ಯರಗೇರಿಯಲ್ಲಿ ಸಿಎಂರಿಂದ ವಿವಿಧ ಕಾಮಗಾರಿಗಳ ಅಡಿಗಲ್ಲು ಮತ್ತು ಉದ್ಘಾಟನೆ ಕಾರ್ಯಕ್ರಮ: ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯವಾದರೂ ಬಿಜೆಪಿ ಎಂಪಿಗಳು ಗಪ್ ಚುಪ್- ಸಿದ್ಧರಾಮಯ್ಯ. ಜಯ ಧ್ವಜ ನ್ಯೂಸ್, ರಾಯಚೂರು,ಜೂ.23- ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಹಣಕಾಸು ಹಂಚಿಕೆ ವಿಚಾರದಲ್ಲಿ ಅನ್ಯಾಯವಾಗುತ್ತಿದ್ದರೂ ರಾಜ್ಯದಲ್ಲಿರುವ ಬಿಜೆಪಿ ಲೋಕಸಭಾ ಸದಸ್ಯರು ಗಪ್ ಚುಪ್ ಆಗಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಟೀಕೆ ಮಾಡಿದರು. ಅವರಿಂದು ತಾಲೂಕಿನ ಯರಗೇರಿಯಲ್ಲಿ ಜಿಲ್ಲಾಡಳಿತ, ಜಿ.ಪಂ , ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮ ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ 936 ಕೋಟಿ ರೂ.ವೆಚ್ಚದ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ,ಬುಡಕಟ್ಟು ಉತ್ಸವ , 371(ಜೆ) ದಶಮಾನೋತ್ಸವ ಹಾಗೂ ಮಹರ್ಷಿ ವಾಲ್ಮೀಕಿ ವಿವಿ ನಾಮಫಲಕ ಅನಾವರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕೇಂದ್ರ ಸರ್ಕಾರ ನಮಗೆ ಹಣಕಾಸು ಹಂಚಿಕೆ ವಿಚಾರದಲ್ಲಿ ತಾರತಮ್ಯ ಮಾಡುತ್ತಿದೆ 14 ಮತ್ತು 15ನೇ ಹಣಕಾಸು ಆಯೋಗ ಶಿಫಾರಸು ಪಾಲಿಸಿಲ್ಲ, ಕೇಂದ್ರ ಸರ್ಕಾರ ನಮ್ಮ ಪಾಲಿನ ಸುಮಾರು 80 ಸಾವಿರ ಕೋಟಿ ರೂ ನೀಡದೆ ಅನ್ಯಾಯ ಮಾಡಿದೆ ಇದನ್ನು ಕೇಳುವ ಧೈರ್ಯ ಬಿಜೆಪಿಯವರಿಗೆ ಇಲ್ಲ ಮೋದಿ ಎದುರು ನಿಂತು ಮಾತನಾಡುವ ತಾಕತ್ತು ಬಿಜೆಪಿ ಎಂಪಿಗಳು ಏಕೆ ಪ್ರದರ್ಶಿಸುತ್ತಿಲ್ಲ ಎಂದರು.ನಾನು ಇಂದು ದೆಹಲಿಗೆ ಹೋಗುತ್ತಿದ್ದು ಪ್ರಧಾನಿ ಮತ್ತು ಹಣಕಾಸು ಸಚಿವರನ್ನು ಭೇಟಿ ಮಾಡಿ ಅವರ ಗಮನಕ್ಕೆ ತರುತ್ತೇನೆ ಅಲ್ಲದೆ ಕೆಲ ಕಾಯ್ದೆ ಅಂಕಿತಕ್ಕೆ ಸಂಬಂಧಿಸಿದಂತೆ ರಾಷ್ಟ್ರಪತಿಗಳನ್ನು ಭೇಟಿ ಮಾಡುತ್ತೇನೆಂದರು.
ನಮ್ಮ ಸರ್ಕಾರ ನುಡಿದಂತೆ ನಡೆಯುತ್ತಿರುವ ಸರ್ಕಾರ ನಾವು ಈ ಹಿಂದೆ ಅಧಿಕಾರದಲ್ಲಿದ್ದಾಗ ಮತ್ತು ಈಗ ಅಧಿಕಾರದಲ್ಲಿರುವ ವೇಳೆ ಕೊಟ್ಟ ಮಾತಿನಂತೆ ಭರವಸೆ ಈಡೇರಿಸಿದ್ದೇವೆ ಬಿಜೆಪಿ ಅಧಿಕಾರದಲ್ಲಿದ್ದಾಗ ಶೇ.10ರಷ್ಟು ಭರವಸೆಯೂ ಈಡೆರಿಸಿರಲಿಲ್ಲವೆಂದರು. ಪಂಚ ಗ್ಯಾರಂಟಿಗಾಗಿ ಎರೆಡು ವರ್ಷದಲ್ಲಿ 90ಸಾವಿರ ಕೋಟಿ ರೂ.ಖರ್ಚು ಮಾಡಿದ್ದೇವೆ ಗ್ಯಾರಂಟಿ ಬಗ್ಗೆ ಬಿಜೆಪಿ ಜೆಡಿಎಸ್ ಅಪಪ್ರಚಾರ ಮಾಡಿದರೂ ಗ್ಯಾರಂಟಿ ಅನುಷ್ಟಾನ ನಿಂತಿಲ್ಲವೆಂದರು.
