ಮಾದಕ ವಸ್ತುಗಳ ಸೇವನೆಯಿಂದ  ದೇಹ ಮತ್ತು ಮನಸ್ಸಿನ ಆರೋಗ್ಯ ಹಾಳಾಗುತ್ತದೆ ಮನೋಹರ್ ಪತ್ತಾರ್


ಜಯ ಧ್ವಜ ನ್ಯೂಸ್, ರಾಯಚೂರು,ಜೂ.26- ಇಂದಿನ ಯುವಕರು ಮಾದಕ ವಸ್ತುಗಳಿಗೆ ದಾಸರಾಗುತ್ತಿದ್ದು,  ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ.  ಮಾದಕ ವಸ್ತುಗಳ ಮಾರಾಟ ಹಾಗೂ ಸಾಗಾಣೆಕೆ ಕಾನೂನ ಬಾಹಿರ ಚಟುವಟಿಕೆಯೆಂದು ತಿಳಿದಿದ್ದರೂ ಇದರಲ್ಲಿ ತೊಡಗಿಸಿಕೊಳ್ಳುವವರ  ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಹೀಗಾಗಿ ಮಾದಕ ವ್ಯಸನ ಮತ್ತು ಕಳ್ಳ ಸಾಗಾಣಿಕೆಯಂತಹ ಚಟುವಟಿಕೆಗಳಿಂದ ಜನರನ್ನು ರಕ್ಷಿಸಲು ಹಾಗೂ ಈ ಬಗ್ಗೆ ಅರಿವು ಮೂಡಿಸುವ ದೃಷ್ಟಿಯಿಂದ ಪ್ರತಿ ವರ್ಷ ಜೂನ್​ 26ರಂದು ಅಂತಾರಾಷ್ಟ್ರೀಯ ಮಾದಕ ದ್ರವ್ಯ ಮತ್ತು ಕಳ್ಳಸಾಗಣೆ ವಿರೋಧಿ ದಿನವನ್ನು ವಿಶ್ವದಾದ್ಯಂತ ಆಚರಿಸಲಾಗುತ್ತದೆ ಎಂದು ರಾಯಚೂರಿನ ಮಾನೋರೋಗ ತಜ್ಞರಾದ ಡಾ. ಮನೋಹರ್ ವೈ ಪತ್ತಾರ್ ಹೇಳಿದರು. ಆಕಾಶವಾಣಿಯಲ್ಲಿ ಅಂತರಾಷ್ಟ್ರೀಯ ಮಾದಕ ವಸ್ತುಗಳ ಸಾಗಾಣಿಕೆ ಮತ್ತು ಸೇವನೆ ವಿರೋಧಿ ದಿನದ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಅಂತಾರಾಷ್ಟ್ರೀಯ ಮಾದಕ ದ್ರವ್ಯ ಮತ್ತು ಕಳ್ಳಸಾಗಣೆ ವಿರೋಧಿ ದಿನ ಹಿನ್ನೆಲೆ ಬಗ್ಗೆ ಹೇಳುವುದಾದರೆ 1986ರ ಜೂನ್ 26ರಂದು ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ‘ಅಂತಾರಾಷ್ಟ್ರೀಯ ಮಾದಕ ದ್ರವ್ಯ ಮತ್ತು ಕಳ್ಳಸಾಗಣೆ ವಿರೋಧಿ ದಿನ’ವನ್ನು ಆರಂಭಿಸಲಾಯಿತು. ಆದಾದ ಬಳಿಕ ವಿಶ್ವಸಂಸ್ಥೆಯು 1997ರಲ್ಲಿ ‘ಮಾದಕ ದ್ರವ್ಯ ಮತ್ತು ಅಪರಾಧ ವಿಭಾಗ’ವನ್ನು ಆರಂಭಿಸಿತು. ಕಾನೂನು ಬಾಹಿರ ಚಟುವಟಿಕೆಗಳಿಂದ ಯುವ ಸಮೂಹವನ್ನು ರಕ್ಷಣೆ ಮಾಡುವ ಉದ್ದೇಶವನ್ನು ಈ ದಿನವು ಹೊಂದಿದೆ.

ಅಂತಾರಾಷ್ಟ್ರೀಯ ಮಾದಕ ದ್ರವ್ಯ ಮತ್ತು ಕಳ್ಳಸಾಗಣೆ ವಿರೋಧಿ ದಿನದ ಮಹತ್ವ ಹಾಗೂ ಆಚರಣೆ

ಮಾದಕ ವ್ಯಸನಕ್ಕೆ ದಾಸರಾಗುವುದರಿಂದ ಆರೋಗ್ಯದ ಮೇಲಾಗುವ ಪರಿಣಾಮಗಳು ಹಾಗೂ ಈ ಕಳ್ಳ ಸಾಗಾಣಿಕೆಯಂತಹ ಚಟುವಟಿಕೆಗಳಿಂದ ವಿದ್ಯಾರ್ಥಿಗಳನ್ನು ಹಾಗೂ ಯುವಸಮೂಹವನ್ನು ರಕ್ಷಿಸಲು ಹಾಗೂ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ದಿನವು ಮಹತ್ವದ್ದಾಗಿದೆ. ಈ ನಿಟ್ಟಿನಲ್ಲಿ ಈ ದಿನದಂದು ಸಮುದಾಯ ಸಂಸ್ಥೆಗಳು, ಶಾಲಾ ಕಾಲೇಜುಗಳು ಸೇರಿದಂತೆ ಇನ್ನಿತ್ತರ ಸಂಸ್ಥೆಗಳು ವಿದ್ಯಾರ್ಥಿಗಳಲ್ಲಿ ಹಾಗೂ ನಾಗರೀಕರಲ್ಲಿ ಮಾದಕ ದ್ರವ್ಯದ ಪರಿಣಾಮಗಳ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಸೆಮಿನಾರ್ ಗಳು, ಜಾಥಗಳು ಹಾಗೂ ಅಭಿಯಾನಗಳಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಂದರು. ಜನರ ಆರೋಗ್ಯ ಉತ್ತಮವಾಗಿದ್ದರೆ ದೇಶದ ಆರೋಗ್ಯ ಕೂಡ ಉತ್ತಮವಾಗಿರುತ್ತದೆ ಎಂದು ಹೇಳಿದರು. ಆಕಾಶವಾಣಿಯ ಕಾರ್ಯಕ್ರಮ ಮುಖ್ಯಸ್ಥ ವೆಂಕಟೇಶ ಬೇವಿನಬೆಂಚಿ ಕಾರ್ಯಕ್ರಮ ನಿರ್ವಹಿಸಿದರು.

Comments

Popular posts from this blog