ಕಲ್ಯಾಣ ಕರ್ನಾಟಕ ಬ್ರಾಹ್ಮಣ ಮಹಾಸಭಾ ವಿಪ್ರ ಶ್ರೀ ಹಾಗೂ ಪ್ರತಿಭೋತ್ಸವ ಉದ್ಘಾಟನೆ: ಒಂದು ನೂರು ಕೋಟಿ ನಿಧಿ ಸ್ಥಾಪನೆ ಮೂಲಕ ಬ್ರಾಹ್ಮಣ ಸಮಾಜಕ್ಕೆ ಶಕ್ತಿ - ರಘುನಾಥ. ಜಯ ಧ್ವಜ ನ್ಯೂಸ್, ರಾಯಚೂರು,ಜು.26- ಒಂದು ನೂರು ಕೋಟಿ ರೂ.ಗಳ ನಿಧಿ ಸ್ಥಾಪನೆ ಮಾಡುವ ಮೂಲಕ ಬ್ರಾಹ್ಮಣ ಸಮಾಜಕ್ಕೆ ಶಕ್ತಿ ತುಂಬುವ ಕಾರ್ಯ ಕೈಗೊಳ್ಳುತ್ತಿರುವುದಾಗಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯ ಅಧ್ಯಕ್ಷರಾದ ಎಸ್.ರಘುನಾಥ ಹೇಳಿದರು. ಅವರಿಂದು ನಗರದ ಶೃಂಗೇರಿ ಶಾರದಾ ಕಲ್ಯಾಣ ಮಂಟಪದಲ್ಲಿ ಕಲ್ಯಾಣ ಕರ್ನಾಟಕ ಬ್ರಾಹ್ಮಣ ಮಹಾಸಭಾ ವತಿಯಿಂದ ಹಮ್ಮಿಕೊಂಡಿದ್ದ ವಿಪ್ರಶ್ರೀ ಪ್ರಶಸ್ತಿ ಪ್ರದಾನ ಹಾಗೂ ಪ್ರತಿಭೋತ್ಸವ ಮತ್ತು ಬ್ರಾಹ್ಮಣರ ಹಬ್ಬ ಉದ್ಘಾಟಿಸಿ ಮಾತನಾಡಿದರು.
ಬ್ರಾಹ್ಮಣರ ಶ್ರೇಯೋಭಿವೃದ್ಧಿಗೆ ವಿಶೇಷವಾಗಿ ಬಡವರ ಶೈಕ್ಷಣಿಕ ಮತ್ತು ಆರೋಗ್ಯಕ್ಕಾಗಿ ಒಂದು ನೂರು ಕೋಟಿ ರೂ ನಿಧಿ ಸ್ಥಾಪಿಸಿ ಅದನ್ನು ಠೇವಣಿ ಇಟ್ಟು ಬರುವ ಬಡ್ಡಿಯಲ್ಲಿ ವಾರ್ಷಿಕ ಸುಮಾರು 5 ಕೋಟಿ ರೂ ವ್ಯಯಮಾಡುವ ಗುರಿ ಹೊಂದಲಾಗಿದ್ದು ರಾಜ್ಯದಲ್ಲಿರುವ ಸುಮಾರು ಹತ್ತು ಸಾವಿರ ಸ್ಥಿತಿವಂತ ಬ್ರಾಹ್ಮರಿಂದ ಒಂದು ಲಕ್ಷ ರೂ ದೇಣಿಗೆ ಸಂಗ್ರಹಿಸಲಾಗುತ್ತಿದ್ಧು ಸ್ವಪ್ರೇರಣೆಯಿಂದ ಮುಂದೆ ಬರಬೇಕೆಂದು ಕೋರಿದ ಅವರು ಈಗಾಗಲೆ 50 ಲಕ್ಷ .ರೂ ಸಂಗ್ರಹಿಸಲಾಗಿದೆ ಎಂದರು.