ಕಲ್ಯಾಣ ಕರ್ನಾಟಕ ಭಾಗದ ಶಿಕ್ಷಣ ಉದ್ಯೋಗದಲ್ಲಿ ಮೀಸಲಾತಿಗೆ 371(ಜೆ) ಕಾಯ್ದೆ ಅತ್ಯಂತ ಪರಿಣಾಮಕಾರಿ ಜಾರಿಯಾಗಿದೆ ಮಲ್ಲಿಕಾರ್ಜುನ ಖರ್ಗೆ ಅದನ್ನು ಯುಪಿಎ ಸರ್ಕಾರದಲ್ಲಿ ಜಾರಿಗೆ ತರುವಲ್ಲಿ ವಿಶೇಷ ಕಾಳಜಿ ವಹಿಸಿದ್ದರು ಬಿಜೆಪಿ ಅದನ್ನು ಬೇಡವೆಂದಿತ್ತು ಲಾಲ ಕೃಷ್ಣ ಅಡ್ವಾಣಿ ಕಾಯ್ದೆ ಪ್ರಸ್ತಾವನೆ ತಿರಸ್ಕರಿಸಿದ್ದರು ಎಂದರು. ಕೇಂದ್ರ ಸರ್ಕಾರ ನಮ್ಮ ಬಗ್ಗೆ ಟೀಕೆ ಮಾಡುತ್ತಿದೆ ಆದರೆ ಜನರಿಗೆ ಬೆಲೆ ಏರಿಕೆ ಮೂಲಕ ಬರೆಯೆಳೆದಿದೆ ಚಿನ್ನ, ಬೆಳ್ಳಿ, ಪೆಟ್ರೋಲ್, ಡಿಸೆಲ್, ಗೊಬ್ಬರ , ಸಿಲೆಂಡರ್ ಬೆಲೆ ಗಗನ ಮುಖಿಯಾಗಿದೆ ಬಡವರು ಬದುಕುವುದು ಬೇಡವೆ ಎಂದು ಪ್ರಶ್ನಿಸಿದರು. ರಾಜ್ಯದ ಎಲ್ಲಾ 224 ಕ್ಷೇತ್ರ ಅಭಿವೃದ್ಧಿ ಪಡಿಸಲು ಅನುದಾನ ವದಿಗಿಸಿದ್ದೇನೆ ಗ್ರಾಮೀಣ ಕ್ಷೇತ್ರದಲ್ಲಿ ದದ್ದಲ್ ಉತ್ತಮ ಕಾರ್ಯ ಮಾಡಿದ್ದಾರೆ ಅವರನ್ನು ಮೂರನೆ ಬಾರಿಗೆ ಆರಿಸಿ ಕಳುಹಿಸಿದರೆ ಮಂತ್ರಿಯಾಗುತ್ತಾರೆ ಎಂದು ಸೂಚ್ಯವಾಗಿ ಹೇಳಿದರು.
ರಾಜ್ಯ ಸಭೆ ವಿರೋಧ ಪಕ್ಷದ ನಾಯಕರು ಹಾಗೂ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ ದೇಶ ಕಠಿಣ ಪರಿಸ್ಥಿತಿಯಲ್ಲಿ ಇದೆ ಇತ್ತೀಚೆಗೆ ಕಾಶ್ಮೀರದ ಪಹಲ್ಗಾಮ್ ನಲ್ಲಿ ಉಗ್ರರ ದಾಳಿಗೆ 26 ಜನ ಅಮಾಯಕರು ಬಲಿಯಾದರು ಪಾಕಿಸ್ತಾನಕ್ಕೆ ನಮ್ಮ ಸೇನಾಪಡೆ ತಕ್ಕ ಉತ್ತರ ನೀಡಿದೆ ಪ್ರಧಾನಿಗೆ ನಾವು ಈ ಬಗ್ಗೆ ಚರ್ಚಿಸಲು ಕೋರಿದಾಗ ಅವರು ಸಭೆಗೆಗೈರಾಗಿದ್ದು ನೋಡಿದರೆ ವಿರೋಧ ಪಕ್ಷಗಳನ್ನು ಅವರು ಹೀನಾಯವಾಗಿ ಕಾಣುತ್ತಾರೆ ಎಂಬ ಭಾವನೆ ಬರುತ್ತದೆ ಎಂದರು.
