ಜೂ.5 ರಿಂದ 12ರವರೆಗೆ ಮುಂಗಾರು ಸಾಂಸ್ಕೃತಿಕ ರಾಯಚೂರು ಬೆಳ್ಳಿ ಹಬ್ಬ:                      ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ರೇವಂತರೆಡ್ಡಿ ಆಗಮನ - ಎ.ಪಾಪಾರೆಡ್ಡಿ.                                 ಜಯ ಧ್ವಜ ನ್ಯೂಸ್ ರಾಯಚೂರು,ಜೂ.1-                  ಮುನ್ನೂರು ಕಾಪು ಸಮಾಜದಿಂದ ಕಾರ ಹುಣ್ಣಿಮೆ ಅಂಗವಾಗಿ ಪ್ರತಿ ವರ್ಷ ಹಮ್ಮಿಕೊಳ್ಳುವ ಮುಂಗಾರು ಸಾಂಸ್ಕೃತಿಕ ರಾಯಚೂರು ಬೆಳ್ಳಿ ಹಬ್ಬ ಜೂ.5 ರಿಂದ 12 ವರೆಗೆ ಅದ್ದೂರಿಯಾಗಿ ಆಯೋಜಿಸಲಾಗಿದೆ ಎಂದು ಮಾಜಿ ಶಾಸಕರು ಹಾಗೂ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬದ ಅಧ್ಯಕ್ಷರಾದ ಎ.ಪಾಪಾರೆಡ್ಡಿ ಹೇಳಿದರು. ಅವರಿಂದು ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕಳೆದ ಇಪ್ಪತ್ತೈದು ವರ್ಷದಿಂದ ಆಯೋಜಿಸಲ್ಪಡುವ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬದ ಬೆಳ್ಳಿ ಮಹೋತ್ಸವ ಈ ಬಾರಿ ನಡೆಯಲಿದ್ದು ಒಂದು ವಾರ ಪರ್ಯಂತರ ವಿವಿಧ ಧಾರ್ಮಿಕ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆ ಹಮ್ಮಿಕೊಳ್ಳಲಾಗಿದ್ದು ಪ್ರಮುಖ ಆಕರ್ಷಣೆಯಾಗಿ ಭಾರಿ ಗಾತ್ರದ ಎತ್ತುಗಳಿಂದ ಕಲ್ಲು ಎಳೆಯುವ ಸ್ಪರ್ದೆಯಲ್ಲಿ ದೇಶದ ನಾನಾ ರಾಜ್ಯಗಳಿಂದ ಎತ್ತುಗಳು ಸ್ಪರ್ದೆಯಲ್ಲಿ ಭಾಗವಹಿಸಲಿವೆ ಎಂದರು. ಜೂ.5 ರಂದು ಸದ್ಭಾವನಾ ಯಾತ್ರೆ ಬೆಳಿಗ್ಗೆ 7 ಗಂಟೆಗೆ ಪ್ರಾರಂಭವಾಗಿ ಪ್ರಮುಖ ರಸ್ತೆಯಲ್ಲಿ ಸಾಗಲಿದ್ದು ಸಂಜೆ 6ಕ್ಕೆ ಗದ್ವಾಲ್ ರಸ್ತೆಯ ವೀರಾಂಜಿನೇಯ ಕಲ್ಯಾಣ ಮಂಟಪದಲ್ಲಿ ಕವಿಗೋಷ್ಠಿ ನಡೆಯಲಿದ್ದು ಜೂ.6ರಂದು ಸಂಜೆ ಇದೆ ಸ್ಥಳದಲ್ಲಿ ಚಿತ್ರಕಲಾ ಪ್ರದರ್ಶನ,ಜೂ.7 ರಂದು ವಿವಿಧ ಸಮಾಜದ ಸಾಧಕರು ಸೇರಿದಂತೆ ವೈದ್ಯರು, ಗಣ್ಯರಿಗೆ ಒಟ್ಟು 57 ಜನರಿಗೆ ಸನ್ಮಾನ ನಡೆಯಲಿದ್ದು ಎಲ್ಲರನ್ನು ಒಗ್ಗೂಡಿಸಿ ಕೊಳ್ಳುವ ದೃಷ್ಟಿಯಿಂದ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು. 