ಬ್ರಾಹ್ಮಣ ಸಮಾಜ ಬದಲಾವಣೆಯ ಕಾಲಘಟ್ಟದಲ್ಲಿದೆ ಸ್ವಾತಂತ್ರ್ಯ ಪೂರ್ವದಲ್ಲಿ ದೇಶದಲ್ಲಿ ಸಂವಿಧಾನ ಅಂಗಿಕಾರವಾಗುವ ಮೊದಲು ಚಾತುರ್ ವರ್ಣ ಪದ್ಧತಿ ಆಚರಣೆಯಲ್ಲಿತ್ತು ಸಂವಿಧಾನ ಅಂಗಿಕಾರವಾದ ಬಳಿಕ ದೇಶದ ಎಲ್ಲ ಪ್ರಜೆಗಳಿಗೂ ಸಮಾನ ಹಕ್ಕು ನೀಡಲಾಯಿತು ಎಂದರು.
ಬ್ರಾಹ್ಮಣರು ಹಿಂದಿನ ಕಾಲದಲ್ಲಿ ವೇದಾಧ್ಯಾಯನ ಮಾಡಿಕೊಂಡಿದ್ದರು ಆದರೆ ಈಗ ಆಧುನಿಕತೆಯಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿದ್ದೇವೆ ನಾವೆಲ್ಲರೂ ಸ್ಪರ್ಧಾತ್ಮಕ ಯುಗದಲ್ಲಿದ್ದೇವೆಂದ ಅವರು ಬ್ರಾಹ್ಮಣ ಸಮಾಜ ಆರ್ಥಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಹಿಂದುಳಿದಿದ್ದಾರೂ ನಮ್ಮ ಸಮಾಜವನ್ನು ಮುಂದುವರಿದ ಸಮುದಾಯವೆಂದು ಕರೆಯಲಾಗುತ್ತದೆ ದೇಶದಲ್ಲಿ ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣರಿಗೆ ಶೈಕ್ಷಣಿಕ ಮತ್ತು ಆರ್ಥಿಕವಾಗಿ ಮೀಸಲಾತಿ ಕೇಂದ್ರ ಸರ್ಕಾರ ಒದಗಿಸಿದೆ ಆದರೆ ರಾಜ್ಯ ಸರಕಾರ ಸಮರ್ಪಕವಾಗಿ ಇಡ್ಬ್ಲೂಎಸ್ ಪ್ರಮಾಣ ಪತ್ರ ನೀಡುತ್ತಿಲ್ಲವೆಂದು ದೂರಿದರು.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಪ್ರತಿಭೆಗೆ ಕಡಿಮೆಯಿಲ್ಲ ಆದರೆ ಎಲ್ಲರೂ ಬೆಂಗಳೂರಿನತ್ತ ಬರುತ್ತಾರೆ ಅಲ್ಲಿರುವ ಪ್ರತಿಭಾವಂತ ಬ್ರಾಹ್ಮಣರು ವಿದೇಶಕ್ಕೆ ಹೋಗುತ್ತಾರೆ ಬೆಂಗಳೂರು ಎಂದರೆ ಶ್ರೀಮಂತಿಕೆ ಎಂಬ ಭ್ರಮೆ ತೊಲಗಬೇಕು ಅಲ್ಲಿಯೂ ಬಡತನವಿದೆ ಎಂದರು.
ರಾಯಚೂರು ಜನರು ಪ್ರತಿಭೆಯ ಮೂಲಕ ದೇಶದ ಗಮನ ಸೆಳೆಯುವಂತವರಾಗಬೇಕೆಂದರು. ಬ್ರಾಹ್ಮಣರ ಮೇಲೆ ನಡೆಯುವ ದೌರ್ಜನ್ಯ ತಡೆಯಲು ಕಾನೂನು ಘಟಕ ಸ್ಥಾಪಿಸಲಾಗುತ್ತಿದೆ ಎಂದ ಅವರು ಬ್ರಾಹ್ಮಣರಲ್ಲಿ ಒಗ್ಗಟ್ಟಿಗೆ ಎಂಬುದನ್ನು ತೋರಿಸಬೇಕೆಂದರು. ಬಿಜೆಪಿ ಪ್ರಕೋಷ್ಟಗಳ ರಾಜ್ಯ ಸಂಯೋಜಕ ಹಾಗೂ ಶಿವಮೊಗ್ಗ ಅಭಿವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷ ಎಸ್. ದತ್ತಾತ್ರಿ ಮಾತನಾಡಿ ಕಾರ್ಗಿಲ್ ವಿಜಯೋತ್ಸವ ದಿನವಾಗಿದ್ದು ಇಂದು ಸೈನಿಕರನ್ನು ಸ್ಮರಿಸೋಣ ಕಾರ್ಗಿಲ್ ಯುದ್ಧವಾಗಿ 26 ವರ್ಷ ಕಳೆದಿದೆ ಎಂದು ದೇಶ ಭಕ್ತಿ ನಮ್ಮ ಉಸಿರಾಗಬೇಕೆಂದರು.