ಆಪರೇಶನ್ ಸಿಂಧೂರವನ್ನು ರಾಜಕೀಯ ಲಾಭ ಪಡೆಯಲು ಬಳಸಿದರೆ ಅದು ಅಕ್ಷಮ್ಯವೆಂದರು. ಬಿಹಾರ ಚುನಾವಣೆಗೆ ಹೋಗಲು ಮೋದಿಯವರಿಗೆ ಸಮಯ ಸಿಗುತ್ತದೆ ಸರ್ವ ಪಕ್ಷ ಸಭೆಯಲ್ಲಿ ಭಾಗವಹಿಸಲು ಸಮಯವಿಲ್ಲವೆ ಎಂದು ಪ್ರಶ್ನಿಸಿದರು.ಇರಾನ ಮತ್ತು ಇಸ್ರೇಲ್ ನಡುವಣ ಯುದ್ಧದ ಬಗ್ಗೆ ಅವರು ಇರಾನ್ ಕುರಿತು ಒಂದು ಹೇಳಿಕೆಯು ನೀಡಿಲ್ಲ ಯುದ್ಧ ಬೇಡವೆಂದು ಮನವಿ ಸಹ ಮಾಡಿಲ್ಲವೆಂದರು. ವಿಶ್ವಗುರು ಎಂದು ಪ್ರಪಂಚದಲ್ಲಿ ಓಡಾಡುವ ಮೋದಿಯವರಿಗೆ ಇದು ಅರ್ಥವಾಗುವುದಿಲ್ಲವೆ ಎಂದರು. ನಮ್ಮ ದೇಶ ಶಾಂತಿ ಬೋಧಿಸುತ್ತದೆ ನಮಗೆ ಬುದ್ಧ ಬೇಕೋ ಅಥವಾ ಯುದ್ಧ ಬೇಕೋ ಜನರೇ ತೀರ್ಮಾನಿಸಬೇಕೆಂದರು. ಈ ಹಿಂದೆ ಇಂದಿರಾ ಗಾಂಧಿ ಪ್ರಧಾನಿಯಾಗಿದ್ದಾಗ ದೇಶಕ್ಕೆ ಅಭದ್ರತೆ ಎದುರಾದಾಗ ಧೈರ್ಯದಿಂದ ಮುನ್ನುಗ್ಗಿದ್ದರು ಅವರು ದಿಟ್ಟ ಮಹಿಳೆ ಯಾಗಿದ್ದರು ಎಂದರು. ಬಿಜೆಪಿ ಆರ್ ಎಸ್ ಎಸ್ ವಿಚಾರ ಧಾರೆಯನ್ನು ನಮ್ಮ ಮೇಲೆ ಹೇರುತ್ತಿದೆ ಪಠ್ಯಕ್ರಮದಲ್ಲಿ ಆರ್ ಎಸ್ ಎಸ್ ಬಗ್ಗೆ ಬೋಧನೆ ಇದೆ ದೊಡ್ಡ ಉದ್ಯೋಗಗಳಲ್ಲಿಯು ಅವರನ್ನೆ ನೇಮಿಸುತ್ತಿದ್ದಾರೆ ಎಂದು ದೂರಿದರು.
ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ಮಾತನಾಡಿ 371(ಜೆ) ಅನುಷ್ಠಾನದಿಂದ ಈ ಭಾಗದಲ್ಲಿ ಸಹಸ್ರಾರು ಉದ್ಯೋಗ ಲಭಿಸುತ್ತಿವೆ ಉನ್ನತ ಶಿಕ್ಷಣ ಪ್ರಾಪ್ತಿಯಾಗುತ್ತಿದೆ ಈ ಕಾಯ್ದೆ ಜಾರಿಗೆ ತಂದ ಕೀರ್ತಿ ಕಾಂಗ್ರೆಸ್ ಪಕ್ಷಕ್ಕೆ ಹಾಗೂ ಖರ್ಗೆಯವರಿಗೆ ಸಿಗುತ್ತದೆ ಎಂದರು.
ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಮಾತನಾಡಿ ಎರೆಡು ವರ್ಷದ ಹಿಂದೆ ರಾಹುಲ್ ಗಾಂಧಿ ನೇತೃತ್ವದಲ್ಲಿ ಭಾರತ ಜೋಡೋ ಪಾದಯಾತ್ರೆ ಈ ಭಾಗದಲ್ಲಿ ಸಂಚರಿಸಿದ್ದರಿಂದ ನಮ್ಮ ಪಕ್ಷದ ಬಲ ವೃದ್ಧಿಯಾಗಿದೆ ಎಂದ ಅವರು ನನ್ನ ಕ್ಷೇತ್ರಕ್ಕೆ ಸಿಎಂ ನೂರಾರು ಕೋಟಿ ಅನುದಾನ ನೀಡಿ ನನ್ನ ಕ್ಷೇತ್ರದ ಜನರಿಗೆ ಸೌಲಭ್ಯ ನೀಡುತ್ತಿದ್ದಾರೆ ಈ ಭಾಗದಲ್ಲಿ ನೀರಾವರಿ ಸಮಸ್ಯೆ ನಿವಾರಣೆಗೆ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಿಸಲು ಅನುದಾನ ನೀಡಿದ್ದಾರೆ ಅಲ್ಲದೆ ಏತ ನೀರಾವರಿ ಯೋಜನೆ ಅನುಷ್ಟಾನವಾಗಬೇಕೆಂದು ಕೋರಿದರು. ನನ್ನ ಕ್ಷೇತ್ರ ದೊಡ್ಡದಾಗಿದ್ದು ದೇವಸ್ಗೂರು ಹೋಬಳಿ ಪುರಸಭೆಯಾಗಬೇಕು ಗಿಲ್ಲೆಸ್ಗೂರು ಅಥವಾ ಯರಗೇರಿ ತಾಲೂಕು ಮಾಡುವಂತೆ ಪ್ರಸ್ತಾವನೆಯಿದ್ದು ಅದನ್ನು ಪರಿಗಣಿಸಬೇಕೆಂದರು ಇಂದು ವಾಲ್ಮೀಕಿ ವಿವಿ ನಾಮಫಲಕ ಅನಾವರಣವಾಗಿದೆ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಉದ್ಘಾಟನೆ ನಡೆದಿದೆ ಸುಮಾರು 100 ಜನ ಫಲಾನುಭವಿಗಳಿಗೆ ಟ್ರಾಕ್ಟರ್, ಕಾರು, ಗೂಡ್ಸ್ ವಾಹನ ನೀಡಲಾಗಿದೆ ಇಂದು 371(ಜೆ) ಕಾಯ್ದೆ ನಮ್ಮ ಭಾಗಕ್ಕೆ ವರದಾನವಾಗಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಎ.ವಸಂತ ಕುಮಾರ್ ಸ್ವಾಗತಿಸಿದರು. ವಿವಿಧ ಫಲಾನುಭವಿಗಳಿಗೆ ಚೆಕ್ ವಿತರಿಸಲಾಯಿತು. ವೇದಿಕೆಯಲ್ಲಿ ಸಚಿವರಾದ ಹೆಚ್.ಕೆ.ಪಾಟೀಲ್, ಸತೀಶ್ ಜಾರಕಿಹೊಳಿ, ಹೆಚ್.ಸಿ.ಮಹಾದೇವಪ್ಪ, ಕೆ.ಜೆ.ಜಾರ್ಜ್, ಎನ್.ಎಸ್.ಬೋಸರಾಜು, ಶಿವರಾಜ ತಂಗಡಗಿ, ಡಾ.ಎಂ.ಸಿ.ಸುಧಾಕರ್, ಶರಣಬಸಪ್ಪ ದರ್ಶನಾಪೂರು, ಕೆಕೆ ಆರ್ ಡಿ ಬಿ ಅಧ್ಯಕ್ಷ ಡಾ.ಅಜಯ ಸಿಂಗ್, ಸೇರಿದಂತೆ ಅನೇಕ ಸಚಿವರು, ನಿಗಮ ಮಂಡಳಿ ಅಧ್ಯಕ್ಷರು ,ಜಿಲ್ಲೆಯ ಸಂಸದರಾದ ಜಿ.ಕುಮಾರ ನಾಯಕ, ಶಾಸಕರಾದ ಹಂಪನಗೌಡ ಬಾದರ್ಲಿ, ಹಂಪಯ್ಯ ನಾಯಕ, ಬಸನಗೌಡ ತುರ್ವಿಹಾಳ, ವಿಧಾನ ಪರಿಷತ್ ಸದಸ್ಯ ಶರಣಗೌಡ ಬಯ್ಯಾಪೂರು ಸೇರಿದಂತೆ ಮಾಜಿ ಶಾಸಕರು, ಮಾಜಿ ವಿಧಾನ ಪರಿಷತ್ ಸದಸ್ಯರು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಜಿಲ್ಲಾಡಳಿತದಿಂದ ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು. ಹೆಚ್ಚಿನ ಸಂಖ್ಯೆಯಲ್ಲಿ ಜನರು ನೆರೆದಿದ್ದರು
Comments
Post a Comment