 ಸಂಜೆ ಗಂಜ್ ಕಲ್ಯಾಣ ಮಂಟಪದಲ್ಲಿ ಸಚಿವ ಎನ್.ಎಸ್.ಬೋಸರಾಜುರಿಂದ ಸಾಂಸ್ಕೃತಿಕ ಕಾರ್ಯಕ್ರಮ   ಉಧ್ಘಾಟನೆ ನಡೆಯಲಿದೆ ಎಂದರು. ಜೂ.8ರಂದು ಶಾಲಾ ಕಾಲೇಜು ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ , ರಾಜ್ಯದ ನಾನಾ ಭಾಗಗಳಿಂದ ಆಗಮಿಸುವ ನೃತ್ಯ ಕಲಾವಿದರ ತಂಡಗಳಿಂದ ನೃತ್ಯ ರೂಪಕ,ಜೂ.9 ರಂದು ಸಂಜೆ 6ಕ್ಕೆ ಐಡಿಎಸ್ಎಂಟಿ ಬಡಾವಣೆ ಉದ್ಯಾನದಲ್ಲಿ , ಜೂ.10 ರಂದು ವಾಸವಿ ನಗರ ಬಸ್ ನಿಲ್ದಾಣ ಬಳಿ, ಜೂ.11 ರಂದು ವೀರಾಂಜನೇಯ ಕಲ್ಯಾಣ ಮಂಟಪದಲ್ಲಿ, ಜೂ.12ರಂದು ಗಂಜ್ ಕಲ್ಯಾಣ ಮಂಟಪದಲ್ಲಿ ನೃತ್ಯ ರೂಪಕ ನಡೆಯಲಿದೆ ಎಂದರು. ಜೂ.10 ರಂದು ಕರ್ನಾಟಕ ರಾಜ್ಯದ ಎತ್ತುಗಳಿಂದ 1.5 ಟನ್ ಭಾರದ ಕಲ್ಲು ಎಳೆಯುವ ಸ್ಪರ್ದೆ ಗಂಜ್ ಆವರಣದಲ್ಲಿ ಬೆಳಿಗ್ಗೆ 8ಕ್ಕೆ ನಡೆಯಲಿದ್ದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ಉದ್ಘಾಟನೆಯನ್ನು ನೆರವೇರಿಸಲಿದ್ದಾರೆಂದ ಅವರು ಪ್ರಥಮ ಬಹುಮಾನವಾಗಿ 75 ಸಾವಿರ ರೂ.,ದ್ವಿತೀಯ ಬಹುಮಾನ 55 ಸಾವಿರ ರೂ., ತೃತೀಯ ಬಹುಮಾನ 45 ಸಾವಿರ ರೂ., ಬಹುಮಾನ ಕ್ರಮವಾಗಿ ಏಳನೇ ಸ್ಥಾನದ ಬಹುಮಾನ 10ಸಾವಿರ ನೀಡಲಾಗುತ್ತದೆ ಎಂದರು. ಜೂ.11ರಂದು ಬೆಳಿಗ್ಗೆ 8ಕ್ಕೆ ನಡೆಯುವ ಸ್ಪರ್ಧೆಯಲ್ಲಿ ಅಖಿಲ ಭಾರತ‌ ಮುಕ್ತ ಸ್ಪರ್ದೆ ನಡೆಯಲಿದ್ದು 2 ಟನ್ ಭಾರವಾದ ಕಲ್ಲು ಎಳೆಯುವ ಸ್ಪರ್ಧೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದು ಸಾನಿಧ್ಯವನ್ನು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಶ್ರೀಗಳು , ಕಾಶಿ ಶ್ರೀಗಳು ಸಾನಿಧ್ಯ ವಹಿಸಲಿದ್ದು ಪಾದಪೂಜೆ ಸಹ ನಡೆಯಲಿದ್ದು   