ಯಶಸ್ವಿಯಾಗಿ ಜರುಗಿದ ಸುಜ್ಞಾನ ಸಂಗಮ ಕಾರ್ಯಕ್ರಮ
ಜಯಧ್ವಜ ನ್ಯೂಸ್, ರಾಯಚೂರು, ಜು.24-
ಜಗದ್ಗುರು ಶ್ರೀ ಶಿವ ಶಕ್ತಿ ಪೀಠ ಸುಕ್ಷೇತ್ರ ಇರಕಲ್ ಮಠದಲ್ಲಿ ಇಂದು 203ನೇ ಸುಜ್ಞಾನ ಸಂಗಮ ಎಂಬ ಆಧ್ಯಾತ್ಮಿಕ ಚಿಂತನ ಗೋಷ್ಠಿ ನಡೆಯಿತು. ದಿವ್ಯ ಸಾನಿಧ್ಯವನ್ನು ಪೂಜ್ಯಶ್ರೀ ಬಸವ ಪ್ರಸಾದ ಶರಣರು ವಹಿಸಿಕೊಂಡಿದ್ದರು.
ಅಭಿಜಿತ್ ಮಾಲಿ ಪಾಟೀಲ್ ಮಸ್ಕಿ ಇವರು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿ ಶ್ರೀಮಠದ ಶಿಕ್ಷಣ ಪದ್ದತಿಯು ಅತ್ಯುತ್ತಮ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರವನ್ನು ಈಗಿನ ಮಕ್ಕಳಲ್ಲಿ ನೀಡುವಂತಹ ಕಾರ್ಯ ಶ್ಲಾಘನೀಯ ಎಂದು ಅತ್ಯಂತ ಮಾರ್ಮಿಕವಾಗಿ ವಿವರಿಸಿದರು.
ಬೆಳಕು ಸಂಸ್ಥೆಯ ಸಂಸ್ಥಾಪಕರಾದ ಅಣ್ಣಪ್ಪ ಮೇಟಿಗೌಡರು ಮಾತನಾಡಿ ಶ್ರೀಮಠದಲ್ಲಿ ಮಕ್ಕಳು ಸಂಸ್ಕಾರಯುತವಾಗಿ ಶಿಕ್ಷಣವನ್ನು ಪಡೆಯುವ ವಾತಾವರಣವನ್ನು ನಿರ್ಮಿಸುವ ಪ್ರಯತ್ನ ನಮ್ಮ ಭಾಗದಲ್ಲಿ ದೊಡ್ಡ ಕಾರ್ಯವಾಗಿದೆ ಎಂದರು. ಕಾರ್ಯಕ್ರಮದಲ್ಲಿ ಜ್ಞಾನಾಕ್ಷಿ ಶಾಲೆಯ ಮಕ್ಕಳಿಂದ ಪ್ರತಿಭಾ ಪ್ರದರ್ಶನ ಹಾಗೂ ವಿಜ್ಞಾನ ಚಿತ್ರಕಲಾ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು. ಸುಜ್ಞಾನ ಸಂಗಮ ಕಾರ್ಯಕ್ರಮದ ವೇದಿಕೆಯಲ್ಲಿ ಸುರೇಶ್ ಕ .ಸಾ.ಪ ಅಧ್ಯಕ್ಷರು ಸಿರವಾರ ಬಸವರಾಜ್ ಬಂಕಲ್ ದೊಡ್ಡಿ ವಟಗಲ್, ಆದನ ಗೌಡ ಗ್ರಾ. ಪಂ ವಟಗಲ್, ಸೂಗಪ್ಪ ವಟಗಲ್ ಉಪಸ್ಥಿತರಿದ್ದರು. ವಿಶೇಷವಾಗಿ ಈ ಎಲ್ಲಾ ಅತಿಥಿಗಳಿಂದ ಶ್ರೀ ಜ್ಞಾನಾಕ್ಷಿ ವಿದ್ಯಾ ಮಂದಿರ ಶಾಲೆಯ ಪುಟಾಣಿ ಮಕ್ಕಳಿಗೆ ವಾರದ ನಕ್ಷತ್ರಗಳು ಹಾಗೂ ಶಾಲಾ ಸಂಸತ್ತು ಚುನಾವಣೆಯಲ್ಲಿ ಆಯ್ಕೆಯಾದ ವಿವಿಧ ಖಾತೆಯ ವಿದ್ಯಾರ್ಥಿಗಳಿಗೆ ನೀಡಿ ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಂತಿಮ ಘಟ್ಟದಲ್ಲಿ ಶ್ರೀಮಠದ ಪೂಜ್ಯರು ತಮ್ಮ ಆರ್ಶೀವಚನದಲ್ಲಿ ಈಗಿನ ವಾತಾವರಣ ಪಾಲಕರ ಮನಸ್ಥಿತಿ ಮಕ್ಕಳ ಮನಸ್ಥಿತಿಯನ್ನು ವಿವರಿಸುತ್ತಾ ಮಕ್ಕಳಿಗೆ ಬೇಕಾಗಿರುವ ಅವಶ್ಯ ಸಂಸ್ಕೃತಿಯನ್ನು ಶ್ರೀಮಠವು ನೀಡುತ್ತಾ ಬಂದಿದೆ. ಕಳೆದ 19 ವರ್ಷಗಳಿಂದ ಶ್ರೀಮಠದಲ್ಲಿ ಸುಜ್ಞಾನ ಸಂಗಮ ಕಾರ್ಯಕ್ರಮ ನಡೆಸಲಾಗುತ್ತಿದ್ದು, ಈ ಕಾರ್ಯಕ್ರಮದಲ್ಲಿ ಹಲವಾರು ಅತಿಥಿಗಳಿಗೆ ಸಾಧಕರಿಗೆ ಗಣ್ಯಮಾನ್ಯರಿಗೆ ಸನ್ಮಾನಿಸ ಲಾಗಿದ್ದು, ಅವರಿಗೆಲ್ಲ ಈ ವೇದಿಕೆಯು ದಾರಿ ದೀಪವಾಯ್ತು.
Comments
Post a Comment