ನಾಡಪ್ರಭು ಕೆಂಪೇಗೌಡರ ಆದರ್ಶಗಳನ್ನು ಪಾಲನೆ ಮಾಡಲು ಬಿಇಓ ಈರಣ್ಣ ಸಲಹೆ


ಜಯ ಧ್ವಜ ನ್ಯೂಸ್ ರಾಯಚೂರು ಜೂನ್ 27 - ಇಂದಿನ   ಪೀಳಿಗೆ ಯುವಕರು ನಾಡಪ್ರಭು ಕೆಂಪೇಗೌಡರು ಹಾಕಿಕೊಟ್ಟಿರುವ ಹಾದಿಯಲ್ಲೇ ನಡೆದು, ಅವರ ಆದರ್ಶಗಳನ್ನು ಪಾಲನೆ ಮಾಡಬೇಕೆಂದು ರಾಯಚೂರು ಕ್ಷೇತ್ರ ಶಿಕ್ಷಣಾಧಿಕಾರಿ ಈರಣ್ಣ ಕೋಸಗಿ ಅವರು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು. 

ಅವರಿಂದು ನಗರದ ಪಂಡಿತ ಜಂಬಲದಿನ್ನಿ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ರಾಯಚೂರು ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ  ಹಮ್ಮಿಕೊಳ್ಳಲಾಗಿದ್ದ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. 

ನಾಡಪ್ರಭು ಕೆಂಪೇಗೌಡರ ಜನ್ಮದಿನವು ಕನ್ನಡ ನಾಡಿನ ಪಾಲಿಗೆ ಒಂದು ಶುಭದಿನ. ಬೆಂಗಳೂರಿನಂಥ ಮಹಾ ನಗರಕ್ಕೆ ತಳಪಾಯ ಹಾಕಿದ ನಾಡಪ್ರಭುಗಳ ಜನ್ಮದಿನವಿದು. ಇದನ್ನು ಸರ್ಕಾರವು ವಿಜೃಂಭಣೆಯಿಂದ ಆಚರಿಸುತ್ತಿದ್ದು, ಈ ಮೂಲಕ ಬೆಂಗಳೂರಿನ ಜನಕನ್ನು ಸ್ಮರಿಸುತ್ತಿದೆ. ಈ ಮೂಲಕ, ಕೆಂಪೇಗೌಡರ ವೈಭವದ ಪರಂಪರೆಯನ್ನು ಹೊಸ ತಲೆಮಾರುಗಳಿಗೆ ವರ್ಗಾಯಿಸುವ ಕೆಲಸವೂ ಆಗುತ್ತಿದೆ ಎಂದರು.


ಈ ವೇಳೆ ಉಪನ್ಯಾಸಕರಾಗಿ ರಾಯಚೂರಿನ ಹಿರಿಯ ಸಾಹಿತಿ ವೀರಹನುಮಾನ್ ಅವರು ಮಾತನಾಡಿ, ಬೆಂಗಳೂರು ಇಂದು ಬಹುದೊಡ್ಡ ಶಿಕ್ಷಣ ತಾಣವಾಗಿದೆ. ಸಾವಿರಾರು ಜನರ ಪಾಲಿಗೆ ಸೂರಾಗಿದೆ. ವಿದೇಶೀಯರ ಪಾಲಿಗೆ ಅಚ್ಚುಮೆಚ್ಚಿನ ಹೂಡಿಕೆ, ಕೈಗಾರಿಕೆ, ಆಡಳಿತ, ಸಂಸ್ಕೃತಿ, ಶಾಂತಿ ಸೇರಿದಂತೆ ಇತರೆ ಕ್ಷೇತ್ರದಲ್ಲಿ ಬೆಂಗಳೂರು ಹೆಸರಾಗಿದೆ ಎಂದು ಹೇಳಿದರು.

ಕೆಂಪೇಗೌಡರು ಬೆಂಗಳೂರನ್ನು ತುಂಬಾ ವೈಜ್ಞಾನಿಕವಾದ ಒಂದು ನಗರವನ್ನಾಗಿ ಬೆಳೆಸಬೇಕೆಂಬ ಮಹಾದಾಸೆ ಹೊತ್ತಿದ್ದರು. ಜನಜೀವನ ಮತ್ತು ನಾಗರಿಕತೆಗಳ ವಿಕಸನಕ್ಕೆ ನೀರಿನ ಆಸರೆ ಇರಬೇಕು. ಕೆಂಪೇಗೌಡರು ಬೆಂಗಳೂರಿನ ತುಂಬೆಲ್ಲ ಕೆರೆಗಳನ್ನು ಕಟ್ಟುತ್ತ, ಇದನ್ನು ಸಾವಿರ ಕೆರೆಗಳ ನಾಡನ್ನಾಗಿ ಮಾಡಿದರು. ಇದಕ್ಕೆ ಉದಾಹರಣೆಯಾಗಿ ಇಂದಿಗೂ ಆನೇಕ ಕೆರೆಗಳನ್ನು ನಾವು ನೋಡಬಹುದಾಗಿದೆ ಎಂದರು.

ವಿದ್ಯಾರ್ಥಿಗಳಿಂದ ನೃತ್ಯ ಪ್ರದರ್ಶನ: ರಂಗಮಂದಿರದಲ್ಲಿ ನಾಡಪ್ರಭು ಕೆಂಪೇಗೌಡ ಅವರ ಜಯಂತಿ ಅಂಗವಾಗಿ ಎಂ ಜೆ ಡ್ಯಾನ್ಸ್  ಫಿಟ್ನೆಸ್ ಅಕಾಡೆಮಿ ವತಿಯಿಂದ  ವಿದ್ಯಾರ್ಥಿಗಳು ನೃತ್ಯ ಮಾಡಿ ಪ್ರೇಕ್ಷಕರ ಗಮನ ಸೆಳೆದರು. ಈ ಸಂದರ್ಭದಲ್ಲಿ ರಾಯಚೂರು ಮಹಾನಗರ ಪಾಲಿಕೆಯ ಅಧ್ಯಕ್ಷರಾದ ನರಸಮ್ಮ ಮಾಡಗಿರಿ ಸೇರಿದಂತೆ ವಿವಿಧ ಕಾಲೇಜಿನ ಪ್ರಾಂಶುಪಾಲರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇದ್ದರು.

Comments

Popular posts from this blog