ಸ್ಪರ್ದೆಯಲ್ಲಿ ಪ್ರಥಮ ಬಹುಮಾನವಾಗಿ 90 ಸಾವಿರ ರೂ, ದ್ವಿತೀಯ ಬಹುಮಾನ 65 ಸಾವಿರ ರೂ., ತೃತೀಯ ಬಹುಮಾನ 55 ಸಾವಿರ ಹೀಗೆ ಕ್ರಮವಾಗಿ ಏಳನೇ ಸ್ಥಾನದ ಬಹುಮಾನ 20 ಸಾವಿರ ನೀಡಲಾಗುತ್ತದೆ ಎಂದರು. ಸಂಜೆ ನಗರದ ಪ್ರಮುಖ ರಸ್ತೆಯಲ್ಲಿ ಅಲಂಕೃತ  ಎತ್ತುಗಳ ಮೆರವಣಿಗೆ, ಹತ್ತಾರು ಕಲಾ ತಂಡಗಳು ಭಾಗವಹಿಸಿ ಮೆರುಗು ನೀಡಲಿವೆ ಎಂದರು. ಜೂ.12 ರಂದು ಕಾರ್ಯಕ್ರಮದ ಕೊನೆ ದಿನ ಬೆಳಿಗ್ಗೆ 8ಕ್ಕೆ ನಡೆಯುವ 2.5 ಟನ್ ಭಾರವಾದ ಕಲ್ಲು ಎಳೆಯುವ ಸ್ಪರ್ಧೆಯನ್ನು ತೆಲಂಗಾಣ ಸಿಎಂ ರೇವಂತರೆಡ್ಡಿ ಉದ್ಘಾಟನೆ ನೆರವೇರಿಸಲಿದ್ದು, ಸಾನಿಧ್ಯವನ್ನು ಚೌಕಿ ಮಠದ ಶ್ರೀಗಳು ವಹಿಸಲಿದ್ದಾರೆ ಎಂದರು. ಪ್ರಥಮ ಬಹುಮಾನ 1 ಲಕ್ಷ ರೂ., ಎರಡನೆ ಬಹುಮಾನ 75 ಸಾವಿರ ರೂ., ತೃತೀಯ ಬಹುಮಾನ 65 ಸಾವಿರ ರೂ., ಕ್ರಮವಾಗಿ ಏಳನೇ ಬಹುಮಾನ 20 ಸಾವಿರ ರೂ.ನೀಡಲಾಗುತ್ತಿದೆ ಎಂದರು. ಅದೆ ದಿನ ಮಧ್ಯಾಹ್ನ 3ಕ್ಕೆ ಮಕ್ತಲಪೇಟೆ ಶ್ರೀ ಲಕ್ಷ್ಮಮ್ಮ ದೇವಸ್ಥಾನ ಬಳಿ ಕಲ್ಲು ಗುಂಡು, ಉಸುಕಿನ ಚೀಲ ಎತ್ತುವ ಸ್ಪರ್ಧೆ, ಸಂಜೆ 5ಕ್ಕೆ ರಾಜೇಂದ್ರ ಗಂಜ್ ಆವರಣದಲ್ಲಿ ಕುಸ್ತಿ ಬಲ ಪ್ರದರ್ಶನ ನಡೆಯಲಿದೆ ಎಂದರು. ಎಪಿಎಂಸಿ ಯಿಂದ 7.5 ಲಕ್ಷ ರೂ ದೇಣಿಗೆ ನೀಡಲಾಗುತ್ತಿದ್ದು ಮಹಾನಗರ ಪಾಲಿಕೆ ಬಿಡಿಗಾಸು ನೀಡಿಲ್ಲವೆಂದ ಅವರು ನಮ್ಮ ಸಮಾಜದ ಬಹುತೇಕರು ಶಕ್ತ್ಯಾನುಸಾರ ದೇಣಿಗೆ ನೀಡಿದ್ದು ಸಮಾಜದ ಓರ್ವ ವ್ಯಕ್ತಿ ಒಂದುವರೆ ಲಕ್ಷ ರೂ.ದೇಣಿಗೆ ನೀಡಿದ್ದಾರೆ ಎಂದರು. ಸರ್ಕಾರದಿಂದ ಆಯೋಜಿಸುವ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು ಸಮಾಜದ ಸ್ವಾಭಿಮಾನದ ಸಂಕೇತವಾಗಿ ನಾವು ಕಾರ್ಯಕ್ರಮ ರೂಪಿಸುತ್ತಾ ಬಂದಿದ್ದೇವೆ ಸಮಾಜದ ಪ್ರತಿಯೊಬ್ಬರು ಅಭಿಮಾನದಿಂದ ಪಾಲ್ಗೊಳ್ಳುತ್ತಾರೆ ಸರ್ಕಾರದಿಂದ ಮಾಡಿದರೆ ಸಮಾಜದ ಸ್ವಂತಿಕೆಯಿರುವುದಿಲ್ಲವೆಂದರು.  ಇತ್ತೀಚೆಗೆ ಸರ್ಕಾರದಿಂದ ಆಯೋಜಿಸುವ 
ಸಾಧು ಸಂತರು,  ಮಹಾನ್ ವ್ಯಕ್ತಿಗಳ  ಜಯಂತ್ಯೋತ್ಸವಗಳು ಕಳೆಗುಂದಿ ಬೆರಳೆಣಿಕೆ ಜನರು ಭಾಗವಹಿಸಿದ ಉದಾಹರಣೆಗಳಿವೆ ಎಂದರು. ಒಟ್ಟಾರೆ ಕಾರ್ಯಕ್ರಮಕ್ಕೆ 75 ಲಕ್ಷ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದ್ದು ವೆಚ್ಚ ಹೆಚ್ಚಳವು ಆಗಬಹುದೆಂದರು. ಸಮಾಜದಿಂದ ಮುಂದಿನ ವರ್ಷ ಆಸ್ಪತ್ರೆ ನಿರ್ಮಿಸುವ ಗುರಿ ಹೊಂದಿದ್ದು ಬಡವರಿಗೆ ಕಡಿಮೆ ವೆಚ್ಚದಲ್ಲಿ ಉತ್ತಮ ಆರೋಗ್ಯ ಸೇವೆ ನೀಡುವ ಸಂಕಲ್ಪ ಹೊಂದಿದ್ದೇವೆ ಎಂದರು. ಕಳೆದ ಅನೇಕ ವರ್ಷಗಳಿಂದ ತಮ್ಮ ಅಧ್ಯಕ್ಷತೆಯಲ್ಲೇ ಕಾರ್ಯಕ್ರಮ ಆಯೋಜನೆ ಬಗ್ಗೆ ಕೇಳಲಾದ ಪ್ರಶ್ನೆಗೆ ಖಾರವಾಗಿ ಉತ್ತರಿಸಿದ ಅವರು ನಾನೆ ಅಧ್ಯಕ್ಷನಾಗಿರುತ್ತೇನೆಂದು ಬೇಡಿಕೆಯಿಟ್ಟಿಲ್ಲ ಸಮಾಜ ಬಾಂಧವರು ಒಮ್ಮತದಿಂದ ನನ್ನ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಆಯೋಜಿಸುತ್ತಿದ್ದಾರೆ ಇದರಲ್ಲಿ ಯಾವುದೇ ಸ್ವಾರ್ಥವಿಲ್ಲ ಸಮಾಜವನ್ನು ಮುನ್ನಡೆಸುವ ಸದುದ್ದೇಶ ಬಿಟ್ಟು ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲವೆಂದರು.             ಈ ಸಂದರ್ಭದಲ್ಲಿ ಬೆಲ್ಲಂ ನರಸರೆಡ್ಡಿ, ಜಿ.ಬಸವರಾಜ ರೆಡ್ಡಿ, ಉಟ್ಕೂರು ಕೃಷ್ಣ ಮೂರ್ತಿ, ಎನ್.ಶ್ರೀನಿವಾಸರೆಡ್ಡಿ, ಭಂಗಿ ನರಸರೆಡ್ಡಿ, ಗುಡ್ಸಿ ನರಸರೆಡ್ಡಿ, ಜಿ.ಶೇಖರರೆಡ್ಡಿ, ವೆಂಕಟರೆಡ್ಡಿ, ಬಿ.ತಿಮ್ಮಾರೆಡ್ಡಿ ಇನ್ನಿತರರು ಇದ್ದರು.

Comments

Popular posts from this blog