ಬ್ರಾಹ್ಮಣರು ಸಂದಿಗ್ಧ ಸ್ಥಿತಿಯಲ್ಲಿ ಇದ್ದಾರೆ ಸರ್ಕಾರ ನಮ್ಮ ಜನವಾರಕ್ಕೆ ಕೈ ಹಾಕುತ್ತಿದೆ ನಮ್ಮ ಆಚರಣೆಯಿಂದ ನಾವು ವಿಮುಖರಾಗಬಾರದು ಸಂಧ್ಯಾವಂದನೆ ನಮ್ಮ ತಪೋಬಲ ತೇಜಸ್ಸು ಇಮ್ಮಡಿಗೊಳಿಸುತ್ತದೆ ದಿ.ಅನಂತ ಕುಮಾರ್ ಕೇಂದ್ರ ಮಂತ್ರಿಯಾಗಿದ್ದರೂ ಅವರು ಬ್ಯಾಗಿನಲ್ಲಿ ಸಂಧ್ಯಾವಂದನೆ ಮಾಡುವುದಕ್ಕಾಗಿ ಪಂಚ ಪಾತ್ರೆ ಇಟ್ಟುಕೊಂಡಿದ್ದರು ಎಂದು ಅವರು ಶ್ರದ್ಧೆ ಸ್ಮರಿಸಿದರು.
ಎಕೆ ಬಿಎಂಎಸ್ ರಾಜ್ಯ ಹಿರಿಯ ಉಪಾಧ್ಯಕ್ಷ ಆರ್.ಲಕ್ಷ್ಮಿಕಾಂತ್ ಮಾತನಾಡಿ ನೂತನ ರಾಜ್ಯಾಧ್ಯಕ್ಷರಾದ ಎಸ್.ರಘುನಾಥ್ ಬ್ರಾಹ್ಮಣರ ಅಭಿವೃದ್ಧಿಗಾಗಿ ಕಂಕಣ ಬದ್ಧರಾಗಿದ್ದಾರೆ ನಾವೆಲ್ಲರೂ ಅವರ ಕೈ ಬಲಪಡಿಸೋಣವೆಂದ ಅವರು ಬ್ರಾಹ್ಮಣರಿಗೆ ದೌರ್ಜನ್ಯವಾದಲ್ಲಿ ಪಕ್ಷಾತೀತವಾಗಿ ಒಂದಾಗೋಣವೆಂದರು. ಪ್ರಾಸ್ತಾವಿಕವಾಗಿ ಕಲ್ಯಾಣ ಕರ್ನಾಟಕ ಬ್ರಾಹ್ಮಣ ಮಹಾಸಭಾ ವಿಭಾಗೀಯ ಅಧ್ಯಕ್ಷ ಹಾಗೂ ಎಕೆ ಬಿಎಂಎಸ್ ರಾಜ್ಯ ಉಪಾಧ್ಯಕ್ಷ ಜಗನ್ನಾಥ ಕುಲಕರ್ಣಿ ಮಾತನಾಡಿ ಕಲ್ಯಾಣ ಕರ್ನಾಟಕ ಭಾಗದ ಬ್ರಾಹ್ಮಣರನ್ನು ಸಂಘಟಿಸಲು ಕೆಕೆಬಿಎಂಎಸ್ ಶ್ರಮಿಸುತ್ತಿದೆ ಪ್ರತಿಭಾವಂತರನ್ನು ಪ್ರೋತ್ಸಹಿಸಲು ಮತ್ತು ಸಮಾಜದಲ್ಲಿರುವ ಸಾಧಕರನ್ನು ಗುರುತಿಸುವ ಕಾರ್ಯ ಮಾಡುತ್ತಿದ್ದೇವೆ ಎಂದ ಅವರು ನಾನು ಆರ್ ಡಿ ಎ ಅಧ್ಯಕ್ಷನಾಗಿದ್ದಾಗ ಗಾಯಿತ್ರಿ ಭವನಕ್ಕೆ ನಿವೇಶನ ನೀಡಿದ್ದೆ ಇದೀಗ ಅಲ್ಲಿ ಕಟ್ಟಡ ಅಪೂರ್ಣ ಸ್ಥಿತಿಯಲ್ಲಿದೆ ಎಂದರು. ಸ್ಥಳೀಯ ಶಾಸಕ ಡಾ.ಶಿವರಾಜ ಪಾಟೀಲ್ 25 ಲಕ್ಷ ರೂ ಹಾಗೂ ಎಂಎಲ್ಸಿ ವೆಂಕಟೇಶ್ 5 ಲಕ್ಷ ರೂ. ಅನುದಾನ ನೀಡಿದ್ದಾರೆ ಸದ್ಯ ಎಂಎಲ್ಸಿ ಆಗಿರುವ ವಸಂತ ಕುಮಾರ್ ಅನುದಾನ ನೀಡಬಬೇಕೆಂದು ಮನವಿ ಮಾಡಿದರು. ಕೆಕೆಬಿಎಂಎಸ್ ಜಿಲ್ಲಾಧ್ಯಕ್ಷ ಗುರಾಚಾರ್ಯ ಜೋಷಿ ತಾಳಿಕೋಟಿ ಸ್ವಾಗತಿಸಿದರು.
