ತುರ್ತು ಪರಿಸ್ಥಿತಿಗೆ 50 ವರ್ಷ ...ಯುವ ಜನಾಂಗ ಅರಿಯಬೇಕು.
ಅದು 1975 ಜೂನ್ 25ರ ದಿನ. ಐವತ್ತು ವರ್ಷದ ಹಿಂದೆ, ತುರ್ತು ಪರಿಸ್ಥಿತಿಯ ಹೆಸರಲ್ಲಿ ಪ್ರಜಾಪ್ರಭುತ್ವದ ಮೇಲಿನ ದೌರ್ಜನ್ಯಕ್ಕೆ ಚಾಲನೆ ಸಿಕ್ಕ ದಿನ. ದೇಶವೊಂದರ ಪ್ರಧಾನಿಯು ಸರ್ವಾ ಧಿಕಾರಿಯಾದರೆ ಏನೆಲ್ಲಾ ಅನಾಹುತಗಳನ್ನು ಮಾಡ ಬಹುದು, ಇತಿಹಾಸದ ಪುಟಗಳಲ್ಲಿ ಏನೆಲ್ಲಾ ಕರಾಳತೆ ದಾಖಲಾಗಬಹುದು ಎಂಬುದನ್ನು ಪರಿಚಯಿಸಿದ ದಿನ..
ಸ್ವತಂತ್ರ ಭಾರತದ ಇತಿಹಾಸದಲ್ಲಿ ಕರಾಳವಾದ ಅಧ್ಯಾಯ, ಕರಾಳ ಅಧ್ಯಾಯದ ಆ ದಿನಗಳು, ಆ ಪರಿಸ್ಥಿತಿ ದೇಶಕ್ಕೆ ಮತ್ತೆಂದೂ ಬರಬಾರದು ಅಂದಿನ ಅನಾಚಾರಗಳನ್ನು ಯುವಜನತೆಗೆ ನೆನಪು ಮಾಡಿಕೊಡಬೇಕು..
ತುರ್ತು ಪರಿಸ್ಥಿತಿ ಬಂದು ಹೋಗಿ 50 ವರ್ಷ ಆಯ್ತು. ಇದನ್ನು ಇವತ್ತಿನ ಯುವ ಜನಾಂಗ ಅರ್ಥ ಮಾಡಿಕೊಳ್ಳಬೇಕು. ಇದು ಎಂದೂ ಈ ದೇಶಕ್ಕೆ ಮತ್ತೆ ಬರಬಾರದು. ಅವತ್ತಿನ ಘಟನೆಗಳನ್ನು ಯುವ ಜನತೆಗೆ ತಿಳಿಸೋಣ. ಇದರ ಅರಿವು ಇದ್ದಂತೆ ಇಲ್ಲ. ಇದರ ಅರಿವು ಅಗತ್ಯವಾಗಿ ಇರಲೇಬೇಕು. ಇದರ ಜೊತೆಗೆ ತುರ್ತುಸ್ಥಿತಿಗೆ ಕಾರಣರು ಯಾರು ಎಂಬ ಬಗ್ಗೆ ಚರ್ಚೆ ಅಗತ್ಯ. ತಪ್ಪು ಮಾಡಿದವರು ಯಾರು? ಯಾಕಾಯ್ತು ಈ ಬಗ್ಗೆ ಚರ್ಚೆ ಅಗತ್ಯ. ಇದರ ಹಿಂದೆ ಏನಿತ್ತು ಅನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಅವತ್ತು ಈ ದೇಶ ಆಳುತ್ತಿದ್ದು ಕಾಂಗ್ರೆಸ್ ಪಕ್ಷ, ಇಂದಿರಾಗಾಂಧಿ ಸರ್ಕಾರ. ಏನೇ ಆಗಲಿ ಅಧಿಕಾರ ಬಿಡುವುದಿಲ್ಲ. ಈ ದೇಶ ಹಾಳಾದರೂ ಪರವಾಗಿಲ್ಲ. ದೇಶದ ಒಳ್ಳೆಯ ಸಂಸ್ಕೃತಿ, ಒಳೊಳ್ಳೆ ನಡತೆಗಳು ಹಾಳಾದರೂ ಪರವಾಗಿಲ್ಲ ನಾನು ಅಧಿಕಾರದಲ್ಲಿ ಇರಬೇಕು ಎಂಬ ಹುಚ್ಚು ಮನೋಭಾವನೆ ಅವರಲ್ಲಿತ್ತು. ಮತ್ತು ಇದರ ವಿರುದ್ದ ಯಾರೇ ಬಂದರೂ ಅವರು ಯಾರೇ ಇರಲಿ, ಅಟಲ್ ಬಿಹಾರಿ ವಾಜಪೇಯಿ, ಜಯಪ್ರಕಾಶ್ ನಾರಾಯಣ್, ಲಾಲ್ ಕೃಷ್ಣ ಆಡ್ವಾಣಿ ಎಲ್ಲರನ್ನೂ ತೆಗೆದುಕೊಂಡು ಹೋಗಿ ಜೈಲಿಗೆ ಹಾಕಿದ್ರು.
