು,ಓಪೆಕ್ ಕ್ಯಾಸುವೆಲ್ಟ್ ನಲ್ಲಿ ಮೂವರು ಎಂಬಿಬಿಎಸ್ ವೈದ್ಯರು ಕರ್ತವ್ಯ ನಿರ್ವಹಿಸಬೇಕು. ಈಗಿರುವ ವೈದ್ಯರಲ್ಲಿ ಬಹುತೇಕರು ತಾತ್ಕಾಲಿಕವಾಗಿ ನೇಮಕಗೊಂಡವರಾಗಿದ್ದು ಅವರನ್ನು ಖಾಯಂಗೊಳಿಸಬೇಕೆಂದು ಒತ್ತಾಯಿಸಿದ್ದಾರೆ. 

ಡೀನ್ ಡಾ. ರಮೇಶ ಬಿ.ಎಚ್. ಹಾಗೂ ವಿಶೇಷಾಧಿಕಾರಿ ಡಾ. ರಮೇಶ ಸಾಗರ ಅವರ ಮಾರ್ಗದರ್ಶನದಲ್ಲಿ ಓಪೆಕ್ ಆಸ್ಪತ್ರೆಯು ಜನಸ್ನೇಹಿಯಾಗಿ ಬದಲಾಗುತ್ತಿರುವುದರಿಂದ ರೋಗಿಗಳಿಗೆ ಹೆಚ್ಚಿನ ಅನುಕೂಲವಾಗಿದೆ. ಒಪೆಕ್ ಆಸ್ಪತ್ರೆಯಲ್ಲಿ ಅಗತ್ಯವಿರುವ ಸೌಲಭ್ಯಗಳನ್ನು ಕಲ್ಪಿಸಬೇಕು.

ನಿರ್ನಾಳ ಗ್ರಂಥಿ ತಜ್ಞರು ಹಾಗೂ ಗ್ರೂಪ್ ಸಿ ಮತ್ತು ಡಿ ಸಿಬ್ಬಂದಿಗಳನ್ನು ನೇಮಿಸಿಕೊಳ್ಳಬೇಕು. ಓಪೆಕ್ ಆಸ್ಪತ್ರೆಯಲ್ಲಿ ಎಂ.ಆರ್.ಐ ಸ್ಕ್ಯಾನ್, ಸಿಟಿ ಸ್ಕ್ಯಾನ್ ಸೇರಿದಂತೆ ಅತ್ಯಾಧುನಿಕ ಸೌಲಭ್ಯಗಳು ಲಭ್ಯವಿರುವುದರಿಂದ ದೂರದ ಊರಿಗೆ ಹೋಗಬೇಕಾದ ರೋಗಿಗಳು ಓಪೆಕ್ ಆಸ್ಪತ್ರೆಯತ್ತ ಮುಖ ಮಾಡಿದ್ದಾರೆ. ಆದ್ದರಿಂದ ಓಪೆಕ್ ಆಸ್ಪತ್ರೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು. ಮತ್ತು ನರ್ಸ್ ಸೇರಿದಂತೆ ಸಿ ಮತ್ತು ಡಿ ಗ್ರೂಪ್ ನೌಕರರನ್ನು ನೇಮಿಸಿಕೊಳ್ಳುವ ಮೂಲಕ ರಾಜ್ಯದಲ್ಲಿ ಪ್ರಖ್ಯಾತಿ ಗಳಿಸುವ ನಿಟ್ಟಿನಲ್ಲಿ ದೂರದ ರೋಗಿಗಳನ್ನು ಆಕರ್ಷಿಸುವ ರೀತಿಯಲ್ಲಿ ಇನ್ನೂ ಎತ್ತರಕ್ಕೆ ಓಪೆಕ್ ಆಸ್ಪತ್ರೆ ಬೆಳೆಯಲಿ ಎಂದು ಅವರು ಆಶಯ ವ್ಯಕ್ತಪಡಿಸಿದ್ದಾರೆ.

Comments

Popular posts from this blog