ಮುರಳೀಧರ್ ಕುಲಕರ್ಣಿ ನಿರೂಪಿಸಿದರು. ಪಂಡಿತರಿಂದ ವೇದಘೋಷ ನಡೆಯಿತು. ಪಲ್ಲವಿ ಸಂಗಡಿಗರು ಪ್ರಾರ್ಥಿಸಿದರು. ಮಾಹಾಲಕ್ಷ್ಮಿ ಶಾರದಾ ಮಾತೆ ಗೀತೆ ಮತ್ತು ನಾಡಗೀತೆ ಪ್ರಸ್ತುತ ಪಡಿಸಿದರು. ವೇದಿಕೆ ಮೇಲೆ ವಿಧಾನ ಪರಿಷತ್ ಸದಸ್ಯರಾದ ಎ.ವಸಂತ ಕುಮಾರ್, ಗೋಪಾಲಕೃಷ್ಣ ತಟ್ಟಿ, ನಾರಾಯಣ ರಾವ್ ಪುರತಿಪ್ಲಿ, ಪ್ರಕಾಶ್ ಆಲಂಪಲ್ಲಿ, ಮುರಳೀಧರ್, ನರಸಿಂಹ ಮೂರ್ತಿ,ಹನುಮಂತರಾವ್ ಕಲ್ಲೂರುಕರ್, ಗೋವಿಂದರಾವ್, ಶಾಮರಾವ್ ಹೇಮನೂರು,ಪ್ರಸನ್ನ ಆಲಂಪಲ್ಲಿ ರವೀಂದ್ರ ಕುಲಕರ್ಣಿ ಸೇರಿದಂತೆ ತಾಲೂಕು ಘಟಕಗಳ ಪದಾಧಿಕಾರಿಗಳು ಇದ್ದರು. ಪ್ರಹ್ಲಾದ್ ರಾವ್ ಕುಲಕರ್ಣಿ ರವರಿಗೆ ವಿಪ್ರ ಸಮಾಜ ಸೇವಕ ಪ್ರಶಸ್ತಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ವಿಪ್ರ ಶ್ರೀ ಪ್ರಶಸ್ತಿ ಮತ್ತು ಎಸೆಸೆಲ್ಸಿ ಹಾಗೂ ಪಿಯುಸಿಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಒಂದು ಸಾವಿರ ರೂ. ನಗದು ಮತ್ತು ಸ್ಮರಣಿಕೆ ನೀಡಿ ಗೌರವಿಸಲಾಯಿತು. ವಿಪ್ರ ಶ್ರೀ ಪ್ರಶಸ್ತಿ ಪಡೆದವರಲ್ಲಿ ಒಬ್ಬ ಸಾಧಕರಾದ ಶೇಷಗಿರಿ ದಾಸ್ ರವರು ದಾಸವಾಣಿ ತುಣುಕು ಮೆಚ್ಚುಗೆ ಗಳಿಸಿತು.ಹೆಚ್ಚಿನ ಸಂಖ್ಯೆಯಲ್ಲಿ ವಿಪ್ರ ಬಾಂಧವರು ಭಾಗವಹಿಸಿದ್ದರು.
Comments
Post a Comment