ಇಂತ ವರ್ತನೆ ಮೂಲಕ ವಿರೋಧಿಗಳನ್ನು ದಮನ ಮಾಡಿ ಸರ್ಕಾರ ನಡೆಸುವ, ದೇಶ ಆಳು ತ್ತೇನೆ ಎಂಬ ಮನಸ್ಥಿತಿ. ಇವತ್ತು ಕಾಂಗ್ರೆಸ್‌ನವರು ಭಾರಿ ಮಾತನಾ ಡುತ್ತಾರೆ- ಕೋರ್ಟು, ಸಂವಿಧಾನ ಎಂದೆಲ್ಲಾ ಹೇಳುತ್ತಾರೆ. ಅಂದು ಅಲಹಾಬಾದ್ ಹೈಕೋರ್ಟು, ಅಮ್ಮಾ ತಾಯಿ, ನೀನು ತಪ್ಪು ಮಾಡಿದೆ, ನೀನು ಅಧಿಕಾರ ಬಿಟ್ಟು ಇಳಿ, 6 ವರ್ಷ ನೀ ಚುನಾವಣೆಗೆ ಸ್ಪರ್ಧಿಸುವಂತಿಲ್ಲ ಎಂದು ಹೇಳಿತು. ಇದನ್ನೇ ಹಿಂದೆ-ಮುಂದೆ ಮಾಡಿ, ತುರ್ತು ಪರಿಸ್ಥಿತಿ ಹೇರಿ ಅಧಿಕಾರ ಉಳಿಸಿಕೊಂಡು ಅಧಿಕಾರದಲ್ಲಿ ಮುಂದುವರೆದ್ರು. ಅಷ್ಟೇ ಅಲ್ಲ, ಸಂವಿಧಾನವನ್ನೇ ತಿದ್ದುಪಡಿ ಮಾಡಿದ್ರು. ಐದು ವರ್ಷ ಇದ್ದ ಪಾರ್ಲಿಮೆಂಟ್ ಅವಧಿನ 6 ವರ್ಷ ಮಾಡಿದ್ರು. ಇಡೀ ವಿರೋಧ ಪಕ್ಷ ಜೈಲಿನಲ್ಲಿ ಇದ್ದಾಗ ಸಂವಿಧಾನ ತಿದ್ದುಪಡಿ ಮಾಡಿದ್ರು. ಸಂವಿಧಾನದ ಮೂಲ ತತ್ವಗಳನ್ನೇ ತಿದ್ದುಪಡಿ ಮಾಡಿದ್ರು. ಅತ್ಯಾಚಾರ-ಅನಾಚಾರ-ಹಿಂಸೆ ಮಾಡಿದ್ರು. ಈ ಎಲ್ಲಾ ಘಟನೆಗಳಿಗೆ ಇಂದಿನ ಕಾಂಗ್ರೆಸ್ ದೇಶದ ಜನತೆಯ ಕ್ಷಮೆ ಕೇಳಬೇಕಿತ್ತು, ಅವರು ಕೇಳಿಲ್ಲ.
ಇವತ್ತಿನ ಜನಾಂಗಕ್ಕೆ 1975ರ ತುರ್ತು ಪರಿಸ್ಥಿತಿ ಅನಾಚಾರಗಳ ನೆನಪು ಮಾಡಿಕೊಡಬೇಕು. ಜೊತೆಗೆ ಕಾಂಗ್ರೆಸ್ಸಿಗರು ಬದಲಾಗಿದ್ದಾರಾ ಅಂತ ಪ್ರಶ್ನೆ ಇಡಬೇಕಿದೆ. ಅವರು ಬದಲಾಗಿಲ್ಲ. ಸುಳ್ಳು ಹೇಳ್ತಾರೆ, ಮೋಸ ಮಾಡ್ತಾರೆ... ಏನು ಬೇಕಾದರೂ ಮಾಡ್ತಾರೆ. ಪ್ರಧಾನಿ ವಿರುದ್ದ ಅಸಹ್ಯಪದ ಬಳಸುತ್ತಿದ್ದಾರೆ. ಏನು ಬೇಕಾದರೂ ಮಾಡುವ ಪ್ರವೃತ್ತಿ ಇದೆ. ಇದನ್ನು ಅರ್ಥ ಮಾಡಿಕೊಳ್ಳಬೇಕು. ಆಗ ಮಾತ್ರ ಅವತ್ತು ತುರ್ತು ಸ್ಥಿತಿ ವಿರುದ್ಧ ಹೋರಾಟ ಮಾಡಿದ ಮನಸ್ಸುಗಳಿಗೆ ಸಮಾಧಾನ ಆಗತ್ತೆ.
21 ತಿಂಗಳವರೆಗೆ ಪ್ರಜಾಪ್ರಭುತ್ವದ ನಾಲ್ಕೂ ಅಂಗಗಳಿಗೆ ಬೀಗಮುದ್ರೆ ಹಾಕಲಾಗಿತ್ತು. ಅಕ್ರಮವಾಗಿ ಬಂಧಿತರಾಗಿ ಜೈಲು ಸೇರಿದವರ ನೆರವಿಗೆ ನ್ಯಾಯಾಂಗವು ಬರಲಿಲ್ಲ, ಎದುರಾಳಿ ರಾಜಕೀಯ ಜನಪ್ರತಿನಿಧಿಗಳನ್ನು ರಾತ್ರೋರಾತ್ರಿ ಬಂಧಿಸಿ ಸೆರೆಮನೆಗೆ ತಳ್ಳಲಾಯಿತು. ಕಾರ್ಯಾಂಗವು ಹೆದರಿದ ಹುಲ್ಲೆಯಾಗಿ ನಟಿಸಿ, ದೊರೆತ ಅವಕಾಶದ ಗರಿಷ್ಠ ಲಾಭ ಪಡೆಯಲು ಸರಕಾರದ ಮುಂದೆ ಕೈಕಟ್ಟಿ ತಲೆಬಾಗಿ ನಿಂತು, ಅನ್ಯಾಯಗಳ ಸರಮಾಲೆಗೆ ನೆರವಿನ ಹಸ್ತ ಚಾಚಿತ್ತು. ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಪತ್ರಿಕಾರಂಗವು ದಿನನಿತ್ಯ ಸೆನ್ಸಾರ್ ಶಿಪ್‌ಗೆ ಒಳಪಟ್ಟಿದ್ದು, ಆ ಅನ್ಯಾಯದ ವಿರುದ್ಧ ಸೊಲ್ಲೆತ್ತಲು ಧೈರ್ಯವಿಲ್ಲದೆ, ಅಧಿಕಾರಸ್ಪರ ದಬ್ಬಾಳಿಕೆಗೆ ಬೆದರಿ ಅವರ ಮುಂದೆ ದಯನೀಯವಾಗಿ ತೆವಳಿತ್ತು. ವಿಪಕ್ಷಗಳ ಧ್ವನಿಯನ್ನು ಅಡಗಿಸಲಾಗಿತ್ತು. ಸಂವಿಧಾನಕ್ಕೆ 42ನೇ ತಿದ್ದುಪಡಿ ತಂದು ಬಹುಮತದ ಸರಕಾರವು ಜಾರಿಗೆ ತಂದ ಕಾಯಿದೆಯನ್ನು ನ್ಯಾಯಾಲಯದಲ್ಲಿ ಪ್ರಶ್ನಾತೀತವಾಗಿಸಲಾಗಿತ್ತು. ಇನ್ನು, ಸಂಸತ್ ಅಧಿವೇಶನವಂತೂ ಕಾಟಾಚಾರಕ್ಕೆ ನಡೆಯುತ್ತಿತ್ತು.
ಅಂದು ತನ್ನ ವಿರೋಧಿಗಳನ್ನು ಮಣಿಸಲು ಸರಕಾರಕ್ಕೆ DRI ಮತ್ತು MISA (Maintenance of internal Security Act) ಕಾಯಿದೆಗಳು ಪ್ರಬಲ ಅಸ್ತ್ರವಾಗಿದ್ದವು. ಇದನ್ನು ದುರುಪಯೋಗಪಡಿಸಿಕೊಂಡು ರಾಜಕೀಯ ವಿರೋಧಿಗಳನ್ನು ಬಗ್ಗುಬಡಿಯಲಾಯಿತು. ವಿಶೇಷವಾಗಿ, ನ್ಯಾಯಾಲಯದಲ್ಲಿ ಪ್ರಶ್ನಿಸಲಾಗದಂಥ ಮತ್ತು ಜಾಮೀನು ನೀಡಲಾಗದಂಥ 'ಮೀಸಾ' ಕಾಯಿ ದೆಯನ್ನು ದುರ್ಬಳಕೆ ಮಾಡಿಕೊಂಡು ಸಾವಿರಾರು ಜನರ ಜೀವನದೊಂದಿಗೆ ಚೆಲ್ಲಾಟವಾಡಿದರು. ಅದೆಷ್ಟೋ ಜನರ ಬದುಕುಗಳು ಅಸ್ತವ್ಯಸ್ತವಾದವು. ಮೂರಾಬಟ್ಟೆಯಾ ದವು. ಅದೆಷ್ಟೋ ಜನರು ಸುದ್ದಿಯೇ ಆಗದೆ ಕಣ್ಮರೆ ಯಾಗಿಹೋದರು. ತುರ್ತು ಪರಿಸ್ಥಿತಿಯ ವಿರುದ್ಧದ ಹೋರಾಟದ ನೇತೃತ್ವವನ್ನು 'ರಾಷ್ಟ್ರೀಯ ಸ್ವಯಂಸೇವಕ ಸಂಘ' (ಆರೆಸ್ಸೆಸ್ ) ವಹಿಸಿಕೊಂಡಿತ್ತು. ಇಂದಿರಾ ಗಾಂಧಿಯವರ ಸರ್ವಾಧಿಕಾರದ ವಿರುದ್ಧ ಸಂಘದ ಕಾರ್ಯಕರ್ತರು ರಣಕಹಳೆ ಮೊಳಗಿಸಿದ್ದರು, ಸಹಸ್ರಾರು ಸಂಖ್ಯೆಯಲ್ಲಿ ಸತ್ಯಾಗ್ರಹದಲ್ಲಿ ಪಾಲ್ಗೊಂಡು ತುರ್ತು ಪರಿಸ್ಥಿತಿಗೆ ಪ್ರಬಲ ಸವಾಲೊಡ್ಡಿದ್ದರು.
ತುರ್ತು ಪರಿಸ್ಥಿತಿ ಅವಧಿಯಲ್ಲಿ ಅನೇಕ ವಿಧದಲ್ಲಿ ಹಿಂಸಿಸುವುದರಲ್ಲಿ ಪೊಲೀಸರು ನಿಷ್ಣಾತರಾಗಿದ್ದರು. ಅದೆಷ್ಟು ಅತಿರೇಕವಾಗಿತ್ತೆಂದರೆ, ಪ್ರತಿಭಟಿಸಿ ಬಂಧಿತ ರಾಗಿದ್ದ ತುಂಬುಗರ್ಭಿಣಿ ಗಾಯತ್ರಿ ಬಾಯಿಯವರಿಗೆ ಜೈಲಿನಲ್ಲಿ ಹೆರಿಗೆ ನೋವು ಶುರುವಾದಾಗ, ಆಸ್ಪತ್ರೆಗೆ ಕರೆದೊಯ್ಯುವಾಗ ಕಾಲು-ಕೈಗಳಿಗೆ ಬೇಡಿ ಹಾಕಿದ್ದರು. ಇದಕ್ಕಿಂತ ಕ್ರೂರ ಸಂಗತಿಯೆಂದರೆ, ಪ್ರಸವದ ವೇಳೆ ಯಲ್ಲೂ ಆ ಬೇಡಿಯನ್ನು ತೆಗೆದಿರಲಿಲ್ಲ. ಮಂಗಳೂರಿನ ಕಲ್ಕಡದಲ್ಲಿ ಇಸ್ಮಾಯಿಲ್ ಎಂಬಾತನ ಕೊಲೆಯಾದಾಗ, ತುರ್ತು ಪರಿಸ್ಥಿತಿಯ ದುರ್ಲಾಭ ಪಡೆದ ಪೊಲೀಸರು ಸಂಘ ಪರಿವಾರದ ಕಾರ್ಯಕರ್ತರನ್ನು ಬಂಧಿಸಿ ನಾನಾ ಚಿತ್ರಹಿಂಸೆಗೆ ಗುರಿಮಾಡಿದರು. ಆ ಹಿಂಸೆಯು ಘೋರ ವಾಗಿತ್ತು, ಕ್ರೂರಪ್ರಾಣಿಗಳನ್ನೂ ನಾಚಿಸುವಂತಿತ್ತು ಪೊಲೀಸರ ವರ್ತನೆ. ಅಂದು ಪೊಲೀಸರ ಹಿಂಸೆಯ ಬಾಧೆ ತಾಳಲಾರದೆ ಬಾವಿಗೆ ಹಾರಿ ತಪ್ಪಿಸಿಕೊಂಡಿದ್ದರು ಎಂದು ಸುರೇಶ್‌ರವರು (ಇವರು ಬಿಜೆಪಿ ಶಾಸಕರು) ಹೇಳಿದಾಗ ಅರೆಕ್ಷಣ ಮೈ ಜುಂ ಎಂದಿದ್ದು ನಿಜ!
ಇನ್ನು, ಚಾರ್ಜ್ ಫರ್ನಾಂಡಿಸ್ ಅವರ ತಮ್ಮ ಲಾರೆನ್ಸ್ ಫರ್ನಾಂಡಿಸ್ ಅನುಭವಿಸಿದ ಕ್ರೂರಹಿಂಸೆಯು ಕಲ್ಲೆದೆಯವರಲ್ಲೂ ಕಣ್ಣೀರು ತರಿಸುವಂಥದ್ದು. ಪೊಲೀಸರ ಚಿತ್ರಹಿಂಸೆಯಿಂದಾಗಿ ಪ್ರಜ್ಞೆ ತಪ್ಪಿದ್ದ ಲಾರೆನ್ಸ್ ರನ್ನು 'ಮೃತಪಟ್ಟಿದ್ದಾರೆ' ಎಂದು ರೈಲುಕಂಬಿಯ ಮೇಲೆ ಎಸೆದುಹೋಗಿದ್ದರಂತೆ...
ಅಂದು ನಡೆದ ಸಂಘರ್ಷವನ್ನು ಇಂದಿನ ಪೀಳಿಗೆ ಯವರು ಊಹಿಸಲೂ ಅಸಾಧ್ಯ. ಆ ಬದ್ಧತೆ, ಭಲ, ಸೈದ್ದಾಂತಿಕ ಅಚಲ ನಿಲುವು ಮುಂತಾದವನ್ನು ಬದಲಾದ ಇಂದಿನ ರಾಜಕೀಯ ವಾತಾವರಣದಲ್ಲಿ ನಿರೀಕ್ಷಿಸಲಾ ಗದು. ಅಯೋಧ್ಯಾ ಹೋರಾಟದ ತರುವಾಯ ಸಂಘ ರ್ಷದ ರಾಜಕೀಯ ಮತ್ತೆ ಸಾಧ್ಯವಾ? ಎಂಬಂತಾಗಿದೆ. ರಾಜಕೀಯಪ್ರೇರಿತವಾಗಿ ತಾವು 'ಸಂವಿಧಾನ ರಕ್ಷಕರು' ಎಂದು ಇಂದು ಹೇಳಿಕೊಳ್ಳುತ್ತಿರುವ ಕಾಂಗ್ರೆಸ್ಸಿಗರು, ತಮ್ಮ ಕೈಯಲ್ಲಿ ಮೂರನೇ ಎರಡರಷ್ಟು ಬಹುಮತವಿದ್ದಾಗ ಸಂವಿಧಾನಕ್ಕೆ ಮತ್ತು ಪ್ರಜಾಪ್ರಭುತ್ವಕ್ಕೆ ತಾವು ಮಾಡಿದ ಅಪಾರ ಹಾನಿಯ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ.
ಲೇಖಕರು- ಎನ್. ವಿನಾಯಕ ರಾವ್, ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷರು, ರಾಯಚೂರು.
Comments
Post a Comment